ಮಂಗಳವಾರ, ಆಗಸ್ಟ್ 3, 2021
27 °C

ಗುರುವಿನ ಅನುಗ್ರಹ ಎಲ್ಲರಿಗೂ ಬೇಕು

ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು Updated:

ಅಕ್ಷರ ಗಾತ್ರ : | |

Prajavani

ಶ್ರೀಮದ್ಭಾಗವತದಲ್ಲಿ ಒಂದು ಪ್ರಸಂಗ ಬರುತ್ತದೆ. ಒಮ್ಮೆ ಇಂದ್ರನ ಸಭೆಗೆ ಗುರುಗಳಾದ ಬೃಹಸ್ಪತ್ಯಾಚಾರ್ಯರು ಬಂದರು. ಆದರೆ ಅವರಿಗೆ ಅವನು ಗೌರವವನ್ನು ಕೊಡಲಿಲ್ಲ. ಗುರುಗಳಿಗೆ ಬೇಸರ ಬಂದು ಹೊರಟುಹೋದರು. ಇಂದ್ರನ ಈ ವರ್ತನೆಗೆ ಕಾರಣವಾದದ್ದು ಅವನು ಮೂರು ಲೋಕಗಳ ಅಧಿಪತಿ ಎಂಬ ಮದ. ಈ ಮದದ ಕಾರಣದಿಂದಲೇ ಅವನು ಗುರುಗಳಿಗೆ ಗೌರವ ಕೊಡಬೇಕೆಂಬ ಸತ್ಪಥದಿಂದ ವಿಮುಖವಾದದ್ದು. ಅಚಾತುರ್ಯ ನಡೆದುಹೋದಮೇಲೆ ಮೇಲೆ ಅವನಿಗೆ ಎಚ್ಚರವಾಯಿತು; ಆದರೆ ಗುರುಗಳು ಹೊರಟುಹೋಗಿದ್ದಾರೆ. ಈ ವಿಷಯ ಅಸುರರಿಗೆ ತಿಳಿಯಿತು. ಇಂದ್ರನಿಗೆ ಈಗ ಗುರುಗಳ ಅನುಗ್ರಹ ಇಲ್ಲ – ಎಂದು ತಿಳಿದು ಅವನ ಮೇಲೆ ದಾಳಿ ಮಾಡಿ ಅವನನ್ನು ಪಥಭ್ರಷ್ಟನನ್ನಾಗಿಸಿದರು. ಬಳಿಕ ವಿಶ್ವರೂಪಾಚಾರ್ಯರ ಮಾರ್ಗದರ್ಶನದಲ್ಲಿ ’ನಾರಾಯಣವರ್ಮ‘ದ ಉಪದೇಶವಾಗುತ್ತದೆ. ಅದರ ಅನುಷ್ಠಾನದ ಬಳಿಕ ಅವನಿಗೆ ಗುರುವಿನ ಅನುಗ್ರಹ ಒದಗಿ, ಮತ್ತೆ ಅವನ ಪದವಿ ಸಿಗುತ್ತದೆ. ಇದರ ತಾತ್ಪರ್ಯ, ಎಷ್ಟೋ ದೊಡ್ಡವನಾದರೂ ಎಂಥ ಅಧಿಕಾರದಲ್ಲಿದ್ದರೂ ಗುರುವಿನ ಅನುಗ್ರಹ ಇಲ್ಲದಿದ್ದರೆ ಪ್ರಯೋಜನವಿಲ್ಲ ಎನ್ನುವುದು.

ಚಾತುರ್ಮಾಸ್ಯವ್ರತ – ಇದು ಸಾಧನೆಯ ವ್ರತ. ಮೊನ್ನೆಯ ಏಕಾದಶಿಯನ್ನು ’ಶಯನೀಯ ಏಕಾದಶಿ‘ ಎನ್ನುತ್ತಾರೆ. ಅಂದು ಭಗವಂತ ಯೋಗನಿದ್ರೆಗೆ ತೆರಳುವ ದಿವಸ. ಇದು ನಮ್ಮ ನಿದ್ರೆಯಂಥದಲ್ಲ; ಇದನ್ನು ಗಮನಿಸಬೇಕು. ಪ್ರಬೋಧಿನೀ ಏಕಾದಶಿಯಂದು ಭಗವಂತ ಯೋಗನಿದ್ರೆಯಿಂದ ಏಳುತ್ತಾನೆ. ಈ ನಡುವಿನ ನಾಲ್ಕು ತಿಂಗಳ ಅವಧಿಯನ್ನೇ ಚಾತುರ್ಮಾಸ್ಯ ಎಂದು ಕರೆಯುವುದು. ಈ ಕಾಲ ನಮ್ಮ ವೈಯಕ್ತಿಕ ಸಾಧನೆಯನ್ನು ಮಾಡಲು ಪ್ರಶಸ್ತ ಕಾಲ. ಯತಿಗಳಿಗೆ ಮತ್ತೂ ವಿಶೇಷ ವ್ರತ. ಸದಾ ಸಂಚಾರದಲ್ಲಿಯೇ ಇರುವ ಯತಿಗಳು ಒಂದೆಡೆ ಇದ್ದು ಸಾಧನೆಯಲ್ಲಿ ತೊಡಗಿಕೊಳ್ಳುವ ಸಮಯವಿದು. 

ಚಾತುರ್ಮಾಸ್ಯವ್ರತದ ಮಹತ್ವ ಕೊರೊನಾ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚು ಸ್ಪಷ್ಟವಾಗುತ್ತದೆ. ಕಟ್ಟುನಿಟ್ಟಿನ ನಿಯಮಗಳು, ಆಹಾರದ ನಿಯಮಗಳು ಇವೆಲ್ಲವೂ ಜೀವನದಲ್ಲಿ ಅಗತ್ಯ. ನಮಗೆ ಇದೇ ಬೇಕು ಎಂಬ ಹಠಕ್ಕೆ ಬಿದ್ದಿರುತ್ತೇವೆ. ನಮ್ಮ ಮೇಲೆ ನಾವು ಸಂಯಮವನ್ನು ಸಾಧಿಸಲು ಚಾತುರ್ಮಾಸ್ಯವ್ರತ ಪೂರಕವಾಗಿದೆ.

– ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಪೇಜಾವರ ಮಠ, ಉಡುಪಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು