ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಶಾಂತಿಕರ್ಮ ಮಾಡುವ ವಿಧಾನ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Last Updated 28 ಫೆಬ್ರುವರಿ 2022, 19:02 IST
ಅಕ್ಷರ ಗಾತ್ರ

ಕರ್ಮಪೂರ್ತಿಯಾಗಲು ಮೊದಲು ವಿಘ್ನಶಾಂತಿಯನ್ನು ಮಾಡಬೇಕು. ಆದುದರಿಂದ ಎಲ್ಲಾ ಕರ್ಮಗಳ ಆದಿಯಲ್ಲಿ ವಿಘ್ನೇಶನಾದ ಗಣಪತಿಯನ್ನು ಪೂಜಿಸಬೇಕು. ಎಲ್ಲಾ ಬಾಧೆಗಳೂ ನಾಶವಾಗಲು ಎಲ್ಲಾ ದೇವತೆಗಳನ್ನೂ ಪೂಜಿಸಬೇಕು. ಒಳಮನೆಯಲ್ಲಿ ಶವ, ಪಾಪಿಗಳ ಸ್ಪರ್ಶವಾಗುವುದು ಮುಂಬರುವ ದುಃಖದ ಸೂಚಕಗಳು. ಇವುಗಳ ದೋಷಶಾಂತಿಗಾಗಿ ಶಾಂತಿಕರ್ಮವನ್ನು ಮಾಡಬೇಕು.

ಶಾಂತಿಕರ್ಮದ ವಿಧಾನವನ್ನು ದೇವಾಲಯ, ಗೋಶಾಲೆ, ಯಜ್ಞಶಾಲಾ, ಅಥವಾ ಮನೆಯ ಅಂಗಣಗಳಲ್ಲಿ ಎರಡು ಹಸ್ತ ಎತ್ತರವಾದಂತಹ ವೇದಿಕೆಯನ್ನು ರಚಿಸಿ, ಅದರಲ್ಲಿ ಒಂದು ಭಾರ (ಕೊಳಗ) ಭತ್ತವನ್ನು ಸಮವಾಗಿ ಹರವಿ, ಭತ್ತದ ಮಧ್ಯದ ಎಂಟು ದಿಕ್ಕುಗಳಲ್ಲೂ ಕಮಲವನ್ನು ಬರೆಯಬೇಕು. ಪ್ರತಿ ದಿಕ್ಕಿನಲ್ಲೂ ಧೂಪದಿಂದ ಸುವಾಸಿತವಾದ ಕಲಶಗಳನ್ನು ಇರಿಸಬೇಕು. ಮಧ್ಯದಲ್ಲಿ ದೊಡ್ಡದೊಂದು ಕಲಶವಿರಬೇಕು. ಎಲ್ಲ ಕಲಶಗಳನ್ನೂ ಹಸಿಯ ನೂಲಿನಿಂದ ಸುತ್ತಬೇಕು. ಕಲಶಗಳಲ್ಲಿ ಮಾವಿನೆಲೆ, ದರ್ಭೆಯ ಕೂರ್ಚೆಗಳನ್ನು ಇರಿಸಬೇಕು. ಮಂತ್ರಪೂತವಾಗಿರುವಂತಹ ಪಂಚಗ್ಯವಗಳನ್ನು ಕಲಶದೊಳಗೆ ಹಾಕಬೇಕು.

ಎಲ್ಲಾ ಒಂಬತ್ತು ಕಲಶಗಳಲ್ಲಿ ನೀಲಮಣಿಗಳನ್ನು ಹಾಕಬೇಕು. ಗುರುವೂ ಆಚಾರ್ಯನೂ ಆಗಿರುವವನು ವಿಧುರನಾಗಿರಬಾರದು. ಆದುದರಿಂದ ಸಪತ್ನೀಕರನೂ ಯೋಗ್ಯನೂ ಆದ ಗುರುವನ್ನು ಪುರೋಹಿತನನ್ನಾಗಿ ಆ ಕರ್ಮಕ್ಕೆ ನಿಯಮಿಸಿಕೊಳ್ಳಬೇಕು. ವಿಷ್ಣು ಮತ್ತು ಇಂದ್ರಾದಿಗಳ ಪ್ರತಿಮೆಯನ್ನು ಆಯಾಯ ಕುಂಭಗಳಲ್ಲಿರಿಸಬೇಕು. ಆ ಕಲಶಗಳ ಮೇಲೆ ಶಿರಸ್ಸುಳ್ಳ (ಜುಟ್ಟುಳ್ಳ) ತೆಂಗಿನಕಾಯಿಗಳನ್ನಿರಿಸಬೇಕು. ಮಧ್ಯದ ಕಲಶದಲ್ಲಿ ವಿಷ್ಣುವನ್ನು ಆವಾಹನೆಮಾಡಿ ಪೂಜಿಸಬೇಕು.

ಪೂರ್ವಾದಿ ದಿಕ್ಕುಗಳಲ್ಲಿ ಇಂದ್ರಾದಿದೇವತೆಗಳ ಕಲಶಗಳನ್ನಿರಿಸಬೇಕು. ಆಯಾ ದೇವತೆಗಳ ಮಂತ್ರಗಳನ್ನುಚ್ಚರಿಸಬೇಕು. ಮಂತ್ರ ಉಚ್ಚರಿಸುವಾಗ ‘ನಮಃ’ ಪದಯುಕ್ತವನ್ನು ಬಳಸಬೇಕು. ಉದಾಹರಣೆಗೆ, ಇಂದ್ರದೇವನಿಗೆ ‘ಇಂದ್ರಾಯ ನಮಃ’ ಎಂದು ಮಂತ್ರ ಉಚ್ಚರಿಸಿ ಪೂಜಿಸಬೇಕು. ಆವಾಹನೆ ಮುಂತಾದುವುಗಳನ್ನು ಆಚಾರ್ಯನಿಂದಲೇ ಮಾಡಿಸಬೇಕು. ಆಚಾರ್ಯನು ಆಯಾಯ ದೇವತೆಗಳ ಮಂತ್ರಗಳನ್ನು ಜಪಿಸಬೇಕು. ಜಪವಾದ ಮೇಲೆ ಕಲಶಗಳ ಪಶ್ಚಿಮದಿಕ್ಕಿನಲ್ಲಿ ಅಗ್ನಿಪ್ರತಿಷ್ಠಾಪನೆಯನ್ನು ಮಾಡಿ, ನೂರೆಂಟು ಹೋಮಗಳನ್ನು ಮಾಡಬೇಕು. ಹೀಗೆ ಶಾಂತಿಕರ್ಮವನ್ನು ಒಂದು ದಿನವಾಗಲಿ, ಇಲ್ಲವೇ ಒಂಬತ್ತು ದಿನಗಳಾಗಲಿ, ಅಥವಾ 48 ದಿನಗಳ ಒಂದು ಮಂಡಲವಾಗಲಿ, ದೇಶಕಾಲಕ್ಕನುಗುಣವಾಗಿ ಮಾಡಬೇಕು. ಶಾಂತಿಗಾಗಿ ಶಮೀವೃಕ್ಷದ ಸಮಿತ್ತಿನ ಹೋಮವನ್ನೂ, ಜೀವನವೃತ್ತಿಗಾಗಿ ಪಲಾಶಸಮಿತ್ತಿನ ಹೋಮವನ್ನೂ ಮಾಡಬೇಕು. ಕರ್ಮಪ್ರಾರಂಭದಲ್ಲಿ ಯಾವ ರೀತಿ ದ್ರವ್ಯವಿನಿಯೋಗವನ್ನು ಮಾಡಿರುವುದೋ, ಅದರಂತೆ ಕೊನೆಯವರೆಗೂ ವಿನಿಯೋಗಮಾಡಬೇಕು. ಋತ್ವಿಕ್ಕುಗಳು ಪುಣ್ಯಾಹವಾಚನೆಯನ್ನು ಮಾಡಿ ಜಲದಿಂದ ಮನೆಯನ್ನೆಲ್ಲಾ ಸಂಪ್ರೋಕ್ಷಿಸಬೇಕು.

ಎಲ್ಲಾ ಹೋಮಗಳ ಕೊನೆಯಲ್ಲಿ ನವಗ್ರಹಗಳನ್ನು ಅರ್ಚಿಸಿ, ಋತ್ವಿಕ್ಕುಗಳಿಗೆ ದಾನ ಕೊಡಬೇಕು. ಕರ್ಮಕ್ಕಾಗಿ ಸಂಗ್ರಹಿಸಿದ ಸಾಮಗ್ರಿಗಳನ್ನೆಲ್ಲಾ ಆಚಾರ್ಯನಿಗೆ ಕೊಡಬೇಕು. ಉತ್ಪಾತಗಳಿಗೂ ಮಾರಿಗಳಿಗೂ ದುಃಖಕ್ಕೂ ಯಮನೇ ಸ್ವಾಮಿ. ಆದುದರಿಂದ ಪಾಶ ಮತ್ತು ಅಂಕುಶಗಳನ್ನು ಧರಿಸಿರುವಂತಹ ಕಾಲಪ್ರತಿಮೆಯನ್ನು ಮಾಡಿಸಿ, ಅದನ್ನ ದಕ್ಷಿಣೆಯೊಡನೆ ದಾನಮಾಡಬೇಕು. ಬಳಿಕ ಪೂರ್ಣವಾದ ಆಯಸ್ಸು ಲಭಿಸಲು ಎಳ್ಳನ್ನು ದಾನಮಾಡಬೇಕು. ರೋಗನಿವೃತ್ತಿಗಾಗಿ ತುಪ್ಪದಲ್ಲಿ ತನ್ನ ಪ್ರತಿಬಿಂಬವನ್ನು ನೋಡಿಕೊಂಡು, ಆ ತುಪ್ಪವನ್ನು ದಾನಮಾಡಬೇಕು.

ಭೂತಾದಿಗಳ ಭಯನಿವೃತ್ತಿಗಾಗಿ ಭೈರವನ ಪೂಜೆ ಮಾಡಬೇಕು. ಕೊನೆಯಲ್ಲಿ ಶಿವನಿಗೆ ಮಹಾಭಿಷೇಕ ಮತ್ತು ನೈವೇದ್ಯಗಳನ್ನು ಮಾಡಬೇಕು. ಬಳಿಕ ಜನರಿಗೆ ಭೋಜನವನ್ನು ಮಾಡಿಸಬೇಕು. ಈ ರೀತಿ ಶಾಂತಿಕರ್ಮ ಮಾಡಿದರೆ, ದೋಷ ಶಾಂತಿಯಾಗುವುದು. ಮಹಾಪಾಪಗಳು ಪ್ರಾಪ್ತವಾಗಿದ್ದರೆ ಭೈರವನನ್ನು ಪೂಜಿಸಿ, ‘ಓ ಪ್ರಭುವೇ! ನಿನ್ನ ಸ್ವರೂಪದಲ್ಲಿ ನನ್ನ ಬುದ್ಧಿ ನೆಲೆಸಿರುವುದು. ನಿನ್ನ ಹೊರತು ಇನ್ನಾವ ಅಶೂನ್ಯ ಅಂದರೆ, ಸ್ಥಿರವಾದ ವಸ್ತುವನ್ನೂ ನನ್ನ ಬುದ್ಧಿ ಅಪೇಕ್ಷಿಸುವುದಿಲ್ಲ. ನನ್ನಲ್ಲಿರುವ ಅಹಂಕಾರವು ನಿನ್ನ ದರ್ಶನವಾದೊಡನೆಯೇ ನಷ್ಟವಾಯಿತು. ನಾನು ದೇಹದೊಡನೆ ನಿನಗೆ ನಮ್ರನಾಗಿರುವೆ. ನೀನು ಮಹಾಪುರುಷ, ನನ್ನ ಸ್ವರೂಪ ಶೂನ್ಯವಾದುದಲ್ಲ. ನಿನಗೆ ನಾನು ದಾಸನಾಗಿರುವೆ’ ಎಂದು ಪ್ರಾರ್ಥಿಸಬೇಕು. ಈ ರೀತಿಯಾಗಿ ‘ನಾನು ನಿನ್ನ ದಾಸನು’ ಎಂಬ ಆತ್ಮಯಜ್ಞರೂಪವಾದ ನಮಸ್ಕಾರವನ್ನು ಮಾಡಬೇಕು ಎಂದು ಸೂತಮುನಿ ಶಾಂತಿಕರ್ಮ ವಿಧಾನವನ್ನು ಪ್ರಯಾಗದ ಸೂತಮುನಿಗಳಿಗೆ ತಿಳಿಸುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT