ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ: ತ್ರಿದೇವಿಯರು ಉಮೆಯ ಅಂಶ

ಅಕ್ಷರ ಗಾತ್ರ

ಬ್ರಹ್ಮ-ವಿಷ್ಣುವಿಗೆ ಅವರ ಕರ್ತವ್ಯಗಳೇನು ಎಂಬುದನ್ನು ಮಹೇಶ್ವರ ಮುಂದುವರೆದು ಹೀಗೆ ಹೇಳುತ್ತಾನೆ:

‘ಮೂಲಪ್ರಕೃತಿಯೆನಿಸಿದ ಉಮಾ ಎಂಬ ಹೆಸರಿನಿಂದ ಬೆಳಗುತ್ತಿರುವ, ಈ ಪರಮೇಶ್ವರಿಯ ಒಂದು ಶಕ್ತಿಯೇ ಮೂರು ಶಕ್ತಿಯಾಗುವುದು. ಈ ಪ್ರಕೃತಿಮಾತೆಯಾದ ಉಮೆಯಿಂದ ಉದಯಿಸಿದ ಒಂದು ಶಕ್ತಿ ವಾಗ್ದೇವಿಯಾದ ಸರಸ್ವತಿ ಎನಿಸಿಕೊಂಡು, ಬ್ರಹ್ಮನನ್ನು ವರಿಸುವಳು. ಉಮೆಯಿಂದ ಉದಯಿಸಿದ ಮತ್ತೊಂದು ಶಕ್ತಿಯು ಲಕ್ಷ್ಮಿಯ ರೂಪವನ್ನು ತಳೆದು ವಿಷ್ಣುವನ್ನು ಆಶ್ರಯಿಸುವಳು. ಮತ್ತೆ ಆ ಪ್ರಕೃತಿಯೇ ಕಾಳಿ ಎಂಬ ಹೆಸರಿನಿಂದ ನನ್ನಂಶವಾದ ಹರನನ್ನು ಹೊಂದುವಳು.’

‘ನಿಮ್ಮೀರ್ವರಿಗೆ ಪರಮಶುಭಕರವಾದ ದೇವಿಯ ಶಕ್ತಿಗಳನ್ನು ಹೇಳಿದುದಾಯಿತು. ಈ ಮೂವರೂ ಸೃಷ್ಟಿ-ಸ್ಥಿತಿ-ಸಂಹಾರಕಾರ್ಯಗಳಲ್ಲಿ ನಿಮಗೆ ನೆರವಾಗುವರು. ಓ ಸುರಶ್ರೇಷ್ಠ, ನನ್ನ ಪ್ರಿಯೆಯಾದ ಈ ಪ್ರಕೃತಿಯ ಅಂಶಗಳೇ ತ್ರಿದೇವಿಯರೆಂದು ತಿಳಿ’ ಎಂದ ಶಿವ, ಮತ್ತೆ ಬ್ರಹ್ಮ ಮತ್ತು ವಿಷ್ಣುವಿನ ಕಾರ್ಯವನ್ನು ಹೀಗೆ ತಿಳಿಸಿದ.

‘ವಿಷ್ಣು ನೀನು ಪ್ರಕೃತಿಯ ಅಂಶಭೂತಳಾದ ಲಕ್ಷ್ಮಿಯನ್ನು ಆಶ್ರಯಿಸಿ, ನಿನ್ನ ಪಾಲನಾಕೆಲಸವನ್ನು ಮಾಡು. ಎಲೈ ಬ್ರಹ್ಮನೇ, ನೀನು ಪ್ರಕೃತ್ಯಂಶಳಾದ ಸರಸ್ವತಿಯನ್ನು ಹೊಂದಿ, ನಿನ್ನ ಸೃಷ್ಟಿಕಾರ್ಯವನ್ನು ನೆರವೇರಿಸು. ನಾನು ನನ್ನ ಪ್ರಿಯೆಯ ಅಂಶಭೂತಳೂ, ಪರಾತತ್ಪರಳೂ ಆದ ಕಾಳಿಯ ಸಹಾಯದೊಡನೆ, ರುದ್ರರೂಪದಿಂದ ಉತ್ತಮವಾದ ಪ್ರಳಯ ಕಾರ್ಯವನ್ನೆಸಗುವೆ.

‘ಈ ಪ್ರಪಂಚವು ನಾಲ್ಕು ಬಗೆಯ ವರ್ಣಗಳಿಂದ ಕೂಡಿದೆ. ಬ್ರಹ್ಮಚರ್ಯ, ಗೃಹಸ್ಥ ಮೊದಲಾದ ನಾಲ್ಕು ಆಶ್ರಮಗಳಿಂದಲೂ ಕೂಡಿದೆ. ಇದಲ್ಲದೆ ಇನ್ನೂ ವಿಧವಿಧವಾದ ಕೆಲಸಗಳಿಂದ ನೀವು ಸುಖವನ್ನು ಪಡೆಯುವಿರಿ. ವಿಷ್ಣು ನೀನು ನನ್ನ ಅಪ್ಪಣೆಯಂತೆ ಜ್ಞಾನವಿಜ್ಞಾನಗಳನ್ನುಳ್ಳವನಾಗಿ ಪ್ರಪಂಚಕ್ಕೆ ಹಿತವನ್ನೆಸಗುತ್ತಾ ಎಲ್ಲರಿಗೂ ಮುಕ್ತಿಯನ್ನು ನೀಡುವವನಾಗು. ನನ್ನನ್ನು ದರ್ಶನಮಾಡಿದರೆ ಯಾವ ಫಲ ಲಭಿಸುವುದೋ, ನಿನ್ನನ್ನು ದರ್ಶಿಸಿದರೂ ಅದೇ ಫಲ ಲಭಿಸಲಿ. ಹೀಗೆಂದು ನಿನಗೆ ವರವನ್ನು ಕೊಟ್ಟಿದ್ದೇನೆ. ಇದು ನಿಜ, ಸಂಶಯವಿಲ್ಲ. ಈ ಮಾತು ಸತ್ಯವಾದುದು.

‘ನನ್ನ ಹೃದಯದಲ್ಲಿಯೇ ವಿಷ್ಣು ಇರುವನು. ವಿಷ್ಣುವಿನ ಹೃದಯದಲ್ಲಿ ನಾನಿರುವೆನು. ನಮ್ಮೀರ್ವರಲ್ಲಿ ಯಾರು ಭೇದೆವೆಣಿಸುವರೊ, ಅವರು ನನ್ನ ಹೃದಯ ಅರಿಯಲಾರರು. ಹರಿ ನನ್ನ ಎಡಭಾಗದಿಂದ ಹುಟ್ಟಿದರೆ, ಬ್ರಹ್ಮ ಬಲಭಾಗದಿಂದ ಹುಟ್ಟಿದ. ಮಹಾಪ್ರಳಯಕರ್ತನೂ ವಿಶ್ವಾತ್ಮಕನೂ ಆದ ರುದ್ರನು ನನ್ನ ಹೃದಯದಿಂದ ಹುಟ್ಟಿದವನು.

‘ಎಲೈ ವಿಷ್ಣುವೇ, ಸತ್ವ-ರಜಸ್-ತಮಸ್ಸುಗಳೆಂಬ ಮೂರು ಗುಣಗಳನ್ನು ಅವಲಂಬಿಸಿ, ಸೃಷ್ಟಿ-ಸ್ಥಿತಿ-ಸಂಹಾರ ಕೃತ್ಯಗಳನ್ನೆಸಗುತ್ತೇನೆ. ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ಹೆಸರಿನಿಂದ ನಾನೇ ನಿಮ್ಮ ರೂಪದಲ್ಲಿ ಮಾಯವಾಗಿ ತೋರುತ್ತೇನೆ. ಗುಣಗಳಿಗೆ ಸಿಲುಕದ ಸಾಕ್ಷಾತ್ ಶಿವನೇ, ಪ್ರಕೃತಿಗೂ ಪುರುಷನಿಗೂ ಮೇಲಾದವನು. ಆತನೇ ಪರಬ್ರಹ್ಮವು-ಅಭಿನ್ನನು-ಅನಂತನು-ಪೂರ್ಣನು-ನಿರ್ಲೇಪನು.

‘ಮೂರು ಲೋಕಗಳಿಗೂ ಪಾಲಕನಾದ ಹರಿಯು ಒಳಗೆ ತಮೋಗುಣವುಳ್ಳವನೂ, ಬಾಹ್ಯದಲ್ಲಿ ಸತ್ತ್ವಗುಣವುಳ್ಳವನೂ ಆಗಿರುವನು. ಲಯಕರ್ತೃನಾದ ಹರನು, ಅಂತಃಸ್ಸತ್ವಗುಣವುಳ್ಳವನೂ, ಹೊರಗೆ ತಮೋಗುಣವುಳ್ಳವನೂ, ಆಗಿರುವನು. ಮೂರು ಜಗತ್ತುಗಳನ್ನೂ ಸೃಷ್ಟಿಸುವ ಬ್ರಹ್ಮನು ಒಳಗೂ ಹೊರಗೂ, ರಜೋಗುಣವುಳ್ಳವನು. ಹೀಗೆ ತ್ರಿಮೂರ್ತಿಗಳಲ್ಲಿ ಭಿನ್ನ ಗುಣಗಳಿದ್ದರೆ, ಶಿವನೊಬ್ಬನೇ ಗುಣಗಳಿಗೆ ಅತೀತನಾದವನು.

‘ಎಲೈ ವಿಷ್ಣುವೇ, ನೀನು ಈ ಸೃಷ್ಟಿಕರ್ತನಾದ ಪಿತಾಮಹನನ್ನು ಪ್ರೀತಿಯಿಂದ ಪರಿಪಾಲಿಸು. ನನ್ನ ಅಪ್ಪಣೆಯಂತೆ ಮೂರು ಲೋಕಗಳಲ್ಲಿಯೂ ನೀನು ಪೂಜಿಸಲ್ಪಡುತ್ತೀಯೆ. ನಿನಗೂ ಮತ್ತು ಬ್ರಹ್ಮನಿಗೂ ರುದ್ರನೇ ಪೂಜ್ಯನು. ಮೂರು ಲೋಕಗಳಿಗೂ ಲಯಕಾರಕನಾದ ರುದ್ರನು, ಶಿವನ ಪೂರ್ಣಾವತಾರವಾಗಿರುತ್ತಾನೆ’ ಎನ್ನುತ್ತಾನೆ. ನಂತರ ವಿಷ್ಣುವನ್ನುದ್ದೇಶಿಸಿ ‘ಈ ಪಿತಾಮಹನಾದ ಬ್ರಹ್ಮನು ಮುಂಬರುವ ಪದ್ಮಕಲ್ಪದಲ್ಲಿ ನಿನಗೆ ಮಗನಾಗುವನು. ಆಗ ನೀನೂ ಮತ್ತು ಈ ಬ್ರಹ್ಮನೂ ನನ್ನನ್ನು ಕಾಣುವಿರಿ’ ಎಂದು ತಿಳಿಸುತ್ತಾನೆ.

ಹೀಗೆ ಪುತ್ರ ನಾರದನ ಕೋರಿಕೆ ಮೇರೆಗೆ ಶಿವತತ್ವ ಬೋಧಿಸುವಾಗ ಬ್ರಹ್ಮನು ‘ಮಹೇಶ್ವರನಾದ ಆ ಶಿವನು, ಅಸದಳವಾದ ಕೃಪೆಯನ್ನಿಟ್ಟು ನಮ್ಮ ಹುಟ್ಟು-ಕಾರ್ಯ ಭಾರಗಳನ್ನೆಲ್ಲಾ ಪ್ರೀತಿಯಿಂದ ತಿಳಿಸಿದ’ ಎಂದು ಪರಮೇಶ್ವರನ ಗುಣಗಾನ ಮಾಡುತ್ತಾನೆ. ಇಲ್ಲಿಗೆ ಸೃಷ್ಟಿಖಂಡದ ಶಿವತತ್ವವರ್ಣನ’ಎಂಬ ಒಂಭತ್ತನೆಯ ಅಧ್ಯಾಯ ಮುಗಿಯುತ್ತದೆ.l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT