ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ದೊಡ್ಡದು ದೊಡ್ಡದು ಆಸೆ ದೊಡ್ಡದು

Last Updated 21 ಜುಲೈ 2020, 19:31 IST
ಅಕ್ಷರ ಗಾತ್ರ

ಗಿರಿರ್ಮಹಾನ್‌ ಗಿರೇರಬ್ಧಿರ್ಮಹಾನ್‌ ಅಬ್ಧೇರ್ನಭೋ ಮಹತ್‌ ।
ನಭಸೋsಪಿ ಮಹದ್ ಬ್ರಹ್ಮ ತತೋsಪ್ಯಾಶಾ ಗರೀಯಸೀ ।।

ಇದರ ತಾತ್ಪರ್ಯ ಹೀಗೆ:

’ಬೆಟ್ಟ ದೊಡ್ಡದು; ಅದಕ್ಕಿಂತ ಸಮುದ್ರ ದೊಡ್ಡದು; ಸಮುದ್ರಕ್ಕಿಂತಲೂ ಆಕಾಶ ದೊಡ್ಡದು; ಆಕಾಶಕ್ಕಿಂತ ಬ್ರಹ್ಮವಸ್ತು ದೊಡ್ಡದು; ಅದಕ್ಕಿಂತಲೂ ಆಸೆ ದೊಡ್ಡದು!‘

ಆಸೆಯ ತೀವ್ರತೆಯ ಬಗ್ಗೆ ಈ ಸುಭಾಷಿತ ಹೇಳುತ್ತಿದೆ.

ನಮ್ಮ ಕಣ್ಣಿಗೆ ಕಾಣುವಂಥ ದೊಡ್ಡ ವಸ್ತು ಎಂದರೆ ಬೆಟ್ಟ. ಅದಕ್ಕಿಂತಲೂ ದೊಡ್ಡದಾದ, ನಾವು ನೋಡಬಹುದಾದ ವಸ್ತು ಎಂದರೆ ಸಮುದ್ರ; ಅದ್ಕಕಿಂತಲೂ ದೊಡ್ಡದು ಆಕಾಶ ತಾನೆ? ಆಕಾಶಕ್ಕಿಂತಲೂ ಬ್ರಹ್ಮವಸ್ತು ದೊಡ್ಡದು.

’ಬ್ರಹ್ಮ‘ ಎಂಬ ಶಬ್ದ ಬಂದಿರುವುದೇ ’ಬೃಹತ್ತು‘ ಎಂಬ ಅರ್ಥವಿರುವ ಧಾತುವಿನಿಂದ. ಈ ಬ್ರಹ್ಮವಸ್ತು ಎಷ್ಟು ದೊಡ್ಡದು ಎಂದರೆ ಅದು ಇಡಿಯ ಸೃಷ್ಟಿಯನ್ನೇ ಆವರಿಸಿದೆ; ಅದಿಲ್ಲದ ಸ್ಥಳವೇ ಸೃಷ್ಟಿಯಲ್ಲಿ ಇಲ್ಲ. ಆದರೆ ಆಸೆ ಇದಕ್ಕಿಂತಲೂ ದೊಡ್ಡದಂತೆ! ಎಂದರೆ ಆಸೆ ಎನ್ನುವುದು ಎಷ್ಟು ದೊಡ್ಡದು ಎಂಬ ಕಲ್ಪನೆ ಇದರಿಂದ ನಮಗೆ ಉಂಟಾಗುತ್ತದೆ. ಬ್ರಹ್ಮವಸ್ತುವಿನಷ್ಟು ದೊಡ್ಡದು ಸೃಷ್ಟಿಯಲ್ಲೇ ಇನ್ನೊಂದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ; ಆದರೆ ಆಸೆ ಅದಕ್ಕಿಂತಲೂ ದೊಡ್ಡದು ಎಂದು ಉತ್ಪ್ರೇಕ್ಷಿಸಿ ಹೇಳಿರುವುದರ ತಾತ್ಪರ್ಯ ಅದರ ವ್ಯಾಪ್ತಿಯ ಅಗಾಧತೆಯನ್ನು ಸೂಚಿಸುವುದಕ್ಕಾಗಿ.

ಆಸೆಗೆ ಮಿತಿಯೇ ಇಲ್ಲ; ಒಂದು ಆಸೆಯನ್ನು ಪೂರೈಸಿದ ಕೂಡಲೇ ಇನ್ನೊಂದು ಆಸೆ ನಮ್ಮ ಹೆಗಲೇರುತ್ತದೆ, ತಲೆಯನ್ನೂ ಏರುತ್ತದೆ. ಇನ್ನೊಂದು ಶ್ಲೋಕ ಆಸೆಯ ಬಗ್ಗೆ ಹೀಗೆ ಹೇಳಿದೆ:

ಆಶಾಯಾ ಯೇ ದಾಸಾಸ್ತೇ ದಾಸಾಃ ಸರ್ವಲೋಕಸ್ಯ ।
ಆಶಾ ಯೇಷಾಂ ದಾಸೀ ತೇಷಾಂ ದಾಸಾಯತೇ ಲೋಕಃ ।।

’ಆಸೆಗೆ ಯಾರು ದಾಸರೋ ಅವರು ಸಕಲಲೋಕಕ್ಕೂ ದಾಸರೇ. ಯಾರಿಗೆ ಆಸೆಯೇ ದಾಸಿಯಾಗಿರುತ್ತದೆಯೋ ಅವರಿಗೆ ಲೋಕವೇ ದಾಸವಾಗುತ್ತದೆ.‘

ಒಮ್ಮೆ ನಾವು ಆಸೆಯ ಪಾಶಕ್ಕೆ ಸಿಕ್ಕಿಬಿದ್ದರೆ ಅದರಿಂದ ತಪ್ಪಿಸಿಕೊಂಡು ಹೊರಗೆ ಬರುವುದು ಸುಲಭವಲ್ಲ; ಆಸೆಗೆ ದಾಸರಾದರೆ ನಾವು ಎಲ್ಲರಿಗೂ ದಾಸರಾದಂತೆಯೇ ಹೌದು; ಇಡಿಯ ಜಗತ್ತಿನ ಮುಂದೆ ನಾವು ಭಿಕ್ಷುಕರಂತೆ ಕೈ ಚಾಚುತ್ತಲೇ ಇರುತ್ತೇವೆ. ಆದರೆ ನಮ್ಮ ಮನಸ್ಸು ಆಸೆಯ ಬಲೆಗೆ ಸಿಕ್ಕದೆ, ಅದೇ ನಮ್ಮ ವಶದಲ್ಲಿದ್ದರೆ ಆಗ ಇಡಿಯ ಲೋಕವೇ ನಮ್ಮ ವಶದಲ್ಲಿದ್ದಂತೆ ಆಗುತ್ತದೆ. ಇದರ ತಾತ್ಪರ್ಯ: ನಾವು ಆಸೆಯನ್ನು ಗೆದ್ದರೆ ಇಡಿಯ ಜಗತ್ತನ್ನೇ ಗೆದ್ದಂತೆ; ಚಕ್ರವರ್ತಿಯಾಗಿದ್ದರೂ ನಾವು ಆಸೆಗೆ ಸೋತರೆ ಜಗತ್ತಿನ ಮುಂದೆ ನಾವೊಬ್ಬ ಭಿಕ್ಷುಕ ಅಷ್ಟೆ!

ಆಸೆಯ ಜಾಲವನ್ನು ಅಲ್ಲಮಪ್ರಭುವಿನ ಈ ವಚನವೂ ಸೊಗಸಾಗಿ ಚಿತ್ರಿಸಿದೆ:

ಆಸೆಗೆ ಸತ್ತುದು ಕೋಟಿ !
ಆಮಿಷಕ್ಕೆ ಸತ್ತುದು ಕೋಟಿ !
ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ !
ಗುಹೇಶ್ವರ, ನಿಮಗಾಗಿ ಸತ್ತವರನಾರನೂ ಕಾಣೆ

ಆಸೆ ನಮ್ಮನ್ನು ಹಲವು ವಿಧದಲ್ಲಿ ಸಾಯಿಸುತ್ತಲೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT