ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯ ಸಂದೇಶ: ಮನುಷ್ಯತನ ಇಲ್ಲದೆಡೆ ಮನುಷ್ಯನಿಲ್ಲ

ಅಕ್ಷರ ಗಾತ್ರ

ಕಾಲ ಸರಿದಂತೆ ಮನುಷ್ಯ ದೈಹಿಕವಾಗಿಯೂ ಮಾನಸಿಕವಾಗಿಯೂ ದುರ್ಬಲನಾಗುತ್ತಿದ್ದಾನೆ. ತಾನೇ ನಿರ್ಮಿಸಿಕೊಂಡ ಆಡಂಬರದ ಢಾಂಬಿಕ ಬದುಕಿನಲ್ಲಿ ಬಂಧಿಯಾಗಿ ತನಗರಿವಿಲ್ಲದೆ ಸರ್ವನಾಶದ ಪಥಕ್ಕೆ ದಾಪುಗಾಲಿಟ್ಟಿದ್ದಾನೆ. ಬದುಕಿಗೆ ಅಗತ್ಯವಾದುದನ್ನು ಬಿಟ್ಟು, ಅನಗತ್ಯ ವಸ್ತುಗಳಿಗೆ ಮತ್ತು ವಿಚಾರಗಳಿಗೆ ಮೈ-ಮನಸ್ಸುಗಳನ್ನು ತೆರೆದುಕೊಂಡ ದುಷ್ಪರಿಣಾಮದ ಫಲವನ್ನು ಈಗ ಅನುಭವಿಸುತ್ತಿದ್ದಾನೆ. ತನ್ನ ಜೀವ ಮತ್ತು ಜೀವನವನ್ನು ಎಷ್ಟು ನಾಜೂಕಿನ ಸ್ಥಿತಿಗೆ ತಂದುಕೊಂಡಿದ್ದಾನೆಂದರೆ, ಸಣ್ಣ ಜ್ವರಕ್ಕೂ ಮನುಷ್ಯನ ಜೀವ ಹೆದರುತ್ತದೆ; ಸಣ್ಣ ಕಷ್ಟಕ್ಕೂ ಅವನ ಜೀವನ ಅದುರುತ್ತದೆ.

ಹಿಂದಿನ ಕಾಲದ ಜನ ಎಂಥ ಕಷ್ಟಕ್ಕೂ ಜಗ್ಗದೆ, ಅಳುಕದೆ ಮುನ್ನುಗ್ಗುತ್ತಿದ್ದರು. ‘ಕಷ್ಟ ಮನುಷ್ಯನಿಗೆ ಬರದೇ, ಮರಕ್ಕೆ ಬರುತ್ತಾ’ ಅಂತ ಕಷ್ಟವನ್ನು ಅಪ್ಪಿಕೊಳ್ಳುತ್ತಿದ್ದರು. ಆ ಕಷ್ಟಗಳು ಅಳಿಯದೆ, ಜೀವನ ಪೂರ್ತಿ ಇದ್ದರೂ ಬೇಸರಿಸದೆ ಅದರೊಂದಿಗೆ ಬಾಳುವುದನ್ನು ರೂಢಿಸಿಕೊಳ್ಳುತ್ತಿದ್ದರು. ಅಪ್ಪಿತಪ್ಪಿಯೂ ಆತ್ಮಹತ್ಯೆಯ ಯೋಚನೆ ಮಾಡುತ್ತಿರಲಿಲ್ಲ. ಅದರಲ್ಲೂ ತಾವೂ ಸಾಯುವುದಲ್ಲದೆ ತಮ್ಮ ಕರುಳ ಕುಡಿಗಳನ್ನು ಕೊಲ್ಲುವ ನೀಚತನ ಮಾಡುತ್ತಿರಲಿಲ್ಲ. ಒಂದೆರಡು ಮಕ್ಕಳ ಸಲಹುವುದೇ ದುಸ್ತರ ಅಂತ ಹತಾಶರಾಗುವ ಈ ಕಾಲದ ತಾಯಂದಿರಿಗೆ ಹೋಲಿಸಿದರೆ, ಹತ್ತಾರು ಮಕ್ಕಳು ಹೆತ್ತರೂ ಅವುಗಳ ಭವಿಷ್ಯ ರೂಪಿಸಲು ಶ್ರಮಿಸುತ್ತಿದ್ದ ಆ ಕಾಲದ ತಾಯಂದಿರ ಛಲ-ಬಲ ಅನನ್ಯವಾಗಿತ್ತು.

ಹಿಂದಿನ ಕಾಲಕ್ಕಿಂತ ಇಂದಿನ ಕಾಲ ಎಷ್ಟೋ ಸುಭಿಕ್ಷವಾಗಿದೆ. ಆಗೆಲ್ಲಾ ತಿನ್ನಲಿಕ್ಕೂ ಬರ, ಉಡಲಿಕ್ಕೂ ಕಷ್ಟ. ಅಂಥ ಕಡುಕಷ್ಟದಲ್ಲಿ ನೊಂದು-ಬೆಂದು ಬದುಕಿದ ಜೀವಿಗಳ ತ್ಯಾಗದ ಫಲದಿಂದ ಈಗಿನ ಜನ ಒಂದಿಷ್ಟು ನೆಮ್ಮದಿಯ ಬದುಕನ್ನು ಕಂಡಿದ್ದಾರೆ. ಆದರೆ ಇಂಥ ನೆಮ್ಮದಿಯ ಬದುಕನ್ನ ಈಗಿನ ಜನ ಬೇರೆಯವರ ಬದುಕಿಗೆ ತಾಳೆ ಹಾಕುತ್ತಾ ಹಾಳು ಮಾಡಿಕೊಳ್ಳುತ್ತಿದ್ದಾರೆ. ‘ಪಾಲಿಗೆ ಬಂದದ್ದೆ ಪಂಚಾಮೃತ’ ಅಂತ ಜೀವನವನ್ನು ಅನುಭೋಗಿಸಿಕೊಂಡು ಹೋಗುತ್ತಿದ್ದ ಆ ಕಾಲದ ಜನರಿಗೆ, ‘ಅಯ್ಯೋ ಅವರತ್ರ ಇರೋ ಕಾರು-ಬಂಗಲೆ ನಮ್ಮಲ್ಲಿಲ್ಲ’ ಅಂತ ಕೊರಗೋ ಈಗಿನ ಜನರನ್ನ ಹೋಲಿಸಲಾಗುವುದಿಲ್ಲ. ಎಂಥ ಕಷ್ಟ ಬಂದರೂ ಎದುರಿಸಿ ನಿಲ್ಲುವ ಛಾತಿ ಆ ಕಾಲದ ಜನರಲ್ಲಿತ್ತು. ಆದರೀಗ ಎಲ್ಲವೂ ತಿರುವು-ಮುರುವಾಗಿದೆ. ಕೈಗೆಟುಕುವ ಅಂತರದಲ್ಲೇ ಎಲ್ಲಾ ಸಿಗುತ್ತಿವೆ. ಹೀಗಿದ್ದರೂ ಇರುವಷ್ಟರಲ್ಲಿ ತೃಪ್ತಿ ಪಡದೆ ಚಡಪಡಿಸುತ್ತಿದ್ದಾರೆ.

ಈಗಿನವರು ಸುಲಭವಾಗಿ ಸುಖದ ಕನಸು ಕಾಣುತ್ತಾರೆಯೇ ಹೊರತು, ಕಷ್ಟಪಟ್ಟು ನನಸು ಮಾಡುವ ಮಾರ್ಗಹಿಡಿಯುವುದಿಲ್ಲ. ಅಡ್ಡ ಮಾರ್ಗದಲ್ಲಿ ಸಂಪಾದಿಸಲೆತ್ನಿಸುತ್ತಾರೆ. ಇದರ ಪರಿಣಾಮವಾಗಿ ಈಗ ಸಾವಿನ ಮನೆಯಲ್ಲೂ ಲಾಭದ ಜಂತಿ ಎಣಿಸುವ ದುರಾತ್ಮರು ಹುಟ್ಟಿಕೊಂಡಿದ್ದಾರೆ. ಲೋಭ-ಮೋಹಗಳು ಮನುಷ್ಯ ಹುಟ್ಟಿದಾಗಿನಿಂದಲೂ ಜೊತೆಯಾಗೇ ಬಂದಿವೆ. ಅವುಗಳಿಗೆ ಆ ಕಾಲದಲ್ಲಿ ವೇಗೋತ್ಕರ್ಷವಿರಲಿಲ್ಲ. ಆದರೀಗ ಆಧುನಿಕ ಜಗತ್ತು ಹೇಗೆ ಗೊತ್ತು-ಗುರಿ ಇಲ್ಲದೆ ನಾಗಾಲೋಟದಲ್ಲಿ ಓಡುತ್ತಿದೆಯೋ, ಹಾಗೇ ಅವನ ಲೋಭತನವೂ ಅಷ್ಟೇ ವೇಗವಾಗಿ ಲಂಬಿಸುತ್ತಿದೆ.

ಸ್ವಾತಂತ್ರ್ಯಾನಂತರದ ಭಾರತದಲ್ಲಿ ಸಾವಿರಾರು ರೂಪಾಯಿಗಳಲ್ಲಿದ್ದ ಭ್ರಷ್ಟಾಚಾರ, ಈಗ ಸಾವಿರಾರು ಕೋಟಿರ ರೂಪಾಯಿ ದಾಟಿದೆ. ಎಲ್ಲರಿಗೂ ಹಣದ ಮೇಲೆಯೇ ಧ್ಯಾನ. ಗುಣಾವಗುಣಗಳನ್ನು ತೌಲನಿಕವಾಗಿ ವಿವೇಚಿಸುವ ಒಳ್ಳೆಯ ಮನಸ್ಸನ್ನೇ ಜನ ಕಳೆದುಕೊಂಡಿದ್ದಾರೆ. ಅದರ ದುಷ್ಪರಿಣಾಮವನ್ನು ಕೊರೊನಾ ಸಂಕಷ್ಟ ಕಾಲದಲ್ಲಿ ನೋಡುತ್ತಿದ್ದೇವೆ. ಎಲ್ಲಿ ಮನುಷ್ಯತನ ಇಲ್ಲವೋ, ಅಲ್ಲಿ ಮನುಷ್ಯರಾರು ಉಳಿಯಲಾರರು. ಈ ಪರಮ ಸತ್ಯ ಅರಿವಾಗದಿದ್ದರೆ ಆಧುನಿಕ ಮನುಷ್ಯರ ಸಂಕಟ ಕೊನೆಗೊಳ್ಳುವುದೂ ಇಲ್ಲ. ಅದಕ್ಕಾಗಿ ಜಗತ್ತಿನ ಜನರೆಲ್ಲ ಲೋಭತನ ಮರೆತು, ‘ಸಚ್ಚಿದಾನಂದ’ದ ಸತ್ಸಂಗದಲ್ಲಿ ಬೆರೆತು ಮನುಷ್ಯತನವನ್ನು ಬೆಳೆಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT