ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ರೀತಿಯ ಫೋಟೊ ಮತ್ತು ಚೌಕಟ್ಟಿನಾಚೆ...

ಅಕ್ಷರ ಗಾತ್ರ

ದಿನವಿಡೀ ಕುಣಿದು ಸಂಜೆ ಎಲ್ಲರೂ ಕೈ ಕಾಲೊಡ್ಡಿ ವಿರಮಿಸುತ್ತಿರುವಾಗಲೇ ಗುರು ನೀಲಾವರ ರಾಮಕೃಷ್ಣಯ್ಯನವರಿಗೆ ಲಹರಿ ಬಂದು ಯಾವುದಾದರೊಂದು ಪ್ರಸಂಗದ ಪದ್ಯವನ್ನು ಗುನುಗುನಿಸುತ್ತ ಬಂದರೆಂದರೆ ಗುರುಗಳಾದ ಹಿರಿಯಡಕ ಗೋಪಾಲರಾಯರಿಗೂ ಅದರ ಸೂಚನೆ ಸಿಕ್ಕಿಬಿಟ್ಟು ಅವರೂ ಮದ್ದಲೆಯನ್ನು ಎತ್ತಿಕೊಂಡು ಬಂದು ಭಾಗವತರ ಪಕ್ಕವೇ ಕೂರುತ್ತಿದ್ದರು.

ವಿದ್ಯಾರ್ಥಿಗಳಾದ ನಾವೆಲ್ಲ ಕುತೂಹಲದ ಕಣ್ಣುಗಳಲ್ಲಿ ಚಕ್ಕಳಮಕ್ಕಳ ಹಾಕಿ ಕುಳಿತುಬಿಟ್ಟೆವೆಂದರೆ ಆ ಸಂಜೆಯ ಯಕ್ಷೋತ್ಸವ ಅರಂಭವಾಯಿತೆಂದೇ ಅರ್ಥ. ನಾವೆಲ್ಲ ನಿರೀಕ್ಷಿಸಿದಂತೆ ಗುರು ವೀರಭದ್ರ ನಾಯಕರು ನೀಳಕೇಶವನ್ನು ಸುರುಳಿ ಸುತ್ತಿ ಹಿಂದಲೆಗೆ ಬಿಗಿದುಕೊಂಡು ಪೌರಾಣಿಕ ಪಾತ್ರವೊಂದನ್ನು ಆವಾಹಿಸಿಕೊಂಡು ಬಂದಂತೆ ಆಗಮಿಸುತ್ತಿದ್ದರು. ಧೋತಿಯನ್ನು ಎತ್ತಿಕಟ್ಟಿ ಅದರ ಮೇಲೊಂದು ಶಲ್ಯವನ್ನು ಬಿಗಿಯುತ್ತ, `ಇವತ್ತು ಯಾವುದು ಮಾಡೋಣ?' ಎಂದು ಕೇಳುತ್ತಿದ್ದುದಷ್ಟೆ. ನೀಲಾವರ ಭಾಗವತರು ಮೊದಲೇ ಮಾತನಾಡಿಕೊಂಡಿದ್ದಾರೋ ಎಂಬಂತೆ ಎತ್ತುಗಡೆ ಮಾಡಿಯೇ ಬಿಡುತ್ತಿದ್ದರು.
 

 
ಯೌವನದ ದಿನಗಳಲ್ಲಿ ಬಿ.ವಿ.ಕಾರಂತರು `ಹೊಸ ವೇಷದ ಫೋಟೊ'ದಲ್ಲಿ ಸಂಜೀವ ಸುವರ್ಣರು

ಆ ಸಂಜೆಗಳನ್ನು ಅನುಭವಿಸಿದ ಮೇಲೆ ನನಗೆ ಇವತ್ತು ಎಂಥ ಯಕ್ಷಗಾನ ಪ್ರಾತ್ಯಕ್ಷಿಕೆಯೂ ಬೇಗನೆ ನೀರಸವೆನಿಸಿಬಿಡುತ್ತದೆ. ಸುಮಾರು ನಲವತ್ತು ವರ್ಷಗಳ ಹಿಂದೆ ಗುರುತ್ರಯರು ಯಕ್ಷಗಾನ ಕೇಂದ್ರದ ಪುಟ್ಟ ಕೊಠಡಿಯಲ್ಲಿ ನಿರ್ವಹಿಸಿದ ಪದ್ಯ-ವಾದ್ಯ-ನೃತ್ಯದ ವೈಭವವನ್ನು ನೆನಪಿಸಿಕೊಳ್ಳುವುದೇ ಒಂದು ಸುಖ. ಒಮ್ಮೆ ಅತಿಕಾಯ, ಮತ್ತೊಮ್ಮೆ ತಾಮ್ರಧ್ವಜ, ಮಗದೊಮ್ಮೆ ವಾಲಿ... ನಿತ್ಯದ ತರಗತಿಯ ಪಠ್ಯದಲ್ಲಿಲ್ಲದ ಎಷ್ಟೋ ವಿಷಯಗಳನ್ನು ಕಂಡು ಅನುಭವಿಸುವಂಥ ಅವಕಾಶವದು.

ರಥವನಡರಿ ಯುದ್ಧಕ್ಕೆ ಹೊರಟ ಅತಿಕಾಯ ಯುದ್ಧದ ಮೂಲಕ ಪ್ರಾಣಸಮರ್ಪಣೆಗೆ ತೆರಳುವ ವೀರಭದ್ರನಾಯಕರ ಅಭಿನಯದಲ್ಲಿ ನಮ್ಮ ಕಣ್ಣುಗಳು ಮಂಜಾಗುತ್ತಿದ್ದವು. ಪಾಂಡವಾಶ್ವಮೇಧ ಪ್ರಸಂಗದಲ್ಲಿ  ತಾಮ್ರಧ್ವಜನು ವ್ಯೆಹ ರಚನೆ ಮಾಡಿ ಯುದ್ಧಕ್ಕೆ ನಿಲ್ಲುವ ವೈಖರಿಗೆ ನಾವೆಲ್ಲ ಕುಳಿತಲ್ಲಿಯೇ ಕಂಪಿಸುತ್ತಿದ್ದೆವು. ಮೂರೂ ದಿಕ್ಕಿಗೆ ಮುಖಮಾಡಿರುವಂಥ ಯಕ್ಷಗಾನದ ಸಾಂಪ್ರದಾಯಿಕ ರಂಗಸ್ಥಳದ ವಿನ್ಯಾಸಕ್ಕೆ ಅನುಗುಣವಾಗಿ ನೃತ್ಯಾಭಿನಯಶೈಲಿಗಳು ಹೇಗೆ ರೂಪುಗೊಂಡಿವೆ ಎಂಬ ಅನುಭವ ನನಗಾದದ್ದು ಅಲ್ಲಿಯೇ.

ಒಮ್ಮೆ ಗುರು ವೀರಭದ್ರನಾಯಕರು ಕಾಣಿಸಿದ `ಮಂಡಲ ಕುಣಿತ' ನೆನಪಿಸಿಕೊಂಡರೆ ನನ್ನ ಮನಸ್ಸು ಅದರ ಸುತ್ತವೇ ಸುತ್ತಲಾರಂಭಿಸುತ್ತದೆ. ಅದು, ಕರಾವಳಿಯ ಆರಾಧನ ಕಲೆಯಾದ ನಾಗಮಂಡಲದಲ್ಲಿ ನಾಗಿಣಿ ಕುಣಿದ ಹಾಗೆ. ಎಡಗೈಯಲ್ಲಿ ಬಿಲ್ಲು ಹಿಡಿದು, ಬಲಗೈಯಲ್ಲಿ ಮುಷ್ಟಿ ಬಿಗಿದು, ಎರಡೂ ಕೈಗಳನ್ನು ವೃತ್ತಾಕಾರವಾಗಿ ಚಲಿಸುತ್ತ, ಮೂರು ದಿಕ್ಕುಗಳಿಗೆ ಮುಖ ಮಾಡಿಕೊಂಡು ನರ್ತಿಸುವ ರೀತಿಯಿದೆಯಲ್ಲ, ವರ್ಷವಿಡೀ ಕಲಿತರೂ ಒಲಿಯುವ ವಿದ್ಯೆಯಲ್ಲ!

ಕೈಗಳನ್ನು ಸುತ್ತುವುದರಲ್ಲಿ ಕೊಂಚ ಎಚ್ಚರ ತಪ್ಪಿದರೂ ಬಿಲ್ಲು ಸಿಕ್ಕಿಹಾಕಿಕೊಳ್ಳುತ್ತಿತ್ತು. ತೆಂಕುತಿಟ್ಟು ಯಕ್ಷಗಾನದಲ್ಲಿ ಗುರು ಪಡ್ರೆ ಚಂದುರವರು ಪುಂಡು ವೇಷದಲ್ಲಿ ಮುಷ್ಟಿ ಹಿಡಿದು, ಬೆರಳುಗಳನ್ನು ಲಯಬದ್ಧವಾಗಿ ತೆರೆಯುತ್ತ ಮಣಿಗಂಟು ಬಾಗಿಸಿ ತುದಿಗಾಲಲ್ಲಿ ಕುಣಿಯುತ್ತಿದ್ದ ರೀತಿಗೂ ಇದಕ್ಕೂ ಕೆಲವು ಅಂಶಗಳಲ್ಲಿ ಹೋಲಿಕೆ ಇದೆ. ಏಕ, ಆದಿ, ಅಷ್ಟ, ರೂಪಕ ಹೀಗೆ ಬಹುತಾಳಗಳ ನಡೆಯಲ್ಲಿ ಸಾಗುವ ಸೊಗಸು ಬಡಗುತಿಟ್ಟಿನ `ಮಂಡಲ' ಕುಣಿತದಲ್ಲಿದೆ.

ಎಲ್ಲವೂ ಮುಗಿದು ಆಯಾಸಗೊಂಡು ವೀರಭದ್ರ ನಾಯಕರು ಮಲಗುವ ಕೊಠಡಿ ಸೇರಿದರೂ ಅವರ ಮನಸ್ಸಿನ ತುಂಬ ಪೌರಾಣಿಕ ಲೋಕವೇ ಸಂಚರಿಸುತ್ತಿತ್ತು. ಅವರು ಎಚ್ಚರದಲ್ಲಿರುವಾಗಲೇ ನನ್ನ ಸಹಪಾಠಿ ರಾಮ (ರಾಮನಾರಿಯವರು) ಮೆಲ್ಲನೆ ತನ್ನ ಚಾಪೆ, ಹೊದಿಕೆ ಎತ್ತಿಕೊಂಡು ಅವರ ಮಂಚದ ಕೆಳಗೆ ಹಾಸುತ್ತಿದ್ದ. ಅಷ್ಟರಲ್ಲಿ ಗುರುಗಳು, `ಸಂಜೀವ ಎಲ್ಲಿದ್ದಾನೆ?' ಎನ್ನುತ್ತಿದ್ದರು. ಹಾಗೆ ಕೇಳಿಯೇ ಕೇಳುತ್ತಾರೆ ಎಂಬ ವಿಶ್ವಾಸದಲ್ಲಿ ನಾನು ಕೋಣೆಯ ಹೊರಗೆ ಕಂಕುಳಲ್ಲಿ ಚಾಪೆ ಅಮುಕಿಕೊಂಡು ಬಾಗಿಲಹೊರಗೆ ಕಾದಿರುತ್ತಿದ್ದೆ.

ಗುರುಗಳ ಅಣತಿಯಾದದ್ದೇ ನಾನು ಮೆಲ್ಲನೆ ಮಂಚದ ಇನ್ನೊಂದು ಬದಿಯಲ್ಲಿ ಕೆಳಗೆ ಚಾಪೆ ಹಾಸಿಬಿಡುತ್ತಿದ್ದೆ. ಆ ಕತ್ತಲ ನೀರವದಲ್ಲಿ ನಾವು ಕಂಡು ಕೇಳಿರದ ಯಕ್ಷಲೋಕವೊಂದು ತೆರೆದುಕೊಳ್ಳಲಾರಂಭಿಸುತ್ತಿತ್ತು. `ಗುರುಗಳೇ, ಅದು... ಸಲಾಂ ಹೆಜ್ಜೆಯೆಂದರೇನು....' ಎಂದು ಕೇಳಿದರೆ ಸಾಕು, ಅಂದಿನ ರಾತ್ರಿಶಾಲೆ ಶುರುವಾದಂತೆಯೇ. ಗುಬ್ಬಿಗಳು ಕಾಳು ಹೆಕ್ಕಲು ಜಿಗಿದು ಬರುವಂತೆ ಕಾಣುವ ಗುಬ್ಬಿ ಕುಣಿತ, ಪಾದಗಳನ್ನು ಲಯಬದ್ಧವಾಗಿ ಜಾರಿಸಿ ಕುಣಿಯುವ ಜಾರುಗುಪ್ಪೆ, ಬೇಲಿ ದಾಟಿದಂತೆ ಕಾಣಿಸುವ ದಾಂದ, ಎಗರು, ಕತ್ತರಿ ಕಾಲು, ಗುಬ್ಬಿಕುಣಿತ, ಜಾರುಗುಪ್ಪೆ, ಹುಸಿಹೆಜ್ಜೆ, ಕಿರುಹೆಜ್ಜೆ, ಗುಪ್ಪೆ ಕುಣಿತ...

ಹತ್ತಾರು ಬಗೆಯ ಯಕ್ಷಹೆಜ್ಜೆಗಳು! ಅಂಥ ಘನಪಾಠ ನನಗಾದುದರಿಂದಲೇ ಇವತ್ತು ಯಕ್ಷಗಾನದಲ್ಲಿ ಅನನ್ಯವಾದದ್ದು ಏನಿದೆ ಎಂದು ಕೇಳಿದರೆ, `ಸಾಕಷ್ಟಿದೆ' ಎಂದು ಹೆಮ್ಮೆಯಿಂದ ಹೇಳುವ ಮತ್ತು ಅದನ್ನು ಮಾಡಿತೋರಿಸುವ ಚೈತನ್ಯ ನನಗೆ ಬಂದಿದೆ. ಪ್ರಸಿದ್ಧ ನೃತ್ಯವಿದುಷಿ ಪದ್ಮಾಸುಬ್ರಹ್ಮಣ್ಯಂರಾದಿಯಾಗಿ ವಿವಿಧ ಕಲೆಗಳ ವಿದ್ವಾಂಸರ ಮುಂದೆ ಯಕ್ಷಗಾನದ ಇಂಥ `ಸಂಕೇತ'ಗಳ ಅನನ್ಯತೆಯನ್ನು ವಿನಯದಿಂದ ನಿರೂಪಿಸಿದ್ದೇನೆ.

ನಾವಿವತ್ತು ಯಕ್ಷಗಾನ ಹಿರಿಮೆಯನ್ನು `ನಾಟ್ಯಶಾಸ್ತ್ರ' ಹುಡುಕುವ ಪ್ರಯತ್ನ ಮಾಡುತ್ತಿರುವುದಕ್ಕಿಂತ ಎಷ್ಟೋ ವರ್ಷಗಳ ಹಿಂದೆ ನಮ್ಮ ಹಿರಿಯರು, ಗುರುಗಳು ಅಪ್ಪಟ ದೇಸಿ ಕಲಾತ್ಮಕತೆಯಲ್ಲಿ ಎಷ್ಟೊಂದು ಹೆಜ್ಜೆಗಳನ್ನು ರೂಪಿಸಿದ್ದರು! ಮಧ್ಯರಾತ್ರಿ ದಾಟಿದ್ದರೂ ನಮ್ಮ ಕೇಳಿಕೆಯನ್ನು ಮನ್ನಿಸಿ ಗುರು ವೀರಭದ್ರ ನಾಯಕರು ಮಂಚದಿಂದೆದ್ದು ಇಂಥ ದೇಸಿ ಶೈಲಿಯ ಹೆಜ್ಜೆಗಳನ್ನು ಕುಣಿದದ್ದಿದೆ. ಪಾಠಗಳೆಲ್ಲ ನಮ್ಮ ಮನಸ್ಸಿನಲ್ಲಿ ಇಳಿಯುತ್ತಿರುವಾಗಲೇ ಕೈ-ಕಾಲುಗಳು ಸೋತು ಕಣ್ಣುಗಳು ಮುಚ್ಚಿಕೊಳ್ಳುತ್ತಿದ್ದವು. ಬೆಳಗಾಗುವ ಮುಂಚೆ ನಮ್ಮ ಚಾಪೆ- ಹೊದಿಕೆಗಳೊಂದಿಗೆ ಯಥಾಪ್ರಕಾರ ಸಹಪಾಠಿಗಳ ಸಾಲಿನಲ್ಲಿ ಮಲಗಿಬಿಡುತ್ತಿದ್ದೆವು.

ಚಳಿ ಆವರಿಸಿದ ಸಂಜೆಯಲ್ಲೊಮ್ಮೆ ಭಂಗಿಯ ಹೊಗೆ ಆವರಿಸುತ್ತಿರುವಾಗಲೇ ಮಾಣಂಗಾಯಿ (ಪುತ್ತೂರು) ಕೃಷ್ಣ ಭಟ್ಟರು ಬಂದಿದ್ದರು. ಮಾಣಂಗಾಯಿ ಕೃಷ್ಣ ಭಟ್ಟರೆಂದರೆ ತೆಂಕುತಿಟ್ಟು ಯಕ್ಷಗಾನದ ಸಾಂಪ್ರದಾಯಿಕ ವೈಭವವನ್ನು ಬಲ್ಲ ವೇಷಧಾರಿ. ನಮ್ಮದು ಬಡಗುತಿಟ್ಟಿನ ಪ್ರಭೇದ. ಹೀಗೆ, ಯಕ್ಷಗಾನದ ಉತ್ತರಾದಿ- ದಕ್ಷಿಣಾದಿಗಳು ಮುಖಾಮುಖಿಗೊಂಡು ಗಂಭೀರ ಚರ್ಚೆ ಏರ್ಪಡುತ್ತಿತ್ತು. ಕೆಲವೊಮ್ಮೆ ಕೃಷ್ಣ ಭಟ್ಟರೇ, `ನಮ್ಮಲ್ಲಿ ಹೀಗೆ' ಎಂದು ಕುಣಿದು ತೋರಿಸುತ್ತಿದ್ದದ್ದು ನನಗೆ  ಚೆನ್ನಾಗಿ ನೆನಪಿದೆ.

ಬಡಗುತಿಟ್ಟಿನಲ್ಲಿ ಯುದ್ಧ ವೈವಿಧ್ಯಗಳದ್ದೇ ಒಂದು ಲೋಕವಿದೆ. ಅವೆಲ್ಲವನ್ನು ಕಲಾವಿದರು ರಂಗದ ಮೇಲೆ ಪ್ರದರ್ಶಿಸುವಂತಿದ್ದರೆ, ಇವತ್ತಿನ ಜನಪ್ರಿಯ `ಚಾಮತ್ಕಾರಿಕ' ಕುಣಿತಗಳ ಹಂಗಿಲ್ಲದೆ ಯಕ್ಷಗಾನವನ್ನು ಅದರದ್ದೇ ಆದ ಘನತೆಯಲ್ಲಿ ಉಳಿಸಿಕೊಳ್ಳಬಹುದಾಗಿತ್ತು. ಹಾಗೆಂದು, ಯುದ್ಧ ನೃತ್ಯಗಳೇನೂ ಸರಳವಾದವುಗಳಲ್ಲ. ಗುರುಗಳು ಯುದ್ಧ ವೈವಿಧ್ಯದ ಕುಣಿತಗಳನ್ನು ಕಾಣಿಸುವಾಗಲೆಲ್ಲ ನಮ್ಮ ಎದೆಯಲ್ಲಿ ನಡುಕ ಹುಟ್ಟುತ್ತಿತ್ತು. ರಥ ಯುದ್ಧ, ಸೊಪ್ಪಿನ ಕಾಳಗ, ಕತ್ತಿ ಕಾಳಗ, ಮಲ್ಲಯುದ್ಧವೂ ಸೇರಿದಂತೆ ಸುಮಾರು ಎಂಟು ಬಗೆಯ ಯುದ್ಧಗಳು... ಹೀಗೆ ಎಷ್ಟೊಂದು ಪಟ್ಟುಗಳು!

ಅನೇಕ ವರ್ಷಗಳ ಹಿಂದೆ ಉಡುಪಿಯ ಸಮೀಪದ ಊರಾದ ಪಾಂಗಾಳ ಎಂಬಲ್ಲಿ ಗರಡಿಶಾಲೆಯೊಂದು ಇತ್ತೆಂದೂ ಅಲ್ಲಿಗೆ ಕೇರಳದಿಂದ ಕಲಿಯುವವರೂ ಕಲಿಸುವವರೂ ಬರುತ್ತಿದ್ದರೆಂದೂ ನಾನು ಕೇಳಿದ್ದೇನೆ. ಆ ಗರಡಿ ವಿದ್ಯೆಯ ದಟ್ಟ ಪ್ರಭಾವ ಬಡಗುತಿಟ್ಟಿನ ಯಕ್ಷಗಾನದ ಮೇಲೂ ಬೀರಿರಬಹುದೆಂದು ನನ್ನ ಊಹೆ. ಬಿಲ್ಲನ್ನು ತಿರುಗಿಸುತ್ತ ಯುದ್ಧ ಸನ್ನಿವೇಶವನ್ನು ಪ್ರದರ್ಶಿಸುವಾಗಲೆಲ್ಲ ವೀರಭದ್ರ ನಾಯಕರು ಹಿರಿಯಡಕ ಗೋಪಾಲರಾಯರನ್ನು ಓರೆಗಣ್ಣಿನಿಂದ ನೋಡುತ್ತಿದ್ದರು.

ಒಮ್ಮೆ ನೀಲಾವರ ರಾಮಕೃಷ್ಣಯ್ಯನವರಲ್ಲಿ ಕೇಳಿಯೂ ಕೇಳಿದೆ, `ಗುರುಗಳು ಹಾಗೇಕೆ ಮದ್ದಲೆಗಾರರನ್ನು ನೋಡುತ್ತಾರೆ?'
ಅದಕ್ಕೆ ನೀಲಾವರ ರಾಮಕೃಷ್ಣಯ್ಯನವರು ನಕ್ಕು ಹೇಳಿದರು, `ಹಿರಿಯಡಕ ಗೋಪಾಲ ರಾಯರನ್ನೊಮ್ಮೆ ಸರಿಯಾಗಿ ನೋಡು. ತಾಲೀಮು ವರಸೆಯಲ್ಲಿ ಪಳಗಿದ ಶರೀರವದು. ಬಿಲ್ಲು ಬೀಸುವ ನೈಪುಣ್ಯ ಅವರಂತೆ ಯಾರಿಗೂ ಇಲ್ಲ. ಹಾಗಾಗಿ, ನಾಯಕರು ಅವರತ್ತ ಮೆಚ್ಚುಗೆಯ ನೋಟ ಬೀರುತ್ತಾರೆ'.

ನಮ್ಮ ಹಿರಿಯರು ಕೌಶಲವನ್ನು ಕೌಶಲವಾಗಿಯಷ್ಟೇ ಉಳಿಸದೆ ಅದನ್ನು ಕಲಾತ್ಮಕವಾಗಿ ರಂಗದ ಮೇಲೆ ಮರು ನಿರೂಪಿಸುವ ರೀತಿ ನಿಜವಾಗಿಯೂ ಅದ್ಭುತವಾಗಿದೆಯಲ್ಲವೆ?

                                                              ******
`ಅದ್ಭುತ' ಎಂಬ ಉದ್ಗಾರ ಕೇಳಿ ನಾನು ತಲೆ ಎತ್ತಿದೆ. ಮುಂದೆ ಬಿ.ವಿ. ಕಾರಂತರು ಕುಳಿತಿದ್ದರು.
ನಾನು ಚೆಂಡೆಯನ್ನು ಶ್ರುತಿಗೊಳಿಸುತ್ತ ಕುಳಿತಿದ್ದೆ. ಚೆಂಡೆಯ ಬಳ್ಳಿಯನ್ನು ಬಿಗಿದು ಅದನ್ನು ಶ್ರುತಿಗೆ ಹೊಂದಿಸುವುದೂ ಒಂದು ಕಲೆಯೇ. ಹಗ್ಗ ಬಿಗಿದುಕೊಳ್ಳುವುದಕ್ಕಾಗಿ ದೇವದಾರಿನ ಚಿಕ್ಕ ಕೋಲಿನಾಕಾರದ ತುಂಡನ್ನು ಅದಕ್ಕೆ ಸಿಕ್ಕಿಸುತ್ತಿದ್ದೆವು. ಆ ಪುಟ್ಟ ಕೋಲು ನನ್ನ ಕೈ ಜಾರಿ ಕೆಳಗೆ ಬಿತ್ತು. `ಟಣ್' ಸದ್ದಾಯಿತು.

ಅಲ್ಲಿ ಕುಳಿತಿದ್ದ ಬಿ.ವಿ. ಕಾರಂತರಿಗೆ ಆ ಶಬ್ದ ಅದ್ಭುತವಾಗಿ ಕೇಳಿಸಿರಬೇಕು. `ನೋಡೋಣ, ನೋಡೋಣ ಅದನ್ನೊಮ್ಮೆ ಇತ್ತ ಕೊಡು' ಎಂದರು. ಆ ಯಃಕಶ್ಚಿತ್ ಚಕ್ಕೆಯನ್ನು ಕೈಯಲ್ಲಿ ಹಿಡಿದು ತಿರುಗಿಸಿ ತಿರುಗಿಸಿ ನೋಡಿದರು. ನೆಲಕ್ಕೆ ಹಾಕಿದರು. ಬೇರೆ ಬೇರೆ ಎತ್ತರದಿಂದ ಬೀಳಿಸಿದರು. ಅದರ ಸದ್ದಿಗೆ `ಆಹಾ' ಎಂದು ಬೆರಗುಪಟ್ಟರು.

`ಈ ಪುಟ್ಟ ಮರದ ತುಂಡಿನೊಳಗೆ ಎಂಥ ನಾದ ತುಂಬಿದೆ' ಎಂದೇನೋ ಹೇಳಿಕೊಳ್ಳುತ್ತ `ಇದು ನನಗಿರಲಿ' ಎಂದರು. ಬಹುಶಃ ಮುಂದೆ ಅದನ್ನು ಯಾವುದಾದರೂ ರಂಗಸಂಗೀತಕ್ಕೆ ಪೂರಕವಾಗಿ ಬಳಸಿದ್ದರೂ ಬಳಸಿರಬಹುದು. ಬಳಿಕ, ನಮ್ಮಿಂದ ಚೆಂಡೆಯನ್ನೊಮ್ಮೆ ಪಡೆದು ಸೂಕ್ಷ್ಮವಾಗಿ ಪರೀಕ್ಷಿಸಿದರು. ಅದನ್ನು ಶ್ರುತಿಬದ್ಧಗೊಳಿಸುವ ಕುರಿತು ಕೇಳಿದರು. ಚೆಂಡೆ ಬಾರಿಸುವ ಕೋಲನ್ನು ಎತ್ತಿಕೊಂಡು ಒಂದೆರಡು ಪೆಟ್ಟು ನುಡಿಸಿದರು.

ನಾನು ಗಮನಿಸಿದಂತೆ ಕಾರಂತರು ಅತ್ತಿತ್ತ ಹೋಗುವಾಗ, ಸುಮ್ಮನೆ ಕುಳಿತಾಗ ಏನಾದರೊಂದನ್ನು ಬೆರಳಿನಿಂದ ತಟ್ಟುತ್ತ ಅದರಿಂದ ಹೊಮ್ಮುವ ನಾದವನ್ನು ಬೆರಗಿನಿಂದ ಆಲಿಸುತ್ತಿದ್ದರು. ಗಾಜಿನ ಲೋಟಗಳಿಗೆ ಚಮಚದಿಂದ ತಟ್ಟುತ್ತ ಅದರಿಂದ ಬರುವ ಟಿನ್ ಟಿನ್ ಸ್ವರಕ್ಕೆ ಕಿವಿಯರಳಿಸುತ್ತಿದ್ದರು.

ಒಂದು ರಾತ್ರಿ ಒಂದೆರಡು ಗಂಟೆ ಕಳೆದಿರಬಹುದು. `ಢಣಾರ್' ಎಂದು ಸದ್ದಾದಂತಾಗಿ ನಾನೂ ಪೇತ್ರಿ ಮಂಜುನಾಥ ಪ್ರಭುಗಳೂ ನಿದ್ದೆಯಲ್ಲಿಯೇ ಬೆಚ್ಚಿಬಿದ್ದು ಎದ್ದು ಕುಳಿತೆವು. ಎಲ್ಲಿದ್ದೇವೆ, ಏನು ಮಾಡುತ್ತಿದ್ದೇವೆ ಎಂದು ತಿಳಿಯಬೇಕಾದರೆ ಕೆಲವು ಕ್ಷಣಗಳು ಬೇಕಾದವು. ಮತ್ತೊಮ್ಮೆ `ಢಣಾರ್' ಎಂಬ ಸದ್ದು. ಎಲ್ಲಿಂದ ಸದ್ದು ಹೊರಡುತ್ತಿದೆ ಎಂಬುದನ್ನು ನೋಡಿಯೇ ಬಿಡೋಣವೆಂದು ನಾವು ಮೆಲ್ಲನೆ ಸ್ವರ ಬಂದ ಕೊಠಡಿಯ ಕಡೆಗೆ ತೆವಳಿದೆವು. ನೋಡಿದರೆ, ಕಾರಂತರು ಸಾಲಾಗಿ ಗಂಟೆಗಳನ್ನು ತೂಗಿಸಿ ಅದನ್ನು ಬಾರಿಸುತ್ತಿದ್ದಾರೆ. ಅವು ಮಣಿಪುರದಾಚೆಯಿಂದ ತಂದ ಗಂಟೆಗಳೆಂದು ಆಮೇಲೆ ಗೊತ್ತಾಯಿತು. ಮಧ್ಯರಾತ್ರಿ ಇದ್ದಕ್ಕಿದ್ದಂತೆ ಲಹರಿ ಬಂದು ಆ ಗಂಟೆಗಳನ್ನು ಆರೋಹಣ, ಅವರೋಹಣ ಶ್ರುತಿಗೆ ಹೊಂದಿಸಲು ಪ್ರಯತ್ನಿಸುತ್ತಿದ್ದರು.

ಅಲ್ಲಿದ್ದವರಿಗೆ ಅಂಥಾದ್ದು ಮಾಮೂಲಿ. ನಮಗೆ ಮಾತ್ರ ಹೊಸ ಅನುಭವ.

                                                              ******

`ಮಾಮೂಲಿಯಲ್ಲ ಇದು, ಹೊಸ ಅನುಭವವೇ. ನಿನ್ನದೊಂದು ಫೋಟೊವನ್ನೂ ಹೊಸ ರೀತಿಯಲ್ಲಿ ತೆಗೆಯಬೇಕು' ಎಂದರು ಗೆಳೆಯ ರಘುಶೆಟ್ಟರು.

ಬಿರ್ತಿ ಬಾಲಕೃಷ್ಣರ ಜೊತೆಯಲ್ಲಿ ಮಾಯಾ ರಾವ್ ತಂಡದಲ್ಲಿ ಜರ್ಮನಿ, ನೆದರ್‌ಲ್ಯಾಂಡ್ಸ್, ಫ್ರಾನ್ಸ್ ವೊದಲಾದ ದೇಶಗಳ ಪ್ರವಾಸಕ್ಕೆ ಹೊರಡುವುದು ಖಚಿತವಾಗುತ್ತಲೇ ನನ್ನನ್ನು ಗೆಳೆಯರು ಅಭಿನಂದಿಸುತ್ತಿದ್ದರು. ಪತ್ರಿಕೆಗಳಲ್ಲಿ ಅಭಿನಂದನೆ, ಶುಭ ಹಾರೈಕೆಗಳೂ ಪ್ರಕಟವಾದವು. ರಘುಶೆಟ್ಟರು ಉಡುಪಿಯಲ್ಲಿದ್ದ ಸಾಧನಾ ಸ್ಟೊಡಿಯೋಗೆ ಫೋಟೊ ತೆಗೆಯಲು ಕರೆದುಕೊಂಡು ಬಂದಿದ್ದರು. ನಾನು, ಚಪ್ಪಲಿ ಧರಿಸದ ಬರಿಗಾಲಲ್ಲಿ, ಲುಂಗಿಯನ್ನು ಎತ್ತಿಕಟ್ಟಿ ಸ್ಟುಡಿಯೋದೊಳಗೆ ಪ್ರವೇಶಿಸಿದೆ. ಫೋಟೊ ತೆಗೆಯಲು ಬರುವ ಗ್ರಾಹಕರಿಗಾಗಿ ಕನ್ನಡಿ, ಪೌಡರ್, ಬಾಚಣಿಗೆ, ಸೂಟು, ಟೈ ಎಲ್ಲವೂ ಅಲ್ಲಿದ್ದವು.

ನನ್ನ ಅಂಗಿಯ ಮೇಲ್ತುದಿಯ ಗುಬ್ಬಿಯನ್ನು ಹಾಕಿಸಿ, ಕುತ್ತಿಗೆಯ ಸುತ್ತ ಟೈ ಕಟ್ಟಿ ನಿಲ್ಲಿಸಿದರು. `ಕ್ಲಿಕ್'. ಕಪ್ಪು ಬಿಳುಪು  ಫೋಟೊ ಬಂತು. ಆ ಫೋಟೊವನ್ನು ಈಗ ನೋಡಿದರೆ ನಗು ಬರುತ್ತದೆ. ಕಂಠದಲ್ಲಿ ಶೋಭಿಸುತ್ತಿರುವ ಟೈಗಿಂತ ಹೆಚ್ಚಾಗಿ ಫೋಟೊದ ಚೌಕಟ್ಟಿನ ಹೊರಗೆ ಮರೆಯಾಗಿರುವ ನನ್ನ ಲುಂಗಿ ಮತ್ತು ಬರಿಗಾಲುಗಳು ಕಾಣಿಸಿಕೊಂಡಂತೆ ಇರಿಸುಮುರಿಸಾಗುತ್ತದೆ.

ಬೆಂಗಳೂರಿನ ಮಾಯಾ ರಾವ್ ಅವರ ಮನೆಯಲ್ಲಿ ಅವರ ಪತಿ ನಟರಾಜ್ ಅವರು ಪ್ಯಾಂಟು ಕೊಟ್ಟು ಧರಿಸುವಂತೆ ಹೇಳುವಾಗಲೂ ಅಂಥದೇ ಚಡಪಡಿಕೆ. ಹೇಗೂ ದೆಹಲಿಗೆ ಬಂದು ಇಳಿದದ್ದಾಯಿತು. ಈ ಸಲ ಡಿಲ್ಲಿಗೆ ಬರುವಾಗ ಮೊದಲಿನ ಭಯವಿರಲಿಲ್ಲ. ಒಮ್ಮೆ ಗಣರಾಜ್ಯೋತ್ಸವದ ಪೆರೇಡ್‌ಗೆ, ಮತ್ತೊಮ್ಮೆ ಬಿ.ವಿ. ಕಾರಂತರ ನಾಟಕ ತರಬೇತಿಗೆ ಬಂದು ಧೈರ್ಯ ಬಂದುಬಿಟ್ಟಿತ್ತು. ಮಾಯಾ ರಾವ್ ಅವರಿಗೆ ಬಿರ್ತಿ ಬಾಲಕೃಷ್ಣ ಅವರು ಪರಿಚಯ ಮಾಡಿಸುತ್ತ, `ಚೆನ್ನಾಗಿ ವೇಷ ಮಾಡುತ್ತಾನೆ, ಚೆಂಡೆ ಕೂಡ ನುಡಿಸುತ್ತಾನೆ' ಎಂದರು. ನಾನು ಆ ಮಹಾನ್ ನೃತ್ಯವಿದುಷಿಯ ಮುಂದೆ ತಲೆಬಾಗಿಸಿದೆ.

ಅಷ್ಟರಲ್ಲಿ ಒಳಗಿನಿಂದ ಕೆರೆಮನೆ ಮಹಾಬಲ ಹೆಗಡೆಯವರೂ ಬಂದರು. ಅವರೂ ಮಾಯಾರಾವ್ ತಂಡದಲ್ಲಿ ವಿದೇಶಕ್ಕೆ ಹೊರಟಿದ್ದರು. ಒಮ್ಮೆ ನನಗೆ ಮಹಾಬಲ ಹೆಗಡೆಯವರನ್ನು ನೋಡಿ ಭಯವಾಯಿತು. ಬಡಗುತಿಟ್ಟಿನ ಭೀಷ್ಮಾಚಾರ್ಯರು! `ಯಾರಿವನು ಹುಡುಗ, ಚೆನ್ನಾಗಿ ಮಾಡುತ್ತಾನಾ?' ಎಂದು ಬಿರ್ತಿ ಬಾಲಕೃಷ್ಣರವರಲ್ಲಿ ವಿಚಾರಿಸಿದರು. ನಾನು ಅವರ ಬಳಿಯಲ್ಲಿ ವಿನಮ್ರನಾಗಿ ನಿಂತೆ.

ಮರುದಿನ ನನ್ನ ನಿಜವಾದ ಕಷ್ಟ ಶುರುವಾದದ್ದು ನನ್ನ ಕನಸಿನಲ್ಲಿಯೂ ಕಂಡಿರದ ಶೂಗಳನ್ನು ಧರಿಸುವಾಗ. ಫಾರಿನ್‌ಗೆ ಹೋಗುವುದಲ್ಲವೆ, ಕಲಾವಿದರು ಒಳ್ಳೆಯ ಉಡುಗೆ ತೊಡುಗೆಯಲ್ಲಿರಲಿ ಎಂದು ಎಲ್ಲರಂತೆ ನನಗೂ ಒಂದು ಶೂ ತೆಗೆಸಿಕೊಟ್ಟಿದ್ದರು. ಅದು ನನ್ನ ಪಾದಗಳ ಗಾತ್ರಕ್ಕಿಂತ ದೊಡ್ಡದು. ನಡೆಯುವಾಗ ಕಳಚಿ ಬೀಳುತ್ತಿತ್ತು. ಯಾರೂ ಇಲ್ಲದಿರುವಾಗ ಕೈಯಲ್ಲಿ ಹಿಡಿದುಕೊಂಡು ನಡೆಯುತ್ತಿದ್ದೆ, ನಾಲ್ಕು ಮಂದಿಯ ಮುಂದೆ ಶೂಗಳನ್ನು ಕೈಯಲ್ಲಿ ಹಿಡಿದುಕೊಂಡು ಬರಿಗಾಲಲ್ಲಿ ನಡೆಯುವುದು ಶಿಷ್ಟಾಚಾರವಲ್ಲ ನೋಡಿ. ಅದಕ್ಕೆ ನಾನೇ ಒಂದು ಉಪಾಯ ಮಾಡಿದೆ. ಶೂಗಳ ಒಳಗೆ ಕಾಗದಗಳನ್ನು ತುರುಕಿಸಿದೆ. ಈಗ ಪಾದಗಳನ್ನು ಒಳಗೆ ತುರುಕಿಸಿದೆ, ಒಂದೆರಡು ಹೆಜ್ಜೆ ನಡೆದೆ. ಅಡ್ಡಿಯಿಲ್ಲ ಅಂತನ್ನಿಸಿತು.

                                                               ******

`ನನಗಡ್ಡಿಯಿಲ್ಲ...' ಎಂದೆ. ಬಯಲಾಟ ಆರಂಭವಾಗುವ ಮುನ್ನ ಒಮ್ಮೆ ದೇವಸ್ಥಾನದೊಳಗೆ ಸ್ತುತಿ ಪದ್ಯ ಹಾಡುವುದು ಅಲ್ಲಿನ ಸಂಪ್ರದಾಯವಾಗಿತ್ತು. `ಇವತ್ತು ಚೆಂಡೆಯವನು ಬಂದಿಲ್ಲ. ನೀನು ಚೆಂಡೆ ನುಡಿಸಬೇಕು. ಆದರೆ, ನೀನು ದೇವಸ್ಥಾನದೊಳಗೆ ಹೋಗುವ ಹಾಗಿಲ್ಲ. ಹೊರಗೆಯೇ ಕುಳಿತು  ನುಡಿಸಲು ಅಡ್ಡಿಯಿಲ್ಲವಷ್ಟೆ!' ಎಂದರು ನಮ್ಮ ಯಕ್ಷಗಾನ ತಂಡದವರು.

1977ರ ಸುಮಾರಿನ ಒಂದು ದಿನವಿರಬಹುದು. ನಾನು ಹವ್ಯಾಸಿ ಸಂಘ ಸಂಸ್ಥೆಗಳಿಗೆ ವೇಷಧಾರಿಯಾಗಿಯೂ ಚೆಂಡೆವಾದಕನಾಗಿಯೂ ಹೋಗುತ್ತಿದ್ದೆ. ಆವತ್ತು ಚೆಂಡೆವಾದಕನಿಗೆ ಬರಲಾಗದ ಕಾರಣ ನನಗೆ ಆ ಹೊಣೆ ನನ್ನ ಮೇಲೆ ಬಿದ್ದಿತ್ತು.

ಕೆಲವು ಸಮುದಾಯದವರಿಗೆ ದೇವಸ್ಥಾನದೊಳಕ್ಕೆ ಹೋಗಲು ನಿಷೇಧವಿದ್ದ ದಿನಗಳವು. ಭಾಗವತರೂ, ಹಾರ್ಮೋನಿಯಂ ಹಿಡಿದವರೂ ಮದ್ದಲೆವಾದಕರೂ ದೇವಸ್ಥಾನದ ಹೆಬ್ಬಾಗಿಲನ್ನು ದಾಟಿ ಒಳಹೋಗಿ ಸ್ತುತಿ ಪದ್ಯ ಹಾಡಲು ನಿಂತರು. ನಾನು ಹೊರಗಿನ ಧ್ವಜಸ್ತಂಭದ ಬಳಿ ಕುಕ್ಕುರುಗಾಲಲ್ಲಿ ಕುಳಿತುಕೊಂಡು ಚೆಂಡೆಯನ್ನು ಕಾಲುಗಳ ನಡುವೆ ಇಟ್ಟು ಕುಳಿತೆ. ಇನ್ನೇನು, ದೇವರನ್ನು `ಮುದದಿಂದ ಕೊಂಡಾಡಬೇಕು' ಎಂಬಷ್ಟರಲ್ಲಿ....

(ಸಶೇಷ)
ನಿರೂಪಣೆ : ಹರಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT