ದಿನದ ಸೂಕ್ತಿ: ಬ್ರಹ್ಮಾನಂದದ ಫಲ

ತಮಸ್ತಮಃಕಾರ್ಯಮನರ್ಥಜಾಲಂ
ನ ದೃಶ್ಯತೇ ಸತ್ಯುದಿತೇ ದಿನೇಶೇ ।
ತಥಾsದ್ವಯಾನಂದ–ರಸಾನುಭೂತೌ
ನ ವಾsಸ್ತಿ ಬಂಧೋ ನ ಚ ದುಃಖಗಂಧಃ ।।
ಇದರ ತಾತ್ಪರ್ಯ ಹೀಗೆ:
‘ಸೂರ್ಯನು ಉದಯಿಸಿದರೆ ಕತ್ತಲೆಯಾಗಲೀ ಅದರಿಂದ ಉಂಟಾಗುವ ಅನರ್ಥಗಳಾಗಲೀ ಹೇಗೆ ಕಂಡುಬರುವುದಿಲ್ಲವೋ ಹಾಗೆಯೇ ಅದ್ವಯ ಬ್ರಹ್ಮಾನಂದರಸದ ಅನುಭವವಾಗುತ್ತಿರುವಾಗ ಬಂಧವೂ ಇರುವುದಿಲ್ಲ, ದುಃಖದ ಗಂಧವೂ ಇರುವುದಿಲ್ಲ.’
ಇದು ‘ವಿವೇಕಚೂಡಾಮಣಿ‘ಯ ಮಾತು.
ಆತ್ಮಾನಂದದ ಅನುಭೂತಿ ಹೇಗಿರುತ್ತದೆ, ಅದರ ಫಲ ಹೇಗಿರುತ್ತದೆ – ಎಂದು ಈ ಶ್ಲೋಕ ನಿರೂಪಿಸುತ್ತಿದೆ.
ಕತ್ತಲೆಯಲ್ಲಿ ನಮಗೆ ಏನೊಂದೂ ಕಾಣದು. ಹೀಗಾಗಿ ಕತ್ತಲೆಯಲ್ಲಿ ನಮಗೆ ಸಾಕಷ್ಟು ತೊಂದರೆಗಳು ಎದುರಾಗುತ್ತವೆ. ಆದರೆ ಈ ಕತ್ತಲು ಎಂಬುದು ಬೆಳಕು ಮೂಡಿದ ಕೂಡಲೇ ನಾಪತ್ತೆಯಾಗುತ್ತದೆ. ಬೆಳಕು ಮೂಡುವುದು ಮತ್ತು ಕತ್ತಲೆಯು ತೊಲಗುವುದು – ಇವೆರಡೂ ಏಕಕಾಲದಲ್ಲಿ ನಡೆಯುತ್ತವೆ; ಒಂದಾದಮೇಲೆ ಇನ್ನೊಂದು ಎಂಬಂತಲ್ಲ ಈ ಪ್ರಕ್ರಿಯೆ.
ಇಲ್ಲಿ ಬೆಳಕು ಎಂದರೆ ಜ್ಞಾನ; ಕತ್ತಲೆ ಎಂದರೆ ಅಜ್ಞಾನ. ಬೆಳಕು ಮೂಡಿದ ಕೂಡಲೇ ಕತ್ತಲೆ ನಾಶವಾಗುತ್ತದೆ, ಮರೆಯಾಗುತ್ತದೆ ಎಂದರೆ ಜ್ಞಾನವು ಮೂಡಿದ ಕೂಡಲೇ ನಮ್ಮ ಅಜ್ಞಾನ ತೊಲಗಿಹೋಗುತ್ತದೆ ಎಂಬುದು ಇಲ್ಲಿಯ ಭಾವ. ಅಜ್ಞಾನ ನಾಶವಾಗಿ ಜ್ಞಾನ ಮೂಡಿದಾಗ ನಮಗೆ ಒದಗುವ ಅರಿವೇ ಅದ್ವಯ ಬ್ರಹ್ಮಾನಂದರಸ ಎನ್ನುವುದು ಶಾಸ್ತ್ರದ ಮಾತು; ಎಂದರೆ ಎರಡನೆಯ ವಸ್ತುವೇ ಇಲ್ಲದ ಕೇವಲಾನಭವ ಪ್ರಾಪ್ತವಾಗುತ್ತದೆ; ಇದೇ ಬ್ರಹ್ಮಾನಂದರಸ.
ಈ ಬ್ರಹ್ಮಾನಂದದಿಂದ ನಮಗೆ ದಕ್ಕುವ ಫಲಗಳಾದರೂ ಏನು? ನಮಗೆ ಅಗ ಯಾವ ಬಂಧನವೂ ಇರುವುದಿಲ್ಲ. ಮಾತ್ರವಲ್ಲ, ಯಾವುದರಿಂದ ದುಃಖವೂ ಇರುವುದಿಲ್ಲ. ಬಂಧನ ಇದ್ದಾಗಲೇ ರಾಗ–ದ್ವೇಷಗಳು. ರಾಗ–ದ್ವೇಷಗಳೇ ನಮ್ಮ ಸುಖ–ದುಃಖಕ್ಕೆ ಕಾರಣಗಳು. ಬಂಧನವೇ ಇಲ್ಲದ ಮೇಲೆ ದುಃಖದ ಸೊಲ್ಲೇ ಇರದು ಎಂಬದು ಇಲ್ಲಿಯ ತಾತ್ಪರ್ಯ. ಇದೇ ವೇದಾಂತದರ್ಶನ. ಇದೇ ಉಪನಿಷತ್ತುಗಳ ಸಾರ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.