ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಂತ್ರ’ ಹಾಕಿದ್ರೆ ಮಸೂದೆ ಮಾಯ!

ಅಕ್ಷರ ಗಾತ್ರ

ಮೂಢನಂಬಿಕೆ ಆಚರಣೆಗಳ ಪ್ರತಿ ಬಂಧಕ ಮಸೂದೆ ಇನ್ನೇನು ಬಂದೇ ಬಿಟ್ಟಿತು ಎಂದು ಎಲ್ಲ ವಲಯದಲ್ಲೂ ಲಬೋಲಬೋ ಹೆಚ್ಚಾಗುತ್ತಿದ್ದಂತೆಯೇ ಸರ್ಕಾರ ಮತ್ತೊಂದು ಸಮಿತಿ ನೇಮಿಸಲು ನಿರ್ಧರಿಸಿತು. ಯಾರ ನೇತೃತ್ವದಲ್ಲಿ ಸಮಿತಿ ನೇಮಿಸಬೇಕು ಎನ್ನುವುದು ಕಗ್ಗಂಟಾಯಿತು.

ಕೊನೆಗೆ ಅಯ್ಯ ಅವರೇ ಖ್ಯಾತ ಪತ್ರಕರ್ತ ಪೆಕರ ಅವರನ್ನು ಏಕ ವ್ಯಕ್ತಿ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿ ಎಂದು ಸಲಹೆ ಮಾಡಿದ ಮೇಲೆ ಅಧಿಕಾರಿಗಳ ಬಣ ನಿರಾಳವಾಯಿತು. ಸರ್ಕಾರಿ ಆದೇಶ ಕೈಗೆ ಬಂದಾಗ ಪೆಕರ ಬೆಚ್ಚಿಬಿದ್ದ. ‘ಸಾರ್, ನನ್ನ ಕೈಲಿ ಈ ಕೆಲಸ ಆಗಲ್ಲ, ಯಾರಾದರೂ ಖಡಕ್ ಬುದ್ಧಿಜೀವಿಗಳನ್ನು ನೇಮಿಸಿ ಸಾರ್, ನಾನು ವರದಿ ಕೊಟ್ರೆ ‘ಅರೀದು ಡುಗ ಆರಂಭಮಾಡಿ ವಡೇವಲ ಕೂದು ಮೆದೆ ಆಕ್ದ’ ಎನ್ನುವಂತಾಗುತ್ತದೆ’ ಎಂದು ಅಯ್ಯ ಅವರ ಹತ್ರ ಬೇಡಿಕೊಂಡ.

‘ಅದ್ಯಾಕ್ ಹಂಗಂತೀರಿ, ಈ ಕೆಲಸ ನೀವೇ ಮಾಡಬೇಕು. ನಿಮಗೆ ಬಹಳ ಜನರ ಸಂಪರ್ಕ ವಿದೆ. ಖಡಕ್ ಬುದ್ಧಿಜೀವಿಗಳೂ ಒಂದು ವರದಿ ಕೊಟ್ಟಿದ್ದಾರೆ. ಎಲ್ಲ ಶಾಸಕರೂ, ಸಚಿವರೂ  ಮಂತ್ರಿಸಿದ ನಿಂಬೆಹಣ್ಣು ಜೇಬಿನಲ್ಲಿ ಇಟ್ಟು ಕೊಂಡು ಓಡಾಡುವುದರಿಂದ ರಾಜ್ಯದಲ್ಲಿ ನಿಂಬೆ ಹಣ್ಣು ನಿಷೇಧ ಮಾಡಬೇಕು ಅಂತ ವರದಿ ಕೊಟ್ಟಿ ದ್ದಾರೆ.

ಹೀಗೆಲ್ಲಾ ಹೇಳಿ ನನ್ನನ್ನು ಮರಳು ಮಾಡ ಲಾಗುತ್ತೇನ್ರಿ? ನಿಂಬೆಹಣ್ಣು ನಿಷೇಧ ಮಾಡಿದ್ರೆ ದೊಡ್ಡಗೌಡರು ನನ್ನನ್ನು ಸುಮ್ನೆ ಬಿಡ್ತಾರಾ? ರಾಜ್ಯದಲ್ಲಿ ಮಾಯ, ಮಾಟ, ಮಂತ್ರ ನಿಷೇಧಿಸಿದರೆ ಕೇರಳಕ್ಕೆ ಹೋಗಿ ಮಾಟ ಮಾಡಿ ಸ್ತೀನಿ ಅಂತ ಹೆದರಿಸ್ತಾರೆ. ಲೋಕಸಭಾ ಚುನಾ ವಣಾ ಟೈಂ, ಸ್ವಲ್ಪ ಗರಂ ಆಗದೇ ಇರಲಿ’ ಎಂದು ಅಯ್ಯ ಅವರು ಸಂಕಟ ತೋಡಿಕೊಂಡರು.

ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆ ಅಂಗೀಕಾರವಾಗೇ ಬಿಡುತ್ತೆ ಅಂತ ಬಹಳ ಜನರಿಗೆ ಚಳಿಜ್ವರ ಶುರುವಾಗಿ ಬಿಟ್ಟಿದೆ ಸಾರ್, ನಮಸ್ತೇ ಸದಾ ವತ್ಸಲೇ...  ಎಂದು ಹಾಡು ಹೇಳ್ತಾ ನಿಂತಿದ್ದವರೆಲ್ಲಾ ಸಡನ್ನಾಗಿ ಎದ್ದೋಡಿಬಂದು, ಇದು ಅನ್ಯಾಯ, ನಮ್ಮ ಧರ್ಮಕ್ಕೆ ಅಪಚಾರ ಎಂದು ಶೆಟ್ಟರ್, ಭಟ್ಟರ್ ತರಹ ಹಾರಾಡ್ತಾ ಇದ್ದಾರಲ್ಲಾ ಸಾರ್, ಮಡೆಸ್ನಾನ ಬೇಡ, ಸರ್ಕಾರಿ ಕಚೇರಿಗಳಲ್ಲಿ ಪೂಜಾದಿ ವಗೈರೆ ಬೇಡ ಎಂದು ಕಾನೂನು ಮಾಡಿಬಿಟ್ಟರೆ ತಟ್ಟೆ ಕಾಸಿಗೆ ಸಂಚಕಾರ ಎಂದು ಭಟ್ರೆಲ್ಲಾ ಹೌಹಾರ್‍ತಾ ಇದ್ರೆ, ಇನ್ನು ಮುಂದೆ ಪಾದಕ್ಕೆ ಮಸಾಜ್ ಮಾಡಿಸಿಕೊಳ್ಳುವ ಸುಖಾನಂದಕ್ಕೆ ಕಲ್ಲು ಬಿತ್ತಲ್ಲ ಅಂತ ಮಠಾಧಿಪತಿಗಳು ಚೀರಾಡುತ್ತಿದ್ದಾರೆ.

ನನಗೆ ಆಶ್ಚರ್ಯ ಅಂದರೆ, ನಿಮ್ಮ ಸ್ಥಿತಿ ದೇವರು ಕೊಟ್ಟರೂ ಪೂಜಾರಿ ಕೊಡ ಎನ್ನುವಂತಾಗಿದೆ. ನಮ್ಮ ಗೋಲ್ಡನ್ ಟೆಂಪಲ್ ಪೂಜಾರ್ರು, ಇದೆಲ್ಲಾ ಸರಿಯಲ್ಲ, ದೇವರು ವರಕೊಟ್ಟರೆ ಮಾತ್ರ ನನ್ನ ಬದುಕಿನ ದಾರಿ ಮತ್ತೊಮ್ಮೆ ದೆಹಲಿ ಯತ್ತ ಸಾಗುತ್ತದೆ ಎಂದು ಹೇಳಲು ಶುರು ಮಾಡಿಕೊಂಡಿದ್ದಾರಂತಲ್ಲಾ ಈ ‘ಕೈ’ ಕತೆ ಏನ್ಸಾರ್ ಎಂದು ವಿವರಿಸಲಾರಂಭಿಸಿದ.

‘ಸ್ವಲ್ಪ ಅರ್ಜೆಂಟ್ ಮೀಟಿಂಗ್ ಇದೆ, ನೀವು ಒಂದು ವಾರದಲ್ಲಿ ವರದಿ ಕೊಡಿ, ಆಮೇಲೆ ಏನಾಯ್ತದೆ ನೋಡೋಣ’ ಎಂದು ಹೇಳಿ ಅಯ್ಯ ಅವರು ಸರಸರನೆ ಹೊರಟೇ ಬಿಟ್ಟರು. ಒಂದೇ ವಾರದಲ್ಲಿ ವರದಿ ಕೊಡಬೇಕು, ತಜ್ಞರ, ಬುದ್ಧಿಜೀವಿಗಳ ಅಭಿಪ್ರಾಯ ಸಂಗ್ರಹಿಸ ಬೇಕು ಎಂದು ಪೆಕರನೂ ಎದ್ದು ಬಾಗಿಲ ಬಳಿ ಬಂದರೆ, ಬಾಗಿಲು ಬಂದ್ ಆಗಿತ್ತು. ‘ಇದು ಪಶ್ಚಿಮದ ಬಾಗಿಲು ಸಾರ್, ವಾಸ್ತು ಸರಿಬರಲ್ಲ ಅಂತ ಬಂದ್ ಮಾಡಿದ್ದೇವೆ. ನೀವು ಉತ್ತರದ ಬಾಗಿಲಿನಿಂದ ಹೋಗಿ’ ಎಂದು ಅಟೆಂಡರ್ ಅರುಹಿದ.

ಲೇಖಕಿಯರ ಸಾಹಿತ್ಯ ಸಮ್ಮೇಳನದ ಜಾಗಕ್ಕೆ ಹೋದರೆ, ಬೇಜಾನ್ ಸಲಹೆಗಳು ಸಿಗೋದು ಗ್ಯಾರಂಟಿ ಎಂದುಕೊಂಡು ಪೆಕರ ಅತ್ತ ಧಾವಿಸಿದ. ಅಧ್ಯಕ್ಷೆಯನ್ನು ಭೇಟಿಯಾಗಿ, ‘ಮೂಢ ನಂಬಿಕೆ ನಿಷೇಧದ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂದು ಪ್ರಶ್ನಿಸಿದ. ‘ಅಯ್ಯೋ, ಈ ಸಮ್ಮೇಳನ ರದ್ದಾಗುವ ಪರಿಸ್ಥಿತಿ ಬಂದು ಬಿಟ್ಟಿತ್ತು. ಸುಸೂತ್ರವಾಗಿ ನಡೆಯಲಿ ಎಂದು ಅದೆಷ್ಟು ದೇವರನ್ನು ಬೇಡಿಕೊಂಡೆನೋ ನನಗೇ ಗೊತ್ತು. ಅಮೇಲೆ ಎಲ್ಲಾ ಸರಿಯಾಯ್ತು’ ‘ಏಕೆ ಮೇಡಂ? ಸರ್ಕಾರ ಐದು ಲಕ್ಷ ರೂಪಾಯಿ ಕೊಟ್ರೂ ಸಾಲಲಿಲ್ವೇ?!’ ಎಂದು ಕೇಳಿದ ಪೆಕರ ಉತ್ತರಕ್ಕೂ ನಿರೀಕ್ಷಿಸದೆ ಜಾಗ ಖಾಲಿ ಮಾಡಿದ.

ಅಲ್ಲಿಂದ ನೇರವಾಗಿ ಒಡನಾಡಿಮಠಕ್ಕೆ ಬಂದ. ‘ಸ್ವಾಮೀಜಿಗಳೇ, ನಿಮ್ಮನ್ನು ಎಲ್ಲರೂ ಬಂಡಾಯ ಸ್ವಾಮೀಜಿ ಅಂತ ಕರೀತಾರೆ. ನೀವೇ ಮಸೂದೆಗೆ ಆತುರ ಬೇಡ ಅಂದ್ರೆ ಹೇಗೆ?’ ಎಂದು ಪ್ರಶ್ನಿಸಿದ. ‘ಆತುರ ಮಾಡಿದರೆ ಮಠಗಳಲ್ಲಿ ಅವಿತಿಟ್ಟಿ ರುವ ಅಪಾರ ನಿಧಿ ಕಣ್ಮರೆಯಾಗುವ ಸಂಭವ ವಿದೆ. ಮೊದಲು ಮಠಗಳನ್ನು, ದೇವಸ್ಥಾನಗಳನ್ನು ರಾಷ್ಟ್ರೀಕರಣ ಮಾಡಲಿ, ಅಮೇಲೆ ಉಳಿದದ್ದು’.

‘ಕಾವಿ ಮೇಲೆ ವಿಶ್ವಾಸವಿಲ್ಲದ ಸ್ವಾಮೀಜಿಗಳು ಕಾವಿ ಬಿಟ್ಟು ಹೊರಬಂದು ಹೋರಾಟ ನಡೆಸಲಿ ಎಂದು ಅಂಬಾಪುರಿ ಮಠಾಧೀಶರು ನಿಮಗೆ ಟಾಂಟ್ ಕೊಟ್ಟಿದ್ದಾರಲ್ಲಾ’ ಎಂದು ಪೆಕರ ಒಡನಾಡಿ ಮಠಾಧೀಶರನ್ನು ಕೆಣಕಿದ.
‘ಅಡ್ಡಪಲ್ಲಕ್ಕಿ ಮೇಲೆ ಸಾಗುವ ಮೌಢ್ಯ ಬಿಟ್ಟು ಅವರು ಮಾನವರಂತೆ ನಡೆದಾಡಲಾರಂಭಿಸಿದರೆ ನಾನೂ ಕಾವಿ ಬಿಡಲು ಸಿದ್ಧ’ ಎಂದು ಒಡನಾಡಿ ಮಠಾಧೀಶರು ಚಾಲೆಂಜ್ ಮಾಡಲಾರಂಭಿಸಿದ ಕೂಡಲೇ ಚರ್ಚೆ ಎಲ್ಲೆಲ್ಲೋ ಸಾಗುತ್ತಿದೆ ಎಂದು ಪೆಕರ ಮುಂದೆ ನಡೆದ.

ಪ್ರಸಿದ್ಧ ವಾಸ್ತುಶಾಸ್ತ್ರಜ್ಞ ಎಂದು ತಮಗೆ ತಾವೇ ಬಿರುದು ದಯಪಾಲಿಸಿಕೊಂಡಿರುವ ರಾಮಯಾಜಿ ಅವರ ಬಳಿ ಬಂದ ಪೆಕರ, ‘ನಿಮ್ಮದೇನಾದ್ರೂ ಸಲಹೆ ಇದ್ರೆ ಕೊಡಿ. ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ’ ಎಂದ. ‘ಬುದ್ಧಿಜೀವಿ ಆಸ್ಥಾನ ಸಾಹಿತಿಗಳ ಮಾತು ಕೇಳಿಸಿಕೊಂಡು ಈ ರೀತಿಯೆಲ್ಲಾ ಸಂಪ್ರದಾಯ, ಆಚರಣೆ ಬಿಡೋಕ್ಕಾಗಲ್ಲ. ಸಿ.ಎಂ ಆಗೋಕೆ ಮುಂಚೆ ಎಲ್ರೂ ನನ್ನ ಮನೇ ಬಾಗಿಲಿಗೆ ಬಂದು ‘ಮಂತ್ರ’ ಹಾಕಿಸಿಕೊಂಡು ಹೋಗಿದ್ದಾರೆ. ನಾನು ಮಂತ್ರಿಸಿಕೊಟ್ಟ ಮಾಲೆ ಹಾಕಿಕೊಂಡ ಮೇಲೇನೇ ಎಲ್ರೂ ಸಿ.ಎಂ ಆದದ್ದು. ನಾನು ಮಂತ್ರ ಹಾಕಿದ್ರೆ ಈ ಮಸೂದೆನೇ ಮಟಾಷ್ ಆಗಿಬಿಡುತ್ತೆ’.

ಅವರ ರೌದ್ರಾವತಾರ ನೋಡಲಾರದೆ ಪೆಕರ ಜಾಗ ಖಾಲಿ ಮಾಡಿದ.  ತಮ್ಮ ರುದ್ರಭೀಕರ ವೇಷಭೂಷಣಗಳಿಂದ ದಿನಾ ಬೆಳಿಗ್ಗೆ ಸರ್ವೇಜನರ ಭವಿಷ್ಯ ಹೇಳುವ ಬ್ರಹ್ಮಾಂಡ ದರೂಜಿ ಅವರ ಬಳಿ ಪೆಕರ ಬಂದು ನಿಂತ. ಅಭಿಪ್ರಾಯ ಕೇಳಿದ. ‘ನೋಡಿ , ನಾನು ಭವಿಷ್ಯ ಹೇಳೋದು ಲೋಕಕಲ್ಯಾಣಕ್ಕಾಗಿ. ಶಾಸ್ತ್ರ ನಂಬದಿದ್ರೆ, ಆಚರಣೆ ಸರಿಯಾಗಿ ಮಾಡದಿದ್ರೆ ನೆಗೆದ್‌ಬಿದ್ ನೆಲ್ಲೀ ಕಾಯಿ ಆಗೋಗ್ತಾರೆ ಅಷ್ಟೇ.  ಸರಿಯಾಗಿ ಜೀವನ ನಡೆಸೋದು ಹೇಗೆ ಅಂತ ಹೇಳ್ಕೊಟ್ರೆ ಅದು ತಪ್ಪಾ?’ ಎಂದು ಅವರು ವಾದ ಮಂಡಿಸಿದರು.

ಒಂದೇ ವಾರದಲ್ಲಿ ಪೆಕರ ಮೂಢನಂಬಿಕೆ ಆಚರಣೆಗಳ ನಿಷೇಧ ಮಸೂದೆಗೆ ಸೇರಿಸಲು ವರದಿಯೊಂದನ್ನು ರೆಡಿ ಮಾಡಿ ಸರ್ಕಾರಕ್ಕೆ ಸಲ್ಲಿಸಿದ. ಅದರಲ್ಲಿ ಕೆಲವು ಮುಖ್ಯಾಂಶಗಳು ಹೀಗಿವೆ:
* ಪಂಚಾಂಗವನ್ನು ರಾಜ್ಯದಲ್ಲಿ ನಿಷೇಧಿಸಬೇಕು (ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಎಂದು ಯಾರೂ ಹೇಳಕೂಡದು).
* ರಸ್ತೆಯಲ್ಲಿ ಗಿಳಿಶಾಸ್ತ್ರ ಹೇಳುವವರಿಂದ ಗಿಳಿಗಳನ್ನು ವಶಪಡಿಸಿಕೊಂಡು ಮೃಗಾಲಯಕ್ಕೆ ಕಳುಹಿಸಬೇಕು. ಗಿಳಿಶಾಸ್ತ್ರ ಹೇಳುವ ಕೊಂಡಮಾಮಂದಿರನ್ನು ‘ಡಿ’ ದರ್ಜೆ ನೌಕರರನ್ನಾಗಿ ನೇಮಿಸಬೇಕು.
* ಯಾವುದೇ ಸಚಿವರು, ಶಾಸಕರು ಭವಿಷ್ಯ ಹೇಳುವವರ ಮನೆಗೆ ಹೋಗಬಾರದು.
* ವಿಧಾನಸೌಧದ ಒಳಗೆ ನಿಂಬೆಹಣ್ಣು, ಕೆಂಪು ದಾರ, ಮಂತ್ರಿಸಿದ ಅಕ್ಕಿಕಾಳು ತರುವುದು ನಿಷಿದ್ಧ.
* ರಾಮನ ಹೆಸರು ಹೇಳುವ ಯಾವುದೇ ರಾಜಕೀಯ ಪಕ್ಷ ಚುನಾವಣೆಗೆ ಅನರ್ಹ ವಾಗುತ್ತದೆ.
ಚಳಿಗಾಲದ ಅಧಿವೇಶನದಲ್ಲಿ ಯಾರಿಗೆ ಚಳಿಜ್ವರ ಹಿಡಿದುಕೊಳ್ಳುತ್ತದೋ ಗೊತ್ತಿಲ್ಲ ಎಂದು ಪೆಕರ ನಡುಗಿದ.
-ಜಿಎಮ್ಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT