ಮಂಗಳವಾರ, ಜೂನ್ 28, 2022
25 °C

ಕೊರೊನಾ ಕಹಿ ಕರಗಲಿ ಸಹಜ ಬದುಕಿನ ಸಿಹಿ ಬರಲಿ

ಪದ್ಮನಾಭ ಭಟ್ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ‘ಕಹಿ‘ಯೊಂದಿಗೆ ಯುಗಾದಿಯ ಸಿಹಿ ಹಂಚಬೇಕಿದೆ. ಕಹಿಯ ನಂತರ ಬರುವ ಬೆಲ್ಲದ ಸಿಹಿ ನಮ್ಮೆಲ್ಲರನ್ನೂ ಪೊರೆಯಲಿದೆ ಎಂಬ ನಂಬಿಕೆಯಲ್ಲಿ ಕಾಯೋಣ. ಕೊರೊನಾ ಕಹಿ ಬೇಗ ಕರಗಿ; ಸಹಜ ಬದುಕಿನ ಸಿಹಿ ಸಿಗಲಿ ಎಂಬ ಪ್ರಾರ್ಥಿಸೋಣ

ಯುಗಾದಿ ಅಂದಾಕ್ಷಣ ಮೊದಲಿಗೆ ನೆನಪಾಗುವುದು ಬೇಂದ್ರೆ ಅಜ್ಜನ ‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಹಾಡು. ಈಗಲೂ ನಾವು ಹೊಸದೊಂದು ಯುಗಾದಿಯ ಹೊಸ್ತಿಲಲ್ಲಿ ನಿಂತಿದ್ದೇವೆ. ಆದರೆ 'ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ’ ಎಂದು ಹಾಡನ್ನು ಮುಂದುವರಿಸಲು ಹೋದರೆ ಗಂಟಲು ಕಟ್ಟಿ ಧ‍್ವನಿ ಗದ್ಗದಿತವಾಗುತ್ತದೆ. ಇದು ಹೊಸ ಯುಗಾದಿಯೇನೋ ಹೌದು; ಆದರೆ ಹರುಷದ ಯುಗಾದಿಯಂತೂ ಅಲ್ಲ. ಇಣುಕುತ್ತಿರುವ ವಸಂತ ಋತುವಿನ ಜೀವದುಂಬಿದ ನೃತ್ಯಕ್ಕೆ ತಲೆದೂಗುವ ಸಾವಧಾನ ಯಾರಲ್ಲೂ ಉಳಿದಿಲ್ಲ. ಚೈತ್ರದ ಚಿಗುರೂ ಎದೆಯಲ್ಲಿ ಹರ್ಷದ ತಳಿರನ್ನು ನೇಯುತ್ತಿಲ್ಲ. ಹೊಸ ವರುಷಕೆ, ಹೊಸ ಹರುಷಕೆ, ಹೊಸ ದೆಸೆಯ ಜೀವನಹರಿವಿಗೆ ಶುಭಾರಂಭವಾಗಬೇಕಾಗಿದ್ದ ಯುಗಾದಿಗೆ ಕೊರೊನಾ ಎಂಬ ಗ್ರಹಣ ಮುತ್ತಿಕೊಂಡಿದೆ. 'ಲಾಕ್ ಡೌನ್’ ಎಂಬ ಶಬ್ದ ಎಲ್ಲರ ಮುಖದ ಮೇಲಿನ ನಗುವಿನ ನೆತ್ತಿಯ ಮೇಲೆ ಸುತ್ತಿಗೆಯಲ್ಲಿ ಹೊಡೆದಿದೆ. ಮನುಷ್ಯರನ್ನು ಸಂಭ್ರಮದ ಬಂಧನದಲ್ಲಿ ಹತ್ತಿರ ತರುವ ಹಬ್ಬದಲ್ಲಿ 'ದೂರದಲ್ಲಿರಿ; ಕ್ಷೇಮವಾಗಿರಿ’ ಎಂಬ ಎಚ್ಚರಿಕೆಯ ಮಾತುಗಳು ಕೇಳುತ್ತಿವೆ.

ಜಗವೆಲ್ಲ ಮರಣಭೀತಿಯಿಂದ ತತ್ತರಿಸುತ್ತಿರುವಾಗ 'ಯುಗಾದಿ’ ಹಬ್ಬದ ಸಂಭ್ರಮಕ್ಕೆ ಅರ್ಥವಿದೆಯೇ? ಸಾವಿನ ನೆರಳಲ್ಲಿ ಕೂತು ಸಿಹಿಯನ್ನು ಚಪ್ಪರಿಸುವುದು ತರವೇ? ಯುಗಾದಿ ಎಂದರೆ ಯುಗದ ಆದಿ. ಆದರೆ ನಮ್ಮ ಸುತ್ತಲಿನ ಜಗತ್ತಿನ ಲಕ್ಷಣಗಳು ಯುಗದ ಅಂತ್ಯವನ್ನೇ ಸೂಚಿಸುತ್ತಿರುವಂತಿದೆಯಲ್ಲವೇ?

ಈ ಎಲ್ಲ ಪ್ರಶ್ನೆಗಳನ್ನೂ ಎದುರಿಟ್ಟುಕೊಂಡೇ ಯುಗಾದಿ ಹಬ್ಬವನ್ನು ಎದುರುಗೊಳ್ಳಲು ಸಾಧ್ಯವಿದೆ? ನಮ್ಮ ಸಂಸ್ಕೃತಿ, ಆಚರಣೆಗಳ ಲ್ಲಿಯೇ ಇಂಥ ಧರ್ಮಸಂಕಟಗಳನ್ನು ಎದುರುಗೊಳ್ಳಲು ಬೇಕಾದ ಸತ್ವಸ್ಥಾನಗಳಿವೆ.

ಯುಗಾದಿ ಬರಿಯ ಬೆಲ್ಲದ ಹಬ್ಬವಲ್ಲ. ಬೆಲ್ಲಕ್ಕಿಂತ ಮೊದಲು ಉಲ್ಲೇಕಿಸುವುದು ಬೇವನ್ನಲ್ಲವೇ? ಕಹಿಯನ್ನು ನುಂಗಿದ ಮೇಲೆಯೇ ಅಲ್ಲವೇ ಸಿಹಿಯು ನಾಲಿಗೆಯನ್ನು ಮುಟ್ಟುವುದು? ಕೊರೊನಾ ಎಂಬ ಕಹಿಯನ್ನು ಎದುರಿಟ್ಟುಕೊಂಡೇ ಯುಗಾದಿಯನ್ನು ಅರ್ಥಪೂರ್ಣವಾಗಿ ಆಚರಿಸುವುದು ಸಾಧ್ಯವಿಲ್ಲವೇ? ಹಬ್ಬದ ಆಚರಣೆ ಎನ್ನುವುದು ಸಾಂಪ್ರದಾಯಿಕವಾದ ದೈವೀಕಾರ್ಯದ ಕೈಕರಣಗಳು ಮತ್ತು ತಿನಿಸುಗಳಲ್ಲಿ ಮಾತ್ರವೇ ಸಾರ್ಥಕಗೊಳ್ಳುವುದೇ?

ಯುಗಾದಿ ಮನುಷ್ಯನ ಆಚರಣೆಯ ಹಬ್ಬ ಮಾತ್ರವಲ್ಲ; ಅದು ನಿಸರ್ಗವೇ ಆಚರಿಸಿಕೊಳ್ಳುವ ಹಬ್ಬ. ಋತುಮಾನದ ತಿರುವಿನಲ್ಲಿ ನಿಂತು ಮೈಕೊಡವಿಕೊಂಡು ಹೊಸ ಬಟ್ಟೆ ಉಟ್ಟು ಸಂಭ್ರಮಿಸುವ ಪ್ರಕೃತಿಯ ಸೃಷ್ಟಿನರ್ತನದ ಹಬ್ಬ. ಆದರೆ ಆ ಹಬ್ಬದ ಸಂಭ್ರಮವನ್ನು ನಾವು ಕಿತ್ತುಕೊಳ್ಳಲು ತೊಡಗಿ ಯಾವ ಕಾಲವಾಯಿತು ನೆನಪಿಸಿಕೊಳ್ಳಿ. ನಮ್ಮ ಮನೆ ಎದುರಿಗೆ ಅಪ್ಪುಗೆಗೆ ಸಿಗದಷ್ಟು ಬೃಹತ್ ಬೇವಿನ ಮರದ ಬುಡ ಕಡಿದು ನೆಲಕ್ಕುರುಳಿಸಿದ್ದು ಯಾವಾಗ? ನೆಲದಮ್ಮನ ಹೊಳೆವ ಕಣ್ಣುಗಳಂತಿದ್ದ ತುಂಬಿದ ಕೆರೆಗಳಿಗೆ ಸರಳು ಚುಚ್ಚಿ, ಗಾರೆ ಮುಚ್ಚಿ ಬೃಹತ್ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದು ಯಾವಾಗ? ಕಾಂಪಾಂಡೌನ ಪಕ್ಕದಲ್ಲಿ ಅಷ್ಟಗಲಕ್ಕೆ ಹರಡಿಕೊಂಡಿದ್ದ ಮಾವಿನ ಮರ ರಾತ್ರೋರಾತ್ರಿ ಮಾಯವಾಗಿ, ಅದರ ಬುಡದಲ್ಲಿ ಮುರಿದುಬಿದ್ದ ಹಕ್ಕಿ ಗೂಡು ನೋಡಿ, 'ಸದ್ಯ ಮನೆಗೆ ಗಾಳಿ ಬೆಳಕು ಚೆನ್ನಾಗಿ ಬರುವ ಹಾಗಾಯ್ತು’ ಎಂದು ನಿಟ್ಟುಸಿರು ಬಿಟ್ಟಿದ್ದು ನೆನಪಿದೆಯೇ? ನಿರ್ಮಲವಾಗಿ ಹರಿಯತ್ತಿದ್ದ ನದಿಯ ಎದೆಗೆ ಕೊಳಚೆ ವಿಷವನ್ನು ಸುರಿದು ನಮ್ಮ ಮನೆ ಸ್ವಚ್ಚವಾಗಿದೆಯೆಂದು ನೆಮ್ಮದಿಯಿಂದ ಮಲಗಿದ್ದು ಮರೆತು ಹೋಯಿತೆ?

2020ರ ಈ ಯುಗಾದಿಯ ದಿನ 20 ವರ್ಷಗಳ ಹಿಂದಿನ ಬೆಂಗಳೂರನ್ನು ನೆನಪಿಸಿಕೊಳ್ಳಿ. ನಲ್ವತ್ತು ವರ್ಷಗಳ ಹಿಂದೆ ಈ ನಗರ ಹೇಗಿತ್ತು ಎಂಬುದನ್ನು ಹಿರಿಯರಲ್ಲಿ ಕೇಳಿ ತಿಳಿದುಕೊಳ್ಳಿ. ಆಗ ತಿಳಿಯುತ್ತದೆ; ನಾವು ಹೇಗೆ ಪ್ರತಿ ವರ್ಷವೂ ನಿಸರ್ಗದ ಯುಗಾದಿ ಸಂಭ್ರಮವನ್ನು ಕಸಿಯುತ್ತಲೇ ಬಂದಿದ್ದೇವೆ ಎಂಬುದು.

‘ಕಡಿಯುವವನ ಕೈಯಲ್ಲಿ ಒಂದೇ ಕತ್ತಿ; ಚಿಗಿತುಕೊಳ್ಳಲೋ ನೂರಾರು ದಾರಿ’ ಎಂಬ ಮಾತಿದೆಯಲ್ಲ, ಆ ಮಾತನ್ನೇ ಈ ನೆಲ ಉಸಿರಾಡುತ್ತಿರುವಂತಿದೆ. ಎಷ್ಟು ಕಡಿದು, ಕೊರೆದು, ಮುರಿದು, ಮುಚ್ಚಿದರೂ ಈ ನೆಲ ಯುಗಾದಿಯನ್ನು ಮರೆಯುವುದಿಲ್ಲ. ಯಾವ ಲಾಕ್ ಡೌನಿಗೂ ಕೇಳದೆ ಇದ್ದಲ್ಲೇ ಇದ್ದಷ್ಟಕ್ಕೇ ಚಿಗುರಿಕೊಂಡು ವಸಂತನನ್ನು ಬರಮಾಡಿಕೊಳ್ಳುತ್ತದೆ. ಕತ್ತನ್ನು ಸುತ್ತಿ ಬಿಗಿಯುತ್ತಿರುವ ಹೆಬ್ಬಾವಿನಂಥ ರಸ್ತೆಗಳ ಬದಿಯಲ್ಲಿಯೇ ಸಿಕ್ಕ ನೀರನ್ನು ಕುಡಿದು ಬೆಳೆದ ಮರಗಳು ಮೈತುಂಬ ಹೂವರಳಿಸಿಕೊಂಡು ನಗುತ್ತಿವೆ. ಆ ನಗುವಿನಲ್ಲಿ ಮನೆಬಿಟ್ಟು ಬರಲಾಗದ ನಮ್ಮ ಇಂದಿನ ಪರಿಸ್ಥಿತಿಯ ಕುರಿತು ವಿಷಾದವೂ, ಅಭಿವೃದ್ಧಿ ಹೆಸರಲ್ಲಿ ಕೊಲ್ಲುವುದನ್ನೇ ಮಂತ್ರವಾಗಿಸಿಕೊಂಡು ಅಟ್ಟಹಾಸ ಮಾಡುತ್ತಿದ್ದ ಮನುಷ್ಯನ ಇಂದಿನ ಮರಣಭೀತಿಯ ತತ್ತರದ ಕುರಿತು ವ್ಯಂಗ್ಯವೂ ಒಟ್ಟೊಟ್ಟಿಗೇ ಇರುವಂತಿದೆ. ರಾತ್ರೋ ರಾತ್ರಿ ಅರ್ಧ ಮಹಾನಗರ, ಬೆದರಿದ ಮಕ್ಕಳು ಅಮ್ಮನ ಮಡಿಲ ಸೇರುವಂತೆ ಊರ ಸೇರಿರುವಾಗ ನಿಂತಲ್ಲೇ ಬೇರೂರಿ ಎಂಥ ಕಷ್ಟಕ್ಕೂ ಹೆದರದೆ ಮೈತುಂಬ ಹೂವರಳಿಸಿ ನಿಂತಿರುವ ಈ ಮರಗಳು ಮನಸಲ್ಲಿ ಏನಿರಬಹುದು? ಯಾರೂ ಸುಳಿಯದ ಹಾದಿಯ ಬದಿಯಲ್ಲಿ ಸರತಿಯಲ್ಲಿ ನಿಂತ ಈ ಚೆಲುವೆಯರು, ಮನೆಯಿಂದ ಭಯಭೀತರಾಗಿ ಇಣುಕಿ ನೋಡುತ್ತಿರುವ ನಮಗೆ ಏನನ್ನು ಹೇಳುತ್ತಿರಬಹುದು?

ನಿಸರ್ಗದ ಜೊತೆಗಿನ ಅವಿನಾಭಾವ ಸಂಬಂಧ ಕಡಿದುಕೊಂಡ ಪರಿಣಾಮವೇ ಇಂದು ನಾವು ಎದುರಿಸುತ್ತಿರುವ ಸಂಕಷ್ಟದ ಮೂಲ. ಈ ಸೃಷ್ಟಿಯಲ್ಲಿ ನಾನೂ ಒಂದು ಜೀವಿಯಷ್ಟೆ, ನನ್ನ ಹಾಗೆಯೇ ಇಲ್ಲಿನ ಎಲ್ಲ ಜೀವರಾಶಿಗಳಿಗೂ ಈ ಪ್ರಕೃತಿಯ ಮೇಲೆ ಸಮಾನ ಹಕ್ಕಿದೆ ಎಂಬ ಸೃಷ್ಟಿಸತ್ಯವನ್ನು ಮರೆತಿದ್ದಕ್ಕಾಗಿ ಉಣ್ಣುತ್ತಿರುವ ಫಲವಲ್ಲವೇ ಇದು?

ಗೃಹಬಂಧನದ ಅನಿವಾರ್ಯತೆಯಲ್ಲಿ ಕಿಟಕಿಯಲ್ಲಿ ನಿಂತು ಹೊರಮುಖ ಮಾಡಿರುವ ಮನುಷ್ಯರು, ಮನೆಯಿಂದ ಹೊರಗಷ್ಟೇ ಅಲ್ಲ; ಮನಸ್ಸಿನ ಒಳಗೂ ಒಂದಿಷ್ಟು ಇಣುಕಿ ನೋಡಲಿ ಎಂಬುದು ನಿರ್ಜನ ಮಹಾನಗರದಲ್ಲಿ ನಗುನಗುತ್ತ ನಿಂತಿರುವ ನಿಸರ್ಗದ ಹಬ್ಬದ ಗುರುತುಗಳಾದ ಈ ಮರಗಳು ನೀಡುತ್ತಿರುವ ನಿಸರ್ಗದ ಸಂದೇಶ ಇರಬಹುದೇ?

ನಿರಂತರವಾಗಿ ನಿಸರ್ಗದ ಮೇಲೆ ಅತ್ಯಾಚಾರ ಎಸಗುತ್ತ ಬಂದಿರುವುದಕ್ಕೆ ಪಶ್ಚಾತ್ತಾಪ ಪಡುವುದು ಮತ್ತು ಈಗ ಎದುರಾಗಿರುವ ಮಹಾವಿಪತ್ತಿನಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಜವಾಬ್ದಾರಿಯನ್ನು ಅರಿತುಕೊಂಡು ವರ್ತಿಸುವುದೇ ಈ ಯುಗಾದಿಯ ಅರ್ಥಪೂರ್ಣ ಆಚರಣೆ ಆಗಬಲ್ಲದು. ಬೇವಿನ ನಂತರ ಬೆಲ್ಲ ತಿಂದಾಗಲೇ ಹಬ್ಬ ಪೂರ್ಣವಾಗುವುದು.

ನಮ್ಮ ಈ ಸಂದರ್ಭ ಬೇವಿನ ಕಹಿಯನ್ನು ಬಾಯಲ್ಲಿ ತುಂಬಿಸುತ್ತಿದೆ. ಈ ಕಹಿಯ ನಂತರ ಬರುವ ಬೆಲ್ಲದ ಸಿಹಿ ನಮ್ಮೆಲ್ಲರನ್ನೂ ಪೊರೆಯಲಿದೆ ಎಂಬ ನಂಬಿಕೆಯಲ್ಲಿ ಕಾಯೋಣ. ಕೊರೊನಾ ಕಹಿ ಆದಷ್ಟೂ ಬೇಗ ಕರಗಿ; ಸಹಜಬದುಕಿನ ಸಿಹಿ ಸಿಗಲಿ ಎಂದು ಪ್ರಾರ್ಥಿಸೋಣ. ಆ ಸಹಜಬದುಕಿನ ಹಳಿಗೆ ಮರಳಲು ಪೂರಕವಾಗುವಂತೆ ವರ್ತಿಸೋಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು