ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ತಯಾರಿಕಾ ನೀತಿ: ಉತ್ತಮ ಆರಂಭ

Last Updated 26 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರವು ಇತ್ತೀಚೆಗೆ ಪ್ರಕಟಿಸಿದ ಹೊಸ ತಯಾರಿಕಾ ನೀತಿ ಬಗ್ಗೆ  ನನಗೂ ಆರಂಭದಲ್ಲಿ ಸಾಕಷ್ಟು ಸಂದೇಹಗಳಿದ್ದವು. ಈ ಹೊಸ ನೀತಿ ಜಾರಿಗೆ ತಂದ ಹೆಗ್ಗಳಿಕೆಗೆ ಪಾತ್ರರಾಗಿರುವ  ಕೇಂದ್ರ ಸಚಿವ ಆನಂದ ಶರ್ಮಾ ಅವರನ್ನು ಭೇಟಿಯಾಗುವ ಅವಕಾಶ ದೊರೆತು ಈ   ನೀತಿ ಬಗ್ಗೆ ಅವರಿಂದಲೇ ಅನೇಕ ವಿವರಗಳನ್ನು ಪಡೆದ ನಂತರವೇ ನನ್ನಲ್ಲಿ ಮೂಡಿದ್ದ ಅನೇಕ ಅನುಮಾನಗಳು ದೂರವಾದವು. 

ಕೈಗಾರಿಕೆ, ವಾಣಿಜ್ಯ ಮತ್ತು ಜವಳಿ ಸಚಿವ ಆನಂದ ಶರ್ಮಾ ಅವರು  ಈ ಹೊಸ ನೀತಿ ಬಗ್ಗೆ ಚರ್ಚಿಸಲು ಸಾಕಷ್ಟು ಉತ್ಸುಕತೆಯನ್ನೂ ತೋರಿಸಿದ್ದರು. ಈ ಹೊಸ ನೀತಿಯು ದೇಶದಲ್ಲಿನ ಸರಕುಗಳ ತಯಾರಿಕಾ ವಲಯದಲ್ಲಿ ವ್ಯಾಪಕ ಬದಲಾವಣೆಗೆ ಅವಕಾಶ ಕಲ್ಪಿಸಲಿದೆ ಎಂದೂ ಅವರು ದೃಢ ವಿಶ್ವಾಸ ವ್ಯಕ್ತಪಡಿಸಿದ್ದರು. ಹೊಸ ನೀತಿಯನ್ನು ಸಮರ್ಪಕವಾಗಿ ಜಾರಿಗೆ ತರಲು ಕೇಂದ್ರ ಸರ್ಕಾರ ಹೆಚ್ಚು ಉತ್ಸುಕವಾಗಿದೆ ಮತ್ತು ಈ ನಿಟ್ಟಿನಲ್ಲಿ ಗಂಭೀರ ಧೋರಣೆ ತಳೆದಿದೆ ಎಂದೂ ಅವರು ನನಗೆ ಸ್ಪಷ್ಟಪಡಿಸಿದ್ದರು.

ದೇಶಿ ಸರಕು ತಯಾರಿಕಾ ರಂಗದ ಜಾಗತಿಕ ಸ್ಪರ್ಧಾತ್ಮಕತೆ ಹೆಚ್ಚಿಸುವುದು ಈ ನೀತಿಯ ಮುಖ್ಯ ಉದ್ದೇಶವಾಗಿದೆ. 2020ರಷ್ಟೊತ್ತಿಗೆ ಒಟ್ಟು ಆಂತರಿಕ ಉತ್ಪನ್ನಕ್ಕೆ  (ಜಿಡಿಪಿ) ತಯಾರಿಕಾ ರಂಗದ ಕೊಡುಗೆಯನ್ನು ಸದ್ಯದ ಶೇ 16ರಿಂದ ಶೇ 25ರಷ್ಟಕ್ಕೆ ಹೆಚ್ಚಿಸಲು ಮತ್ತು ತಯಾರಿಕಾ ರಂಗದ ವಾರ್ಷಿಕ ಬೆಳವಣಿಗೆ ದರವನ್ನು ಸದ್ಯದ ಶೇ 9ರಿಂದ ಶೇ 15ಕ್ಕೆ ಹೆಚ್ಚಿಸಲಿದೆ ಎಂದೂ ನಿರೀಕ್ಷಿಸಲಾಗಿದೆ.

ಇದರಿಂದಾಗಿ ವಿವಿಧ ಹಂತಗಳಲ್ಲಿ ಹೆಚ್ಚುವರಿಯಾಗಿ 10 ಕೋಟಿಗಳಷ್ಟು ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ.ಹಲವು ಕ್ರಿಯಾ ಯೋಜನೆಗಳನ್ನು  ಅನುಷ್ಠಾನಗೊಳಿಸುವ ಮೂಲಕ ಹೊಸ ತಯಾರಿಕಾ ನೀತಿಯು, ಈ ಎಲ್ಲ ಗುರಿಗಳನ್ನು ಸಾಧಿಸಲು ಉದ್ದೇಶಿಸಿದೆ.

  • ರಾಷ್ಟ್ರೀಯ ಬಂಡವಾಳ ಹೂಡಿಕೆ ಮತ್ತು ತಯಾರಿಕಾ ವಲಯ (ಎನ್‌ಐಎಂಜೆಡ್) ಸ್ಥಾಪನೆ
  • ಕಾರ್ಮಿಕರ ಕೌಶಲ ಅಭಿವೃದ್ಧಿ ಮತ್ತು ತರಬೇತಿ ಕಾರ್ಯಕ್ರಮಗಳು
  • ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಸ್‌ಎಂಇ) ಉತ್ತೇಜನ
  • `ಪರಿಸರ ಸ್ನೇಹಿ' ತಯಾರಿಕಾ ಚಟುವಟಿಕೆಗಳಿಗೆ ಹೆಚ್ಚು ಉತ್ತೇಜನ
  • ಉದ್ದಿಮೆ ವಹಿವಾಟು ಸ್ಥಾಪನೆ ಪ್ರಕ್ರಿಯೆ ಸರಳೀಕರಣ
  • ಮೂಲ ಸೌಕರ್ಯಗಳನ್ನು ಜಾಗತಿಕ ಗುಣಮಟ್ಟಕ್ಕೆ ಸುಧಾರಣೆ
  • ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆಗಳ ಸಾಂಸ್ಥೀಕರಣದ ಮೂಲಕ ಉತ್ತೇಜನ
  • ರಫ್ತು ಬೆಳವಣಿಗೆಗೆ ಹೆಚ್ಚು ಗಮನ

ಹೊಸ ಸರಕು ತಯಾರಿಕಾ ನೀತಿಯು, ಪ್ರತಿಯೊಂದು ವಲಯದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ವಿಸ್ತೃತ ಕಾರ್ಯಸೂಚಿಯನ್ನೂ ಒಳಗೊಂಡಿದೆ.ಸರ್ಕಾರ ಈ ನೀತಿ ಪ್ರಕಟಿಸಿ ಸುಮ್ಮನೆ ಕೈಕಟ್ಟಿಕೊಂಡು ಕುಳಿತಿಲ್ಲ. ಹೊಸ ನೀತಿ ಪ್ರಕಟಣೆಯ ಬೆನ್ನಲ್ಲೇ, 12 ರಾಷ್ಟ್ರೀಯ ಬಂಡವಾಳ ಹೂಡಿಕೆ ಮತ್ತು ತಯಾರಿಕಾ ವಲಯಗಳನ್ನು ಪ್ರಕಟಿಸಿರುವುದು ಸರ್ಕಾರದ ಉತ್ಸುಕತೆಗೆ ಸಾಕ್ಷಿಯಾಗಿದೆ. ಈ 12 ವಲಯಗಳಲ್ಲಿ 8 ಮುಂಬೈ - ದೆಹಲಿ ಕಾರಿಡಾರ್‌ನಲ್ಲಿ ಮತ್ತು ಉಳಿದ ವಲಯಗಳು ದೇಶದ ಇತರ ಭಾಗಗಳಲ್ಲಿ ಕಾರ್ಯಾರಂಭ ಮಾಡಲಿವೆ. ತುಮಕೂರು ಒಂದು ವಲಯವಾಗಿರುವ ಸಾಧ್ಯತೆಗಳಿರುವುದು ರಾಜ್ಯದ ಹಿತಾಸಕ್ತಿಗೆ ಪೂರಕವಾಗಿದೆ.

ಈ ವಿಶೇಷ ತಯಾರಿಕಾ ವಲಯಗಳು ಹೊಸ ಸಮಗ್ರ ಕೈಗಾರಿಕಾ ಪಟ್ಟಣ (ಟೌನ್‌ಶಿಪ್) ಯೋಜನೆಗಳಾಗಿದ್ದು, ಸರ್ಕಾರಿ ಮತ್ತು  ಖಾಸಗಿ ಪಾಲುದಾರಿಕೆ ಆಧಾರದ ಮೇಲೆ  ಸಮಗ್ರ ಮತ್ತು ಸ್ವಯಂ ಸುಸ್ಥಿರ ಆರ್ಥಿಕ ವಲಯಗಳಾಗಿ ಅಭಿವೃದ್ಧಿಗೊಳ್ಳಲಿವೆ.

ಈ ಸರಕು ತಯಾರಿಕಾ ವಲಯಗಳಲ್ಲಿ  ಜಾಗತಿಕ ಗುಣಮಟ್ಟದ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು. ಇವುಗಳು `ಏಕ ಗವಾಕ್ಷಿ' ಪರಿಕಲ್ಪನೆಯಡಿ ಕಾರ್ಯನಿರ್ವಹಿಸಲಿವೆ. ಈ ವಲಯಗಳ ಸ್ಥಾಪನೆ ಮತ್ತು ನಿರ್ವಹಣೆಯಲ್ಲಿ ಅಧಿಕಾರಶಾಹಿಯ ಹಸ್ತಕ್ಷೇಪ ಮತ್ತು ವಿಳಂಬಗಳು ಯಾವುದೇ ಬಗೆಯಲ್ಲಿಯೂ ಅಡ್ಡಿಯಾಗದಂತೆ ರಕ್ಷಣೆ ಒದಗಿಸಲಾಗಿದೆ. ಈ ಮೂಲಕ ಈ ವಲಯಗಳು ಸುಗಮವಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ಸೌಲಭ್ಯಗಳನ್ನೆಲ್ಲ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ದೇಶದ ಕೈಗಾರಿಕಾ ಬೆಳವಣಿಗೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಸ್‌ಎಂಇ) ಮಹತ್ವವನ್ನೂ ಹೊಸ ನೀತಿಯು ಸ್ಪಷ್ಟವಾಗಿ ಗುರುತಿಸಿದೆ. ಪ್ರತಿಯೊಂದು ವಲಯವು ಎಲ್ಲ ಬಗೆಯ ಕೈಗಾರಿಕೆಗಳನ್ನು ಒಳಗೊಂಡಿರುತ್ತದೆ.

ಅರ್ಥ ವ್ಯವಸ್ಥೆಗೆ `ಎಸ್‌ಎಂಇ'ಗಳ ಕೊಡುಗೆಯೂ ದೊಡ್ಡ ಪ್ರಮಾಣದಲ್ಲಿ ಇದೆ. ಅದರಲ್ಲೂ ವಿಶೇಷವಾಗಿ ಉದ್ಯೋಗ ಅವಕಾಶ ಸೃಷ್ಟಿಯಲ್ಲಿಯೂ  `ಎಸ್‌ಎಂಇ' ಪ್ರಮುಖ ಪಾತ್ರ ನಿರ್ವಹಿಸಲಿದೆ. ಸದ್ಯಕ್ಕೆ `ಎಸ್‌ಎಂಇ'ಗಳಲ್ಲಿ 6 ಕೋಟಿಗಳಷ್ಟು ಕಾರ್ಮಿಕರು ದುಡಿಯುತ್ತಿದ್ದಾರೆ. ಉದ್ಯೋಗ ಸೃಷ್ಟಿಯಲ್ಲಿ `ಎಸ್‌ಎಂಇ'ಗಳು, ಕೃಷಿ ನಂತರದ 2ನೆ ಸ್ಥಾನದಲ್ಲಿ ಇವೆ.

ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನ ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ದೇಶಿ ಮಾರುಕಟ್ಟೆಗೆ ಪ್ರತಿ ತಿಂಗಳೂ ಪ್ರವೇಶಿಸುವ ಉದ್ಯೋಗ ಆಕಾಂಕ್ಷಿಗಳಿಗೆ ಕೆಲಸ ಕೊಡಿಸಲು 10 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ಅನಿವಾರ್ಯತೆ ಇದೆ.

ದೇಶದ ಒಟ್ಟು ಸರಕು ತಯಾರಿಕೆ ರಂಗದಲ್ಲಿ `ಎಸ್‌ಎಂಇ'ಗಳ ಕೊಡುಗೆ ಶೇ 45ರಷ್ಟು ಮತ್ತು ಒಟ್ಟು ರಫ್ತಿನಲ್ಲಿ ಶೇ 40ರಷ್ಟು ಕೊಡುಗೆ ಇದೆ.ಅಸಂಘಟಿತ ವಲಯವಾಗಿರುವ `ಎಸ್‌ಎಂಇ'ಗಳು ಹಣಕಾಸು, ತಂತ್ರಜ್ಞಾನ, ಸಂಕೀರ್ಣಮಯ  ಒತ್ತಡಗಳು ಸೇರಿದಂತೆ ಹಲವಾರು ಸವಾಲುಗಳನ್ನೂ ಎದುರಿಸುತ್ತಿವೆ. ಹೊಸ  ತಯಾರಿಕಾ ನೀತಿಯು ಈ ಎಲ್ಲ ಸಮಸ್ಯೆಗಳ ಪರಿಹಾರದತ್ತ ಗಮನ ಹರಿಸಿದೆ.

`ಎಸ್‌ಎಂಇ'ಗಳನ್ನು ಬ್ಯಾಂಕ್‌ಗಳ ಆದ್ಯತಾ ಸಾಲಗಳಲ್ಲಿ ಸೇರ್ಪಡೆ, ವಿಶೇಷ `ಎಸ್‌ಎಂಇ' ಷೇರು ವಿನಿಮಯ ಕೇಂದ್ರ ಸ್ಥಾಪನೆ, ಸಾಹಸ ಬಂಡವಾಳ ಹೂಡಿಕೆ ಸ್ಥಾನಮಾನ ಮತ್ತು  ನೇರ ತೆರಿಗೆಯ್ಲ್ಲಲಿನ ಕೆಲ ಮಾರ್ಪಾಡುಗಳು ಖಂಡಿತವಾಗಿಯೂ ಬದಲಾವಣೆ ತರಲು ನೆರವಾಗಲಿವೆ.

`ಎಸ್‌ಎಂಇ'ಗಳಿಗೆ ನೆರವಾಗುವ ವಿಶೇಷ ಸೇವಾ ಸಂಘಟನೆಗಳು ಕೂಡ ಸ್ವಾಗತಾರ್ಹ ಪ್ರಸ್ತಾವವಾಗಿದೆ. ತಂತ್ರಜ್ಞಾನ ನವೀಕರಣಕ್ಕೆಂದೇ ವಿಶೇಷ ಉತ್ತೇಜನಾ ಯೋಜನೆ, ಪೇಟೆಂಟ್‌ಗೆ ಅರ್ಜಿ, ಸಂಶೋಧನೆ ಮತ್ತು ಅಭಿವೃದ್ಧಿ ಉತ್ತೇಜನಾ ಕ್ರಮಗಳೂ ಈ ಹೊಸ ನೀತಿಯಲ್ಲಿ ಅಡಕವಾಗಿವೆ. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುನಿಯಪ್ಪ ಅವರ ಜತೆಗಿನ ನನ್ನ ಭೇಟಿಯೂ, ಇಬ್ಬರೂ ಸಚಿವರಿಗೆ `ಎಸ್‌ಎಂಇ'ಗಳ ಬಗ್ಗೆ ಇರುವ ಕಾಳಜಿಯನ್ನು ಇನ್ನೊಮ್ಮೆ ದೃಢಪಡಿಸಿತು.

ಸರಕು ತಯಾರಿಕಾ ಘಟಕಗಳು 70 ವಿವಿಧ ಬಗೆಯ ಕಾಯ್ದೆಗಳ ವ್ಯಾಪ್ತಿಯಡಿ ಬರುತ್ತವೆ ಮತ್ತು ಪ್ರತಿ ವರ್ಷ 100 ಬಗೆಯ ಲೆಕ್ಕಪತ್ರಗಳನ್ನು (ರಿಟರ್ನ್ಸ್) ಸಲ್ಲಿಸಬೇಕಾಗುತ್ತದೆ ಎನ್ನುವ ಸಂಗತಿಯು ಅನೇಕರ ಪಾಲಿಗೆ ಆಶ್ಚರ್ಯ ಮೂಡಿಸಬಹುದು.

`ಇನ್‌ಸ್ಪೆಕ್ಟರ್ ರಾಜ್' ವ್ಯವಸ್ಥೆಯ ಬಿಗಿ ಹಿಡಿತವು  ಹಲವಾರು `ಎಸ್‌ಎಂಇ'ಗಳ ಬೆಳವಣಿಗೆಗೆ ಅಡ್ಡಿಯಾಗಿ ಪರಿಣಮಿಸಿದೆ. `ಎಸ್‌ಎಂಇ'ಗಳಲ್ಲಿ ಹೆಚ್ಚುತ್ತಿರುವ  ಸಂಖ್ಯಾಬಲವು ಕಾರ್ಮಿಕ ಕಾಯ್ದೆ ಜಾರಿಯ ಹಲವು ಸವಾಲುಗಳನ್ನು ಒಡ್ಡಲಿದೆ ಎಂದು ಅನೇಕ ಪ್ರಮುಖ ಕೈಗಾರಿಕೋದ್ಯಮಿಗಳು ಆತಂಕ ವ್ಯಕ್ತಪಡಿಸುತ್ತಾರೆ. ಹೊಸ ತಯಾರಿಕಾ ನೀತಿಯು ಈ ಎಲ್ಲ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸುವ ಆಶಯ ಹೊಂದಿದೆ.

ಏಕ ಗವಾಕ್ಷಿ ಸೌಲಭ್ಯ, ಅಂತರಜಾಲ ಮೂಲಕವೇ ಯೋಜನೆಗಳಿಗೆ ಅನುಮೋದನೆ ನೀಡುವುದು, ನಿಬಂಧನೆಗಳ ಜಾರಿಗೆ ವಿಶೇಷ ಅನುದಾನ,  ಉದ್ದಿಮೆ ಸ್ಥಾಪನೆಯ ನಿಯಮಾವಳಿ ಸರಳೀಕರಣ ಮುಂತಾದವು ಸರಕುಗಳ ತಯಾರಕರ ಬವಣೆಗಳನ್ನು ಸಾಕಷ್ಟು ದೂರ ಮಾಡಲಿವೆ.

ಪರಿಸರ ಮಾಲಿನ್ಯ ನಿಯಂತ್ರಣ ನೀತಿಯಡಿ ರಾಜ್ಯ ಸರ್ಕಾರಗಳಿಗೆ ಇರುವ ಅಧಿಕಾರ ಮೊಟಕುಗೊಳಿಸುವ ಪ್ರಸ್ತಾವವು ಕೂಡ ಸ್ವಾಗತಾರ್ಹವಾಗಿದೆ. ಕಾರ್ಮಿಕ ಕಾನೂನುಗಳಲ್ಲಿನ ಕೆಲ ಬದಲಾವಣೆಗಳು, ಅದರಲ್ಲೂ ವಿಶೇಷವಾಗಿ ತಯಾರಿಕಾ ವಲಯಗಳಿಂದ  ನಿರ್ಗಮಿಸುವ ಅವಕಾಶ ಮಾಡಿಕೊಟ್ಟಿರುವುದು ತುಂಬ ಮಹತ್ವದ್ದು ಆಗಿದೆ.

ಹೊಸ ಸರಕು ತಯಾರಿಕಾ ನೀತಿಯು (ಎನ್‌ಎಂಪಿ) ಉತ್ತಮ ಆರಂಭ ಎನ್ನಬಹುದಾಗಿದೆ. ಹೊಸ ನೀತಿ ಜಾರಿಗೊಳಿಸಿದಾಗ ಉದ್ಭವಿಸುವ ಹೊಸ ಸಮಸ್ಯೆಗಳನ್ನೂ ಬಗೆಹರಿಸಲು ಅವಕಾಶ ಕಲ್ಪಿಸಲಾಗಿದೆ.

ತಯಾರಿಕಾ ವಲಯವು ಎದುರಿಸುತ್ತಿರುವ ಹಲವಾರು ಸವಾಲುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಗಂಭೀರವಾಗಿ ಕಾರ್ಯಪ್ರವೃತ್ತವಾಗಿರುವುದಕ್ಕೆ ಕೇಂದ್ರ ಸರ್ಕಾರ ಖಂಡಿತವಾಗಿಯೂ ಅಭಿನಂದನೆಗೆ ಅರ್ಹವಾಗಿದೆ.

ರಾಜ್ಯ ಸರ್ಕಾರಗಳ ಮಟ್ಟದಲ್ಲಿನ ಅಧಿಕಾರಶಾಹಿಯ ಧೋರಣೆಯೇ  ಇಲ್ಲಿ ಎದುರಾಗುವ ಪ್ರಮುಖ ಅಡಚಣೆಯಾಗಿದೆ. ಹೊಸ ಬದಲಾವಣೆಗಳನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ದರೆ ಅದರಿಂದ ರಾಜ್ಯ ಸರ್ಕಾರಗಳಿಗೇ ಹೆಚ್ಚು ಪ್ರಯೋಜನ ದೊರೆಯಲಿದೆ.

ಹೊಸ ನೀತಿಯು ನಿರೀಕ್ಷಿತ ಬದಲಾವಣೆಗಳನ್ನೆಲ್ಲ ತರಲು ಹಲವು ವರ್ಷಗಳು ಬೇಕಾಗಬಹುದು. ಮೊದಲ ಹೆಜ್ಜೆಯನ್ನು ದೃಢವಾಗಿ ಊರುವುದರೊಂದಿಗೆ ದೀರ್ಘ ಪಯಣಕ್ಕೆ ಶ್ರೀಕಾರ ಹಾಕಿರುವುದು ಶುಭ ಸಂಗತಿಯಾಗಿದೆ.

ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT