ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ: ಶಿವಸ್ಮರಣೆಯೇ ದಿವ್ಯವೇದ ಮಂತ್ರ

ಅಕ್ಷರ ಗಾತ್ರ

ನಿರ್ಗುಣಾತ್ಮಕವಾದ ಪರಬ್ರಹ್ಮವಸ್ತುವಿನಲ್ಲಿದ್ದ ಸತ್ವ-ರಜಸ್ಸು-ತಮಸ್ಸುಗಳಲ್ಲಿ ಬದಲಾವಣೆಯಾಗಿ ಜಗತ್ತು ನಿರ್ಮಾಣವಾಯಿತು ಎಂಬ ಸೃಷ್ಟಿ ರಹಸ್ಯವನ್ನು ತಿಳಿದ ಷಟ್ಕುಲೀನ ಮುನಿಗಳು ಧನ್ಯತಾಭಾ ವದಿಂದ ಬ್ರಹ್ಮನನ್ನು ಸ್ತುತಿಸುತ್ತಾರೆ. ನಂತರ ಮತ್ತೆ ಬ್ರಹ್ಮನನ್ನು ‘ಆ ಈಶ್ವರನ ಮನನದ ಸ್ವರೂಪವೇನು? ಶ್ರವಣದ ರೂಪವೇನು? ಅವ ನನ್ನು ಹೇಗೆ ಕೀರ್ತಿಸಬೇಕು? ಇವನ್ನು ವಿಧಿವತ್ತಾಗಿ ನಮಗೆ ಹೇಳು?’ ಎಂದು ಕೋರುತ್ತಾರೆ. ಆಗ ಬ್ರಹ್ಮನು ಈಶ್ವರನನ್ನು ಒಲಿಸಿ ಕೊಳ್ಳುವ ಮನನ-ಶ್ರವಣ-ಕೀರ್ತನ ಎಂಬ ಮೂರು ಸಾಧನಗಳ ಅರ್ಥವನ್ನು ಬಿಡಿಸಿ ಹೇಳುತ್ತಾನೆ.

ಈಶ್ವರನ ಪೂಜೆ ಮಾಡುವುದು, ಮಂತ್ರಜಪ ಮಾಡುವುದು. ಈಶ್ವರನ ಗುಣ, ಸ್ವರೂಪ, ಲೀಲೆಗಳನ್ನು ಸ್ಮರಿಸುವುದು. ಶಿವನ ಪವಿತ್ರ ನಾಮಗಳನ್ನು ಯುಕ್ತಿಪೂರ್ವಕವಾಗಿ, ಮನಸ್ಸಿನಿಂದ ಪರಿಶೋ ಧಿಸಿ ನಿಶ್ಚಯಿಸುವುದೇ ಮನನ. ಈ ಮನನ ಸಾಧನವು ಈಶ್ವರ ಸಾಕ್ಷಾತ್ಕಾರದಲ್ಲಿ ಬೇಕಾಗುವ ಎಲ್ಲ ಸಾಧನಗಳಿಗಿಂತಲೂ ಬಹು ಮುಖ್ಯವಾದ ಸಾಧನ. ಶಿವನಾಮ ಮತ್ತು ಮಹಿಮೆಯನ್ನು ಕೇಳುವುದೇ ಶ್ರವಣಸಾಧನ. ಶ್ರುತಿಯಲ್ಲಿ ಅಥವಾ ಬೇರೆ ಭಾಷೆಯಲ್ಲಿ ಹೇಳಿರುವ ಪರಮೇಶ್ವರನ ಪ್ರತಾಪ, ಗುಣ, ರೂಪ, ಲೀಲೆ, ನಾಮಗಳನ್ನು ಸ್ಫುಟವಾದ ದನಿಯಿಂದ, ಮಧುರವಾಗಿ ಗಾನಮಾಡಿ ಸ್ತುತಿಸುವುದೇ ಕೀರ್ತನ. ಇದು ಮಧ್ಯಮವಾದ ಸಾಧನ. ಇಂಥ ಅಮೂಲ್ಯವೂ ಮತ್ತು ಪವಿತ್ರವೂ ಆದ ಶಿವಭಕ್ತಿಸಾಧನಗಳನ್ನು ನಿಷ್ಠೆಯಿಂದ ಶಿವಮಾರ್ಗವನ್ನ ಅನುಸರಿಸಿ ಪಡೆಯಬೇಕು. ಶಿವಭಕ್ತಿ ಎಷ್ಟರಮಟ್ಟಿಗೆ ಇರಬೇಕೆಂದರೆ, ಕಾಮುಕನು ಸದಾ ಸ್ತ್ರೀವಾಂಛಿತನಾಗಿ ಏನೇ ಕೇಳಿದರೂ ನೋಡಿದರೂ ಸ್ತ್ರೀ ಎಂದೇ ಭಾವಿಸಿ ಆಕರ್ಷಣೆಗೊಳಗಾಗುವಂತೆ, ಶಿವಭಕ್ತರು ಸಹ ತಮ್ಮ ಕಿವಿಯಿಂದ ಯಾವ ಶಬ್ದವನ್ನು ಕೇಳಿದರೂ ಅದೆಲ್ಲವೂ ಶಿವಪರವೆಂದೇ ದೃಢವಾಗಿ ಭಾವಿಸಿ ಸಮ್ಮೋಹಗೊಳ್ಳಬೇಕು. ಇಂಥ ಏಕಾಗ್ರಮನಸ್ಸಿನ ಭಾವನೆಯೇ ಶಿವ ಶ್ರವಣಸಾಧನ. ಶಿವಭಕ್ತರು ಸಹ ಯಾವ ಶಬ್ದವನ್ನು ಕೇಳಿದರೂ ಅದನ್ನು ಶಿವಪದವೆಂದೇ ಭಾವಿಸಿ ಶಿವನ ಸ್ಮರಣೆಯಲ್ಲಿ ತಲ್ಲೀನರಾಗಬೇಕು. ಸಕಲ ಶಬ್ದಗಳಿಗೂ ಈಶ್ವರನೇ ಅರ್ಥವೆಂದು ಶ್ರುತಿಗಳು ಸಾರಿವೆ. ಅದರಂತೆ ಶಿವನಾಮ ಮತ್ತು ಕೀರ್ತನೆಯನ್ನು ಕೇಳುವ ಶ್ರವಣಮಾರ್ಗದಿಂದ ಶಿವಸಾನ್ನಿಧ್ಯವನ್ನು ಪಡೆಯಬಹುದು.

ಕಾಮುಕನ ಭಾವನೆಯಲ್ಲಿರುವುದು ದುರ್ಮೋಹ, ಅಭಾಸವಾ ದುದು ಮತ್ತು ಅಸತ್ಯವಾದುದು. ಆದರೆ ಶಿವನ ಶಬ್ದಗಳಲ್ಲಿರುವ ಈಶ್ವರ ಭಾವನೆಯು ಸತ್ಯವಾದುದು. ಇದು ಕಾಮುಕಭಾವನೆಗೂ ಈಶ್ವರ ಭಾವ
ನೆಗೂ ಇರುವ ವ್ಯತ್ಯಾಸ. ಕಾಮುಕನು ಶಬ್ದಗಳನ್ನು ಸ್ತ್ರೀಪರವಾಗಿ ಭಾವಿಸು ತ್ತಾನೆ. ಶಿವಭಕ್ತರು ಶಿವಪರವಾಗಿ ಭಾವಿಸಬೇಕು ಅಷ್ಟೇ. ಅಂದರೆ ಮನುಷ್ಯಕಾಮನೆಗೆ, ಅವನ ಪಂಚೇಂದ್ರಿಯಗಳು ಹೇಗೆ ಬಹಳ ಬೇಗ ಸಮ್ಮೋಹಗೊಂಡು, ಆಕರ್ಷಣೆಗೆ ಒಳಗಾಗುತ್ತೋ ಹಾಗೇ ಶಿವನ ಹೆಸರು ಕೇಳಿದಾಗ ಮನುಷ್ಯನ ಇಂದ್ರಿಯಗಳು ಅಷ್ಟೇ ಆಸೆಯಿಂದ ಸಮ್ಮೋಹಿತಗೊಂಡು ಶಿವಭಕ್ತಿಯಿಂದ ಪರವಶವಾಗಬೇಕು.

ಶಿವನಾಮಶ್ರವಣವು ಮೊದಲು ಸತ್ಪುರುಷರ ಸಹವಾಸದಿಂದ ಮತ್ತು ಉಪದೇಶದಿಂದ ಆಗಬೇಕು. ಆಗಷ್ಟೇ, ಆ ಪರಮೇಶ್ವರನ ಕೀರ್ತನೆಯಲ್ಲಿ ಮನಸ್ಸು ಆಸಕ್ತವಾಗುವುದು. ಇದರಿಂದ ಮುಖ್ಯಸಾಧನವಾದ ಮನ ನವು ಸಿದ್ಧಿಸುವುದು. ಬಳಿಕ ಶಂಕರನ ಅನುಗ್ರಹದಿಂದ ಸಕಲವೂ ಸಿದ್ಧಿಸುವುದು. ಈ ರೀತಿ ಶ್ರವಣ-ಮನನಾದಿ ಸಾಧನಗಳಿಂದ ಈಶ್ವರೋ
ಪಾಸನೆಯನ್ನು ಮಾಡಿದರೆ ಸಕಲ ರೋಗಗಳೂ ಸಂಸಾರ ಕ್ಲೇಶಗಳೂ ಪರಿಹಾರವಾಗಿ, ಸಕಲ ಸನ್ಮಂಗಳ ಉಂಟಾಗುತ್ತವೆ. ಕೊನೆಗೆ ಶಾಶ್ವತವೂ ಆನಂದಮಯವೂ ಆದ ಶಿವಸಾಯುಜ್ಯವನ್ನು ಹೊಂದಬಹುದು. ಅಂದರೆ, ಶಿವಲೋಕ ಸೇರಿ ಶಿವನೊಡನೆ ಐಕ್ಯವಾಗಬಹುದು. ಶಿವನಾಮಸ್ಮರಣೆಯು ಅತ್ಯಂತ ಶಕ್ತಿಯುತವಾಗಿದ್ದು ದಿವ್ಯವೇದ ಮಂತ್ರವಾಗಿದೆ ಅಂತ ಬ್ರಹ್ಮದೇವ ಮುನಿಗಳಿಗೆ ಹೇಳುತ್ತಾನೆ.

ಹೀಗೆ ಶ್ವೇತವರಾಹ ಕಲ್ಪಕಾಲದಲ್ಲಿ ಪ್ರಯಾಗದ ಷಟ್ಕುಲೀನಮುನಿಗಳಲ್ಲಿ ಉಂಟಾದ ಯಾರು ಶ್ರೇಷ್ಠ? ಎಂಬ ವಾದ-ವಿವಾದ ತಾರಕಕ್ಕೇರಿ, ಅವರು ಬ್ರಹ್ಮನ ಬಳಿ ಪರಿಹಾರ ತಿಳಿದ ವೃತ್ತಾಂತವನ್ನು ಸೂತಮುನಿಯು ಪ್ರಯಾಗದ ಮಹಾಸತ್ರಯಾಗದ ಮುನಿಗಳಿಗೆ ಹೇಳುತ್ತಾನೆ. ನಂತರ ತಮ್ಮ ಗುರು ವೇದವ್ಯಾಸರಿಗೆ ಈ ಸಾಧನ ಮಹಾತ್ಮೆ ವಿಚಾರ ಬ್ರಹ್ಮಕುಮಾರನಾದ ಸನತ್ಕುಮಾರನಿಂದ ಹೇಗೆ ತಿಳಿಯಿತು ಎನ್ನುವ ಮತ್ತೊಂದು ದೃಷ್ಟಾಂತಕಥೆಯನ್ನ ಹೇಳತೊಡಗುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT