ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆ್ಯಪ್’ನಲ್ಲಿ ಬಂದ ಆಡಳಿತದ ಸಮಸ್ಯೆ

Last Updated 2 ಫೆಬ್ರುವರಿ 2016, 19:42 IST
ಅಕ್ಷರ ಗಾತ್ರ

2009ರ ಜೂನ್‌ನಲ್ಲಿ ‘ಉಬರ್ ಕ್ಯಾಬ್’ ಎಂಬ ಸಂಸ್ಥೆ ಗ್ರಾಹಕರು ಮತ್ತು ಟ್ಯಾಕ್ಸಿ ಚಾಲಕರ ಮಧ್ಯೆ ಸಂಪರ್ಕ ಸೇತುವಾಗಬಲ್ಲ ಒಂದು ಆ್ಯಪ್ ರೂಪಿಸಿ ಬಿಡುಗಡೆ ಮಾಡಿತು. ಇದಕ್ಕೆ ಅಮೆರಿಕದ ಗ್ರಾಹಕರಿಂದ ದೊರೆತ ಅಭೂತಪೂರ್ವ ಎನಿಸುವಂಥ ಸ್ವಾಗತ ಕಂಪೆನಿಯನ್ನು ಬೆಳೆಸಿತು. ಕಂಪೆನಿ ತಾನು ಹುಟ್ಟಿದ ದೇಶದ ಗಡಿಯನ್ನು ದಾಟಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿಕೊಳ್ಳುವ ಹೊತ್ತಿಗಾಗಲೇ ಇದೇ ಸೇವೆಯನ್ನು ನೀಡುವ ಇನ್ನಷ್ಟು ಕಂಪೆನಿಗಳೂ ಹುಟ್ಟಿಕೊಂಡವು.

ಈ ಎಲ್ಲಾ ಬೆಳವಣಿಗೆಗಳೂ ಗ್ರಾಹಕರಿಗೆ ಹೆಚ್ಚು ಆಯ್ಕೆಯನ್ನೂ ಟ್ಯಾಕ್ಸಿ ಚಾಲಕರಿಗೆ ಹೊಸ ಅವಕಾಶವನ್ನು ಕಲ್ಪಿಸಿಕೊಡುತ್ತಿವೆ ಎಂದು ಎಲ್ಲರೂ ಭಾವಿಸುತ್ತಿರುವಾಗಲೇ ಈ ವ್ಯವಸ್ಥೆಯ ಹುಳುಕುಗಳೂ ಅನಾವರಣಗೊಳ್ಳತೊಡಗಿದವು. ಈ ಹುಳುಕಿನ ಅತ್ಯಂತ ಕ್ರೂರ ಸ್ವರೂಪ ಅನಾವರಣಗೊಂಡದ್ದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ. 2014ರ ಡಿಸೆಂಬರ್ 15ರಂದು ಅಲ್ಲಿನ ‘ಲಿಂಡ್ ಚಾಕಲೇಟ್ ಕೆಫೆ’ಯಲ್ಲಿ ಬಂದೂಕುಧಾರಿಯೊಬ್ಬ ಹತ್ತು ಮಂದಿ ಗ್ರಾಹಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದ ಘಟನೆ ನಡೆಯಿತು.

16 ಗಂಟೆಗಳ ಅವಧಿಯ ಕಾರ್ಯಾಚರಣೆಯಲ್ಲಿ ಬಂದೂಕುಧಾರಿಯನ್ನು ಕೊಲ್ಲುವಲ್ಲಿ ಆಸ್ಟ್ರೇಲಿಯಾ ಪೊಲೀಸರು ಯಶಸ್ವಿಯಾದರು. ಈ ಘಟನೆಯಲ್ಲಿ ಇಬ್ಬರು ಒತ್ತೆಯಾಳುಗಳೂ ಮೃತಪಟ್ಟರು. ಈ ಘಟನೆಗಳೆಲ್ಲವೂ ಮಾಧ್ಯಮಗಳಲ್ಲಿ ನಿರಂತರವಾಗಿ ವರದಿಯಾಗುತ್ತಿದ್ದವು. ಈ ಹೊತ್ತಿನಲ್ಲಿ ‘ಲಿಂಡ್ ಚಾಕಲೇಟ್ ಕೆಫೆ’ ಸಮೀಪದ ಪ್ರದೇಶದಿಂದ ದೂರ ಹೋಗಲು ಉಬರ್ ಮೂಲಕ ಟ್ಯಾಕ್ಸಿ ಬುಕ್ ಮಾಡಿದವರು ನಿಗದಿತ ದರಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಶುಲ್ಕವನ್ನು ಪಾವತಿಸಬೇಕಾಯಿತು.

ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗತೊಡಗಿದ ಮೇಲೆ ‘ಉಬರ್’ ಹೆಚ್ಚುವರಿ ಶುಲ್ಕವನ್ನು ಹಿಂದೆಗೆದುಕೊಂಡಿತು. ಈಗಾಗಲೇ ಪಾವತಿಸಿದವರಿಗೆ ಹಣವನ್ನು ಮರಳಿಸಲಾಗುವುದು ಎಂಬ ಭರವಸೆಯನ್ನೂ ನೀಡಿತು. ಎರಡು ವರ್ಷಗಳ ನಂತರವೂ ಆ ಗ್ರಾಹಕರಿಗೆ ಹಣ ದೊರೆತಿಲ್ಲ. ಇತ್ತೀಚೆಗೆ ಬೆಂಗಳೂರಿನ ‘ಓಲಾ’ ಗ್ರಾಹಕರೊಬ್ಬರು ತಾವು ಹೇಗೆ ಏಳು ಪಟ್ಟು ಹೆಚ್ಚು ಶುಲ್ಕ ಪಾವತಿಸಿ ಟ್ಯಾಕ್ಸಿಯಲ್ಲಿ ಪ್ರಯಾಣಿಸಬೇಕಾಯಿತು ಎನ್ನುವ ವಿಷಯವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು.

ಈ ವಿಚಾರದಲ್ಲಿ ಭಾರತದ ‘ಉಬರ್’ ಕೂಡಾ ಹಿಂದುಳಿದಿಲ್ಲ. ಬೇರೆ ಬೇರೆ ನಗರಗಳಿಂದ ಹೆಚ್ಚುವರಿ ದರ, ಚಾಲಕರ ದುರ್ವರ್ತನೆಗಳ ವರದಿ ಆಗಾಗ ಮಾಧ್ಯಮಗಳಲ್ಲಿ ಬರುತ್ತಲೇ ಇರುತ್ತದೆ. ದೆಹಲಿಯಲ್ಲಿ ಮಹಿಳೆಯೊಬ್ಬರಿಗೆ ‘ಉಬರ್’ ಚಾಲಕನೊಬ್ಬ ಕಿರುಕುಳ ನೀಡಿದ್ದರ ಹಿಂದೆಯೇ ಸರ್ಕಾರ ಎಲ್ಲಾ ಆ್ಯಪ್ ಆಧರಿತ ಟ್ಯಾಕ್ಸಿ ಸೇವೆ ನೀಡುವ ಸಂಸ್ಥೆಗಳು, ಸಾಮಾನ್ಯ ರೇಡಿಯೋ ಟ್ಯಾಕ್ಸಿ ಸೇವೆ ನೀಡುವ ಸಂಸ್ಥೆಗಳಂತೆಯೇ ತಮ್ಮನ್ನು ನೋಂದಾಯಿಸಿಕೊಳ್ಳಬೇಕು ಎಂದು ಹೇಳಿ ಕೈತೊಳೆದುಕೊಂಡಿತು. ಸಾಲದ್ದಕ್ಕೆ ಸಾರಿಗೆ ನಿರ್ವಹಣೆ ರಾಜ್ಯ ಸರ್ಕಾರಗಳ ಅಧೀನದಲ್ಲಿ ಇರುವುದರಿಂದ ರಾಜ್ಯ ಸರ್ಕಾರಗಳೇ ಇದಕ್ಕೆ ಬೇಕಿರುವ ನಿಯಮ ರೂಪಿಸಬೇಕು ಎಂದು ಕೇಂದ್ರ ಹೇಳಿದೆ.

ಕರ್ನಾಟಕ ಸರ್ಕಾರವೂ ಈ ನಿಟ್ಟಿನಲ್ಲಿ ಕೆಲವು ಹೆಜ್ಜೆಗಳನ್ನು ಇಟ್ಟಿರುವ ವಿಚಾರ ಮಾಧ್ಯಮಗಳಲ್ಲಿ ಕಾಣಿಸುತ್ತಿದೆಯಾದರೂ ಅದು ರೂಪಿಸಿರುವ ನಿಯಮಾವಳಿಗಳೊಂದೂ ಈ ತನಕ ಹೊರಬಂದಿಲ್ಲ. ‘ಉಬರ್’, ‘ಓಲಾ’ದಂಥ ಟ್ಯಾಕ್ಸಿ ಸೇವೆ ನೀಡುವ ಸಂಸ್ಥೆಗಳು ಹೇಳಿಕೊಳ್ಳುವಂತೆ ಅವು ತಂತ್ರಜ್ಞಾನ ಸಂಸ್ಥೆಗಳು. ಅಂದರೆ ಅವು ಮೋಟಾರು ವಾಹನಗಳ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ. ಇದು ಕೇವಲ ಭಾರತದ ಸಮಸ್ಯೆಯೇನೂ ಅಲ್ಲ.

‘ಉಬರ್’ ಅಮೆರಿಕದಲ್ಲಿಯೂ ಇದೇ ವಾದವನ್ನು ಮುಂದಿಡುತ್ತಿದೆ. ಯೂರೋಪ್ ಮತ್ತು ಆಸ್ಟ್ರೇಲಿಯಾದಲ್ಲಿಯೂ ಇದನ್ನೇ ಹೇಳಿಕೊಂಡಿದೆ. ಒಂದರ್ಥದಲ್ಲಿ ಇದೊಂದು ಸಮರ್ಥನೀಯ ವಾದವೂ ಹೌದು. ಈ ಸಂಸ್ಥೆಗಳು ಟ್ಯಾಕ್ಸಿ ಚಾಲಕರು ಮತ್ತು ಗ್ರಾಹಕರ ಮಧ್ಯೆ ಸಂಪರ್ಕ ಕಲ್ಪಿಸುವುದಕ್ಕೆ ಅಗತ್ಯವಿರುವ ತಾಂತ್ರಿಕ ವೇದಿಕೆಯೊಂದನ್ನು ಮಾತ್ರ ಒದಗಿಸುತ್ತವೆ. ಅಂದರೆ ಗ್ರಾಹಕನಿರುವ ಸ್ಥಳವನ್ನು ತಂತ್ರಜ್ಞಾನ ಬಳಸಿ ಚಾಲಕರಿಗೆ ತಿಳಿಸುತ್ತದೆ. ಹಾಗೆಯೇ ಶುಲ್ಕವನ್ನು ಪಡೆಯುವುದಕ್ಕೆ ಅಗತ್ಯವಿರುವ ವ್ಯವಸ್ಥೆಯನ್ನೂ ಅದು ತಂತ್ರಜ್ಞಾನದ ಮೂಲಕವೇ ಸಾಧ್ಯಗೊಳಿಸಿದೆ. ಗ್ರಾಹಕರಿಗೆ ಸೇವೆಯನ್ನು ಪಡೆಯುವುದು ಸುಲಭ. ಟ್ಯಾಕ್ಸಿ ಚಾಲಕರಿಗೆ ನೀಡಿದ ಸೇವೆಗೆ ದೊರೆಯಬೇಕಾದ ಶುಲ್ಕವನ್ನು ಪಡೆಯುವುದು ಸುಲಭ.

ಆದರ್ಶ ಸಾಮಾಜಿಕ ವ್ಯವಸ್ಥೆಯೊಂದರಲ್ಲಿ ಇದು ಹೀಗೆಯೇ ನಡೆದುಬಿಡುತ್ತಿತ್ತೇನೋ. ಸಿಲಿಕಾನ್ ವ್ಯಾಲಿಯಲ್ಲಿ ಹೊಸ ಆವಿಷ್ಕಾರಗಳನ್ನು ನಡೆಸುವವರಿಗೆ ಊಹಿಸದೇ ಇರುವ ಅನೇಕ ಸಂಗತಿಗಳು ಗ್ರಾಹಕ ಮತ್ತು ಸೇವೆ ನೀಡುವವರ ನಡುವಣ ಸಂಬಂಧದಲ್ಲಿವೆ. ಅಂದರೆ ಗ್ರಾಹಕನ ಹಕ್ಕುಗಳು ಮತ್ತು ಸೇವಾದಾತರ ಹಕ್ಕುಗಳು. ಇವುಗಳನ್ನು ಖಾತರಿ ಪಡಿಸುವುದಕ್ಕೆ ಅನೇಕ ಕಾನೂನುಗಳಿವೆ. ಇವೆಲ್ಲವೂ ಆ್ಯಪ್ ಆಧರಿತ ಟ್ಯಾಕ್ಸಿ ಸೇವೆಯ ಪರಿಕಲ್ಪನೆ ಹುಟ್ಟುವುದಕ್ಕೂ ಮುಂಚಿನವು. ಅಲ್ಲಿ ಕೇವಲ ‘ತಾಂತ್ರಿಕ ವೇದಿಕೆ’ ಎಂಬ ಪರಿಕಲ್ಪನೆಯೇ ಇಲ್ಲ. ಸಾರಿಗೆ ಇಲಾಖೆ ಎದುರಿಸುತ್ತಿರುವ ಸಮಸ್ಯೆಯ ಮೂಲವಿರುವುದೂ ಇಲ್ಲಿಯೇ.

ಎಲ್ಲಾ ರಾಜ್ಯ ಸರ್ಕಾರಗಳೂ ಟ್ಯಾಕ್ಸಿ ಸೇವೆಗೆ ನಿರ್ದಿಷ್ಟ ದರವನ್ನು ನಿಗದಿ ಪಡಿಸಿವೆ. ಹಾಗೆಯೇ ಚಾಲಕರ ಅರ್ಹತೆ ಮತ್ತು ಅದನ್ನು ವಾಹನದಲ್ಲಿ ಹೇಗೆ ಪ್ರದರ್ಶಿಸಬೇಕು ಮುಂತಾದುವುಗಳಿಗೆಲ್ಲಾ ನಿಯಮಗಳಿವೆ. ನಗರ ಪ್ರದೇಶಗಳಲ್ಲಿ ಕಾರ್ಯಾಚರಿಸುವ ಟ್ಯಾಕ್ಸಿಗಳಿಗೆ ಪ್ರಯಾಣದ ಶುಲ್ಕವೆಷ್ಟು ಎಂದು ಗ್ರಾಹಕನಿಗೆ ತಿಳಿಸುವ ಮೀಟರುಗಳನ್ನೂ ಅಳವಡಿಸುವುದು ಕಡ್ಡಾಯ. ಇದನ್ನು ನೋಡಿಕೊಂಡೇ ಗ್ರಾಹಕ ಶುಲ್ಕ ಪಾವತಿಸುತ್ತಾನೆ. ರಾತ್ರಿ ವೇಳೆ ಟ್ಯಾಕ್ಸಿ ಸೇವೆಯನ್ನು ಬಳಸುವುದಕ್ಕೆ ನೀಡಬೇಕಾದ ಹೆಚ್ಚುವರಿ ಶುಲ್ಕವೆಷ್ಟು ಎಂಬುದನ್ನೂ ಕಾನೂನು ಸ್ಪಷ್ಟಪಡಿಸಿದೆ.

ಮೀಟರ್ ಅಳವಡಿಸಿಕೊಂಡಿರುವ ರೇಡಿಯೋ ಟ್ಯಾಕ್ಸಿಗಳಷ್ಟೇ ನಗರದೊಳಗೆ ಸಂಚರಿಸುತ್ತಿದ್ದ ಸ್ಥಿತಿಯನ್ನು ಆ್ಯಪ್ ತಂತ್ರಜ್ಞಾನ ಬದಲಾಯಿಸಿತು. ಸ್ಮಾರ್ಟ್ ಫೋನುಗಳಲ್ಲಿರುವ ಜಿಪಿಎಸ್ ಸವಲತ್ತನ್ನು ಬಳಸಿಕೊಂಡು ಪ್ರಯಾಣದ ದೂರ ಮತ್ತು ಶುಲ್ಕವೆಷ್ಟು ಎಂಬುದು ಏಕಕಾಲದಲ್ಲಿ ಚಾಲಕ ಮತ್ತು ಗ್ರಾಹಕರಿಬ್ಬರಿಗೂ ತಿಳಿಯುವಂಥ ವ್ಯವಸ್ಥೆ ಬಂತು. ಅಂದರೆ ಕೇವಲ ‘ತಂತ್ರಜ್ಞಾನ ಕಂಪೆನಿ’ಗಳಾಗಿರುವ ‘ಓಲಾ’ ಮತ್ತು ‘ಉಬರ್‌’ಗಳು ಟ್ಯಾಕ್ಸಿ ಸೇವೆಯನ್ನು ನೀಡಲು ಅನುಕೂಲವಾಯಿತು. ಕಾನೂನುಗಳೆಲ್ಲವೂ ಟ್ಯಾಕ್ಸಿ ಸೇವಾ ಸಂಸ್ಥೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡಿರುವಾಗ ತಂತ್ರಜ್ಞಾನ ಕಂಪೆನಿ ಎಂದು ಹೇಳುವ ಟ್ಯಾಕ್ಸಿ ಸೇವಾದಾತರನ್ನು ನಿಯಂತ್ರಿಸುವುದು ಹೇಗೆ ಎಂಬುದು ಈಗ ಇರುವ ಸಮಸ್ಯೆ.

ಇದೇನು ಕೇವಲ ‘ಓಲಾ’, ‘ಉಬರ್‌’ಗೆ ಸೀಮಿತವಾಗಿರುವುದಷ್ಟೇ ಅಲ್ಲ. ಇದು ‘ಅಮೆಜಾನ್’, ‘ಫ್ಲಿಫ್‌ಕಾರ್ಟ್’, ‘ಸ್ನ್ಯಾಪ್‌ಡೀಲ್‌’ನಂಥ ಸಂಸ್ಥೆಗಳಿಗೂ ಅನ್ವಯಿಸುವ ಸಮಸ್ಯೆ. ಅಮೆಜಾನ್ ಮತ್ತು ಕರ್ನಾಟಕ ಸರ್ಕಾರದ ಮಾರಾಟ ತೆರಿಗೆ ಇಲಾಖೆಯ ನಡುವಣ ಸಮಸ್ಯೆಯೂ ‘ತಾಂತ್ರಿಕ ವೇದಿಕೆ’ಗೆ ಸಂಬಂಧಿಸಿದ್ದೇ.ಈ ಸಮಸ್ಯೆ ಸಂಕೀರ್ಣವಾಗುವುದು ‘ತಾಂತ್ರಿಕ ವೇದಿಕೆ’ಗಳು ತಮ್ಮ ಹಣಬಲವನ್ನು ಪ್ರದರ್ಶಿಸಿದಾಗ. ತಮ್ಮೊಂದಿಗೆ ನೋಂದಾಯಿಸಿಕೊಳ್ಳುವ ಚಾಲಕರಿಗೆ ಆ್ಯಪ್ ಆಧರಿತ ಟ್ಯಾಕ್ಸಿಗಳು ಭಾರೀ ಪ್ರಮಾಣದ ಪ್ರೋತ್ಸಾಹ ಧನ ನೀಡಿದವು. ಈ ಪ್ರೋತ್ಸಾಹ ಧನ ಮತ್ತು ಗ್ರಾಹಕರಿಗೆ ಒದಗಿಸುವ ದರ ಕಡಿತಗಳು ಹೇಗಿರುತ್ತವೆ ಎಂದರೆ ಅದನ್ನೆಲ್ಲಾ ಲೆಕ್ಕ ಹಾಕಿದರೆ ಟ್ಯಾಕ್ಸಿ ಆ್ಯಪ್ ಸೇವೆ ನೀಡುವವರಿಗೆ ನಷ್ಟವೇ ಹೆಚ್ಚು.

ತನ್ನ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ಸಲುವಾಗಿ ‘ಉಬರ್’ ಕಳೆದ ಆರ್ಥಿಕ ವರ್ಷದಲ್ಲಿ ವೆಚ್ಚ ಮಾಡಿದ ಹಣ 1.7 ಬಿಲಿಯನ್ ಡಾಲರ್‌ಗಳು. ‘ಗೂಗಲ್‌’ನಂಥ ದೈತ್ಯರು ‘ಉಬರ್‌’ನಲ್ಲಿ ಹೂಡಿಕೆ ಮಾಡಿರುವುದರಿಂದ ಬಿಲಿಯಗಟ್ಟಳೆ ವ್ಯಯಿಸಿ ಮಾರುಕಟ್ಟೆ ವಿಸ್ತರಿಸುವುದು ಅದಕ್ಕೇನೋ ಸುಲಭ. ಅಷ್ಟೇ ಅಲ್ಲ, ಬರೇ ದೊಡ್ಡವರ ಆಡೊಂಬಲವಾಗಿಬಿಟ್ಟಿರುವ ಈ ಕ್ಷೇತ್ರ ಬೆರಳೆಣಿಕೆಯ ಕಂಪೆನಿಗಳ ಏಕಸ್ವಾಮ್ಯವೂ ಆಗಿಬಿಡುತ್ತದೆ. ರೇಡಿಯೋ ಟ್ಯಾಕ್ಸಿ ಕಂಪೆನಿಯೊಂದು ಕೊಡಬೇಕಾದ ಯಾವ ತೆರಿಗೆಗಳನ್ನೂ ಪಾವತಿಸದೆ ‘ಉಬರ್’ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡುಬಿಡುತ್ತದೆ. 

ಈ ಸಮಸ್ಯೆಗೆ ಪರಿಹಾರ ಹುಡುಕುವುದಕ್ಕೆ ಸರ್ಕಾರ ಹಳೆಯ ಮಾದರಿಯಲ್ಲಿ ಚಿಂತಿಸಿದರೆ ಸಾಕಾಗುವುದಿಲ್ಲ. ಅಥವಾ ಆ್ಯಪ್ ಆಧರಿತ ಸೇವೆ ನೀಡುವವರೂ ರೇಡಿಯೋ ಟ್ಯಾಕ್ಸಿ ಸಂಸ್ಥೆಗಳಂತೆಯೇ ನೋಂದಾಯಿಸಿಕೊಳ್ಳಬೇಕು ಎಂದರೆ ಕಾಲದಲ್ಲಿ ಹಿಂದಕ್ಕೆ ಚಲಿಸಿದಂತೆ ಆಗುತ್ತದೆ. ಇದಕ್ಕೆ ಬೇಕಿರುವುದು ಹೊಸ ಕಾಲದ ಕಾನೂನು. ಆ್ಯಪ್ ಆಧರಿತ ಟ್ಯಾಕ್ಸಿ ಸೇವೆಯನ್ನೇ ಕಾನೂನಿನ ಪರಿಭಾಷೆಯಲ್ಲಿ ವ್ಯಾಖ್ಯಾನಿಸುವ ಹಾಗೂ ಗ್ರಾಹಕರು ಮತ್ತು ಸೇವಾದಾತರ ಹಕ್ಕು ಬಾಧ್ಯತೆಗಳನ್ನು ಸ್ಪಷ್ಟವಾಗಿ ನಿರ್ವಚಿಸುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT