ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಆರೋಗ್ಯದ ಗುಟ್ಟು

Last Updated 18 ಡಿಸೆಂಬರ್ 2020, 16:18 IST
ಅಕ್ಷರ ಗಾತ್ರ

ಮಾನಸಂ ಶಮಯೇತ್ತಸ್ಮಾತ್‌ ಜ್ಞಾನೇನಾಗ್ನಿಮಿವಾಂಬುನಾ ।

‍ಪ್ರಶಾಂತೇ ಮಾನಸೇ ಹ್ಯಸ್ಯ ಶಾರೀರಮುಪಶಾಮ್ಯತಿ ।।

ಇದರ ತಾತ್ಪರ್ಯ ಹೀಗೆ:

‘ನೀರಿನಿಂದ ಬೆಂಕಿಯನ್ನು ಆರಿಸುವಂತೆ, ಜ್ಞಾನದಿಂದ ಮನಸ್ಸಿನ ದುಃಖವನ್ನು ಶಾಂತಗೊಳಿಸಬೇಕು. ಮಾನಸದುಃಖ ಶಾಂತವಾದರೆ ದೇಹವೂ ಸ್ವಸ್ಥವಾಗುವುದು.’

ಪ್ರತಿಯೊಂದು ಸಮಸ್ಯೆಗೂ ಪರಿಹಾರವೊಂದು ಇದ್ದೇ ಇರುತ್ತದೆ. ಯಾವ ಸಮಸ್ಯೆಗೆ ಯಾವ ಪರಿಹಾರ ಎಂಬುದನ್ನು ನಾವು ಕಂಡುಕೊಳ್ಳಬೇಕು. ಜಗತ್ತಿನಲ್ಲಿ ಪ್ರತಿ ವಸ್ತುವಿಗೂ ಪ್ರತಿವಸ್ತುವೊಂದು ಇದ್ದೇ ಇರುತ್ತದೆ. ಇದನ್ನು ನಾವು ಕಂಡುಕೊಂಡದ್ದೇ ಆದರೆ ಆಗ ಆ ವಸ್ತುವಿನಿಂದ ಎದುರಾಗುವ ಸಮಸ್ಯೆಯನ್ನು ಪ್ರತಿವಸ್ತುವಿನ ಪ್ರಯೋಗದಿಂದ ಪರಿಹರಿಸಿಕೊಳ್ಳಬಹುದು. ಉದಾಹರಣೆಗೆ, ಕತ್ತಲಿಗೆ ಬೆಳಕು, ಖಾರಕ್ಕೆ ಸಿಹಿ, ಬೆಂಕಿಗೆ ನೀರು.

ಹೀಗೆಯೇ ಜೀವನದಲ್ಲಿ ನಮಗೆ ಎದುರಾಗುವ ಸಮಸ್ಯೆಗಳನ್ನು ಹೋಗಲಾಡಿಸಬಲ್ಲ ಪರಿಹಾರಗಳೂ ಇರುತ್ತವೆ. ನಮಗೆ ಎದುರಾಗುವ ಅತ್ಯಂತ ದೊಡ್ಡ ಸಮಸ್ಯೆ ಎಂದರೆ ದುಃಖ; ಅದರಲ್ಲೂ ಮನಸ್ಸಿಗೆ ಆಗುವ ಗಾಯದಿಂದ ಒದಗುವ ದುಃಖ. ಇದಕ್ಕೆ ಪರಿಹಾರ ಏನು? ಸುಭಾಷಿತ ಹೇಳುತ್ತಿದೆ: ಜ್ಞಾನವೊಂದೇ ಮನಸ್ಸಿನ ದುಃಖವನ್ನು ಹೋಗಲಾಡಿಸುತ್ತದೆ.

ಮನಸ್ಸಿಗೆ ಆಗುವ ದುಃಖಕ್ಕೆ ಮುಖ್ಯ ಕಾರಣ ಎಂದರೆ ನಮ್ಮ ತಿಳಿವಳಿಕೆಯ ಮಿತಿ. ಎಷ್ಟೋ ಸಂದರ್ಭದಲ್ಲಿ ನಮ್ಮ ತಪ್ಪಾದ ತಿಳಿವಳಿಕೆಯ ಕಾರಣದಿಂದಾಗಿಯೇ ದುಃಖಕ್ಕೆ ತುತ್ತಾಗುತ್ತಿರುತ್ತೇವೆ. ಆದುದರಿಂದ ಸರಿಯಾದ ತಿಳಿವಳಿಕೆ, ಎಂದರೆ ಜ್ಞಾನದಿಂದ ಮನಸ್ಸನ್ನು ಸಮಾಧಾನಸ್ಥಿತಿಗೆ ತಿರುಗಿಸಬಹುದು. ಸರಿಯಾದುದನ್ನು ತಪ್ಪು ಎಂದೂ, ತಪ್ಪಾದುದನ್ನು ಸರಿ ಎಂದೂ ತಿಳಿದುಕೊಂಡಾಗಲೇ ಸಮಸ್ಯೆ. ಹೀಗಲ್ಲದೆ ಯಥಾರ್ಥವನ್ನು ತಿಳಿದುಕೊಂಡರೆ ಸಮಸ್ಯೆಯೇ ಎದುರಾಗದು. ಹೀಗಾಗಿಯೇ ಸುಭಾಷಿತ ಹೇಳುತ್ತಿರುವುದು, ನಮ್ಮ ಮನಸ್ಸಿನ ದುಃಖವನ್ನು ಜ್ಞಾನದಿಂದ ಶಾಂತಗೊಳಿಸಿಕೊಳ್ಳಬೇಕು.

ಇದು ಹೇಗೆಂದರೆ, ಮನೆಗೆ ಬೆಂಕಿ ಬಿದ್ದಿದೆ; ಆಗ ಬೆಂಕಿಯನ್ನು ಆರಿಸಲು ಏನು ಮಾಡುತ್ತೇವೆ? ನೀರಿನ ಮೂಲಕ ಬೆಂಕಿಯನ್ನು ನಂದಿಸುತ್ತೇವೆ, ಅಲ್ಲವೆ? ಹೀಗೆಯೇ ಮನಸ್ಸಿಗೆ ಬಿದ್ದಿರುವ ಬೆಂಕಿಯನ್ನು ಜ್ಞಾನ ಎಂಬ ನೀರಿನಿಂದ ಆರಿಸಿ, ಉಪಶಮನಗೊಳಿಸಬೇಕು.

ಜೊತೆಗೆ ಸುಭಾಷಿತ ಇನ್ನೊಂದು ವಿಷಯವನ್ನೂ ಹೇಳುತ್ತಿದೆ. ಮನಸ್ಸಿನ ದುಃಖ ಮರೆಯಾದರೆ ಆಗ ನಮ್ಮ ಶರೀರದ ಆರೋಗ್ಯವೂ ಸ್ಥಿರವಾಗುತ್ತದೆ. ಆಧಿಗೂ ವ್ಯಾಧಿಗೂ ಇರುವ ಸಂಬಂಧವನ್ನು ಕೂಡ ಸುಭಾಷಿತ ಹೇಳುತ್ತಿದೆ. ಆಧಿ ಎಂದರೆ ಮನಸ್ಸಿಗೆ ಬರುವ ಕಾಯಿಲೆ; ವ್ಯಾಧಿ ಎಂದರೆ ದೇಹಕ್ಕೆ ಬರುವ ಕಾಯಿಲೆ.

ಸರಿಯಾದ ತಿಳಿವಳಿಕೆಯನ್ನು ಸಂಪಾದಿಸಿಕೊಂಡು ಮನಸ್ಸನ್ನು ಶಾಂತವಾಗಿರಿಸಿಕೊಳ್ಳೋಣ. ಮನಸ್ಸು ಸರಿಯಾಗಿದ್ದರೆ ದೇಹವೂ ಸರಿಯಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT