ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವಿಲ್ಲದ ಬಾಲರಾಮ ಶ್ರೀರಾಮ

Published 20 ಜನವರಿ 2024, 21:43 IST
Last Updated 21 ಜನವರಿ 2024, 22:47 IST
ಅಕ್ಷರ ಗಾತ್ರ

ಶ್ರೀಮದ್‌ ವಾಲ್ಮೀಕಿ ರಾಮಾಯಣದ ಆರಂಭ ಅಗುವುದೇ ಪ್ರಶ್ನೆಯಿಂದ. ಈ ಪ್ರಶ್ನೆ ಎಲ್ಲ ಕಾಲದ ಪ್ರಶ್ನೆಯಾಗಬೇಕು – ಎಂಬುದೇ ರಾಮಾಯಣದ ಆಶಯವೂ ಇದ್ದಂತೆ ತೋರುತ್ತದೆ. ಈ ಪ್ರಶ್ನೆಗೆ ಉತ್ತರವೇ ರಾಮ; ಅವನ ಚರಿತೆಯಾದ ರಾಮಾಯಣ.

‘ಧರ್ಮಮಾರ್ಗದಲ್ಲಿರುವ ವ್ಯಕ್ತಿ ಇಂದು ಯಾರಿದ್ದಾರೆ?’. ಈ ಪ್ರಶ್ನೆಯೇ ರಾಮಾಯಣದ ಮೊದಲ ಮಾತು. ರಾಮನಂಥ ಧರ್ಮಾತ್ಮ ಇನ್ನೊಬ್ಬನಿಲ್ಲ – ಎನ್ನುವುದೇ ರಾಮಾಯಣದ ಮೊದಲಲ್ಲೂ ಕೊನೆಯಲ್ಲೂ ಕಾಣುವ ಉತ್ತರ. 

ರಾಮಾಯಣ ಆರಂಭವಾಗುವುದು ಬಾಲಕಾಂಡದಿಂದ. ಇಲ್ಲಿ ರಾಮನ ಜನನದ ವಿವರಗಳಿವೆ. ಇಲ್ಲಿರುವ ಸ್ವಾರಸ್ಯವೆಂದರೆ, ರಾಮನ ಅವತಾರದ ವಿವರಗಳಿವೆ; ಆದರೆ ರಾಮನ ಬಾಲ್ಯದ ವಿವರಗಳಿಲ್ಲ! ರಾಮಾಯಣದ ‘ಬಾಲಕಾಂಡ’ದಲ್ಲಿ ರಾಮನ ಬಾಲ್ಯದ ವಿವರಗಳೇ ಇಲ್ಲ! ರಾಮನ ಧಾರ್ಮಿಕತೆ ನಮಗೆ ಅರ್ಥವಾದರೆ, ಆಗ ರಾಮಾಯಣದ ಈ ಸ್ವಾರಸ್ಯದ ಮಹತ್ವವೂ ತಿಳಿಯುತ್ತದೆ.

ರಾಮಾಯಣದ ಆರಂಭವಾಗುವುದೇ ಲೋಕದಲ್ಲಿ ಸಜ್ಜನನೊಬ್ಬನ ಇರುವಿಕೆಯ ಹುಡುಕಾಟದಿಂದ. ಈ ಸಜ್ಜನನ ಲಕ್ಷಣ ಎಂಥದು? ವಾಲ್ಮೀಕಿಮಹರ್ಷಿಗಳು ನಾರದಮಹರ್ಷಿಗಳಿಗೆ ಸಜ್ಜನನ ಗುಣಗಳ ಪಟ್ಟಿಯನ್ನೇ ಕೊಡುತ್ತಾರೆ. ‘ಅವನು ಗುಣವಂತನೂ ವೀರನೂ ಧರ್ಮವನ್ನು ಬಲ್ಲವನೂ ಆಗಿರಬೇಕು; ಕೃತಜ್ಞನೂ ಸತ್ಯವಾದಿಯೂ ಆಗಿರಬೇಕು; ದೃಢವಾದ ಸಂಕಲ್ಪಶಕ್ತಿಯನ್ನು ಹೊಂದಿರಬೇಕು; ಸದಾ ಸದಾಚಾರದಲ್ಲಿಯೇ ಇರಬೇಕು; ಎಲ್ಲರ ಹಿತವನ್ನು ಬಯಸುವವನಾಗಿರಬೇಕು; ವಿದ್ವಾಂಸನಾಗಿರಬೇಕು; ಜೊತೆಗೆ ಹಿಡಿದ ಕೆಲಸವನ್ನು ದಕ್ಷತೆಯಿಂದ ಮಾಡುವ ಸಾಮರ್ಥ್ಯವನ್ನು ಉಳ್ಳವನಾಗಿರಬೇಕು; ಎಲ್ಲರೂ ಅವನನ್ನು ನೋಡಿ ಆನಂದವನ್ನು ಪಡುವಂತಿರಬೇಕು; ಧೈರ್ಯಶಾಲಿಯೂ, ಕೋಪವನ್ನು ಗೆದ್ದವನೂ ಆಗಿರಬೇಕು; ಕಾಂತಿಯುಕ್ತನೂ ಅಸೂಯೆಯಿಲ್ಲದವನೂ ಆಗಿರಬೇಕು; ಇಂಥವನಿಗೆ ಕೋಪ ಬಂದರೆ ಅದರಿಂದ ದೇವತೆಗಳೂ ಭಯ ಪಡಬೇಕು.’ ಇಷ್ಟೆಲ್ಲ ಗುಣಗಳು ಇರುವವನೇ ಸಜ್ಜನ; ಧರ್ಮವಂತ. ಇಂಥವನು ಯಾರಿದ್ದಾನೆ ಎನ್ನುವುದೇ ಪ್ರಶ್ನೆ. ಇದಕ್ಕೆ ನಾರದರು ಕೊಟ್ಟ ಉತ್ತರ: ‘ಶ್ರೀರಾಮ’. ಇಷ್ಟೇ ಗುಣಗಳು ಅಲ್ಲ, ಇನ್ನೂ ಹಲವು ಗುಣಗಳ ಸಾಗರ ಶ್ರೀರಾಮ – ಎನ್ನುವಂತೆ ನಾರದರು ಮತ್ತಷ್ಟು ಗುಣಗಳು ರಾಮನಲ್ಲಿ ಹೇಗೆ ಆಶ್ರಯವನ್ನು ಪಡೆದಿವೆ ಎಂಬುದನ್ನು ಅಲ್ಲಿಯೇ ಹೇಳುತ್ತಾರೆ.

ರಾಮನ ಜನನ, ಅದು ಕೇವಲ ಜನನವಲ್ಲ; ಅದು ಅವತಾರ; ಭಗವಂತನ ಅವತಾರ; ದೇವರು ಭೂಮಿಗೆ ಇಳಿದು ಬರುವುದು. ಅವತಾರಕ್ಕೊಂದು ಸ್ಪಷ್ಟ ಉದ್ದೇಶವಿರುತ್ತದೆ. ಈ ವಿವರಗಳೆಲ್ಲ ‘ಬಾಲಕಾಂಡ’ದಲ್ಲಿ ಬಂದಿವೆ. ರಾಮನು ಅವತರಿಸಿದ ದಿನ ಅಯೋಧ್ಯೆಯಲ್ಲಿ ದೊಡ್ಡ ಉತ್ಸವವೇ ನಡೆದುದರ ಉಲ್ಲೇಖವೂ ಅಲ್ಲಿದೆ. ಆದರೆ ರಾಮ ಬಾಲ್ಯದಲ್ಲಿ ಹೇಗಿದ್ದ ಎಂಬ ವಿವರಗಳೇ ನಮಗೆ ರಾಮಯಣದಲ್ಲಿ ಸಿಗುವುದಿಲ್ಲ. ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನರು ಅನ್ಯೋನ್ಯವಾಗಿದ್ದರು; ಎಲ್ಲ ವಿದ್ಯೆಗಳನ್ನೂ ಕಲಿತರು; ಎಲ್ಲರಿಗೂ ಪ್ರೀತಿಪಾತ್ರರಾಗಿದ್ದರು. ಅದರಲ್ಲಿಯೂ ರಾಮ ಎಲ್ಲರಿಗೂ ಅಚ್ಚುಮೆಚ್ಚು – ಇಂಥ ವಿವರಗಳು ಇವೆಯೆ ಹೊರತು, ಅವರ ಬಾಲ್ಯದ ಸಹಜಸ್ವಭಾವಗಳು ಹೇಗಿದ್ದವು ಎಂಬುದರ ಸುಳಿವೇ ನಮಗೆ ಸಿಗದು. ರಾಮನು ಅರಮನೆಯಿಂದ ಮೊದಲು ಹೊರಗೆ ನಡೆದ ಸಂದರ್ಭವೇ ಸ್ವಾರಸ್ಯವಾಗಿದೆ. ರಾಮಾದಿಗಳಿಗೆ ಮದುವೆ ಮಾಡಬೇಕೆಂದು ದಶರಥ ಚಿಂತಿಸುತ್ತಿರುತ್ತಾನೆ. ಅದೇ ಸಮಯಕ್ಕೆ ಅರಮನೆಗೆ ವಿಶ್ವಾಮಿತ್ರರು ಬರುತ್ತಾರೆ. ರಾಮನನ್ನು ತಮ್ಮ ಸಂಗಡ ಕಳುಹಿಸಿಕೊಡುವಂತೆ ಕೇಳುತ್ತಾರೆ. ಜೀವನಚಕ್ರವಾದ ಯಜ್ಞಗಳಿಗೆ ರಾಕ್ಷಸರು ಅಡ್ಡಿಪಡಿಸುತ್ತಿರುತ್ತಾರೆ. ಈ ರಾಕ್ಷಸರನ್ನು ನಿಗ್ರಹಿಸಿ, ಯಜ್ಞಗಳನ್ನು ರಕ್ಷಿಸುವುದಕ್ಕಾಗಿ ರಾಮನ ಸಹಾಯವನ್ನು ಬಯಸಿ ವಿಶ್ವಾಮಿತ್ರರು ಬಂದಿರುತ್ತಾರೆ. ದಶರಥನು ರಾಮನನ್ನು ರಾಕ್ಷಸಸಂಹಾರದಂಥ ಕಷ್ಟದ ಕೆಲಸಕ್ಕೆ ರಾಮನನ್ನು ಕಳುಹಿಸಲು ಮೊದಲಿಗೆ ಒಪ್ಪುವುದಿಲ್ಲ. ವಿಶ್ವಾಮಿತ್ರಾದಿಗಳು ರಾಮನ ಪರಾಕ್ರಮವನ್ನೂ, ಅವತಾರದ ಹಿನ್ನೆಲೆಯನ್ನೂ ತಿಳಿಸಿಕೊಟ್ಟಮೇಲೆ ಒಪ್ಪುತ್ತಾನೆ; ರಾಮನ ಜೊತೆಗೆ ಲಕ್ಷ್ಮಣನೂ ಹೊರಡುತ್ತಾನೆ. ಹೀಗೆ ನಮಗೆ ರಾಮಾಯಣದಲ್ಲಿ ರಾಮನ ಮೊದಲ ಹೆಜ್ಜೆಗಳು ಕಾಣುವುದೇ ಪ್ರೌಢರಾಮನ ಹೆಜ್ಜೆಗಳಾಗಿ; ಅದೂ ದುಷ್ಟಶಿಕ್ಷಣಕ್ಕಾಗಿ ಇಟ್ಟ ಹೆಜ್ಜೆಗಳು. ರಾಮಲಕ್ಷ್ಮಣಾದಿಗಳ ಮದುವೆಯೊಂದಿಗೆ ಬಾಲಕಾಂಡ ಮುಗಿಯುತ್ತದೆ.

ಅನಂತರ ಅಯೋಧ್ಯಾಕಾಂಡ ಆರಂಭವಾಗುತ್ತದೆ. ಈ ಕಾಂಡ ಆರಂಭವಾಗುವುದೇ ರಾಮನಿಗೆ ಪಟ್ಟಾಭಿಷೇಕ ಮಾಡಬೇಕೆಂಬ ದಶರಥನ ಬಯಕೆಯಿಂದ. ಇಲ್ಲಿಯೂ ರಾಮನ ಲೋಕೋತ್ತರ ಗುಣಗಳ ದೊಡ್ಡ ಪಟ್ಟಿಯೇ ಬರುತ್ತದೆ. ಬಾಲಕಾಂಡದಲ್ಲಿ ವರ್ಣಿಸಿದ ಗುಣಗಳು ಮಾತ್ರವಲ್ಲದೆ, ಇನ್ನೂ ಹತ್ತಾರು ಗುಣಗಳ ವಿವರಗಳು ಇಲ್ಲಿವೆ. ಮುಂದೆ ಇಡಿಯ ರಾಮಾಯಣದುದ್ದಕ್ಕೂ ಈ ಗುಣಗಳ ಭಾಷ್ಯವನ್ನೇ ನಾವು ಕಾಣುವುದು. ಎಂದರೆ ಒಟ್ಟು ರಾಮಾಯಣದಲ್ಲಿ ಎಲ್ಲಿಯೂ ರಾಮನ ಬಾಲ್ಯದ ಲೀಲೆಗಳ ಅಥವಾ ಆಟಪಾಠಗಳ ವಿವರಣೆಯೇ ಇಲ್ಲ. ಇದೊಂದು ಗಮನಾರ್ಹ ಸಂಗತಿ. ಆದರೆ ಶ್ರೀಕೃಷ್ಣನ ಜೀವನದಲ್ಲಿ ಹೀಗೆ ಇಲ್ಲ; ಅವನ ಪ್ರೌಢಾವಸ್ಥೆಗೆ ಇರುವ ಮನ್ನಣೆಯೇ ಅವನ ಬಾಲ್ಯದ ಲೀಲೆಗಳಿಗೂ ಸಂದಿದೆ; ಇನ್ನೂ ಸ್ವಲ್ಪ ಹೆಚ್ಚೇ ಸಂದಿದೆ ಎಂದರೂ ತಪ್ಪಾಗದು. ಶ್ರೀರಾಮನ ಬಾಲ್ಯಕ್ಕೂ ಶ್ರೀಕೃಷ್ಣನ ಬಾಲ್ಯಕ್ಕೂ ಇರುವ ಈ ವ್ಯತ್ಯಾಸವನ್ನು ಮನನ ಮಾಡಿದಾಗ, ಈ ಎರಡು ಅವತಾರತತ್ತ್ವಗಳಿಗಿರುವ ವಿಶಿಷ್ಟತೆ ಎದ್ದುಕಾಣುತ್ತದೆ. ಕೃಷ್ಣನ ವ್ಯಕ್ತಿತ್ವ ತುಂಬ ಸಂಕೀರ್ಣವಾದುದು; ಅವನು ಯಾವಾಗ ಹೇಗೆ ನಡೆದುಕೊಳ್ಳುತ್ತಾನೆ ಎಂದು ಊಹಿಸಲು ಸಾಧ್ಯವಿಲ್ಲ; ಅವನು ‘ಹೇಗೂ’ ನಡೆದುಕೊಳ್ಳಬಹುದು. ಆದರೆ ರಾಮನ ವ್ಯಕ್ತಿತ್ವ ಹಾಗಲ್ಲ; ಅವನದ್ದು ಋಜುಮಾರ್ಗ, ಸರಳರೇಖೆಯಂತೆ; ಅವನು ಯಾವ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬಹುದು ಎಂಬುದನ್ನು ನಾವು ಆರಂಭದಲ್ಲಿಯೇ ಊಹಿಸಬಹುದು; ಅವನದ್ದು ’ಹೀಗೇ’ ಎಂದು ಹೇಳಬಹುದಾದ ನಿಲವು. ಇದನ್ನು ನಾವು ‘ಅಯೋಧ್ಯಾಕಾಂಡ’ದಲ್ಲಿಯೇ ಸ್ಪಷ್ಟವಾಗಿ ಕಾಣುತ್ತೇವೆ. ರಾಮನನ್ನು ವಾಲ್ಮೀಕಿಗಳು ಧರ್ಮದ ಮೂರ್ತರೂಪ ಎಂದಿದ್ದಾರೆ. ಅದರ ಅರ್ಥ ಏನು ಎಂಬುದು ನಮಗೆ ಅಯೋಧ್ಯಾಕಾಂಡದ ರಾಮನಲ್ಲಿ ತಿಳಿಯುತ್ತದೆ. ರಾಮನು ವನವಾಸಕ್ಕೆ ಹೊರಟು ನಿಂತಿದ್ದಾನೆ. ಆಗ ಅವನು ಹೇಗೆ ಕಾಣುತ್ತಿದ್ದ ಎಂಬುದನ್ನು ವಾಲ್ಮೀಕಿಗಳ ಹೇಳುತ್ತಾರೆ: ’ನಿನಗೆ ಪಟ್ಟಾಭಿಷೇಕ ಎಂದಾಗ ರಾಮನ ಮುಖ ಹೇಗಿತ್ತೋ, ಈಗ ಅವನು ವನವಾಸಕ್ಕೆ ಹೋಗುವ ಸಂದರ್ಭದಲ್ಲೂ ಅದು ಹಾಗೆಯೇ ಇದೆ; ಸ್ವಲ್ಪವೂ ವ್ಯತ್ಯಾಸವಾಗಿಲ್ಲ.’ ಇದನ್ನು ಅಯೋಧ್ಯೆಯ ಜನರೇ ಗಮನಿಸುತ್ತಾರೆ ಎನ್ನುವುದೂ ಸ್ವಾರಸ್ಯಕರ. ಆಗ ರಾಮ ಹೇಗಿದ್ದ, ಈಗ ರಾಮ ಹೇಗಿದ್ದ – ಇದು ನಮ್ಮ ಊಹೆಗೆ ಬಿಟ್ಟದ್ದು. ಆದರೆ ಅವನು ಎರಡೂ ಸಂರ್ಭದಲ್ಲಿ ಒಂದೇ ರೀತಿಯಲ್ಲಿದ್ದ. ಮುಂದೆ ಇನ್ನೊಂದು ಮಾತು ಬರುತ್ತದೆ: ರಾಮನಿಗೆ ಅಡವಿಯೂ ಅಯೋಧ್ಯೆಯೂ ಎರಡೂ ಒಂದೇ; ಅವನು ಎಲ್ಲಿದ್ದರೂ ಸಂತೋಷವಾಗಿರುತ್ತಾನೆ. ರಾಮನದ್ದು ಇಂಥ ದೃಢತೆ; ಯಾವ ಸಂದರ್ಭದಲ್ಲೂ ಬದಲಾಗದ ವ್ಯಕ್ತಿತ್ವ.

ರಾಮನ ಈ ಲೋಕೋತ್ತರಗುಣಕ್ಕೆ ಕಾರಣವಾದರೂ ಏನು? ಅವನು ಧರ್ಮಜ್ಞ; ಧರ್ಮವನ್ನು ತಿಳಿದವನು. ಧರ್ಮಕ್ಕೆ ಬಾಲ್ಯದ ಚೇಷ್ಟೆಗಳಾಗಲೀ, ವೃದ್ಧಾಪ್ಯದ ಬಲಹೀನತೆಯಾಗಲೀ ಇರುವುದಿಲ್ಲ; ಅದು ಯಾವಾಗಲೂ ಪ್ರಬುದ್ಧವಾಗಿಯೇ ಇರುತ್ತದೆ. ರಾಮ ಅಂಥ ಧರ್ಮದ ಮೂರ್ತರೂಪ. ಎಂಥವರಾದರೂ ಆಟದ ವಿನೋದಕ್ಕಾಗಿಯೋ ಗೆಲುವಿಗಾಗಿಯೋ ಜಾಣ್ಮೆಯಿಂದ ನಡೆದುಕೊಳ್ಳಬಹುದು, ವಂಚಿಸಬಹುದು, ಸುಳ್ಳು ಹೇಳಬಹುದು. ಬಾಲ್ಯದ ಪ್ರಧಾನ ಗುಣವೇ ಆಟ; ಎಂದರೆ ತಪ್ಪು ಹೆಜ್ಜೆಗಳು. ಆದರೆ ರಾಮನ ವ್ಯಕ್ತಿತ್ವಕ್ಕೆ ಇಂಥ ತಪ್ಪು ಹೆಜ್ಜೆಗಳು ಸಲ್ಲವು; ಅವನು ಆಟಕ್ಕಾದರೂ ಯಾರ ದಿಕ್ಕನ್ನೂ ತಪ್ಪಿಸುವುದಿಲ್ಲ, ಯಾರಿಗೂ ವಂಚಿಸುವುದಿಲ್ಲ; ಅಂಥ ಪರಿಪೂರ್ಣ ವ್ಯಕ್ತಿತ್ವ ಅವನದ್ದು. ಹೀಗಾಗಿಯೇ ವಾಲ್ಮೀಕಿಮಹರ್ಷಿಗಳು ರಾಮನ ಬಾಲ್ಯವನ್ನೇ ಚಿತ್ರಿಸಲಿಲ್ಲ ಎಂದೆನಿಸುತ್ತದೆ. 

ಬಾಲ್ಯವೇ ಇಲ್ಲದ ವ್ಯಕ್ತಿತ್ವ ಶ್ರೀರಾಮನದ್ದು. ಈಗ ಅಂಥ ರಾಮನು ಬಾಲರಾಮನ ಆಕಾರದಲ್ಲಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿದೆ. ಬಾಲ್ಯದ ಲೋಪದೋಷಗಳೂ ಇಲ್ಲದ ಅವನ ಧರ್ಮದ ಪ್ರಬುದ್ಧ ಹೆಜ್ಜೆಗಳು ನಮ್ಮ ಜೀವನದ ಬೆಳಕಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT