ಸೋಮವಾರ, ಜನವರಿ 25, 2021
21 °C

ದಿನದ ಸೂಕ್ತಿ: ನಿಜವಾದ ಬಂಧುಗಳು

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ವರಂ ವನಂ ವ್ಯಾಘ್ರಗಜಾದಿಸೇವಿತಂ

ಜನೇನ ಹೀನಂ ಬಹುಕಂಟಕಾವೃತಮ್‌ ।

ತೃಣಾನಿ ಶಯ್ಯಾ ಪರಿಧಾನವಲ್ಕಲಂ

ನ ಬಂಧುಮಧ್ಯೇ  ಧನಹೀನಜೀವಿತಮ್‌ ।।

ಇದರ ತಾತ್ಪರ್ಯ ಹೀಗೆ:

‘ಹುಲಿ ಆನೆ ಇವುಗಳಿಂದ ಕೂಡಿರುವುದೂ, ಜನರಿಲ್ಲದುದೂ, ವಿಪರೀತವಾದ ಮುಳ್ಳುಗಳಿಂದ ತುಂಬಿರುವುದೂ, ಹುಲ್ಲನ್ನೇ ಹಾಸಿಗೆಯನ್ನಾಗಿಸಿಕೊಂಡಿರುವುದೂ, ನಾರುಬಟ್ಟೆಯೇ ಉಡುಗೆಯಾದರೂ, ಕಾಡಿನ ವಾಸವೇ ವಾಸಿ; ಆದರೆ ಹಣವಿಲ್ಲದೆ ಬಂಧುಗಳ ಮಧ್ಯೆ ಬದುಕುವ ಬಾಳು ಬೇಡವೇ ಬೇಡ.’

ಬಡತನದ ಎದುರಿನಲ್ಲಿ ಬಂಧುಗಳೂ ಇಲ್ಲ, ಸ್ನೇಹಿತರೂ ಇಲ್ಲ – ಎಂಬುದನ್ನು ಸುಭಾಷಿತ ಹೇಳುತ್ತಿದೆ.

ಬಡತನದ ಹತ್ತಾರು ಕಷ್ಟಗಳನ್ನು ಎದುರಿಸಬಹುದು; ಆದರೆ ಬಡವರಾಗಿ ಸಂಬಂಧಿಕರ ಮಧ್ಯೆ ಬದುಕುವುದು ಸಾಧ್ಯವಿಲ್ಲ ಎಂಬುದನ್ನು ಸುಭಾಷಿತ ಹೇಳುತ್ತಿದೆ.

ಬಡತನ ನಮ್ಮ ಎಲ್ಲ ಗುಣಗಳನ್ನೂ ಮರೆಮಾಡಿಬಿಡುತ್ತದೆ. ಪ್ರತಿ ಕ್ಷಣವೂ ಅದು ನಮ್ಮನ್ನು ಕುಬ್ಜರನ್ನಾಗಿಸುತ್ತಿರುತ್ತದೆ; ಹತಾಶಸ್ಥಿತಿಗೆ ತಳ್ಳುತ್ತಿರುತ್ತದೆ; ನಮ್ಮ ಅಸ್ತಿತ್ವವನ್ನೇ ನಿರಾಕರಿಸುವಂಥ ಸ್ಥಿತಿಯನ್ನೂ ಅದು ಸೃಷ್ಟಿಸುತ್ತದೆ; ನಮ್ಮನ್ನು ಹಾಸ್ಯಕ್ಕೂ ವಸ್ತುವನ್ನಾಗಿಸುತ್ತದೆ. ಹೀಗೆ ಬಡತನ ಉಂಟುಮಾಡುವ ಸ್ವಾಭಿಮಾನನಾಶ ಒಂದು ಎರಡು ರೀತಿಯದ್ದಲ್ಲ; ಹಲವಾರು ರೀತಿಯದ್ದು. ಅದು ಎರಡು ಆಯಾಮಗಳಲ್ಲಿ ನಮ್ಮ ಮೇಲೆ ದಾಳಿ ಮಾಡುತ್ತದೆ. ಅದೇ ಸ್ವತಃ ನಮ್ಮ ಆತ್ಮಾಭಿಮಾನವನ್ನು ಕೊಂದು, ನಮ್ಮನ್ನು ಲೌಕಿಕವಾದ ಕಷ್ಟಗಳಲ್ಲೂ ಸಿಲುಕಿಸಿ, ಪ್ರತಿ ಕ್ಷಣವೂ ನರಳುವಂತೆ ಮಾಡುತ್ತದೆ. ಇದರ ಜೊತೆಗೆ ಹೀಗೆಲ್ಲ ಮಾಡುವಂತೆ ಇತರರನ್ನೂ ಅದು ಪ್ರಚೋದಿಸುತ್ತದೆ. ಹೀಗೆ ಪ್ರಚೋದನೆಯನ್ನು ಸಮೃದ್ಧಿಯಾಗಿ ಪಡೆದುಕೊಂಡು, ನಮ್ಮನ್ನು ಅತ್ಯಂತ ತುಚ್ಛವಾಗಿ ನೋಡುವವರು ಎಂದರೆ ಬಂಧುಗಳೇ ಹೌದು ಎಂಬುದು ಸುಭಾಷಿತದ ಖಚಿತವಾದ ನಿಲವು.

ಹೀಗಾಗಿಯೇ ಅದು ಹೇಳುತ್ತಿರುವುದು ‘ಹುಲಿ ಆನೆ ಇವುಗಳಿಂದ ಕೂಡಿರುವುದೂ, ಜನರಿಲ್ಲದುದೂ, ವಿಪರೀತವಾದ ಮುಳ್ಳುಗಳಿಂದ ತುಂಬಿರುವುದೂ, ಹುಲ್ಲನ್ನೇ ಹಾಸಿಗೆಯನ್ನಾಗಿಸಿಕೊಂಡಿರುವುದೂ, ನಾರುಬಟ್ಟೆಯೇ ಉಡುಗೆಯಾದರೂ, ಕಾಡಿನ ವಾಸವೇ ವಾಸಿ; ಆದರೆ ಹಣವಿಲ್ಲದೆ ಬಂಧುಗಳ ಮಧ್ಯೆ ಬಾಳು ಬೇಡವೇ ಬೇಡ’ ಎಂದು. ಎಂದರೆ ಸುಭಾಷಿತ ಏಕಕಾಲದಲ್ಲಿ ಬಡತನದ ತೀವ್ರತೆಯನ್ನೂ ಹೇಳುತ್ತಿದೆ; ಬಂಧುಗಳ ನೀಚತನವನ್ನೂ ಹೇಳುತ್ತಿದೆ.

ನಾವು ಕಷ್ಟದಲ್ಲಿರುವಾಗ ನಮ್ಮನ್ನು ಕಾಪಾಡಬೇಕಾದವರು ಬಂಧುಗಳು. ಆದರೆ ಅವರೇ ನಮ್ಮ ಸಂಕಟವನ್ನು ಕಂಡು ಸಂತೋಷಪಡುತ್ತಾರೆಂಬುದು ಅತ್ಯಂತ ಖೇದಕರವಾದ ಸಂಗತಿ. ಹಣದ ಮುಂದೆ ಬಂಧುತ್ವ ಎಂಬುದು ಸಲ್ಲದ ನಾಣ್ಯವಾಗುತ್ತದೆ ಎಂಬುದನ್ನು ಒಪ್ಪಿಕೊಳ್ಳದೇ ವಿಧಿಯಿಲ್ಲ. ಆದರೆ ಎಲ್ಲ ಬಂಧುಗಳೂ ಹೀಗೇ ಇರುತ್ತಾರೆ ಎನ್ನುವಂತಿಲ್ಲ; ಮನುಷ್ಯತ್ವದಿಂದ ಇರುವವರೂ ಇದ್ದೇ ಇದ್ದಾರೆ. ಮಾತ್ರವಲ್ಲ, ನಮ್ಮ ಕಷ್ಟಕ್ಕೆ ಯಾರು ಸ್ಪಂದಿಸುತ್ತಾರೋ ಅವರೇ ದಿಟವಾದ ಬಂಧುಗಳು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು