ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಚಿನ್ನ ಎಂದಿಗೂ ಚಿನ್ನವೇ!

Last Updated 21 ಜೂನ್ 2020, 5:15 IST
ಅಕ್ಷರ ಗಾತ್ರ

ವಿಪ್ರಿಯಮಪ್ಯಾಕರ್ಣ್ಯ ಬ್ರೂತೇ ಪ್ರಿಯಮೇವ ಸರ್ವದಾ ಸುಜನಃ ।

ಕ್ಷಾರಂ ಪಿಬತಿ ಪಯೋಧೇಃ ವರ್ಷತ್ಯಂಭೋಧರೋ ಮಧುರಮಂಭಃ ।।

ಇದರ ತಾತ್ಪರ್ಯ ಹೀಗೆ:

’ಕೆಟ್ಟಮಾತುಗಳನ್ನು ಕೇಳಿದರೂ ಸಹ ಸಜ್ಜನರು ಒಳ್ಳೆಯ ಮಾತನ್ನೇ ಯಾವಾಗಲೂ ಆಡುತ್ತಾರೆ. ಸಮುದ್ರದ ಉಪ್ಪುನೀರನ್ನು ಕುಡಿದು ಮೋಡಗಳು ಸಿಹಿಯಾದ ನೀರನ್ನೇ ಸುರಿಸುತ್ತವೆ.‘

ಪ್ರಕೃತಿಯ ಸಹಜ ವಿದ್ಯಮಾನವೊಂದನ್ನು ಬಳಸಿಕೊಂಡು ಸುಭಾಷಿತಕಾರ ಎಂಥ ಅದ್ಭುತವಾದ ಸಂದೇಶವನ್ನು ನೀಡುತ್ತಿದ್ದಾನೆ, ನೋಡಿ!

ಮಳೆ ಹೇಗಾಗುತ್ತದೆ? ಮೋಡಗಳಿಂದ. ಮೋಡಗಳು ಹೇಗೆ ಉಂಟಾಗುತ್ತವೆ? ಸಮುದ್ರದ ನೀರು ಆವಿಯಾಗಿ ಅದೇ ಮೋಡಗಳಾಗುತ್ತವೆ – ಎಂಬುದನ್ನು ನಾವು ಓದಿ ತಿಳಿದುಕೊಂಡಿದ್ದೇವೆ. ಆದರೆ ಇಲ್ಲೊಂದು ಸ್ವಾರಸ್ಯವುಂಟು.

ಮಳೆಯ ನೀರಿನ ರುಚಿಯನ್ನು ಒಂದಲ್ಲ ಒಂದು ಸಂದರ್ಭದಲ್ಲಿ ನೋಡಿರುತ್ತೇವೆ. ಮಳೆಯ ನೀರಿನಿಂದ ಮೈ ತುಂಬಿ ಹರಿಯುವ ನದಿಯ ನೀರಿನ ರುಚಿಯನ್ನೂ ಸವಿಯುತ್ತಲೇ ಇರುತ್ತೇವೆ. ನದಿಯ ನೀರಿನ ರುಚಿ ಎಷ್ಟು ಸಿಹಿಯಾಗಿರುತ್ತದೆಯಲ್ಲವೆ? ಈ ನೀರೇ ಸಮುದ್ರವನ್ನು ಸೇರುವುದು; ಆದರೆ ಹಾಗೆ ಸೇರಿದ ಮೇಲೆ ಅದು ಉಪ್ಪಾಗುತ್ತದೆ. ಈ ಉಪ್ಪಾದ ನೀರು ಮೋಡಗಳಾಗಿ ಪರಿವರ್ತನೆಯಾಗುತ್ತದೆ. ಮೋಡಗಳು ಮಳೆ ಸುರಿಸುತ್ತವೆ; ಆದರೆ ಆ ಮಳೆಯ ನೀರು ಉಪ್ಪಾಗಿರುವುದಿಲ್ಲ; ಸಿಹಿಯಾಗಿರುತ್ತದೆ. ಎಂಥ ಸೋಜಿಗ! ಮೋಡಗಳು ಉಪ್ಪುನೀರಿನಿಂದಾದದರೂ ಅದು ಸುರಿಸುವ ನೀರು ಮಾತ್ರ ಸಿಹಿ!!

ಇದೇ ಹೋಲಿಕೆಯನ್ನು ಸುಭಾಷಿತ ಉಪಯೋಗಿಸಿಕೊಂಡು ಸಜ್ಜನರ ಸ್ವಭಾವದ ಔನ್ನತ್ಯವನ್ನು ನಿರೂಪಿಸುತ್ತಿದೆ.

ಕೆಟ್ಟ ಮಾತುಗಳನ್ನು ಕೇಳಿದರೂ ಸಜ್ಜನರು ಮಾತ್ರ ಒಳ್ಳೆಯ ಮಾತುಗಳನ್ನೇ ಆಡುತ್ತಾರೆ. ಏಕೆಂದರೆ ಒಳ್ಳೆಯತನವೇ ಅವರ ಸ್ವಭಾವವಾಗಿರುತ್ತದೆ. ಒಳ್ಳೆಯತನದ ಶಕ್ತಿಯೇ ಅಂಥದ್ದು, ಅದು ಕೆಟ್ಟತನದ ಮುಂದೆ ಸೋಲದು; ಅದು ತನ್ನತನವನ್ನು ಯಾವಾಗಲೂ ಕಾಪಾಡಿಕೊಳ್ಳುತ್ತದೆ.

ಇಂಥ ನಿಲವನ್ನು ಭಕ್ತಿಯ ಸಂದರ್ಭಕ್ಕೂ ಬಸವಣ್ಣನವರು ಬಳಸಿಕೊಂಡಿರುವುದನ್ನು ಕಾಣಬಹುದು:

‘ಪರುಷ ಮುಟ್ಟಿದ ಬಳಿಕ ಕಬ್ಬನವಾಗದು ನೋಡಾ,

ಲಿಂಗ ಮುಟ್ಟಿದ ಬಳಿಕ ಕುಚಿತ್ತಾಚಾರವಾಗದು ನೋಡಾ,

ಕೂಡಲಸಂಗನ ಶರಣರು ಅನ್ಯವನರಿಯರಾಗಿ‘

ಪರುಷ ಎಂದರೆ ಸ್ಪರ್ಶಮಣಿ; ಅದಕ್ಕೆ ಕಬ್ಬಿಣವನ್ನು ತಾಗಿಸಿದರೆ ಅದು ಚಿನ್ನವಾಗುತ್ತದೆ. ಹೀಗೆ ಒಮ್ಮೆ ಚಿನ್ನವಾದ ಕಬ್ಭಿಣ ಅದು ಮತ್ತೆ ಕಬ್ಬಿಣವಾಗದು. ಸ್ಪರ್ಶಮಣಿಯ ಗುಣವೇ ಇದಕ್ಕೆ ಕಾರಣ. ಹೀಗೆಯೇ ಲಿಂಗವನ್ನು ನಾವೊಮ್ಮೆ ಸ್ಪರ್ಶಿಸಿದಮೇಲೆ ನಮ್ಮಲ್ಲಿ ಕೆಟ್ಟತನ ಹತ್ತಿರವೂ ಸುಳಿಯದು, ಸುಳಿಯಬಾರದು ಕೂಡ; ನಮ್ಮ ಸ್ಪರ್ಶ ದಿಟವಾದ ಭಕ್ತಿಯ ಸ್ಪರ್ಶವಾಗಿದ್ದರೆ! ಕೊನೆಯಲ್ಲಿ ಬಸವಣ್ಣನವರು ಹೇಳುತ್ತಿದ್ದಾರೆ, ಶಿವಶರಣರು ಕೂಡಲಸಂಗಮನನ್ನು ಬಿಟ್ಟು ಇನ್ನೊಂದು ವಿಷಯವನ್ನು ಅರಿಯರು; ಈ ಕಾರಣದಿಂದ, ಎಂದರೆ ಅವರೊಮ್ಮೆ ಭಕ್ತಿಯೊಂದಿಗೆ ತಾದಾತ್ಮ್ಯವನ್ನು ಹೊಂದಿದ ಬಳಿಕ ಲೋಕದ ಯಾವುದೇ ಕೊಳಕೂ ಅವರನ್ನು ಅಂಟದು; ಅವರನ್ನು ವಿಚಲಿತರನ್ನಾಗಿಸದು.

ಇಲ್ಲೊಂದು ಕಥೆ ನೆನಪಾಗುತ್ತಿದೆ:

ಅಲ್ಲೊಂದು ನದಿ; ನದಿಯ ದಡದಲ್ಲಿ ಋಷಿಯೊಬ್ಬ ಅನುಷ್ಠಾನದಲ್ಲಿದ್ದ. ಅದೇ ಸಂದರ್ಭದಲ್ಲಿ ಚೇಳೊಂದು ನದಿಯ ನೀರಿನ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿತ್ತು. ಅದನ್ನು ನೋಡಿದ ಆ ಋಷಿ ಹತ್ತಿರವೇ ಬಿದ್ದಿದ್ದ ಎಲೆಯೊಂದರ ಸಹಾಯದಿಂದ ಆ ಚೇಳನ್ನು ನೀರಿನಿಂದ ಮೇಲೆತ್ತಿ ದಡದ ಮೇಲೆ ಬಿಡಲು ಉದ್ಯಕ್ತನಾದ. ಆದರೆ ಹೀಗೆ ಅದನ್ನು ರಕ್ಷಿಸುತ್ತಿರುವಾಗ ಆ ಚೇಳು ಆ ಋಷಿಯ ಕೈಯನ್ನು ಕುಟುಕಿತು. ನೋವಿನ ತೀಕ್ಷ್ಣತೆಯ ಕಾರಣ ಋಷಿ ತನ್ನ ಕೈಯನ್ನೊಮ್ಮೆ ಜಾಡಿಸಿದ. ಆಗ ಆ ಚೇಳು ಮತ್ತೆ ನದಿಯಲ್ಲಿ ಬಿದ್ದಿತು. ಕೂಡಲೇ ಅವನು ಪುನಃ ಅದರ ಪ್ರಾಣವನ್ನು ರಕ್ಷಿಸಲು ಮುಂದಾದ; ಆದರೆ ಚೇಳು ಮತ್ತೆ ಅವನನ್ನು ಕುಟುಕಿತು; ಈ ಸಲವೂ ಅದು ನೀರಿನಲ್ಲಿ ಬಿದ್ದಿತು. ಋಷಿ ಅದನ್ನು ಕಾಪಾಡಲು ಮುಂದಾಗವುದು; ಅದು ಅವನನ್ನು ಕುಟುಕುವುದು – ಇದು ಬಹಳ ಹೊತ್ತು ನಡೆಯುತ್ತೇ ಇತ್ತು. ಈ ವಿಚಿತ್ರವನ್ನು ಅಲ್ಲಿಯೇ ಗಮನಿಸುತ್ತಿದ್ದ ವ್ಯಕ್ತಿಯೊಬ್ಬ ಋಷಿಯನ್ನು ಪ್ರಶ್ನಿಸಿದ: ’ಅಲ್ಲ ಸ್ವಾಮಿ! ನೀವು ಅದರ ಜೀವವನ್ನು ಉಳಿಸಲು ಪ್ರಯತ್ನಿಸುತ್ತಲೇ ಇದ್ದೀರಿ; ಆದರೆ ಅದು ತನ್ನ ಸ್ವಭಾವವನ್ನು ಮಾತ್ರ ಬಿಡದೆ ನಿಮ್ಮನ್ನು ಕುಟುಕುತ್ತಲೇ ಇದೆ; ಅಂಥ ಕೃತಘ್ನಜೀವಿಯನ್ನು ಏಕಾದರೂ ರಕ್ಷಿಸಲು ಪ್ರಯತ್ನಿಸುತ್ತಿದ್ದೀರಿ?‘

ಆಗ ಆ ಋಷಿ ಹೇಳಿದ: ’ನೋಡಪ್ಪ! ರಕ್ಷಿಸುವುದು ನನ್ನ ಸ್ವಭಾವ; ಕಚ್ಚುವುದು ಅದರ ಸ್ವಭಾವ.‘

ನಮ್ಮ ಜೀವನದಲ್ಲೂ ನಾವು ಇಂಥದೇ ಸಂದರ್ಭಗಳನ್ನು ಎದುರಿಸುತ್ತಿರುತ್ತೇವೆ. ಒಬ್ಬರಿಗೆ ನಾವು ಸಹಾಯ ಮಾಡುತ್ತಲೇ ಇರುತ್ತೇವೆ; ಆದರೆ ಅವರು ಮಾತ್ರ ನಮ್ಮ ವಿರುದ್ಧ ಷಡ್ಯಂತ್ರಗಳನ್ನು ರಚಿಸುತ್ತಲೇ ಇರುತ್ತಾರೆ. ನಮಗೂ ಒಮ್ಮೊಮ್ಮೆ ಅವರ ಅಯೋಗ್ಯತನಕ್ಕೆ ತಕ್ಕ ಪಾಠವನ್ನು ಕಲಿಸೋಣ ಎಂದು ಎನಿಸುವುದುಂಟು; ಆದರೆ ಈ ಭಾವದ ಆಯುಸ್ಸು ಕೇವಲ ಒಂದು ಕ್ಷಣವಷ್ಟೆ! ’ಅಯ್ಯೋ! ಅವನ ಪಾಪ ಅವನಿಗೆ, ನಮ್ಮ ಕರ್ತವ್ಯ ನಮಗೆ‘ ಎಂದು ಎಂದಿನಂತೆ ನಾವು ಸಹಾಯವನ್ನು ಮುಂದುವರಿಸುತ್ತೇವೆ, ಅಲ್ಲವೆ?

ಯಾವುದೇ ಭಾವವೇ ಆಗಲಿ, ದಿಟವಾಗಿಯೂ ನಮ್ಮಲ್ಲಿ ನೆಲೆಯೂರಿದ್ದರೆ ಅದು ಎಂಥ ವಿಷಮಸಂದರ್ಭದಲ್ಲೂ ಬದಲಾವಣೆಯಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT