ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡುವ ಹಾಡು, ಕೇಳುವ ಹಾಡು

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಎರಡು ಸ್ಮರಣೀಯ ದಿನಗಳ ನೆನಪುಗಳು ಸರಿದು ಹೋದವು.

ಡಿಸೆಂಬರ್ 27 ರಂದು ನಮ್ಮ ರಾಷ್ಟ್ರಗೀತೆಗೆ ನೂರು ವರ್ಷ ತುಂಬಿತು. 28ರಂದು ಜಗತ್ತಿನಲ್ಲಿ ಸಿನಿಮಾ ಹುಟ್ಟಿ 116 ವರ್ಷ ತುಂಬಿತು. ಈ ಎರಡೂ ಜನತೆಯನ್ನು ಮಂತ್ರಮುಗ್ಧಗೊಳಿಸುವ ಸಮ್ಮೊಹನ ಶಕ್ತಿ ಉಳ್ಳಂತಹವು. ಜನಪದವೇ ಜೀವಾಳವಾಗಿರುವ ನಮ್ಮ ಸಂಸ್ಕೃತಿಯಲ್ಲಿ ಹಾಡೂ ಕೂಡ ಜೀವನದ ಒಂದು ಭಾಗವಾಗಿ, ಬದುಕಿನ ಚೈತನ್ಯದ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಮನುಷ್ಯ ಮಾತನಾಡಲು ಆರಂಭಿಸುವ ಬಹಳಷ್ಟು ಹಿಂದೆಯೇ, ರಾಗ ಎನ್ನುವುದು ಬದುಕಿನ ಲಯವಾಗಿ, ಏನೋ ಒಂದು ರೀತಿಯ ಗುಂಗಿಗೆ ಒಳಪಡಿಸುವ ಮೋಡಿಯಾಗಿ ಇದ್ದುದನ್ನು ಗುರುತಿಸಬಹುದು. `ವೈ ದಿಸ್ ಕೊಲವರಿ ಡಿ...~ ಹಾಡು ದಿನಬೆಳಗಾಗುವುದರೊಳಗಾಗಿ ವಿಶ್ವದಾದ್ಯಂತ ಜನಪ್ರಿಯವಾಗಿ, ಅಮೆರಿಕದಲ್ಲಿ ಜನ ಇದಕ್ಕೆ ತಾಳಹಾಕುತ್ತಿದ್ದಾರೆ, ಈ ಹಾಡನ್ನು ಅತಿ ಹೆಚ್ಚು ಜನ ಗುನುಗುತ್ತಿದ್ದಾರೆ ಎನ್ನುವುದನ್ನು ನೋಡಿದ ಮೇಲೆ ಇದರಲ್ಲಿ ಅಚ್ಚರಿ ಪಡುವುದು ಏನೂ ಇಲ್ಲ ಎನಿಸಿತು.
 
ಏಕೆಂದರೆ ನಮ್ಮದು ಹಾಡಿನ ಮೋಡಿಗೆ ತಲೆದೂಗುವ ಪರಂಪರೆ. ಕವಿ ರವೀಂದ್ರನಾಥ ಟ್ಯಾಗೋರರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಗೆ ಒಮ್ಮೆ ಬಂದಿದ್ದರು. ಅಲ್ಲಿನ ಬೆಸೆಂಟ್ ಥಿಯೋಸಾಫಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿ. ಸಮಾರಂಭದಲ್ಲಿ ತಾವೇ ರಚಿಸಿದ್ದ `ಜನಗಣಮನ~ ಹಾಡನ್ನು ರವೀಂದ್ರರು ಹಾಡಿ, ಭಾಷಣ ಮುಗಿಸಿದರು. ಅಲ್ಲಿ ಸೇರಿದ್ದ ಅಷ್ಟೂ ವಿದ್ಯಾರ್ಥಿಗಳು ಮಂತ್ರಮುಗ್ಧರಾಗಿ ಆಲಿಸಿದರು. ಬೆಳಗಾಗುವುದರೊಳಗೆ ಎಲ್ಲರ ಬಾಯಲ್ಲೂ ಇದೇ ಹಾಡು ಅನುರಣಿಸಲಾರಂಭಿಸಿತು. ನಂತರದ ದಿನದಲ್ಲಿ ಟ್ಯಾಗೋರರೇ ಈ ಹಾಡನ್ನು ಇಂಗ್ಲೀಷಿಗೆ ಅನುವಾದಿಸಿದರು.

1911ರ ಡಿಸೆಂಬರ್ 27ರಂದು ಕೋಲ್ಕತ್ತಾದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸಮಾವೇಶದಲ್ಲಿ ಸಂಸ್ಕೃತವೇ ಹೆಚ್ಚಾಗಿ ತುಂಬಿರುವ ಬಂಗಾಳಿ ಭಾಷೆಯ ಜನಗಣಮನವನ್ನು ಮೊಟ್ಟ ಮೊದಲ ಬಾರಿಗೆ ಹಾಡಲಾಯಿತು. ಆಗ ಭಾರತೀಯರಲ್ಲಿ ಆದ ರೋಮಾಂಚನ, ಭಾವೋದ್ವೇಗ ನೂರು ವರ್ಷಗಳಾದರೂ ಇಳಿದಿಲ್ಲ. ಬಂಕಿಮಚಂದ್ರ ಚಟರ್ಜಿಯರ `ವಂದೇ ಮಾತರಂ~ 1882ರಿಂದ ಬಳಕೆಯಲ್ಲಿತ್ತು.

1911ರಲ್ಲಿ ಜನಗಣಮನ ಬಂದ ಮೇಲಂತೂ, 1740ರಿಂದ ಜಾರಿಯಲ್ಲಿದ್ದ ರಾಜ ರಾಣಿಯನ್ನು ರಕ್ಷಿಸು ಎಂದು ದೇವರನ್ನು ಬೇಡಿಕೊಳ್ಳುವ ಬ್ರಿಟಿಷರ ರಾಷ್ಟ್ರಗೀತೆಗೆ ವಿದಾಯ ಹೇಳಲು ಜನ ನಿರ್ಧರಿಸಿದರು. ನೂರು ವರ್ಷಗಳಾದರೂ ಜನಗಣಮನದ ಪ್ರಭಾವ, ಅದರೊಳಗಿರುವ ಚೇತನವನ್ನು ಬಡಿದೆಬ್ಬಿಸುವ ಶಕ್ತಿ ಮಾಸಿಲ್ಲ.

ಒಂದು ಹಾಡಿನಲ್ಲಿರುವ ಶಕ್ತಿ ಅದೇ. ಕೊಲೆವರಿ... ಸಿನಿಮಾ ಹಾಡನ್ನು ಯೂಟ್ಯೂಬ್‌ನಲ್ಲಿ ಕೇಳಿ ಇಂದು ರೋಮಾಂಚನಗೊಂಡವರು, ಅದನ್ನು ರಾಷ್ಟ್ರಗೀತೆಗಿಂತಲೂ ಜನಪ್ರಿಯ ಎಂದು ಬಿಂಬಿಸುತ್ತಿರುವವರು ಇನ್ನೊಂದು ಮೂರು ತಿಂಗಳಲ್ಲಿ ಮತ್ತೊಂದು ಹಾಡಿನತ್ತ ಪಕ್ಷಾಂತರ ಮಾಡದಿದ್ದರೆ ಕೇಳಿ.

ಸಿನಿಮಾ ಹಾಡುಗಳ ಸಾಹಿತ್ಯದ ಕ್ಷಣಿಕತೆಗೂ, ನಿಜವಾದ ಕಾವ್ಯಕ್ಕೂ ಇರುವ ವ್ಯತ್ಯಾಸ ಇದೇ. ಕೊಲೆವರಿ ಹಾಡಿಗೆ ಸಿಕ್ಕಿರುವ ವ್ಯಾಪಕ ಪ್ರಚಾರ, ಪ್ರಸಾರ ಹಾಗೂ ಜನಪ್ರಿಯತೆ ಇಂದಿನ ತಂತ್ರಜ್ಞಾನದ್ದೇ ಹೊರತು, ಆ ಗೀತೆಯಲ್ಲಿರುವ ಸತ್ವದಿಂದಲ್ಲ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ರಜನೀಕಾಂತ್ ಅಭಿನಯದ `ಎಂದಿರನ್~ ಬಂದು ಹೋದ ನಂತರ ರಜನೀ ಬಗ್ಗೆ ಬಂದ ಜೋಕ್ಸ್‌ಗಳು, ಎಸ್‌ಎಂಎಸ್ ಜೋಕುಗಳ ಪ್ರವಾಹವನ್ನು ನೆನಪಿಸಿಕೊಳ್ಳಿ. ಸರ್ದಾರ್‌ಜೀ ಜೋಕುಗಳನ್ನೂ ಮೀರಿಸುವಷ್ಟು ಜೋಕುಗಳು ವಿಶ್ವದ ಎಲ್ಲ ಮೊಬೈಲ್‌ಗಳಲ್ಲಿ, ಬ್ಲಾಗುಗಳಲ್ಲಿ ಹರಿದಾಡಿದ್ದೂ ಇದೇ ತಂತ್ರಜ್ಞಾನದ ಎಫೆಕ್ಟ್.

ಹೀಗೆ ಆ ಕಾಲದ, ಆ ಕ್ಷಣದಲ್ಲಿ ಹುಟ್ಟಿ ಜನಪ್ರಿಯವೆನಿಸುವ ಹಾಡುಗಳು ಸರ್ವಶ್ರೇಷ್ಠ, ಇಂತಹ ಹಾಡು ಮತ್ತೊಂದು ಬರಲಾರದು ಎಂದೇ ಭಾವಿಸುತ್ತಿರುವ ವೇಳೆಯಲ್ಲಿ, ಮತ್ತೊಂದು ಹಾಡು ಬಂದು ಹಿಂದಿನ ಹಾಡನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಿರುವ ಉದಾಹರಣೆಗಳು ಬಹಳ ಇದೆ. ಎ.ಆರ್.ರೆಹಮಾನ್ ಸೃಷ್ಟಿಸಿದ ಊರ್ವಶೀ... ಊರ್ವಶೀ..., ಹಮ್ಮ ಹಮ್ಮ ಹಮ್ಮ ಹಾಡುಗಳನ್ನು ಈಗ ಯಾರು ಕೇಳಲು ಇಷ್ಟಪಡುತ್ತಾರೆ? `ಮೇರೆ ಸಪನೋಂಕಿ ರಾಣಿ...~

ಹಾಡನ್ನು ಈಗ ಯಾರು ಹಾಡುತ್ತಾರೆ? ಲೈಫು ಇಷ್ಟೇನೆ..., ಮುಂಗಾರು ಮಳೆಯೇ... ಈಗ ಯಾರಿಗೆ ಪ್ರಿಯ? ಕೊಲೆವರಿಗೂ ಇದೇ ಪಾಡು ಇನ್ನೊಂದೆರೆಡು ತಿಂಗಳಲ್ಲೇ ಬಂದರೆ ಆಶ್ಚರ್ಯ ಪಡುವುದೇನೂ ಇಲ್ಲ. ಕೊಲೆವರಿ ವೈರಸ್ ಹಿಂದೆ ಪರಂಪರಾಗತ ಜನಪದವೂ ಕೆಲಸ ಮಾಡಿದೆ. ನಮ್ಮ ಸಿನಿಮಾ ಸಂಸ್ಕೃತಿಯೇ ಜನಪದ ಮೂಲದ್ದು. ಹೀಗಾಗಿ ನಾವು ಸಿನಿಮಾದಲ್ಲಿ ಸೃಷ್ಟಿಸುವುದೆಲ್ಲಾ ಜನಪದವೇ.

ಜನಪದ ಈಗ ಸಿನಿಪದವಾಗಿರುವುದರಿಂದಲೇ ಕೊಲೆವರಿ ಹಾಡು ಅಷ್ಟು ಶೀಘ್ರವಾಗಿ ನಾಲಿಗೆ ಮೇಲೆ ನಿಲ್ಲಲು ಸಾಧ್ಯವಾಗಿದೆ. ಕೊಲೆವರಿ ಕೂಡ ದಕ್ಷಿಣ ಭಾರತದ ಜನಪದ. ಇದರ ಸಂಗೀತಕ್ಕೆ ನಾದಸ್ವರ, ಸ್ಯಾಕ್ಸೊಫೋನ್, ಶೆಹನಾಯ್, ತಮಟೆ, ತಬಲ ಎಲ್ಲವನ್ನು ಸಮ್ಮಿಶ್ರಗೊಳಿಸಿ ಬಳಸಿರುವುದು ಕೂಡ ವಿದೇಶದಲ್ಲಿ ಅದರ ಜನಪ್ರಿಯತೆಗೆ ಕಾರಣ. ಎಲ್ಲ ಕಾಲಕ್ಕೂ ಎಲ್ಲ ದೇಶಕ್ಕೂ ಸಲ್ಲುವ ಸಾಹಿತ್ಯ ಜನಪದ ಎನ್ನುವುದು ಇದರಿಂದ ಮತ್ತೆ ಮತ್ತೆ ಸಾಬೀತಾಗುತ್ತಿದೆ.

ಸಿನಿಮಾ ಹಾಡುಗಳ ಕ್ಷಣಿಕತೆ, ಎ.ಆರ್.ರೆಹಮಾನ್‌ಗೆ ಗೊತ್ತಿದೆ. ರಾಷ್ಟ್ರಗೀತೆಗಿರುವ ಸಮ್ಮೊಹಕತೆಯನ್ನು ಅವರು ಕಂಡುಕೊಂಡಿದ್ದಾರೆ. ಅದಕ್ಕೇ ಅವರ ಬಹುತೇಕ ಗೀತೆಗಳಲ್ಲಿ ಜನಗಣಮನದ ತಂತುವಿದೆ. ಜೈ ಹೋ.... ಹಾಡಿನಲ್ಲಿ ಜನಗಣಮನದ ಆಂತರ್ಯ ಇರುವುದನ್ನು ಗಮನಿಸಿ. ಅವರ ವಂದೇ ಮಾತರಂ ಆಲ್ಬಂ ಕೂಡ ಅದೇ ಪರಂಪರೆಯದೇ.

ಚಲನಚಿತ್ರಮಂದಿರಗಳಲ್ಲಿ ಸಿನಿಮಾ ಆರಂಭಕ್ಕೂ ಮುನ್ನ, ಸಿನಿಮಾ ಮುಗಿದ ನಂತರ ರಾಷ್ಟ್ರಗೀತೆಯನ್ನು ಹಾಕಲೇಬೇಕು ಎನ್ನುವ ಕಡ್ಡಾಯ ನಿಯಮ ಕೂಡ ಹಾಡಿನ ಮೂಲಕ ಜನರನ್ನು ಒಗ್ಗೂಡಿಸಬೇಕು ಎನ್ನುವಂತದ್ದೇ ಆಗಿತ್ತು. ಎಪ್ಪತ್ತರ ದಶಕದವರೆಗೂ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಸಿನಿಮಾ ಮುಗಿದ ನಂತರ ಹಾಕಲಾಗುತ್ತಿತ್ತು.

ಕಾಲ ಬದಲಾದಂತೆ ಜನ, ಸಿನಿಮಾ ಮುಗಿದ ಕೂಡಲೇ ಮನೆಗೆ ಓಡುವ ಆತುರದಲ್ಲಿ ಇರಲಾರಂಭಿಸಿದಂತೆ, ರಾಷ್ಟ್ರಗೀತೆಯ ಗೌರವ ಉಳಿಸುವ ಸಲುವಾಗಿಯೇ ಕಡ್ಡಾಯ ನಿಯಮವನ್ನು ತೆಗೆದುಹಾಕಲಾಯಿತು.

ಆರಂಭದ ದಶಕಗಳಲ್ಲಿ ಸಿನಿಮಾ ಹಾಗೂ ರಾಷ್ಟ್ರಗೀತೆ ಒಟ್ಟೊಟ್ಟಿಗೆ ಸಾಗುತ್ತಿತ್ತು. ಮೂಕಿ ಕಾಲದಿಂದ ವಾಕಿಗೆ ಸಿನಿಮಾ ಬದಲಾದ ಕೂಡಲೇ ಜನ ತೆರೆಯ ಮೇಲೆ ಹಾಡುವುದನ್ನು ಆಲಿಸುವ  ಮೋಡಿಗೆ ಒಳಗಾಗಿ, ಪದೇ ಪದೇ ಚಲನಚಿತ್ರವನ್ನು ನೋಡುವ ಹವ್ಯಾಸಕ್ಕೆ ಒಳಗಾದರು. ಆದುದರಿಂದಲೇ ಆರಂಭಕಾಲದ ಚಿತ್ರಗಳಲ್ಲಿ ಅತಿಹೆಚ್ಚು ಹಾಡುಗಳಿದ್ದುದನ್ನು ಕಾಣಬಹುದು. ಒಂದು ಸಿನಿಮಾ ಎಂದರೆ 12 ಹಾಡಾದರೂ ಇರಲೇಬೇಕು ಎನ್ನುವಂತಾದದ್ದು ಈ ಬೆಳವಣಿಗೆಯಿಂದಲೇ.

`ಇಂದ್ರಸಭಾ~ ಚಿತ್ರದಲ್ಲಿ 71 ಹಾಡುಗಳಿದ್ದವು! ಹಾಗೆ ನೋಡಿದರೆ ನಮ್ಮದು ಹಾಡಿನ ಮೋಡಿಗೆ ತಲೆದೂಗುವವರ ಪರಂಪರೆ, ಸೈಗಾಲರ ಹಾಡಿಗೆ, ನೂರ್‌ಜೆಹಾನರ ಹಾಡಿಗೆ, ಲತಾಮಂಗೇಶ್ಕರರ ದನಿಗೆ ಆಕರ್ಷಿತರಾಗದವರೇ ಇಲ್ಲ.

1931ರಲ್ಲಿ ಬಿಡುಗಡೆಯಾದ ಮೊದಲ ವಾಕ್ಚಿತ್ರ `ಅಲಂ ಆರಾ~ ಪಾರ್ಸಿ ರಂಗಭೂಮಿಯ ಕೊಡುಗೆ. ನಾಟಕದಲ್ಲಿ ಇದ್ದ ಹಾಡುಗಳು ಸಹಜವಾಗಿಯೇ ವಾಕ್ಚಿತ್ರಕ್ಕೂ ಬಂದವು. ಆ ಚಿತ್ರಕ್ಕೆ ಸಂಭಾಷಣೆಕಾರರಾಗಲಿ, ಹಾಡು ಬರೆದವರಾಗಲಿ, ಸಂಗೀತ ನಿರ್ದೇಶಕರಾಗಲಿ ಯಾರೂ ಇರಲಿಲ್ಲ. ಎಲ್ಲವೂ ಆರಂಭಿಕವಾಗಿಯೇ ನಡೆಯಬೇಕಿತ್ತು.

ನಿರ್ದೇಶಕ ಆರ್ದೇಶಿರ್ ಇರಾನಿಯವರೇ ಸಂಗೀತದ ಟ್ಯೂನ್‌ಗಳನ್ನು ಸಿದ್ಧಪಡಿಸಿ, ಗಾಯಕರನ್ನು ಆಯ್ಕೆ ಮಾಡಿದರು. ಆಗ ಈ ಚಿತ್ರಕ್ಕೆ ತಬಲ, ಹಾರ್ಮೋನಿಯಂ ಮತ್ತು ಪಿಟೀಲು ಈ ಮೂರು ವಾದ್ಯಗಳನ್ನಷ್ಟೇ ಬಳಸಲಾಯಿತು. ಇದು ಭಾರತದ ಮೊದಲ ವಾಕ್ಚಿತ್ರ ಹೇಗೋ ಅದೇ ರೀತಿ ಭಾರತದ ವಾಕ್ಚಿತ್ರಕ್ಕೆ ಮೊದಲನೆಯ ಹಾಡನ್ನು ಕೊಟ್ಟ ಚಿತ್ರವೂ ಹೌದು. ಆದರೆ ಈ ಚಿತ್ರದ ಸಂಗೀತ ನಿರ್ದೇಶಕರ ಹೆಸರು ಎಲ್ಲೂ ಕಾಣಿಸಲಿಲ್ಲ. ಸಂಗೀತಕ್ಕೆ ಸಂಬಂಧಪಟ್ಟ ಯಾವ ವಿವರಗಳೂ ಶೀರ್ಷಿಕೆ ಪಟ್ಟಿಯಲ್ಲಿರಲಿಲ್ಲ.

ಭಾರತೀಯ ಜಾನಪದದ ಹಾಡುಗಳನ್ನು ಪಾರ್ಸಿ ಥಿಯೇಟರ್‌ನವರು ತಮ್ಮ ನಾಟಕಕ್ಕೆ ಅಳವಡಿಸಿಕೊಂಡಿದ್ದರು. ಮೊದಲ ವಾಕ್ಚಿತ್ರದಲ್ಲಿ ಹಾಡುಗಳನ್ನು ಬಳಸುವ ಮೂಲಕ ಇರಾನಿ ಅವರು, ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟರು. ಜತೆಗೆ ಹಳೆಯ ಸಂಪ್ರದಾಯವನ್ನೂ ಮುಂದುವರೆಸಿದರು. ಭಾರತೀಯ ಚಿತ್ರರಂಗಕ್ಕೆ ಮೊದಲ ಹಿನ್ನೆಲೆ ಗಾಯಕನನ್ನು ಕೊಟ್ಟ ಕೀರ್ತಿ ಇರಾನಿ ಅವರದು. ಡಬ್ಲ್ಯು.ಎಂ. ಖಾನ್ ಈ ಚಿತ್ರದಲ್ಲಿ ಮೊದಲ ಹಾಡಾದ `ದೆ ದೇ ಖುದಾ ಕಿ ನಾಮ್ ಪರ್ ಪ್ಯಾರೆ, ತಾಖತ್ ಹೈ ಘರ್ ದೇನೇ ಕಿ~ ಈ ಗೀತೆ  ಮುಂದೆ ಭಾರತೀಯ ಚಿತ್ರಗಳ `ಮಾದರಿ~ ಆಯಿತು.
 
ಅಂದಿನಿಂದ ಈ ತರಹದ ಗೀತೆ ಎಲ್ಲ ಭಾರತೀಯ ಚಿತ್ರಗಳಲ್ಲೂ ಕಾಣಸಿಗುತ್ತದೆ. ದುರದೃಷ್ಟವಶಾತ್ ಈ ಚಿತ್ರದ ಹಾಡುಗಳನ್ನು ಯಾರೂ ಸಂಗ್ರಹಿಸಿಡಲಿಲ್ಲ. 1934ರಲ್ಲಿ ಈ ಚಿತ್ರದ ಹಾಡಿನ ತಟ್ಟೆ ಮುರಿದು ಹೋಗಿ ನಮಗೆ ಮೊದಲ ಚಿತ್ರದ ಹಾಡುಗಳು ಕೈ ತಪ್ಪಿದವು.

116 ವರ್ಷಗಳಾದರೂ ಸಿನಿಮಾ ಮತ್ತು ಸಿನಿಮಾದಲ್ಲಿನ ಹಾಡುಗಳ ಮೋಡಿ ಕಿಂಚಿತ್ತೂ ಕಡಿಮೆಯಾಗಿಲ್ಲ ಎನ್ನುವುದೇ ಅಚ್ಚರಿಯ ವಿಷಯ. ಕೊಲೆವರಿ ಮೂಲಕ ಇದು ಮತ್ತೊಮ್ಮೆ ಸಾಬೀತಾಗಿದೆ. ಹಿಂದಿಯ ಗಂಧಗಾಳಿಯೂ ಗೊತ್ತಿಲ್ಲದ ಅಕಾನ್, ಚಮಕ್‌ಚಲೇ ಹಾಡಿದರೆ ಅದನ್ನು ಎಂಜಾಯ್ ಮಾಡುತ್ತೇವೆ. ಕನ್ನಡದ ಗಂಧಗಾಳಿ ಗೊತ್ತಿಲ್ಲದ ಸೋನುನಿಗಮ್ ಕನ್ನಡದಲ್ಲಿ ಹಾಡಿದರೆ ಅದನ್ನು ಕೇಳಿ ಆನಂದಿಸುತ್ತೇವೆ. ನಮ್ಮ ಪರಂಪರೆಯಲ್ಲೇ ಸಂಗೀತಕ್ಕೆ ಪ್ರೋತ್ಸಾಹ ಆದಿಕಾಲದಿಂದಲೂ ಇದೆ.
 
ಸಂಗೀತಗಾರರನ್ನು ಬೆಳೆಸಿದ ರಾಜಮಹಾರಾಜರ ಪರಂಪರೆ ಇದೆ. ಶಾಸ್ತ್ರೀಯ ಸಂಗೀತದ ಇತಿಹಾಸವಿದೆ. ಗಜಲ್‌ಗಳ ಹಿನ್ನೆಲೆ ಇದೆ. ಮರಾಠಿ, ಬಂಗಾಳಿ, ಪಾರ್ಸಿ ಸಂಪ್ರದಾಯದ ಹಾಡುಗಳು ಮಿಳಿತವಾಗಿವೆ. ಇವೆಲ್ಲಾ ಸಿನಿಮಾ ಮಾಧ್ಯಮದ ಮೂಲಕ ಮತ್ತಷ್ಟು ಗಟ್ಟಿಯಾಗುತ್ತಾ, ಸಿನಿಮಾವನ್ನೇ ಉಸಿರು ಎಂದು ಪ್ರೀತಿಸುವ ಜನಸಾಮಾನ್ಯನ ಜಂಜಡದ ಬದುಕಿಗೆ ಮಿಂಚಿನ ಸ್ಫೂರ್ತಿ ನೀಡುತ್ತಿದೆ.

ಸಿನಿಮಾಕ್ಕೂ ಹಾಡಿಗೂ ಇಂತಹ ಪರಂಪರೆಯೇ ಇರುವಾಗ, ಈ ಇತಿಹಾಸವೆಲ್ಲಾ ಮಗೇಕೆ? ವೈ ದಿಸ್ ಕೊಲೆವರಿ? ಎಂದು ಇವತ್ತಿನ ಕ್ಷಣಿಕ ಸುಖದ ಹಾಡೇ ಶ್ರೇಷ್ಠ ಎಂದು ತಲೆದೂಗುವುದಾದರೆ ನಾವೇನು ಮಾಡೋಣ?
       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT