ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ: ನಾಡಹಬ್ಬ ನವರಾತ್ರಿಯ ಮಹಾಪೂಜೆ

Last Updated 25 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಶರತ್ಕಾಲವು ಆರಂಭವಾಗಿದೆ. ಶರತ್ಕಾಲದಲ್ಲಿ ಎಲ್ಲರೂ ನವರಾತ್ರಿಯನ್ನು ತಪ್ಪದೇ ಆಚರಿಸಬೇಕೆಂದು ಶ್ರೀದೇವೀಭಾಗವತದಲ್ಲಿದೆ. ಸಪ್ತಶತಿಯಲ್ಲಿ ಹೇಳುವಂತೆ, ಶರತ್ಕಾಲದಲ್ಲಿಯೂ ವರ್ಷದ ಆದಿಯಲ್ಲಿಯೂ ಮಹಾಪೂಜೆಯನ್ನು ಮಾಡುವಾಗ ದೇವೀ ಮಾಹಾತ್ಮ್ಯವನ್ನು ಭಕ್ತಿಯಿಂದ ಕೇಳಿದವನಿಗೆ ಎಲ್ಲಾ ತೊಂದರೆಗಳಿಂದಲೂ ಮುಕ್ತಿ ದೊರೆಯುತ್ತದೆ, ಧನ ಧಾನ್ಯಗಳು ಉಂಟಾಗುತ್ತವೆ. ಈ ಮಾತನ್ನು ಅನುಸರಿಸಿ ಸಪ್ತಶತಿಯ ಪಾರಾಯಣವನ್ನು ಮಾಡಲಾಗುತ್ತದೆ.

ಸಪ್ತಶತಿಯಲ್ಲಿ ಶ್ರೀದೇವಿಯ ಹಲವಾರು ರೂಪಗಳ ವರ್ಣನೆಯಿದೆ. ಅವುಗಳನ್ನೇ ನವರಾತ್ರಿಯ ದಿನಗಳಲ್ಲಿ ಪೂಜಿಸುವುದುಂಟು. ಮೊದಲನೆಯ ದಿನ ಯೋಗನಿದ್ರೆಯನ್ನೂ, ಎರಡನೆಯ ದಿನ ದೇವಜಾತೆಯನ್ನೂ, ಮೂರನೆಯ ದಿನ ಮಹಿಷಮರ್ದಿನಿಯನ್ನೂ, ನಾಲ್ಕನೆಯ ದಿನ ಶೈಲಜೆಯನ್ನೂ, ಐದನೆಯ ದಿನ ಧೂಮ್ರಘಾತಿನಿಯನ್ನೂ, ಆರನೆಯ ದಿನ ಚಂಡಮುಂಡಘಾತಿನಿಯನ್ನೂ, ಏಳನೆಯ ದಿನ ರಕ್ತಬೀಜಘಾತಿನಿಯನ್ನೂ, ಎಂಟನೆಯ ದಿನ ನಿಶುಂಭ ಘಾತಿನಿಯನ್ನೂ, ಒಂಬತ್ತನೆಯ ದಿನ ಶುಂಭಘಾತಿನಿಯನ್ನೂ ಪೂಜಿಸುತ್ತಾರೆ. ಈ ದೇವಿಯರ ಕಥೆಗಳು ಕ್ರಮವಾಗಿಯೇ ಸಪ್ತಶತಿಯಲ್ಲಿ ಬರುತ್ತವೆ. ದುಷ್ಟರ ನಿಗ್ರಹವೇ ಈ ಕಥೆಗಳಲ್ಲಿ ಪ್ರಧಾನ ವಸ್ತುವಾಗಿದೆ.

ಶ್ರೀದೇವೀ ಮಾಹಾತ್ಮ್ಯದಲ್ಲಿಯೇ ಬ್ರಾಹ್ಮೀ ಮಾಹೇಶ್ವರೀ ಕೌಮಾರೀ ವೈಷ್ಣವೀ ವಾರಾಹೀ ಇಂದ್ರಾಣೀ ಚಾಮುಂಡಾ ಎಂಬ ಸಪ್ತ ಮಾತೃಕೆಯರ ಉಲ್ಲೇಖವೂ ಇದೆ. ಈ ಮಾತೃಕೆಯರು ಸುಪ್ರಸಿದ್ಧರಾದ ಬ್ರಹ್ಮ ಮಹೇಶ್ವರ ಕುಮಾರ ವಿಷ್ಣು ವರಾಹ ಇಂದ್ರ ಕಾಳಿ – ಈ ದೇವಾನುದೇವತೆಗಳ ಶಕ್ತಿಗಳು ಎನ್ನಲಾಗಿದೆ. ಕಾಲಿಕಾ ಕೌಶಿಕೀ ನಾರಸಿಂಹೀ ಎಂಬ ಶಕ್ತಿದೇವತೆಗಳೂ ಅಲ್ಲಿಯೇ ಉಕ್ತವಾಗಿವೆ.

ನವರಾತ್ರಿಯನ್ನು ನವದುರ್ಗೆಯರ ಪೂಜೆಯೆಂದೂ ಹೇಳುವುದುಂಟು. ಶೈಲಪುತ್ರೀ ಬ್ರಹ್ಮಚಾರಿಣೀ ಚಂಡಘಂಟಾ ಕೂಷ್ಮಾಂಡಾ ಸ್ಕಂದಮಾತಾ ಕಾತ್ಯಾಯನೀ ಕಾಲರಾತ್ರಿ ಮಹಾಗೌರೀ ಸಿದ್ಧಿದಾತ್ರೀ ಎಂಬ ನವದುರ್ಗೆಯರನ್ನು ಪೂಜಿಸುವ ಕ್ರಮವು ಅಲ್ಲಲ್ಲಿ ರೂಢಿಯಲ್ಲಿದೆ. ಇವುಗಳೆಲ್ಲವೂ ಪಾರ್ವತಿಯ ರೂಪಗಳೇ ಆಗಿವೆ.

ಪೂಜೆಯಾದ ಮೇಲೆ ಪ್ರತಿದಿನವೂ (ಎರಡು ವರ್ಷದಿಂದ ಆರಂಭಿಸಿ ಹತ್ತು ವರ್ಷದ ವರೆಗಿನ) ಕುಮಾರಿಯನ್ನು ವಸ್ತ್ರಾಲಂಕಾರ ಭೋಜನಾದಿಗಳಿಂದ ಪೂಜಿಸುವ ರೂಢಿಯಿದೆ. ಬೆಳಗಿನಲ್ಲಿ ಎದ್ದು ಹೊಸ್ತಿಲು ಸಾರಿಸಿ ಪೂಜೆಯ ಸ್ಥಳದಲ್ಲಿ ರಂಗವಲ್ಲಿಯನ್ನು ಬಿಡಿಸುತ್ತಾರೆ. ಚಿತ್ರ ವಿಚಿತ್ರವಾದ ಹೂಗಳನ್ನು ಸಂಗ್ರಹಿಸಿ ಮಾಲೆಗಳನ್ನು ಕಟ್ಟುತ್ತಾರೆ. ನೀರಾಜನಕ್ಕಾಗಿ ತಟ್ಟೆಯಲ್ಲಿ ಅರಿಸಿನ ಕುಂಕುಮ ಮುಂತಾದವುಗಳಿಂದ ಚಿತ್ರಗಳನ್ನು ಬರೆಯುತ್ತಾರೆ. ನೈವೇದ್ಯಕ್ಕಾಗಿ ಬಗೆ ಬಗೆಯ ಅನ್ನ ಭಕ್ಷ್ಯಗಳನ್ನು ತಯಾರಿಸಿ ಮುಖ್ಯವಾಗಿ ಶಾರದೆಯ ಎಡೆಯನ್ನು ಸಜ್ಜುಗೊಳಿಸುತ್ತಾರೆ. ಕೆಲವರು ಸುಶ್ರಾವ್ಯವಾಗಿ ಹಾಡುಗಳನ್ನು ಹೇಳುತ್ತಾರೆ. ಇದಲ್ಲದೆ ಲಲಿತಾ ಸಹಸ್ರನಾಮ, ಸೌಂದರ್ಯಲಹರಿ ಮುಂತಾದವುಗಳನ್ನು ಹೇಳುವುದುಂಟು.

ನವರಾತ್ರಿಯ ಹಿಂದಿನ ದಿನವೇ, ಮಹಾಲಯ ಅಮಾವಾಸ್ಯೆಯಂದು ಗೊಂಬೆಗಳನ್ನು ಸ್ವಚ್ಛಗೊಳಿಸಸಲು ತೆಗೆದಿರಿಸುತ್ತಾರೆ. ಮೊದಲ ದಿನವೇ ಪೂಜಾ ಪ್ರದರ್ಶನಕ್ಕಾಗಿ ಗೊಂಬೆಗಳನ್ನು ಸ್ಥಾಪಿಸುತ್ತಾರೆ. ಅವುಗಳ ಜೊತೆಗೆ ವೀಳ್ಯದ ಎಲೆಗಳಿರುವ ಒಂದು ಚಿಕ್ಕ ಕಲಶವೂ ಇರುತ್ತದೆ. ಮದುವೆಯ ಸಂದರ್ಭದಲ್ಲಿ ತವರಿನಲ್ಲಿ ಕೊಟ್ಟಿರುವ ಪಟ್ಟದ ಗೊಂಬೆಯನ್ನು ಎಲ್ಲಕ್ಕಿಂತ ಮೊದಲು ಮೇಲಿರಿಸುತ್ತಾರೆ. ಅದರ ಜೊತೆಗೆ ಅಷ್ಟಲಕ್ಷ್ಮಿಯರು ದಶಾವತಾರ ರಾಮಾಯಣ–ಮಹಾಭಾರತ ಪಾತ್ರಗಳು, ತ್ರಿಮೂರ್ತಿಗಳು, ಗವಾಯಿಗಳು ಮುಂತಾದವುಗಳೊಂದಿಗೆ, ಹಸು, ಕರು, ಕುದುರೆ, ಆನೆ ಮುಂತಾದ ಪ್ರಾಣಿಗಳೊಂದಿಗೆ ಆಧುನಿಕ ಕ್ರೀಡಾ ಸಾಮಗ್ರಿಗಳೂ ಇರುತ್ತವೆ. ಇತ್ತೀಚೆಗೆ ಗೊಂಬೆಗಳ ಸ್ಥಾಪನೆಯು ತೀರಾ ಆಕರ್ಷಕವಾಗುತ್ತಿದೆ. ಪ್ರತಿದಿನವೂ ಬೊಂಬೆಗಳನ್ನು ಸಂಜೆ ಪೂಜಿಸಿ ಆರತಿಗೈದು ಮಕ್ಕಳಿಗೆ ಬಗೆ ಬಗೆಯ ತಿನಿಸುಗಳನ್ನು ನೀಡುತ್ತಾರೆ. ಹೆಣ್ಣುಮಕ್ಕಳಿಗೆ ಬಾಗಿನ ಕೊಡುತ್ತಾರೆ.

ನವರಾತ್ರಿಯ ಕೊನೆಯ ಮೂರು ದಿನಗಳು ತುಂಬಾ ಮುಖ್ಯವಾಗಿವೆ. ಕೊನೆಯ ಮೂರು ದಿನಗಳಲ್ಲಿ ಪೂಜಿಸಿದರೂ ಶ್ರೀ ದೇವಿಯು ಸಂತುಷ್ಟಳಾಗುತ್ತಾಳೆ. ಅಷ್ಟಮಿಯ ದಿನ ಪೂಜೆ ಮಾಡಿದರೂ ಸಾಕು ಎಂದು ಶಾಸ್ತ್ರದಲ್ಲಿದೆ. ಈ ದಿನಗಳಲ್ಲಿ ಪುಸ್ತಕವನ್ನು ಜೋಡಿಸಿಟ್ಟು ಪೂಜೆ ಮಾಡಿ, ಪ್ರಸಾದವನ್ನು ಪಡೆದು, ಪುಸ್ತಕ ಪಠನ ಮಾಡಿದರೆ ಶಾರದೆಯ ಅನುಗ್ರಹವುಂಟಾಗುತ್ತದೆ ಎಂಬ ನಂಬಿಕೆಯಿದೆ.

ನವರಾತ್ರಿಯ ಹಗಲಿನಲ್ಲಿ ಉಪವಾಸ, ರಾತ್ರಿಯ ಪೂಜೆಯಿಂದ ಸಂಪನ್ನವಾದರೆ, ವಿಜಯ ದಶಮಿಯಂದು ಮಧ್ಯಾಹ್ನವೇ ಪೂಜೆಯಿರುತ್ತದೆ. ನವರಾತ್ರಿಯ ಕೊನೆಯ ಮೂರು ದಿನಗಳ ಕಾಲ ಓದುವುದಾಗಲಿ, ಬರೆಯುವುದಾಗಲಿ ಶ್ರೀದೇವಿಗೆ ಇಷ್ಟವಾಗುವುದಿಲ್ಲವಂತೆ. ಆದರೆ ವಿದ್ಯಾದಶಮಿಯಂದು ಅದನ್ನು ಮಾಡದಿದ್ದರೆ ಜಗನ್ಮಾತೆಯು ಹರಸುವುದಿಲ್ಲ. ಈ ಕಾರಣದಿಂದಲೇ ಅಂದು ಶಾರದಾ ಪೂಜೆಯನ್ನು ಶಾಲೆಗಳಲ್ಲಿಯೂ ಏರ್ಪಡಿಸುತ್ತಾರೆ.

ನವರಾತ್ರಿ ಉತ್ಸವ ನಮ್ಮ ನಾಡಹಬ್ಬವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT