ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗದ ಹಿತದಲ್ಲಿದೆ ತನ್ನ ಹಿತ

ದಿನದ ಸೂಕ್ತಿ
Last Updated 8 ಜೂನ್ 2020, 6:10 IST
ಅಕ್ಷರ ಗಾತ್ರ

ನಾವು ಸಮಾಜಕ್ಕೆ ಇಂದು ಏನನ್ನು ನೀಡುತ್ತೇವೆಯೋ ಅದು ನಾಳೆ ನಮಗೆ ಸಿಗುತ್ತದೆ; ಜಗತ್ತು ಎನ್ನುವುದು ನಮ್ಮತನದ ಪ್ರತಿಧ್ವನಿಯಷ್ಟೆ!

ಉತ್ಪತನ್ನಪಿ ಚಾಕಾಶಂ ವಿಶನ್ನಪಿ ರಸಾತಲಮ್।

ಅಟನ್ನಪಿ ಮಹೀಂ ಕೃತ್ನ್ನಾಂ ನಾದತ್ತಮುಪತಿಷ್ಠತೇ ।।

ಇದರ ತಾತ್ಪರ್ಯ ಹೀಗೆ:

’ಆಗಸಕ್ಕೆ ಹಾರಿದರೂ, ಪಾತಾಳವನ್ನೂ ಹೊಕ್ಕರೂ, ಇಡೀ ಭೂಮಂಡಲವನ್ನು ಸುತ್ತಿದರೂ, ನಾವು ಕೊಡದೆ ಇದ್ದುದು ನಮಗೆ ದೊರೆಯುವುದಿಲ್ಲ.‘

ಈಗಿನ ಸಂದರ್ಭದಲ್ಲಿ ಈ ಶ್ಲೋಕ ಹಲವು ಅರ್ಥಗಳನ್ನು ಒದಗಿಸಬಲ್ಲದು. ಸೌಹಾರ್ದಯುತವಾಗಿ, ಪರಸ್ಪರ ಹಂಚಿಕೊಂಡು, ಸಹಬಾಳ್ವೆಯನ್ನು ನಡೆಸುವುದರ ಅನಿವಾರ್ಯತೆಯನ್ನು ಇದು ಎದ್ದುಕಾಣಿಸುತ್ತಿದೆ. ’ನಾವು ಏನನ್ನು ಕೊಡುತ್ತೇವೆಯೋ ಅದನ್ನು ಮಾತ್ರವೇ ನಾವು ಪಡೆಯುವುದು.‘ ಇದು ಈ ಸುಭಾಷಿತದ ಸಂದೇಶ. ಈ ಮಾತಿನ ನಿಲುವಾದರೂ ಏನು?

ನಾವು ಏನನ್ನು ಪಡೆಯಲು ಬಯಸುತ್ತೇವೆ – ಎಂದು ಮೊದಲು ಯೋಚಿಸಬೇಕು. ಪ್ರೀತಿ, ಪ್ರೇಮ, ಸಂತೋಷ, ಸಂಪತ್ತು, ವಿದ್ಯೆ, ಧೈರ್ಯ, ಅನ್ನ, ಅರಿವು – ಹೀಗೆ ಜೀವನದಲ್ಲಿ ಹತ್ತಾರು ಅಲ್ಲ, ನೂರಾರು ಸಂಗತಿಗಳನ್ನು ಬಯಸುತ್ತೇವೆ. ಇವನ್ನು ಎಲ್ಲಿಂದ, ಯಾರಿಂದ ಬಯಸುತ್ತೇವೆ? ಸಮಾಜದಿಂದ ಬಯಸುತ್ತೇವೆ; ಎಂದರೆ ಇತರರಿಂದ ಬಯಸುತ್ತೇವೆ, ಅಲ್ಲವೆ? ಆದರೆ ಸುಭಾಷಿತ ಇದಕ್ಕೆ ಭಿನ್ನವಾದ ರೀತಿಯಲ್ಲಿ ಹೇಳುತ್ತಿದೆ. ’ನೀವು ಏನನ್ನು ಕೊಟ್ಟಿಲ್ಲವೋ ಅದು ನಮಗೆ ಸಿಗದು‘ ಎನ್ನುತ್ತಿದೆ, ಸುಭಾಷಿತ. ಇದರ ತಾತ್ಪರ್ಯ: ನಾವು ಸಮಾಜಕ್ಕೆ ಏನನ್ನು ಕೊಟ್ಟಿರುತ್ತೇವೆಯೋ ಅವನ್ನು ಮಾತ್ರವೇ ಪಡೆಯಲಾದೀತು.

ಸಮಾಜ ನಮ್ಮನ್ನು ಕಾಪಾಡಬೇಕೆಂದು ಬಯಸುತ್ತೇವೆ; ಸಮಾಜ ನಮ್ಮನ್ನು ಪ್ರೀತಿಸಬೇಕೆಂದೂ ಬಯಸುತ್ತೇವೆ. ಆದರೆ ಮೊದಲು ನಾವು ಸಮಾಜದ ಹಿತವನ್ನು ಕಾಪಾಡಿದ್ದರೆ ಆಗ ಮಾತ್ರವಷ್ಟೆ ಸಮಾಜವೂ ನಮ್ಮನ್ನು ಕಾಪಾಡೀತು.

ಎಲ್ಲರೂ ನಮ್ಮನ್ನು ಇಷ್ಟಪಡಬೇಕು, ಪ್ರೀತಿಸಬೇಕು ಎಂದು ಬಯಸುವುದು ಸಹಜ. ಇದಕ್ಕೂ ಮೊದಲು ’ನಾವು ಯಾರನ್ನಾದರೂ ಪ್ರಾಮಾಣಿಕವಾಗಿ ಇಷ್ಟಪಟ್ಟಿದ್ದೇವೆಯೆ‘ ಎಂದು ಪ್ರಶ್ನಿಸಿಕೊಳ್ಳಬೇಕು. ನಾವು ಬೇರೊಬ್ಬರಿಂದ ಏನನ್ನಾದರೂ ಬಯಸುವ ಮೊದಲು ಅವನ್ನು ನಾವು ಯಾರಿಗಾದರೂ ಕೊಟ್ಟಿದ್ದೇವೆಯೆ – ಎಂದು ಆಲೋಚಿಸಬೇಕಾಗುತ್ತದೆ. ನಮಗೆ ಪ್ರೀತಿ ಬೇಕು, ಸಂತೋಷ ಬೇಕು, ಸಮಾಧಾನ ಬೇಕು, ಧೈರ್ಯ ಬೇಕು, ... – ಎಂದರೆ ನಾವು ಮೊದಲು ಅವನ್ನು ನಮ್ಮ ಕುಟುಂಬಕ್ಕೂ ಸಮಾಜಕ್ಕೂ ನೀಡಿರಬೇಕು; ಆಗಷ್ಟೆ ಅದರ ಪ್ರತಿಫಲವಾಗಿ ನಮಗೆ ಅವು ಮತ್ತೆ ದೊರಕಬಲ್ಲವು. ’ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ‘ ಎಂಬ ಗಾದೆಯನ್ನೂ ಇಲ್ಲಿ ನೆನೆಯಬಹುದು.

ಸಮಾಜ ಎನ್ನುವುದು ನಮ್ಮಿಂದ ಬೇರೆಯೇ ಆದ ಘಟಕ ಎಂದು ನಾವು ಭಾವಿಸುತ್ತೇವೆ. ಆದರೆ ಸಮಾಜ ಎನ್ನುವುದು ನಮ್ಮ ಶರೀರದ ಭಾಗವೇ ಹೌದು, ನಮ್ಮ ಮನಸ್ಸಿನ ವಿಸ್ತರಣವೇ ಹೌದು, ನಮ್ಮ ಬದ್ಧಿಯ ರೂಪವೇ ಹೌದು; ಒಟ್ಟಿನಲ್ಲಿ ನಾವು ಬೇರೆ ಅಲ್ಲ, ಸಮಾಜ ಬೇರೆ ಅಲ್ಲ. ಹೀಗಾಗಿ ನಮಗೆ ಶಕ್ತಿ ಸಿಗಬೇಕು, ಸಂತೋಷ ಸಿಗಬೇಕು, ಪ್ರೀತಿ ಸಿಗಬೇಕು – ಎಂದೆಲ್ಲ ಬಯಸುವ ಮೊದಲು ಅವನ್ನು ನಾವೆಷ್ಟು ಕೂಡಿಟ್ಟಿದ್ದೇವೆ ಎಂದು ಗಮನಿಸಿಕೊಳ್ಳಬೇಕು. ಇಲ್ಲಿ ’ಕೂಡಿಡುವುದು‘ ಎಂದರೆ ಸಮಾಜಕ್ಕೆ ನೀಡಿ, ಆ ಮೂಲಕ ಅವನ್ನು ನಮಗಾಗಿ ರಕ್ಷಿಸಿಕೊಂಡಿದ್ದೇವೆ ಎಂದು ಅರ್ಥ.

ಹೀಗಾಗಿ ನಾವು ಸಮಾಜಕ್ಕಾಗಿ ನಮ್ಮ ಬದುಕನ್ನು ವಿನಿಯೋಗಿಸಿದರೆ ಆಗ ಆ ಸಮಾಜ ನಮಗೂ ಬದುಕನ್ನು ನೀಡುತ್ತದೆ. ಆದುದರಿಂದಲೇ ನಾವು ಸದಾ ಒಳಿತನ್ನೇ ಎಲ್ಲೆಲ್ಲೂ ಪಸರಿಸುತ್ತಿರಬೇಕು; ಏಕೆಂದರೆ ನಾವು ಜಗತ್ತಿಗೆ ಏನನ್ನು ಕೊಟ್ಟಿರುತ್ತೇವೆಯೋ ಅದನ್ನಷ್ಟೆ ನಾವು ಮತ್ತೆ ಪಡೆಯಲು ಸಾಧ್ಯ. ವಾತಾವರಣಕ್ಕೆ ಕಾರ್ಬನ್ ಡೈ ಆಕ್ಸೈಡನ್ನು ನೀಡಿದರೆ ಅದಕ್ಕೆ ಪ್ರತಿಯಾಗಿ ನಾವು ಅದನ್ನೇ ಸೇವಿಸಬೇಕಾಗುತ್ತದೆಯಷ್ಟೆ!

’ನಾನು‘ ಎನ್ನುವುದು ಹಂತಹಂತವಾಗಿ ವಿಸ್ತಾರವಾಗುತ್ತ ಬೆಳೆಯಬೇಕು; ಅದು ಕ್ರಮೇಣ ಕುಟುಂಬವಾಗಿ, ಕುಟುಂಬ ಸಮಾಜವಾಗಿ, ಸಮಾಜ ನಾಡಾಗಿ, ನಾಡು ದೇಶವಾಗಿ, ದೇಶ ಪ್ರಪಂಚವಾಗಿ, ಪ್ರಪಂಚ ಇಡಿಯ ಸೃಷ್ಟಿಯೇ ಆಗಿ, ಕೊನೆಗೆ ಸೃಷ್ಟಿ ಎನ್ನುವುದರ ಕೇಂದ್ರ ಪುನಃ ’ನಾನು‘ ಆಗುವಂಥ ಚಕ್ರೀಯ ಪ್ರಕ್ರಿಯೆಯೇ ಜೀವನದ ಯಾನ. ಹೀಗಾಗಿ ನಾವು ಸಮಾಜಕ್ಕೆ ಇಂದು ಏನನ್ನು ನೀಡುತ್ತೇವೆಯೋ ಅದು ನಾಳೆ ನಮಗೆ ಸಿಗುತ್ತದೆ; ಜಗತ್ತು ಎನ್ನುವುದು ನಮ್ಮತನದ ಪ್ರತಿಧ್ವನಿಯಷ್ಟೆ!

ಭಗವದ್ಗೀತೆಯಲ್ಲಿ ಒಂದು ಮಾತು ಬರುತ್ತದೆ: ಪ್ರಜಾಪತಿಯು ಪ್ರಜೆಗಳೊಂದಿಗೆ ಯಜ್ಞವನ್ನೂ ಸೃಷ್ಟಿಸಿದನಂತೆ. ಹೀಗೆ ಸೃಷ್ಟಿಸಿದ ಮೇಲೆ ’ಯಜ್ಞದಿಂದ ನೀವು ಅಭಿವೃದ್ಧಿಯನ್ನು ಹೊಂದಿರಿ‘ ಎಂದು ಹೇಳಿದನಂತೆ. ಅಲ್ಲಿ ಬರುವ ಮುಂದಿನ ಮಾತು ತುಂಬ ಅರ್ಥಪೂರ್ಣವಾದುದು:

ದೇವಾನ್‌ ಭಾವಯಾನೇನ ತೇ ದೇವಾ ಭಾವಯಂತು ವಃ ।

ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ ।।

ಇದರ ತಾತ್ಪರ್ಯ: ’ಈ ಯಜ್ಞದಿಂದ ದೇವತೆಗಳನ್ನು ತೃಪ್ತಗೊಳಿಸಿರಿ. ಆ ದೇವತೆಗಳು ನಿಮ್ಮನ್ನು ಸಂವರ್ಧಿಸಲಿ. ಹೀಗೆ ಪರಸ್ಪರವಾಗಿ ಒಬ್ಬರೊಬ್ಬರನ್ನು ತೃಪ್ತಿಗೊಳಿಸುತ್ತ ಪರಮಶ್ರೇಯಸ್ಸನ್ನು ಪಡೆಯಿರಿ.‘

ಮೊದಲು ಮನುಷ್ಯರು ದೇವತೆಗಳನ್ನು ತೃಪ್ತಗೊಳಿಸಬೇಕು; ಬಳಿಕ ದೇವತೆಗಳು ಮನುಷ್ಯರನ್ನು ತೃಪ್ತಗೊಳಿಸುತ್ತಾರೆ. ಯಾವುದರಿಂದ ಮನುಷ್ಯರು ದೇವತೆಗಳನ್ನು ತೃಪ್ತಗೊಳಿಸಬೇಕು. ಯಜ್ಞದಿಂದ. ಯಜ್ಞ ಎಂದರೆ ಏನು? ವಿತರಣಶೀಲತೆಯೇ ಯಜ್ಞ; ಎಂದರೆ ಹಂಚುವುದು; ’ನನ್ನದಲ್ಲ‘ – ಎಂಬ ಭಾವದಿಂದ ಹಂಚತಕ್ಕದ್ದು. ಹೀಗೆ ಹಂಚಿದಾಗ ಅದರ ಫಲವಾಗಿ ನಾವು ಕೊಟ್ಟ ದ್ರವ್ಯಗಳೆಲ್ಲವೂ ನಮಗೆ ಸಮೃದ್ಧಿಯಾಗಿ ಪುನಃ ದೊರಕಿ, ನಮ್ಮ ಬಾಳು ಸಂತೋಷಮಯವಾಗುತ್ತದೆ. ಹೀಗಾಗಿ ಸಮಾಜದ ’ಏಳಿಗೆ‘ಗೆ ನಾವು ಏನನ್ನು ಕೊಡುತ್ತೆವೆಯೋ ಸಮಾಜ ಅವನ್ನು ಮತ್ತೆ ನಮ್ಮ ’ಏಳಿಗೆ‘ಗಾಗಿ ಹಿಂದಿರುಗಿಸುತ್ತದೆ. ನಾವು ಪ್ರೀತಿಯನ್ನು ಕೊಟ್ಟರೆ ನಮಗೆ ಪ್ರೀತಿ ಸಿಗುತ್ತದೆ, ದ್ವೇಷವನ್ನು ಕೊಟ್ಟರೆ ದ್ವೇಷವೇ ಸಿಗುತ್ತದೆ. ಬೇವನ್ನು ಬಿತ್ತರೆ ಬೇವು, ಮಾವನ್ನು ಬಿತ್ತರೆ ಮಾವು! ಸೃಷ್ಟಿಗೂ ನಮಗೂ ಇರುವ ಪರಸ್ಪರ ’ಆಲಂಬನ‘ ಮನನೀಯ.

ಸದ್ಯದ ಪರಿಸ್ಥಿತಿಯಲ್ಲಿ ನಾವು ಹಿಂದಿಗಿಂತಲೂ ಹೆಚ್ಚಿನ ಸೌಹಾರ್ದದಲ್ಲಿ, ಪರಸ್ಪರ ನಂಬಿಕೆ–ಭರವಸೆಗಳಲ್ಲಿ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕಾಗಿದೆ. ಬೇರೆಯವರಿಗೆ ವೈರಸ್‌ ಅಂಟಲಿ ಎಂದು ಬಯಸಿ, ಅದರಂತೆ ನಡೆದುಕೊಂಡರೆ ಅದು ನಾಳೆ ಹೇಗಾದರೂ ನಮಗೂ ಅಂಟುವುದು ಖಂಡಿತ. ಆದುದರಿಂದ ನಮ್ಮ ನಡೆ–ನುಡಿಗಳನ್ನು ಹತ್ತು ಸಲ ಯೋಚಿಸಿ ತೀರ್ಮಾನಿಸಿಕೊಳ್ಳಬೇಕು. ನಾವು ಇನ್ನೊಬ್ಬರಿಗೆ ಬಯಸುವ ಹಿತ, ಅದು ವಾಸ್ತವವಾಗಿ ನಮ್ಮದೇ ಹಿತ ಎಂಬ ಸತ್ಯವನ್ನು ನಾವಿಂದು ಅರಿತುಕೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT