ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಬನ್ನೀಪೂಜೆ

Last Updated 13 ಅಕ್ಟೋಬರ್ 2021, 6:50 IST
ಅಕ್ಷರ ಗಾತ್ರ

ಶಮೀ ಶಮಯತೇ ಪಾಪಂ ಶಮೀ ಲೋಹಿತಕಂಟಕಾ ।

ಧಾರಿಣ್ಯರ್ಜುನ ಬಾಣಾನಾಂ ರಾಮಸ್ಯ ಪ್ರಿಯವಾದಿನೀ ।।

ಕರಿಷ್ಯಮಾಣ ಯಾತ್ರಾಯಾಂ ಯಥಾಕಾಲಂ ಸುಖಂ ಮಯಾ ।

ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮಪೂಜಿತೇ ।।

ನವರಾತ್ರಿಯ ಸಮಯದಲ್ಲಿ ವಿಜಯದಶಮಿಯಂದು ಬನ್ನಿಮರವನ್ನು ಪೂಜಿಸುವ ಸಮಯದಲ್ಲಿ ಹೇಳುವ ಶ್ಲೋಕಗಳಿವು.

ಸಂಸ್ಕೃತದ ವಹ್ನೀ ಎಂಬುದೇ ಕನ್ನಡದಲ್ಲಿ ಬನ್ನಿ ಎಂದಾಗಿದೆ.

‘ಶಮೀವೃಕ್ಷವು ಪಾಪಗಳನ್ನು ಶಮನಗೊಳಿಸುವುದು, ಕೆಂಪುಮುಳ್ಳುಗಳಿಂದ ನಮ್ಮನ್ನು ಕಾಪಾಡುವುದು. ಅದು ಅರ್ಜುನನ ಬಾಣಗಳನ್ನು ಧರಿಸಿದ ವೃಕ್ಷ, ರಾಮನಿಗೆ ಪ್ರಿಯವನ್ನು ಉಂಟುಮಾಡಿದ ವೃಕ್ಷ. ನನ್ನ ವಿಜಯಯಾತ್ರೆಯಲ್ಲಿ ಯಾವುದೇ ವಿಘ್ನಗಳು ಎದುರಾಗದಂತೆ ಸುಖವನ್ನೇ ಉಂಟುಮಾಡಲಿ, ರಾಮನಿಂದ ಪೂಜಿಸಲ್ಪಟ್ಟ ಈ ಶಮೀವೃಕ್ಷ‘ ಎಂದು ಈ ಶ್ಲೋಕಗಳ ತಾತ್ಪರ್ಯ.

ಅಜ್ಞಾತವಾಸದಲ್ಲಿ ಪಾಂಡವರು ತಮ್ಮ ಶಸ್ತ್ರಗಳನ್ನು ಶಮೀವೃಕ್ಷದಲ್ಲಿ ಬಚ್ಚಿಟ್ಟಿದ್ದರಂತೆ. ಹೀಗೆಯೇ ರಾವಣನನ್ನು ಸಂಹರಿಸುವ ಮೊದಲು ಶ್ರೀರಾಮ ಕೂಡ ಶಮೀವೃಕ್ಷವನ್ನು ಪೂಜಿಸಿದನಂತೆ. ಹೀಗಾಗಿ ಶಮೀ ಎಂಬುದು ವಿಜಯಕ್ಕೆ ಸಂಕೇತ ಎಂಬುದು ಇಲ್ಲಿರುವ ಧ್ವನಿ.

ವಹ್ನೀ, ಎಂದರೆ ಅಗ್ನಿಯು ಶಮೀವೃಕ್ಷದಲ್ಲಿ ನೆಲಸಿದೆ ಎಂಬ ಕಲ್ಪನೆಯೂ ಇದೆ. ಪ್ರಾಚೀನ ಕಾಲದಲ್ಲಿ ಯಜ್ಞಗಳನ್ನು ಮಾಡುವುದಕ್ಕೆ ಬೇಕಾದ ಅಗ್ನಿಯನ್ನು ಈ ವೃಕ್ಷದ ಮಥನದಿಂದ ಪಡೆಯುತ್ತಿದ್ದರಂತೆ. ಇದರಲ್ಲಿ ಅಡಗಿರುವ ಅಗ್ನಿಯನ್ನು ‘ದುರ್ಗ‘ ಎಂದು ಕರೆಯುತ್ತಾರೆ. ಹೀಗಾಗಿ ನವರಾತ್ರಿಯ ದುರ್ಗಾಪೂಜೆಗೂ ಈ ವೃಕ್ಷಕ್ಕೂ ನಂಟು ಒದಗಿಬಂದಿದೆ. ದುರ್ಗೆ ಎಂದರೆ ನಮ್ಮ ಕಷ್ಟಗಳನ್ನು ಪರಿಹರಿಸುವವಳು.

ಹೀಗೆ ನಮ್ಮ ಜೀವನಯುದ್ಧದಲ್ಲಿ ವಿಜಯವನ್ನು ಸಂಪಾದಿಸಲೂ, ನಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಲೂ ಬನ್ನೀಮರದ ಪೂಜೆಯನ್ನು ನವರಾತ್ರಿಯಲ್ಲಿ ಮಾಡುತ್ತೇವೆ. ಏಕೆಂದರೆ ಈ ವೃಕ್ಷವೂ ಶಕ್ತಿಯ ಸ್ವರೂಪವೇ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT