ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಮನ್ಮಥನ ಮೊರೆಹೋದ ಇಂದ್ರ

ಭಾಗ –215
Last Updated 2 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ತಾರಕಾಸುರನಿಂದ ಪೀಡಿಸಲ್ಪಟ್ಟ ಇಂದ್ರ ಮನ್ಮಥನನ್ನು ಸ್ಮರಿಸಿದ. ರತಿಪತಿಯೂ ಮೂರು ಲೋಕಗಳನ್ನು ಕಾಮದಿಂದ ಜಯಿಸಿದವನೂ ಆದಂತಹ ಮನ್ಮಥ ಗರ್ವದಿಂದಲೇ ತನ್ನ ಪ್ರಿಯೆ ರತಿ ಮತ್ತು ಗೆಳೆಯ ವಸಂತನೊಡನೆ ಇಂದ್ರನ ಬಳಿಗೆ ಬಂದ. ಮನ್ಮಥ ಗಂಭೀರಭಾವದಿಂದ ‘ಎಲೈ ದೇವೇಂದ್ರನೇ, ನಿನಗೆ ಯಾವ ಮಹಾಕಾರ್ಯವು ಬಂದೊದಗಿರುವುದು? ನನ್ನನ್ನು ಕರೆಸಿದ ಕಾರಣವೇನು?’ ಎಂದ.

ಮನ್ಮಥ ಹೇಳಿದ ಮಾತನ್ನು ಕೇಳಿ ಇಂದ್ರ ಸಂತೋಷದಿಂದ ‘ಯೋಗ್ಯವಾದುದನ್ನೇ ಹೇಳಿರುವೆ’ ಎಂದು ಮನ್ಮಥನನ್ನು ಆದರದಿಂದ ಹೊಗಳುತ್ತಾ ಬರಮಾಡಿಕೊಂಡ. ನಂತರ ಇಂದ್ರ, ‘ಎಲೈ ಮನ್ಮಥನೇ, ನಿನ್ನ ಸಿದ್ಧತೆ ಚೆನ್ನಾಗಿರುವುದು. ಈಗ ನನಗೆ ಒದಗಿರುವ ಮಹಾಕಾರ್ಯವನ್ನು ಸಾಧಿಸಲು ಸಿದ್ಧನಾಗಿರುವ ನೀನು ಧನ್ಯನು. ಈಗ ನೀನು ಮಾಡಬೇಕಾಗಿರುವ ಮಹಾಕಾರ್ಯವನ್ನು ಹೇಳುವೆ. ಈ ನನ್ನ ಕಾರ್ಯವೇ ನಿನ್ನ ಕಾರ್ಯವೆಂದು ತಿಳಿ. ಇದು ಹೊಗಳಿಕೆಯ ಮಾತಲ್ಲ.

‘ಎಲೈ ಮದನ, ನನಗೆ ಅನೇಕ ಪ್ರಿಯಮಿತ್ರರಿದ್ದಾರೆ. ಆದರೆ ನಿನ್ನಂತಹ ಸನ್ಮಿತ್ರನು ಮತ್ತೊಬ್ಬನಿಲ್ಲ. ಜಯವನ್ನು ಸಂಪಾದಿಸಲು ನನಗೆ ಎರಡು ಸಾಧನಗಳಿವೆ. ಒಂದು ಮನ್ಮಥನಾದ ನೀನು, ಮತ್ತೊಂದು ವಜ್ರಾಯುಧ. ವಜ್ರಾಯುಧವೂ ಒಮ್ಮೊಮ್ಮೆ ನಿಷ್ಫಲವಾದರೂ, ನಿನ್ನಿಂದ ನನಗೆ ಎಂದೂ ಅಪಜಯವಾಗಿಲ್ಲ. ಮಿತ್ರನಿಗೆ ಹಿತವನ್ನು ಉಂಟುಮಾಡುವವನಿಗಿಂತಲೂ ಪ್ರಿಯನಾದವನು ಯಾರು? ಮಿತ್ರವರ್ಯನಾದ ನೀನು ನನ್ನ ಈ ಕಾರ್ಯವನ್ನು ಮಾಡಬೇಕು.

‘ಎಲೈ ಪ್ರಿಯಮಿತ್ರ ಕಾಮ, ಕಾಲವಶದಿಂದ ನನಗೆ ಈಗ ಮಹಾಸಂಕಷ್ಟ ಬಂದಿದೆ. ಇದನ್ನು ನಿನ್ನ ಹೊರತು ಬೇರಾರೂ ಆ ದುಃಖವನ್ನು ಹೋಗಲಾಡಿಸಲು ಸಾಧ್ಯವಿಲ್ಲ. ದುರ್ಭಿಕ್ಷಕಾಲದಲ್ಲಿ ದಾನಮಾಡುವವನ ಪರೀಕ್ಷೆಯಾಗುತ್ತದೆ. ಹಾಗೆಯೇ, ಯುದ್ದದಲ್ಲಿ ಶೂರನ ಯೋಗ್ಯತೆಯು ಗೊತ್ತಾಗುತ್ತದೆ. ಕಷ್ಟಕಾಲದಲ್ಲಿ ಮಿತ್ರನ ಯೋಗ್ಯತೆಯು ಬಯಲಾಗುತ್ತದೆ. ಗೃಹಕೃತ್ಯವು ಕೆಳಮಟ್ಟಕ್ಕೆ ಬಂದಾಗ ಸ್ತ್ರೀಯರ ಯೋಗ್ಯತೆಯ ಪರೀಕ್ಷೆಯಾಗುತ್ತದೆ. ಸಂಕಟದಲ್ಲಿ ಸ್ನೇಹದ ಪರೀಕ್ಷೆಯಾಗುತ್ತದೆ. ಎದುರಿನಲ್ಲಿ ಆಡಿದ ಮಾತಿನ ಸತ್ಯತೆಯು ಹಿಂದುಗಡೆಯಲ್ಲಿ ಗೊತ್ತಾಗುತ್ತದೆ.

‘ಎಲೈ ಮಿತ್ರವರ್ಯ ಮನ್ಮಥ! ಹೀಗೆ ಅನಿವಾರ್ಯವಾಗಿ ಬಂದಿರುವ ನನ್ನ ಆಪತ್ತಿನಲ್ಲಿ ನಿನ್ನ ಪರೀಕ್ಷೆಯು ಆಗಬೇಕಿದೆ. ಈ ಕಾರ್ಯದಿಂದ ಕೇವಲ ನನಗೆ ಮಾತ್ರ ಸುಖವಾಗುವುದಿಲ್ಲ. ಎಲ್ಲ ದೇವತೆಗಳಿಗೂ ಲೋಕಗಳಿಗೂ ಸುಖವಾಗುವುದು’ ಎಂದ.

ಸ್ವರ್ಗಾಧಿಪತಿ ದೇವೇಂದ್ರ ಆಡಿದ ಮಾತುಗಳನ್ನು ಕೇಳಿದ ಮನ್ಮಥ ಮಂದಹಾಸ ಬೀರಿದ. ‘ಎಲೈ ಇಂದ್ರನೆ, ಇದೇನು ಹೀಗೆ ಹೇಳುವೆ? ಇದಕ್ಕೆ ಉತ್ತರವನ್ನು ನಾನು ಹೇಳುವುದಿಲ್ಲ. ನಿಜವಾದ ಮಿತ್ರನು ಉಪಕಾರವನ್ನು ಮಾಡುವನೇ ಹೊರತು, ಸುಮ್ಮನೆ ಮಾತನಾಡಲಾರ. ಆಪತ್ತಿನ ಕಾಲದಲ್ಲಿ ಹೆಚ್ಚಾಗಿ ಯಾವನು ಮಾತನಾಡುವನೋ ಅವನು ಏನೂ ಮಾಡಲಾರ. ಹಾಗಿದ್ದರೂ ಈಗ ನಾನು ಒಂದು ಮಾತನ್ನು ಹೇಳುವೆ ಕೇಳು. ನಿನ್ನ ಇಂದ್ರಪದವಿಯನ್ನು ಕಸಿದುಕೊಳ್ಳಲು ಯಾರು ತಪಸ್ಸು ಮಾಡಿದರೂ ಅವರನ್ನು ಸರ್ವಥಾ ನಾನು ಹಾಳುಮಾಡುವೆ. ಸುಂದರ ಸ್ತ್ರೀ ಕುಡಿನೋಟಗಳಿಂದ ತಪಸ್ವಿಯ ತಪಸ್ಸನ್ನು ಕೆಡಿಸುವೆ. ದೇವತೆಗಳು, ಋಷಿಗಳು, ದಾನವರು, ಮಾನವರೆಲ್ಲರ ಲೆಕ್ಕವೇ ನನಗಿಲ್ಲ. ನಿನ್ನ ವಜ್ರಾಯುಧವು ದೂರದಲ್ಲಿರಲಿ, ಶಸ್ತ್ರಗಳು-ಅಸ್ತ್ರಗಳು ಅಸಂಖ್ಯ ಸೈನಿಕರು ಸುಮ್ಮನಿರಲಿ. ಮಿತ್ರನಾದ ನಾನೊಬ್ಬನೇ ನಿನ್ನ ಮುಂದಿರುವ ಕಾರ್ಯವನ್ನು ಸಾಧಿಸಬಲ್ಲೆ? ನನ್ನ ಮೋಹಪಾಶದಿಂದ ಬ್ರಹ್ಮ ವಿಷ್ಣು ಮಹೇಶ್ವರರನ್ನೇ ಮರುಳುಗೊಳಿಸಬಲ್ಲೆ. ಮಿಕ್ಕವರ ಗಣನೆಯೇ ನನಗಿಲ್ಲ’ ಎಂದ ಮನ್ಮಥ, ಗರ್ವದಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT