ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನದ ಅರಿವಿನ ಹರಿವು

Last Updated 4 ಅಕ್ಟೋಬರ್ 2019, 19:31 IST
ಅಕ್ಷರ ಗಾತ್ರ

ನಮ್ಮ ಜೀವನ ಚೆನ್ನಾಗಿ ಸಾಗಲು ನಮಗೆ ವಿದ್ಯೆ ಮತ್ತು ಬುದ್ಧಿ – ಇವೆರಡೂ ಬೇಕು. ಈ ತತ್ತ್ವಗಳನ್ನು ಪ್ರತಿನಿಧಿಸುವ ದೇವತೆಯೇ ಸರಸ್ವತೀ. ಅವಳು ಮಾತೃಶಕ್ತಿಯ ಒಂದು ಸ್ವರೂಪ. ನವರಾತ್ರಿಯಲ್ಲಿ ಸರಸ್ವತಿಯನ್ನು ಮೂಲಾನಕ್ಷತ್ರದ ದಿನ ಪೂಜಿಸಲಾಗುತ್ತದೆ. ಅಂದು ಅವಳ ಆವಾಹನೆ ನಡೆದರೆ, ಪೂರ್ವಾಷಾಢಾನಕ್ಷತ್ರದಲ್ಲಿ ಅವಳ ಪೂಜೆಯೂ, ಉತ್ತರಾಷಾಢಾನಕ್ಷತ್ರದಂದು ನಿವೇದನೆ ಮತ್ತು ಶ್ರವಣನಕ್ಷತ್ರದ ದಿನ ಅವಳ ವಿಸರ್ಜನೆ ನಡೆಯುತ್ತದೆ.

ಸರಸ್ವತೀ ಎಂದರೆ ವಿದ್ಯಾಬುದ್ಧಿಗಳು ಎಂದು ನೋಡಿದೆವು. ಇವೆರಡರ ಸಾಕಾರರೂಪವನ್ನು ನಾವು ಪುಸ್ತಕಗಳಲ್ಲಿ ನೋಡುತ್ತೇವೆ. ಹೀಗಾಗಿಯೇ ಸರಸ್ವತಿಯ ಪೂಜೆಯ ದಿನ ನಾವು ಪುಸ್ತಕಗಳನ್ನು ಪೂಜಿಸುವುದು. ನಾವು ನಿತ್ಯವೂ ಉಪಯೋಗಿಸುವ ಪುಸ್ತಕಗಳನ್ನು ನವರಾತ್ರಿ ಕೊನೆಯ ಮೂರು ದಿನಗಳಲ್ಲಿ ಸರಸ್ವತೀರೂಪದಲ್ಲಿ ಪೂಜಿಸುತ್ತೇವೆ. ನಾವು ಈಗಾಗಲೇ ಕೂಡಿಸಿರುವ ಬೊಂಬೆಗಳ ನಡುವೆ ಪುಸ್ತಕಗಳನ್ನು ಜೋಡಿಸಿ, ಪೂಜಿಸುತ್ತೇವೆ. ಅವನ್ನು ಪ್ರತ್ಯೇಕವಾಗಿಯೂ ಪೂಜಿಸಬಹುದು.

ಭಾರತೀಯ ಸಂಸ್ಕೃತಿಯಲ್ಲಿ ಸರಸ್ವತಿಗೆ ತುಂಬ ವಿಶೇಷವಾದ ಸ್ಥಾವವಿದೆ. ವೇದಗಳಲ್ಲಿಯೇ ಸರಸ್ವತಿಯ ಪ್ರಶಂಸೆಯನ್ನು ನೋಡಬಹುದು. ಸರಸ್ವತೀತತ್ತ್ವವನ್ನು ನದಿಯ ರೂಪದಲ್ಲಿಯೂ ವಾಕ್ಕಿನ ರೂಪದಲ್ಲಿಯೂ ಅಲ್ಲಿ ಸ್ತುತಿಸಲಾಗಿದೆ. ನೀರು ಮತ್ತು ಮಾತು – ಇವೆರಡೂ ನಮ್ಮ ಜೀವನಕ್ಕೆ ಬೇಕಾದ ಅನಿವಾರ್ಯ ವಿವರಗಳು. ಇವೆರಡನ್ನೂ ಒದಗಿಸುವ ತತ್ತ್ವವೇ ಸರಸ್ವತೀತತ್ತ್ವ.

ನೀರನ್ನು ಸಂಸ್ಕೃತದಲ್ಲಿ ‘ಜೀವನ’ ಎಂದೂ ಕರೆಯುತ್ತಾರೆ. ಎಲ್ಲ ವಿದ್ಯೆಗಳ ಸಾರವನ್ನು ‘ರಸ’ ಎಂದೂ ಕರೆಯಬಹುದು. ರಸವೂ ಕೂಡ ನೀರಿನಂತೆಯೇ ಹರಿವನ್ನು ಸಂಕೇತಿಸುತ್ತದೆ. ಹೀಗಾಗಿ ಜೀವನಕ್ಕೂ ಸರಸ್ವತೀತತ್ತ್ವಕ್ಕೂ ನೇರ ಸಂಬಂಧವಿದೆ. ನಮ್ಮ ಜೀವನವನ್ನು ಚೆನ್ನಾಗಿ ನಡೆಸಲು ಬೇಕಾದ ಎಲ್ಲ ವಿಧದ ವಿದ್ಯೆಯನ್ನೂ ವಿವೇಕವನ್ನೂ ಹಂಬಲಿಸಿ ಮಾಡುವ ಪೂಜೆಯೇ ಸರಸ್ವತೀಪೂಜೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT