ಬುಧವಾರ, ಜುಲೈ 28, 2021
23 °C

ದಿನದ ಸೂಕ್ತಿ | ಅಂದೊ ಇಂದೊ ಎಂದೊ ಜನುಮ ಕಳೆಯುವುದು

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ಮನನ- ಪ್ರಾತಿನಿಧಿಕ ಚಿತ್ರ

ಆಧಿವ್ಯಾಧಿಪರಿತಾಪಾದದ್ಯ ಶ್ವೋ ವಾ ವಿನಾಶಿನೇ ।

ಕೋ ಹಿ ನಾಮ ಶರೀರಾಯ ಧರ್ಮಾಪೇತುಂ ಸಮಾಚರೇತ್ ।।

ಇದರ ತಾತ್ಪರ್ಯ ಹೀಗೆ:

’ಮನಸ್ಸಿನ ಕಾಯಿಲೆ, ದೈಹಿಕ ರೋಗಗಳು – ಇವುಗಳ ಪೀಡೆಯಿಂದ ಇಂದೋ ಅಥವಾ ನಾಳೆಯೋ ನಾಶವಾಗುವ ಶರೀರಕ್ಕಾಗಿ ಯಾರು ತಾನೇ ಅಧರ್ಮವನ್ನು ಆಚರಿಸಿಯಾರು?‘

ಸುಭಾಷಿತಗಳು ಹೇಳುವುದೆಲ್ಲವೂ ಸತ್ಯವೇ ಆಗಿರಬೇಕು – ಎಂಬ ಯಾವುದೇ ನಿಯಮ ಇಲ್ಲವಷ್ಟೆ! ಈ ಶ್ಲೋಕ ಹಸಿಹಸಿಯಾದ ಸುಳ್ಳನ್ನು ಹೇಳುತ್ತಿದೆ ಎನ್ನುವುದು ನಮ್ಮ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ತಿಳಿಯುತ್ತದೆ.

ಇಡಿಯ ಜಗತ್ತನ್ನು ಆವರಿಸಿರುವ ಇಂದಿನ ಭೀತಿ ಸಾಮಾನ್ಯ ಭೀತಿಯಲ್ಲ; ಯಾವುದೇ ಕ್ಷಣವೂ ಸಾವು ಎದುರಾಗಬಹುದು – ಎಂಬಂಥ ಸೂಕ್ಷ್ಮ ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ. ಇಂಥ ಸಂದರ್ಭಕ್ಕೆ ಇಡಿಯ ಸಮಾಜ ಸ್ಪಂದಿಸಬೇಕಿತ್ತು. ಜೀವನದ ಕ್ಷಣಿಕತೆಯ ಅನುಭವ ಅಪಾರ ವಿವೇಕವನ್ನು ನಮಗೆಲ್ಲ ಕೊಡಬೇಕಿತ್ತು. ಮನುಷ್ಯ ಮನುಷ್ಯರ ನಡುವೆ ನಾವೇ ಎಬ್ಬಿಸಿಕೊಂಡಿರುವ ಗೋಡೆಗಳು ಉರುಳಬೇಕಿದ್ದವು. ಅನ್ಯಾಯ, ಅತ್ಯಾಚಾರ, ಭ್ರಷ್ಟಾಚಾರಗಳ ಸೊಲ್ಲೇ ಮಾಯವಾಗಬೇಕಿತ್ತು. ಆದರೆ ಇಂಥ ವಾತಾವರಣ ಇದೆಯೆ?

ಸಾವಿನ ಮನೆಗೆ ಹೋದಾಗಲೂ ನಮ್ಮ ಗಮನ ಒಂದೇ ಕಡೆಗೆ: 'ಈ ಹೆಣದಿಂದ ದುಡ್ಡು ಮಾಡುವುದು ಹೇಗೆ?' ಇಂಥ ಮಾಸಿಕತೆ ದಿನೇ ದಿನೇ ಹೆಚ್ಚುತ್ತಿದೆ. ನಮ್ಮ ಜೀವವನ್ನು ನಮ್ಮ ಹಣ–ಅಂತಸ್ತುಗಳು ಉಳಿಸಲಾರವು ಎಂಬ ವಾಸ್ತವವನ್ನು ಮನದಟ್ಟುಮಾಡುಕೊಡುತ್ತಿರುವ ಈ ಸನ್ನಿವೇಶದಲ್ಲೂ ನಮ್ಮ ಗಮನ ಮಾತ್ರ ದುಡ್ಡಿನ ಕಡೆಗೇ ಇದೆ. ನಮ್ಮ ರಾಜಕಾರಣಿಗಳು, ಅವರ ಮಾತುಗಳು, ಅವರ ನಡವಳಿಕೆಗಳು ಈ ಮಾತಿನ ತೀವ್ರತೆಗೆ ಸಾಕ್ಷ್ಯಗಳು. ನಮ್ಮೆಲ್ಲರ ಗುರಿ ಇಂದು ನಮ್ಮನ್ನು ಆವರಿಸಿಸಿರುವ ಮಹಾಮಾರಿಯಿಂದ ಬಿಡುಗಡೆ ಪಡೆಯುವುದರತ್ತ ಇರಬೇಕಿತ್ತು. ಆದರೆ ನಮ್ಮ ವ್ಯವಸ್ಥೆ, ಆ ವ್ಯವಸ್ಥೆಯ ನಿಯಂತ್ರಕರು ಈ ಗುರಿಯ ಬಗ್ಗೆ ಎಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದಾರೆ? ಬಹುಪಾಲು ನಾಯಕರ ಗುರಿಯೇ ಬೇರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ!

ನಮಗೆ ಎರಡು ನೆಲೆಗಳಿಂದ ಸಂಕಟ ಎದುರಾಗುತ್ತಿರುತ್ತದೆ. ಒಂದು: ದೇಹಕ್ಕೆ – ರೋಗಗಳ ಮೂಲಕ; ಇನ್ನೊಂದು: ಮನಸ್ಸಿಗೆ – ಒತ್ತಡ, ಯೋಚನೆಗಳು ಮುಂತಾದವುಗಳ ಮೂಲಕ ಎದುರಾಗುವ ಸಮಸ್ಯೆಗಳು. ಮೊದಲನೆಯದನ್ನು ’ವ್ಯಾಧಿ‘ ಎಂದೂ ಎರಡನೆಯದನ್ನೂ ’ಆಧಿ‘ ಎಂದೂ ಕರೆಯಲಾಗುತ್ತದೆ. ನಾವು ಈ ಎರಡು ದಾಳಿಗೆ ಸದಾ ತುತ್ತಾಗುತ್ತಲೇ ಇರುತ್ತೇವೆ; ನಮ್ಮ ಅಂತ್ಯಕ್ಕೂ ಈ ದಾಳಿಯೇ ಕಾರಣವಾಗಿರುತ್ತದೆ. ಎಂದರೆ ನಮ್ಮ ಶರೀರ ಶಾಶ್ವತವಾದುದಲ್ಲ; ಅದು ಎಂದೋ ಒಂದು ದಿನ ಮರೆಯಾಗಲೇಬೇಕು. ಡಿವಿಜಿಯವರು ಈ ವಾಸ್ತವವನ್ನು ಹೀಗೆ ಕಾಣಿಸಿದ್ದಾರೆ:

'ಅಂತೊ ಇಂತೊ ಎಂತೊ ಜೀವಕಥೆ ಮುಗಿಯುವುದು ।
ಅಂದೊ ಇಂದೊ ಎಂದೊ ಜನುಮ ಕಳೆಯುವುದು ।।'

ಇಷ್ಟು ನಶ್ವರವಾಗಿರುವ ನಮ್ಮ ಜೀವನದ ಬಗ್ಗೆ, ನಮ್ಮ ಶರಿರದ ಬಗ್ಗೆ ನಮಗೆ ಎಂಥ ಎಚ್ಚರ ಬೇಕಿತ್ತು? ಅನ್ಯಾಯದ ಮಾರ್ಗವನ್ನೇ ನಾವು ತುಳಿಯಬಾರದಾಗಿತ್ತು; ನಾಲ್ಕು ಜನರಿಗೆ ಒಳಿತಾಗುವಂಥ ಕೆಲಸಗಳನ್ನೇ ಮಾಡಬೇಕಿತ್ತು. ಇದನ್ನೇ ಸುಭಾಷಿತ ಹೇಳುತ್ತಿರುವುದು: ನಮ್ಮ ಜೀವನ ನೀರಿನ ಮೇಲಿನ ಗುಳ್ಳೆಯಂತಿದೆ ಎಂದು ತಿಳಿದಮೇಲೆ ಯಾರು ತಾನೆ ಅಧರ್ಮದ ದಾರಿಯಲ್ಲಿ ನಡೆಯುತ್ತಾರೆ? 

ಆದರೆ ನಮ್ಮ ವಾತಾವರಣದಲ್ಲಿ ಇಂಥ ವಿವೇಕ ಕಾಣುತ್ತಿದೆಯೆ?

ದುರ್ಯೋಧನನ ಮಾತು ಎಂದು ಒಂದು ಹೇಳಿಕೆ ಪ್ರಚಾರದಲ್ಲಿದೆ. ಅದರ ತಾತ್ಪರ್ಯ: ’ನನಗೆ ಧರ್ಮ ಎಂದರೇನು – ಎಂಬುದು ಗೊತ್ತು; ಆದರೆ ಅದರಲ್ಲಿ ನನಗೆ ಪ್ರವೃತ್ತಿ ಇಲ್ಲ. ಅಧರ್ಮ ಯಾವುದೆಂದೂ ನನಗೆ ಗೊತ್ತು – ಅದೂ ಅದರಲ್ಲಿ ನನಗೆ ನಿವೃತ್ತಿ ಇಲ್ಲ.‘

ಸಮಾಜದಲ್ಲಿ ದುರ್ಯೋಧನ ವಾರಸಿಕೆಯ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ ಎಂಬ ಆತಂಕಕ್ಕೆ ಕಾರಣ ಇಲ್ಲದಿಲ್ಲ.

ರಾಜಕುಮಾರನಾಗಿದ್ದ ಸಿದ್ಧಾರ್ಥ ಮುಂದೆ ಬುದ್ಧನಾದದ್ದು ಬದುಕಿನ ನಶ್ವರತೆಯ ಬಗ್ಗೆ ಅರಿವು ಮೂಡಿದ ಮೇಲೆ. ಸಾವಿನ ಬಗ್ಗೆ ಗಹನವಾದ ಪ್ರಶ್ನೆಯನ್ನು ಎದುರಿಸಿದ ಬಾಲಕ ಮುಂದೆ ರಮಣ ಮಹರ್ಷಿ ಎನಿಸಿಕೊಂಡರು. ನಾವೆಲ್ಲರೂ ನಮ್ಮ ಹುಟ್ಟು–ಸಾವುಗಳ ಬಗ್ಗೆ ಜಿಜ್ಞಾಸೆಯನ್ನು ನಡೆಸಲೇಬೇಕು. ಇದೇ ನಮ್ಮ ಜೀವನದ ಸಾರ್ಥಕತೆಯ ಬಗ್ಗೆ ಅರಿವು ಮೂಡಿಸಬಲ್ಲದು. ನಾವಿಂದು ಹತ್ತು ಜನರ ಕಣ್ಣೀರಿನಿಂದ ಸಂಪಾದಿಸಿದ ಹಣ–ಅಂತಸ್ತು–ಅಧಿಕಾರಗಳು ನಮ್ಮೊಂದಿಗೆ ಎಷ್ಟು ದೂರ ಬರುತ್ತವೆ ಎಂಬುದನ್ನು ಕುರಿತು ಮನನ ಮಾಡಬೇಕಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು