ಶುಕ್ರವಾರ, ಜನವರಿ 24, 2020
21 °C

ಧನುರ್ಮಾಸದ ಪೂಜೆ

ಸೂರ್ಯನಾರಾಯಣ ಭಟ್ಟ Updated:

ಅಕ್ಷರ ಗಾತ್ರ : | |

Prajavani

ಸೂರ್ಯನು ಧನೂರಾಶಿಯಲ್ಲಿ ಕಾಣುವ ಮೂವತ್ತು ದಿನಗಳ ಕಾಲವೇ ಧನುರ್ಮಾಸ (ಈ ವರ್ಷ: ಡಿ. 16ರಿಂದ ಜ. 14ರ ವರೆಗೆ). ಈ ವರ್ಷ ಮಾರ್ಗಶೀರ್ಷ ಬಹುಳ ಪಂಚಮಿಯಿಂದ ಪೌಷ ಬಹುಳ ಚೌತಿಯ ವರೆಗೆ ಈ ಮಾಸವು ವ್ಯಾಪಿಸಿದೆ. ತಮಿಳುನಾಡಿನಲ್ಲಿ ಇದನ್ನು ‘ಮಾರ್ಗಳಿ ಮಾಸಂ’ ಎನ್ನುವುದೂ ಉಂಟು. 

ಈ ಮಾಸದ ಪೂಜೆಯ ಪೂಜೆಯನ್ನು ಸೂರ್ಯೋದಯಕ್ಕೆ ಮೊದಲೇ ಮಾಡಬೇಕು. ಈ ತಿಂಗಳಲ್ಲಿ ಬ್ರಾಹ್ಮ ಮುಹೂರ್ತದಲ್ಲಿ ದೇವತೆಗಳೂ ಪರಮಾತ್ಮನನ್ನು ಪೂಜಿಸುತ್ತಾರೆ. ಅದರಂತೆ ಆಸ್ತಿಕರು ಬೆಳಕು ಹರಿಯುವುದಕ್ಕಿಂತ ಮೊದಲೇ ಎದ್ದು ಸ್ನಾನಾದಿಗಳನ್ನು ಮಾಡಿ ದೇವ ಪೂಜೆಯನ್ನು ಪೂರೈಸಬೇಕು. ಮೇಷಾದಿ ಮಾಸಗಳಲ್ಲಿ ಈ ನಿಯಮವಿಲ್ಲ. ತಾರೆಗಳು ಆಗಸದಲ್ಲಿ ಇನ್ನೂ ಕಂಗೊಳಿಸುತ್ತಿರುವಾಗ ಪೂಜೆಯು ಮುಗಿದರೆ, ಅದು ಶ್ರೇಷ್ಠವೆನ್ನಲಾಗಿದೆ. ನಕ್ಷತ್ರಗಳು ಕಾಣದಿರುವ ಸಮಯದಲ್ಲಿ ಈ ಪೂಜೆಯು ಮಧ್ಯಮವಾಗುತ್ತದೆ. ಸೂರ್ಯೋದಯವಾದ ಮೇಲೆ ಪೂಜೆಯನ್ನು ಪೂರೈಸಿದರೆ, ಅದು ಅಧಮ. ಮಧ್ಯಾಹ್ನದಲ್ಲಿ ದೇವರನ್ನು ಈ ಮಾಸದಲ್ಲಿ ಪೂಜಿಸಿದರೆ, ಅದು ನಿಷ್ಫಲವಾಗುತ್ತದೆ.

ಧನುರ್ಮಾಸದ ಪೂಜೆಯು ಉಳಿದ ಮಾಸದ ಪೂಜೆಯಂತೆ ಆದರೂ ನೈವೇದ್ಯವು ಬೇರೆಯಾಗಿದೆ. ಹವಿಷ್ಯಾನ್ನದ ಬದಲಾಗಿ ಈ ಮಾಸದಲ್ಲಿ ಮುದ್ಗಾನ್ನವನ್ನು ಪರಮಾತ್ಮನಿಗೆ ನಿವೇದಿಸಬೇಕು. ಉತ್ತರ ಕರ್ನಾಟಕದಲ್ಲಿ ಅದನ್ನು ಖಿಚಡಿ ಎನ್ನುತ್ತಾರೆ. ಉತ್ತರ ಕನ್ನಡದಲ್ಲಿ ಧನುಮಡ್ಡಿ ಎನ್ನುವುದುಂಟು. ಹೆಸರು ಬೇಳೆಯನ್ನು ಅಕ್ಕಿಯೊಂದಿಗೆ ಬೇಯಿಸಿ (ಬೆಲ್ಲ) ಮೆಂತೆ ಮತ್ತು ಜೀರಿಗೆ ಹುಡಿಯನ್ನು ಸೇರಿಸಿ ಮಾಡಿದ ಈ ಮುದ್ಗಾನ್ನವನ್ನು ಅಭಿಘಾರ ಮಾಡಿ ಭಗವಂತನಿಗೆ ನಿವೇದಿಸಿ ಹುಣಿಸೆಹುಳಿಯೊಂದಿಗೆ ಪ್ರಸಾದವನ್ನು ಸವಿಯುವುದು ಒಂದು ವಿಶೇಷವಾದ ಅನುಭವವೇ ಸರಿ. ಕೆಲವರು ಇದಕ್ಕೆ ಗೇರು, ಶುಂಠಿ, ಕಾಳುಮೆಣಸು, ಬೆಣ್ಣೆ, ತೆಂಗು ಮುಂತಾದವುಗಳನ್ನು ಸೇರಿಸುತ್ತಾರೆ. ಇದು ಪ್ರದೇಶದಿಂದ ಪ್ರದೇಶಕ್ಕೆ ಬೇರೆಯಾಗಿದೆ. ಪೊಂಗಲ್ ದಕ್ಷಿಣ ಕರ್ನಾಟಕದಲ್ಲಿ ಪ್ರಚಲಿತವಾಗಿದೆ.

ಕೊರೆಯುವ ಚಳಿಯಲ್ಲಿ ನಿದ್ದೆಯನ್ನು ಬಿಟ್ಟು ಮಿಂದು ಮಡಿಯುಟ್ಟು ಪೂಜೆಯನ್ನು ಮಾಡಿದರೆ ಬರುವ ಭಾಗ್ಯವಾದರೂ ಏನು ಎಂದು ಕೆಲವರು ಕೇಳಬಹುದು. ಉಷಃಕಾಲದ ಪೂಜೆಯು ಸಾಮಾನ್ಯವಾದುದಲ್ಲ. ಒಂದು ದಿನ ಆ ಪೂಜೆಯನ್ನು ಪೂರೈಸಿದರೂ ಸಾವಿರಾರು ವರ್ಷಗಳ ಕಾಲ ಪೂಜೆ ಮಾಡಿದ ಫಲವು ಬರುತ್ತದೆ. ಆದರೆ ಒಂದು ದಿನದ ಪೂಜೆಯು ಶ್ಲಾಘನೀಯವಲ್ಲ. ದಿನೇ ದಿನೇ ಎಂದು ಹೇಳಿರುವುದರಿಂದ ನಿತ್ಯ ಕರ್ಮವಾದ ಪೂಜೆಯನ್ನು ಪ್ರತಿದಿನವೂ ಮಾಡಬೇಕು. ನಮ್ಮ ಅನುಕೂಲತೆಗೆ ತಕ್ಕಂತೆ ಅದನ್ನು ಬದಲಾಯಿಸಬಾರದು. ನೈವೇದ್ಯವನ್ನು ಸಿದ್ಧಪಡಿಸುವಾಗ ಹೆಸರು ಬೇಳೆ ಮತ್ತು ಅಕ್ಕಿ ಸಮ ಪ್ರಮಾಣದಲ್ಲಿ ಇದ್ದರೆ ಅದು ಉತ್ತಮೋತ್ತಮ. ಆದರೆ ಅಶಕ್ತರಿಗೆ ವಿನಾಯತಿಯಿದ್ದೇ ಇದೆ.

ಪ್ರತಿಕ್ರಿಯಿಸಿ (+)