ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಷಾರ್ ! ದಮನಕರಿದ್ದಾರೆ

Last Updated 7 ಜನವರಿ 2015, 19:30 IST
ಅಕ್ಷರ ಗಾತ್ರ

ಕಳೆದ ವಾರ ನಾನು ಗುಜರಾತಿನ ಒಂದು ನಗರದಲ್ಲಿದ್ದೆ. ಅಲ್ಲೊಂದು ದೊಡ್ಡ ಸಮಾರಂಭ. ಲಕ್ಷಾಂತರ ಜನ ಸೇರಿದ್ದರು. ಆಗ ನನ್ನನ್ನು ಕಂಡು ಪರಿಚ­ಯ­ದವ­ರೊಬ್ಬರು ಓಡಿ ಬಂದರು. ತೇಕುತ್ತಲೇ ಕೇಳಿದರು, ‘ಸರ್ ಗೋವಿಂದ­ರಾಯರು ನಿಮ್ಮ ಸ್ನೇಹಿತ­ರಲ್ಲವೇ?’ ನಾನು, ‘ಹೌದು, ಸುಮಾರು ಇಪ್ಪತ್ತು ವರ್ಷ­ಗಳಿಂದ ನಾವು ಆತ್ಮೀಯ ಸ್ನೇಹಿತರು’ ಎಂದೆ. ಅದಕ್ಕವರು, ‘ಸರ್, ನೀವು ಹೀಗೆ ಹೇಳುತ್ತೀರಿ. ಆದರೆ ಅವರು ನಿಮ್ಮ ಬಗ್ಗೆ ಎಷ್ಟು ಕೆಟ್ಟದಾಗಿ ಮಾತನಾ­ಡುತ್ತಾರೆ ಗೊತ್ತೇ? ಮೊನ್ನೆ ನಮ್ಮ ಮನೆಗೆ ಬಂದಿದ್ದರು. ಬರೀ ನಿಮ್ಮನ್ನು ತೆಗಳುವು­ದರಲ್ಲೇ ಸಮಯ ಕಳೆದರು. ನಿಮಗೆ ಭಾರಿ ಅಹಂಕಾರವಂತೆ, ಅವರಿಗೆ ನೀವು ತುಂಬ ಮೋಸ ಮಾಡಿದ್ದೀರಂತೆ. ತಮ್ಮಂತ­ಹವರ ಬಗ್ಗೆ ಹೀಗೆ ಕೀಳಾಗಿ ಮಾತನಾಡಿದ್ದು ನನಗೆ ಸ್ವಲ್ಪವೂ ಇಷ್ಟವಾಗ­ಲಿಲ್ಲ ಸರ್’ ಎಂದು ಎನ್ನುವುದಷ್ಟೇ ಅಲ್ಲ, ಒಸರಿದ ಕಣ್ಣೀ­ರನ್ನು ಒರೆಸಿಕೊಂಡರು.

ಒಂದು ಕ್ಷಣ ಯಾಕೆ ನನ್ನ ಸ್ನೇಹಿತರು ಹೀಗೆ ಕೆಟ್ಟ­ದಾಗಿ ಮಾತನಾಡಿದರು ಎಂದು ಮನಸ್ಸು ಕಲಕಿತು. ಆಗ ಪಂಚತಂತ್ರದ ಕಥೆ­ಯೊಂದು ನೆನಪಾಗಿ ಸಮಾಧಾನವೂ ಆಯಿತು, ಎಚ್ಚರಿಕೆಯೂ ಅಯಿತು. ಕಾಡಿ­ನಲ್ಲೊಂದು ಭಾರಿ ಸಿಂಹ, ಅದು ಕಾಡಿನ ರಾಜ. ಅದರ ಹೆಸರು ಪಿಂಗಳಕ. ಹೇಗೋ ಅದಕ್ಕೆ ಒಂದು ಎತ್ತಿನ ಸ್ನೇಹವಾಯಿತು. ಅದರ ಹೆಸರು ಸಂಜೀವಕ. ಮೊದಲು ಕಾಡಿನಲ್ಲಿ ಸಿಂಹ ಎತ್ತಿನಂತಹ ಪ್ರಾಣಿಯನ್ನು ಕಂಡೇ ಇರಲಿಲ್ಲ. ಯಜಮಾನನಿಂದ ಹೊಡೆಸಿ­ಕೊಂಡು ಕಾಡಿಗೆ ಬಂದ ಸಂಜೀವಕನನ್ನು ಮೊದಲು ಆಶ್ಚರ್ಯದಿಂದ ಕಂಡ ಸಿಂಹಕ್ಕೆ ನಿಧಾನವಾಗಿ ಸ್ನೇಹ ಕೂಡಿತ್ತು. ಅಪ್ಪಟ ಸಸ್ಯಾಹಾರಿ­ಯಾಗಿದ್ದ ಸಂಜೀವ­ಕನಿಗೂ ಅದನ್ನು ಬೇಟೆ­ಯಾ­ಡುವ ಪಿಂಗಳಿಕನಿಗೂ ಕೂಡಿದ್ದ ಸ್ನೇಹ ಎಲ್ಲರಿಗೂ ಆಶ್ಚರ್ಯ ತಂದಿತ್ತು.

ಆದರೆ ದಮ­ನಕನೆಂಬ ನರಿಗೆ ಮಾತ್ರ ಇದು ಸಹನೆ­ಯಾಗಲಿಲ್ಲ. ಯಾರಾದರೂ ಇಬ್ಬರು ತುಂಬ ಹತ್ತಿರವಾಗಿ­ದ್ದರೆ ದಮನಕನಿಗೆ ಸಂಕಟ. ಒಂದು ಸರಿಯಾದ ಸಮಯ ನೋಡಿ­ಕೊಂಡು ದಮ­ನಕ ಸಿಂಹ-ಪಿಂಗಳಕನ ಹತ್ತಿರ ಬಂದಿತು. ಅತ್ಯಂತ ವಿನಯವನ್ನು ಪ್ರದರ್ಶಿಸುತ್ತ, ‘ಮಹಾರಾಜಾ, ನಮಸ್ಕಾರ. ನಾನು ನಿಮ್ಮ ಭಾರಿ ಅಭಿಮಾನಿ. ಆದರೆ, ಇತ್ತೀಚಿಗೆ ನಿಮ್ಮ ಮರ್ಯಾದೆಗೆ ಕುಂದು ಬರುತ್ತಿರುವುದನ್ನು ಕಂಡಾಗ ಬಹಳ ಬೇಸರವಾಗು­ತ್ತಿದೆ. ತಮ್ಮಂತಹ ನಾಯ­ಕರ ಬಗ್ಗೆ ಹೀಗೆ ಕೀಳು ಮಾತು ಕೇಳಲು ಸಂಕಟವಾಗು­ತ್ತದೆ’ ಎಂದಿತು.

ಸಿಂಹ ಕೋಪದಿಂದ ಮತ್ತು ಆಶ್ಚರ್ಯ­ದಿಂದ, ‘ಯಾಕೆ  ದಮ­ನಕ, ಯಾರು ನನ್ನ ಬಗ್ಗೆ ಕೀಳಾಗಿ ಮಾತನಾಡಿದವರು?’ ಎಂದು ಅಬ್ಬರಿಸಿತು. ‘ಕ್ಷಮಿಸಬೇಕು ಪ್ರಭು. ನೀವೆಲ್ಲಿ, ಆ ಹುಲ್ಲು ತಿನ್ನುವ ದರಿದ್ರ ಎತ್ತು ಸಂಜೀವಕ ಎಲ್ಲಿ? ನೀವೇನೋ ಕರುಣೆಯಿಂದ ಅದನ್ನು ಹತ್ತಿರ ಬಿಟ್ಟು­ಕೊಂಡಿದ್ದರೆ ಆ ಎತ್ತು ಅಹಂಕಾರದಿಂದ ಏನೇನೋ ಮಾತನಾಡುತ್ತದೆ. ಅದು ನಿಮ್ಮನ್ನು ಮಲಗಿದಾಗ ಕೋಡಿನಿಂದ ಇರಿದು ಕೊಂದು ತಾನೇ ರಾಜನಾ­ಗುತ್ತೇನೆ ಎನ್ನುತ್ತಿತ್ತು’ ಎಂದು ಮತ್ತಷ್ಟು ವಿನಯ ತೋರಿಸಿತು. ಸಿಂಹ ಮತ್ತೆ ಅಬ್ಬರಿಸಿತು, ‘ಹೌದೇ? ಇದಕ್ಕೆ ಏನಾದರೂ ಪುರಾವೆ ಇದೆಯೇ?’ ದಮನಕ ಹೇಳಿತು, ‘ಎಂದಿನಂತೆ ನೀವು ನಾಳೆ ಮಧ್ಯಾಹ್ನ ಊಟದ ಸಮಯಕ್ಕೆ ಸಂಜೀವಕ ಬಂದಾಗ ನೋಡಿರಿ. ಆತ ಹೇಗೆ ತಲೆ ತಗ್ಗಿಸಿಕೊಂಡು, ಹಿಂದೆ ಸರಿಯುತ್ತ ದುರುಗುಟ್ಟಿ ನೋಡು­ತ್ತಾನೆ’, ಸಿಂಹ, ‘ಸರಿ, ನಾಳೆ ನೋಡೋಣ’ ಎಂದಿತು.

ಅದೇ ದಿನ ದಮನಕ ಹೋಗಿ ಸಂಜೀವ­ಕ­ನನ್ನು ಭೆಟ್ಟಿಯಾಯಿತು, ‘ಅಯ್ಯಾ ಸಂಜೀವಕ, ನಿನ್ನ ಬಗ್ಗೆ ಕರುಣೆ ಉಕ್ಕಿ ಬರುತ್ತಿದೆ. ನೀನು ತುಂಬ ಸಾತ್ವಿಕ ಪ್ರಾಣಿ. ಆದರೆ, ನಿನ್ನ ಸ್ನೇಹಿತನಂತೆ ನಟಿಸುತ್ತಿರುವ ಸಿಂಹ ಪಿಂಗಳಕ ಮಹಾ ನೀಚ. ನೋಡು, ನಾಳೆ ಮಧ್ಯಾಹ್ನ ಊಟದ ಹೊತ್ತಿಗೆ ನೀನಿರುವ ಕಡೆಗೆ ಬಂದು ನಿನ್ನನ್ನು ಕೊಂದೇ ಬಿಡುತ್ತಾನೆ. ಅದಕ್ಕೇ ನೀನು ಅವನು ಹತ್ತಿರ ಬಂದೊಡನೆ ನಿನ್ನ ಕೋಡು­ಗಳನ್ನು ಅವನೆಡೆಗೆ ಚಾಚಿ ದುರುಗುಟ್ಟಿಕೊಂಡು ನೋಡು. ಹತ್ತಿರ ಬಂದರೆ ಸೀಳಿ­ಬಿಡು’ ಎಂದು ಹೇಳಿ ಹೋಯಿತು.

ಮರುದಿನ ಕೋಪದಿಂದ ಸಿಂಹ ಬರುವು­ದಕ್ಕೂ, ಎತ್ತು ಕೋಡು ತಗ್ಗಿಸಿ ದುರುಗುಟ್ಟಿ ನೋಡುವುದಕ್ಕೂ ಸರಿಯಾಯಿತು. ಇಬ್ಬರಿಗೂ ದಮನಕ ಹೇಳಿದ್ದು ಸರಿ ಎನ್ನಿಸಿತು.  ತಕ್ಷಣ ಸಿಂಹ ಎತ್ತಿನ ಮೇಲೆ ಹಾರಿಬಿದ್ದು ಕೊಂದು ಹಾಕಿತು. ದಮನಕ ಸಂತೋಷದಿಂದ ಕುಣಿದಾಡಿತು. ಈ ಕಥೆಯನ್ನು ನೆನೆಸಿಕೊಂಡು ನಾನು ತಕ್ಷಣ ಗೋವಿಂದರಾಯರಿಗೆ ಫೋನ್ ಮಾಡಿ ಈ ಬಗ್ಗೆ ವಿಚಾರಿಸಿದೆ. ಅವರು ಜೋರಾಗಿ ನಕ್ಕು, ‘ಅಯ್ಯೋ ಆ ನೀಚ ನಿಮಗೂ ಹಾಗೆ ಹೇಳಿದನೇ? ನನಗೂ ನಿಮ್ಮ ಬಗ್ಗೆ ಅದೇ ಮಾತು ಹೇಳಿದ್ದ’ ಎಂದರು.

ನಮ್ಮ ಸ್ನೇಹ ಮತ್ತಷ್ಟು ಗಟ್ಟಿ­ಯಾಯಿತು. ನಾವಿಬ್ಬರೂ ನಮ್ಮ ಬದು­ಕಿ­ನಲ್ಲಿ ಬಂದಿದ್ದ ದಮನಕ­ನನ್ನು ಹೊರಗಿಟ್ಟೆವು. ಇಂಥ ದಮನಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರಿಗೆ ಈ ಕ್ಷುದ್ರ ಕಾರ್ಯದಲ್ಲೇ ತೃಪ್ತಿ. ಮತ್ತೊಬ್ಬರ ಮಾತು ಕೇಳಿ ಸ್ನೇಹ ಕಳೆದುಕೊಳ್ಳುವುದಕ್ಕಿಂತ ಇಬ್ಬರೂ ಸ್ನೇಹಿ­ತರು ನೇರವಾಗಿ ಮಾತನಾಡಿ ವಿಚಾರ ಸ್ವಷ್ಟಪಡಿಸಿಕೊಳ್ಳುವುದು ಒಳ್ಳೆಯದು. ನಮ್ಮ ನಮ್ಮಲ್ಲಿ ನೇರವಾದ ಮಾತುಕತೆ ಇಲ್ಲದಿದ್ದಲ್ಲಿ ದಮನಕರು ಸಫಲರಾಗಿ ಸ್ನೇಹಸೇತುವನ್ನು ಕೆಡವಿಬಿಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT