ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಬ್ರಹ್ಮನ ಬಳಿ ದೇವತೆಗಳ ಮೊರೆ

ಭಾಗ –213
ಅಕ್ಷರ ಗಾತ್ರ

ತಾರಕಾಸುರನ ಕಾಟ ತಾಳಲಾರದೆ ಸತ್ಯಲೋಕಕ್ಕೆ ಬಂದ ಇಂದ್ರಾದಿ ದೇವತೆಗಳೆಲ್ಲಾ ಬ್ರಹ್ಮನಿಗೆ ನಮಸ್ಕರಿಸಿ ಭಕ್ತಿಯಿಂದ ಸ್ತುತಿಸಿದರು. ಪ್ರಸನ್ನನಾದ ಬ್ರಹ್ಮ ‘ಎಲೈ ದೇವತೆಗಳಿರಾ, ನೀವಿಲ್ಲಿಗೆ ಬಂದಿರುವ ಕಾರಣವೇನು?’ ಎಂದು ಕೇಳಿದ.

ಬ್ರಹ್ಮನ ಮಾತುಗಳನ್ನು ಕೇಳಿ ದುಃಖಿತರಾದ ದೇವತೆಗಳು ಮತ್ತೊಮ್ಮೆ ಬ್ರಹ್ಮನಿಗೆ ಕೈ ಮುಗಿಯುತ್ತಾ ಹೇಳಿದರು, ‘ಜಗದೊಡೆಯನಾದ ಬ್ರಹ್ಮನೇ! ನಿನಗೆ ತಿಳಿಯದ ವಿಚಾರವೇನೂ ಇಲ್ಲ. ತಾರಕನೆಂಬ ಅಸುರ ನಿನ್ನ ವರದಿಂದ ಕೊಬ್ಬಿ ನಮ್ಮೆಲ್ಲರನ್ನೂ ಸ್ವರ್ಗದಿಂದ ಬಲಾತ್ಕಾರದಿಂದ ಓಡಿಸಿ ನಮ್ಮ ಸ್ಥಾನವನ್ನಾಕ್ರಮಿಸಿದ್ದಾನೆ. ಸರ್ವಜ್ಞನನಾದ ನಿನಗೆ ತಿಳಿಯದಿರುವುದಾವುದು? ಆದಕಾರಣ ಈಗ ನೀನು ನಮಗೆ ಬಂದಿರುವ ದುಃಖವನ್ನು ಹೋಗಲಾಡಿಸು. ನಿನಗೆ ನಾವು ಶರಣು ಬಂದಿರುವೆವು. ತಾರಕನು ನಿತ್ಯವೂ ನಮ್ಮನ್ನು ಎಲ್ಲಿದ್ದರೂ ಹಿಂಸಿಸುತ್ತಾನೆ. ನಾವು ಎಲ್ಲೆಲ್ಲಿ ಓಡಿಹೋಗಿ ಅಡಗಿಕೊಂಡರೂ, ಮಾಯಾವಿಯಾದ ಅವನು ಅಲ್ಲಿ ಬಂದು ಪೀಡಿಸುತ್ತಾನೆ.

‘ಓ ಜಗನ್ನಾಥ, ಆ ತಾರಕನಿಂದ ನಮಗೆ ಮಹಾದುಃಖ ಬಂದಿದೆ. ನಮ್ಮೆಲ್ಲರನ್ನೂ ಆ ದೈತ್ಯ ತುಂಬಾ ಹಿಂಸಿಸುತ್ತಿದ್ದಾನೆ. ಅಗ್ನಿ, ಯಮ, ವರುಣ, ನಿರ್ಋತಿ ಮತ್ತು ವಾಯು ಮೊದಲಾದ ದಿಕ್ಪಾಲಕರೆಲ್ಲರೂ ಆ ದೈತ್ಯನಿಗೆ ಅಧೀನರಾಗಿ ಮನುಷ್ಯರಂತೆ ಅವನ ಸೇವೆ ಮಾಡುತ್ತಿದ್ದಾರೆ. ಮಹಾದೇವತೆಗಳಾದ ಅವರಿಗೆಲ್ಲಾ ಸ್ವಾತಂತ್ರ್ಯವೇ ಇಲ್ಲದಂತಾಗಿದೆ. ದೇವತೆಗಳು ತಾರಕನಿಂದ ಪೀಡಿತರಾಗಿ ಸದಾ ಅವನ ಅಧೀನರಾಗಿದ್ದಾರೆ. ದೇವತೆಗಳೆಲ್ಲ ಅವನಿಗೆ ಬೇಕಾದಂತಹ ಕಾರ್ಯಗಳನ್ನು ಮಾಡಿಕೊಡುತ್ತಾ ಅವನನ್ನೇ ಆಶ್ರಯಿಸಿಕೊಂಡಿರುವಂತಾಗಿದೆ. ಓ ಪಿತಾಮಹ, ಅಪ್ಸರೆಯರನ್ನೂ ಆ ದೈತ್ಯ ಬಲಾತ್ಕಾರದಿಂದ ಅಪಹರಿಸಿ ಇಟ್ಟುಕೊಂಡಿದ್ದಾನೆ. ಆ ದುಷ್ಟ ತಾರಕಾಸುರನು ಯಜ್ಞಗಳನ್ನು ನಡೆಸಲು ಬಿಡುತ್ತಿಲ್ಲ. ತಪಸ್ವಿಗಳು ಅವನ ಭಯದಿಂದ ತಪಸ್ಸನ್ನೇ ಆಚರಿಸುತ್ತಿಲ್ಲ. ಲೋಕದಲ್ಲಿ ದಾನಧರ್ಮಗಳಾವುವೂ ನಡೆಯುತ್ತಿಲ್ಲ. ತಾರಕನಿಗೆ ಕ್ರೌಂಚನೆಂಬ ಮಹಾಪಾಪಿಯಾದ ಸೇನಾಪತಿ ಇದ್ದಾನೆ. ಅವನು ಪಾತಾಳಲೋಕಕ್ಕೆ ಹೋಗಿ ಅಲ್ಲಿನ ಪ್ರಜೆಗಳೆಲ್ಲರನ್ನು ಹಿಂಸಿಸುತ್ತಿದ್ದಾನೆ.

‘ಓ ಸೃಷ್ಟಿಕರ್ತನೇ, ಹೀಗೆ ನಮ್ಮದಾಗಿದ್ದ ಮೂರು ಲೋಕಗಳನ್ನೆಲ್ಲ ತಾರಕಾಸುರ ಕಿತ್ತುಕೊಂಡು ಕರುಣೆ ಇಲ್ಲದೆ ನಮ್ಮನ್ನು ಹಿಂಸಿಸುತ್ತಾನೆ. ತಾರಕನಿಂದ ಓಡಿಸಲ್ಪಟ್ಟ ನಮಗೆ, ಸ್ಥಾನಮಾನವೇ ಇಲ್ಲವಾಗಿದೆ. ನಿರ್ಗತಿಕರಾದ ನಾವು ಈಗ ನೀನು ಹೇಳಿದ ಸ್ಥಾನಕ್ಕೆ ಹೋಗಲು ಸಿದ್ಧರಾಗಿರುವೆವು. ನಾವು ತಾರಕಾಸುರನೆಂಬ ದೊಡ್ಡ ಬೆಂಕಿಯಲ್ಲಿ ಬಿದ್ದು ದುಃಖಿತರಾಗಿರುವೆವು. ನಮ್ಮನ್ನು ನೀನೇ ಕಾಪಾಡಬೇಕು. ತಾರಕಾಸುರನ ಅಟ್ಟಹಾಸದ ಮುಂದೆ ನಮ್ಮ ಉಪಾಯಗಳೊಂದೂ ನಡೆಯುತ್ತಿಲ್ಲ. ಮಹಾಸನ್ನಿಪಾತಜ್ವರಗಳಲ್ಲಿ ಮಹಾಮಹಾ ಔಷಧಿಗಳೂ ಪ್ರಯೋಜನವಿಲ್ಲದಂತಾಗುವಂತೆ, ನಮಗೆ ವಿಷ್ಣುಚಕ್ರದಿಂದ ಆ ದೈತ್ಯನನ್ನು ಜಯಿಸಬಹುದೆಂಬ ಆಸೆ ಇತ್ತು. ಆದರೆ ಆ ಚಕ್ರವೂ ಬಿಟ್ಟೊಡನೆಯೇ ತಾರಾಕಾಸುರನ ಎದೆಗೆ ಹೂವಿನಂತೆ ಅಲಂಕೃತವಾಗಿ ಸೌಮ್ಯವಾಯಿತು’ ಎಂದು ದೇವತೆಗಳು ಬ್ರಹ್ಮನಿಗೆ ವಾಸ್ತವಾಂಶಗಳನ್ನು ವಿವರಿಸಿ ಹೇಳಿದರು.

ದೇವತೆಗಳು ಹೇಳಿದ ಮಾತುಗಳನ್ನೆಲ್ಲ ಕೇಳಿದ ಬ್ರಹ್ಮ, ‘ಎಲೈ ದೇವತೆಗಳಿರಾ, ತಾರಕಾಸುರ ನನ್ನ ವರಗಳಿಂದಲೇ ಅಭಿವೃದ್ಧಿಯನ್ನು ಹೊಂದಿದ್ದಾನೆ. ಆದಕಾರಣ ನನ್ನಿಂದಲೇ ಅವನು ಸಾಯುವಂತಿಲ್ಲ. ಅಭಿವೃದ್ಧಿಗೆ ತಂದವನೇ ಕೊಲ್ಲುವುದು ಯೋಗ್ಯವಲ್ಲ. ತಾನೇ ಬೆಳೆಸಿದ ವಿಷವೃಕ್ಷವನ್ನಾದರೂ ತಾನೇ ಕತ್ತರಿಸಕೂಡದು. ನಿಮ್ಮ ಕಾರ್ಯವನ್ನು ಶಂಕರ ಮಾತ್ರ ನಡೆಸಿಕೊಡಬಲ್ಲ. ಆದರೆ ತಾನೇ ಅದನ್ನು ಮಾಡಲು ಶಕ್ತನಲ್ಲ. ಇನ್ನೊಬ್ಬರ ಮೂಲಕ ಸಾಧಿಸಲು ಸಮರ್ಥನಾಗಿದ್ದಾನೆ’ ಎಂದು ಶಿವನ ಸಹಾಯ ಪಡೆಯಲು ದೇವತೆಗಳಿಗೆ ಬ್ರಹ್ಮ ಸೂಚಿಸುತ್ತಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT