ಶನಿವಾರ, ಸೆಪ್ಟೆಂಬರ್ 26, 2020
24 °C

ದಿನದ ಸೂಕ್ತಿ: ಬದುಕನ್ನು ಬದುಕಿ

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ನೇಹ ಯತ್‌ ಕರ್ಮ ಧರ್ಮಾಯ ನ ವಿರಾಗಾಯ ಕಲ್ಪತೇ ।

ನ ತೀರ್ಥಪದಸೇವಾಯೈ ಜೀವನ್ನಪಿ ಮೃತೋ ಹಿ ಸಃ ।।

ಇದರ ತಾತ್ಪರ್ಯ ಹೀಗೆ:

‘ಈ ಲೋಕದಲ್ಲಿ ಯಾರು ಮಾಡುವ ಕೆಲಸವು ಧರ್ಮಸಾಧನೆಗಾಗಿ ಅಲ್ಲವೋ, ವೈರಾಗ್ಯಕ್ಕೆ ಅಲ್ಲವೋ ಅಥವಾ ಪೂಜ್ಯರ ಸೇವೆಗಾಗಿಯೋ ಅಲ್ಲವೋ, ಆ ಮನುಷ್ಯನು ಬದುಕಿದ್ದರೂ ಸತ್ತಂತೆಯೇ ಸರಿ.‘

ನಮ್ಮ ಜೀವನಕ್ಕೊಂದು ಉದ್ದೇಶ ಇರಬೇಕು, ಗುರಿ ಇರಬೇಕು; ಅದಿಲ್ಲದಿದ್ದರೆ ನಮಗಾಗಲೀ, ನಮ್ಮ ಜೀವನಕ್ಕಾಗಲೀ ಅರ್ಥವೇ ಇರುವುದಿಲ್ಲ. ಆಗ ನಾವು ಇದ್ದೂ ಇಲ್ಲದಂತೆಯೇ ಆಗುತ್ತೇವೆ. ಸುಭಾಷಿತ ಇದನ್ನೇ ಹೇಳುತ್ತಿರುವುದು.

ನಾವು ಮಾಡುವ ಕೆಲಸಗಳು ಯಾವ ಯಾವ ಉದ್ದೇಶಗಳನ್ನು ಹೊಂದಿದ್ದರೆ ನಮ್ಮ ಜೀವನಕ್ಕೆ ಸಾರ್ಥಕ್ಯ ಒದಗುವುದು ಎನ್ನುವುದನ್ನು ಸುಭಾಷಿತ ಇಲ್ಲಿ ಹೇಳಿದೆ.

ನಾವು ಮಾಡುವ ಕೆಲಸಗಳು ಧರ್ಮಸಾಧನೆಗೆ ಇರಬೇಕು. ಧರ್ಮ ಎಂದರೆ ಏನು? ಇದು ವಿಸ್ತಾರವಾದ ಅರ್ಥಗಳನ್ನು ಹೊಂದಿದೆ. ನಮ್ಮ ಜೀವನದಲ್ಲಿ ನಾವು ನಡೆಸುವ ಕೆಲಸಗಳಿಂದ ಬೇರೆಯವರಿಗೂ ನಮಗೂ ತೊಂದರೆ ಆಗದಂತೆ ನಡೆದುಕೊಳ್ಳುವುದೇ ಧರ್ಮಸಾಧನೆಯ ಮೊದಲ ಮೆಟ್ಟಿಲು ಎನ್ನಬಹುದು. ಸತ್ಯ, ಅಹಿಂಸೆ, ಬೇರೊಬ್ಬರ ಆಸ್ತಿಯನ್ನು ಕಬಳಿಸದಿರುವುದು, ಶುಚಿತ್ವ, ಇಂದ್ರಿಯನಿಗ್ರಹ, ದಾನ, ಮನೋನಿಗ್ರಹ, ದಯೆ, ತಾಳ್ಮೆ – ಇಂಥ ಗುಣಗಳನ್ನು ಸಾಮಾನ್ಯಧರ್ಮಗಳು ಎಂದು ಕರೆಯುವುದುಂಟು. ಇವನ್ನು ಮೈಗೂಡಿಸಿಕೊಂಡು ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು.‌. ಆ ಮೂಲಕ ನಮ್ಮ ಬದುಕನ್ನು ಸುಂದರಗೊಳಿಸಿಕೊಳ್ಳಬೇಕು. ಇದು ಪ್ರವೃತ್ತಿಧರ್ಮ ಎನಿಸಿಕೊಳ್ಳುತ್ತದೆ.

ಪ್ರವೃತ್ತಿಧರ್ಮದಲ್ಲಿ ನಮಗೆ ಆಸಕ್ತಿ ಇಲ್ಲದಿದ್ದರೆ ನಿವೃತ್ತಿಧರ್ಮದ ಮೂಲಕ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು. ಇದಕ್ಕೆ ಬೇಕಾದುದು ವೈರಾಗ್ಯಪ್ರವೃತ್ತಿ. ಲೋಕದ ವಿವರಗಳಲ್ಲಿ ಆಸೆಗಳನ್ನು ತ್ಯಜಿಸುವುದೇ ಈ ದಾರಿಯ ಮುಖ್ಯವಾದ ತಿರುಳು. 

ಹಿರಿಯರ, ಮಹಾತ್ಮರ, ಪೂಜ್ಯರ ಸೇವೆಯನ್ನು ಮಾಡುತ್ತ ಜೀವನದಲ್ಲಿ ಸಾರ್ಥಕತೆಯನ್ನು ಪಡೆದುಕೊಳ್ಳಬೇಕೆಂದೂ ಸುಭಾಷಿತ ಹೇಳುತ್ತಿದೆ. ಇಂಥವರಿಂದ ನಮಗೂ ಸಮಾಜಕ್ಕೂ ಪ್ರಯೋಜನವಾಗಿರುತ್ತದೆ. ಇವರ ಋಣದಲ್ಲಿ ನಾವಿರುತ್ತೇವೆ. ಹೀಗಾಗಿ ಇವರ ಸೇವೆ ನಮ್ಮ ಪಾಲಿಗೆ ಕರ್ತವ್ಯವೇ ಹೌದು.

ಜೀವನದಲ್ಲಿ ಕ್ರಿಯಾಶೀಲತೆ ಎನ್ನುವುದು ಮುಖ್ಯ. ಇದನ್ನು ಸುಭಾಷಿತ ಇಲ್ಲಿ ಎತ್ತಿಹಿಡಿದಿದೆ. ಮಾತ್ರವಲ್ಲ, ಮನುಷ್ಯನ ಜನ್ಮ ತುಂಬ ಶ್ರೇಷ್ಠವಾದದ್ದು. ಸೃಷ್ಟಿಯಲ್ಲಿ ಮನುಷ್ಯನಿಗಿರುವ ಶಕ್ತಿಯೂ, ಅವನಿಗೆ ಒದಗಿರುವ ಪ್ರಯೋಜನಗಳೂ ಇನ್ನೊಂದು ಪ್ರಾಣಿಗೆ ಲಭ್ಯವಾಗಿಲ್ಲ. ಹೀಗಾಗಿ ಈ ಸೌಲಭ್ಯಗಳನ್ನು ಮನುಷ್ಯನು ಹಾನಿಮಾಡಿಕೊಂಡು, ಜೀವನವನ್ನು ವ್ಯರ್ಥಮಾಡಿಕೊಳ್ಳಬಾರದು ಎನ್ನುವುದನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು. ನಾಲ್ಕು ಜನರಿಗೆ ನೆರವಾಗುವಂಥ, ನಮ್ಮ ಜೀವನಕ್ಕೂ ಸೊಗಸು ಒದಗುವಂಥ ಜೀವನವನ್ನು ನಾವೆಲ್ಲರೂ ಪ್ರಯತ್ನಪಟ್ಟು ರೂಢಿಸಿಕೊಳ್ಳಬೇಕು. ಇಲ್ಲವಾದಲ್ಲಿ ನಾವು ಬದುಕಿದ್ದರೂ ಸತ್ತಂತೆಯೇ ಸರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.