ಶುಕ್ರವಾರ, ಮೇ 27, 2022
28 °C

ವೇದವ್ಯಾಸರ ಶಿವಪುರಾಣಸಾರ: ಕೈಲಾಸವಾಸಿಯಾದ ಮಹಾಶಿವ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಕುಬೇರನಿಗೆ ಕೊಟ್ಟ ವರದಂತೆ ಶಿವ ಅಲಕಾನಗರಿಗೆ ಸಮೀಪವಾದ ಕೈಲಾಸಪರ್ವತದಲ್ಲಿ ವಾಸಿಸಲು ಆಗಮಿಸುತ್ತಾನೆ. ಶಿವ ತನ್ನ ಪತ್ನಿ ಪರಮೇಶ್ವರಿಯೊಂದಿಗೆ ಗೃಹಪ್ರವೇಶ ಮಾಡಿದಾಗ ಕೋಟ್ಯಾಂತರ ಗಣಗಳೂ ಕೈಲಾಸಕ್ಕೆ ಬಂದು ಸಂಭ್ರಮದಲ್ಲಿ ಪಾಲ್ಗೊಳ್ಳುತ್ತವೆ. ಎಲ್ಲರೂ ತಮ್ಮ ಇಷ್ಟಾರ್ಥಗಳನ್ನು ಹೊಂದಿದವರಾಗಿ ಸಂತೋಷದಿಂದ ಶಿವನ ಅಪ್ಪಣೆಯನ್ನು ಪಡೆದು, ತಮ್ಮ ಮನೆಗಳಿಗೆ ತೆರಳಿದರು ಎಂದು ಬ್ರಹ್ಮ ನಾರದನಿಗೆ ಹೇಳುವಾಗ, ಮಹಾಶಿವ ತನಗೆ ಮತ್ತು ವಿಷ್ಣುವಿಗೆ ಕೈಲಾಸದಲ್ಲಿ ವಿಶೇಷವಾಗಿ ಆದರಿಸಿ ಸತ್ಕರಿಸಿದ್ದನ್ನು ತಿಳಿಸುತ್ತಾನೆ. ಕೈಲಾಸಕ್ಕೆ ಬಂದ ತಮ್ಮಿಬ್ಬರನ್ನು ಜಗದೀಶ್ವರನಾದ ಶಿವನು ಆದರದಿಂದ ಬರಮಾಡಿಕೊಂಡಿದ್ದನ್ನು, ತುಂಬು ಹೃದಯದ ಆತಿಥ್ಯ ನೀಡಿ ಗೌರವಿಸಿದ್ದನ್ನು ನಾರದನಿಗೆ ಹೇಳುತ್ತಾನೆ.

‘ಎಲೈ ಹರಿಯೇ, ಬ್ರಹ್ಮ ಸುರೋತ್ತಮರೇ, ಮೂರು ಲೋಕವನ್ನೂ ಯಾವಾಗಲೂ ಪಾಲಿಸುತ್ತಲೂ, ಸೃಷ್ಟಿಸುತ್ತಲೂ ಇರುವ ನೀವಿಬ್ಬರೂ ನನಗೆ ಬಹಳ ಪ್ರೀತಿಪಾತ್ರರು. ನೀವು ನನ್ನ ಅಪ್ಪಣೆಯಂತೆ ನಿರ್ಭಯವಾಗಿ ನಿಮ್ಮ ಜಾಗಗಳಿಗೆ ತೆರಳಿರಿ. ನಾನು ಯಾವಾಗಲೂ ನಿಮ್ಮಿಬ್ಬರನ್ನೂ ವಿಶೇಷವಾಗಿ ನೋಡಿಕೊಳ್ಳುತ್ತಾ, ನಿಮಗೆ ಸುಖವನ್ನು ಉಂಟುಮಾಡುತ್ತಿರುತ್ತೇನೆ’ ಎಂದು ಹರಸುತ್ತಾನೆ. ಶಿವನು ನುಡಿದ ಮಾತನ್ನು ಕೇಳಿ, ನಾವಿಬ್ಬರೂ ಅವನಿಗೆ ನಮಸ್ಕರಿಸಿ, ಅಪ್ಪಣೆಯನ್ನು ಪಡೆದು ಸಂತುಷ್ಟಾಂತರಂಗರಾಗಿ ನಮ್ಮ ನಿವಾಸಗಳಿಗೆ ಹಿಂದಿರುಗಿದೆವು. ನಂತರ ಸುಪ್ರೀತನಾದ ಶಂಕರನು ಸಂತೋಷದಿಂದ ಕುಬೇರನನ್ನು ಕರೆದು, ಬಳಿಯಲ್ಲಿ ಕೂರಿಸಿಕೊಂಡು ಆತನ ಕೈ ಹಿಡಿದುಕೊಂಡು ಶುಭಕರವಾದ ಮಾತನ್ನು ಹೇಳಿದ: ‘ಎಲೈ ಸ್ನೇಹಿತನೇ, ನಿನ್ನ ಪ್ರೀತಿಗೆ ವಶನಾಗಿ ನಿನ್ನ ಸಖ್ಯವನ್ನು ಸಂಪಾದಿಸಿದೆ. ಯಾವ ಭಯವೂ ಇಲ್ಲದೆ ನಿನ್ನ ಜಾಗಕ್ಕೆ ಹಿಂದಿರುಗು. ಓ ಪಾಪರಹಿತನೇ, ನಾನು ಯಾವಾಗಲೂ ನಿನಗೆ ಸಹಾಯಕನಾಗಿರುವೆ’ ಎಂದು ವಚನವನ್ನಿತ್ತ. ಶಿವನ ಮಾತನ್ನು ಕೇಳಿ ಕುಬೇರನು ಬಹಳ ಸಂತೋಷಪಟ್ಟು ಆತನ ಅಪ್ಪಣೆಯಂತೆ ತನ್ನ ವಾಸಸ್ಥಾನಕ್ಕೆ ಹಿಂದಿರುಗಿದ.

ಬಳಿಕ ಶಿವನು ತನ್ನ ಗಣಗಳೊಡನೆ, ಆ ಪರ್ವತಶ್ರೇಷ್ಠವಾದ ಕೈಲಾಸಗಿರಿಯಲ್ಲಿ ವಾಸಿಸುತ್ತಾ, ತನಗೆ ಇಷ್ಟಬಂದಂತೆ ಯೋಗಮಾರ್ಗ ನಿರತನಾಗಿ, ಧ್ಯಾನಮಗ್ನನಾಗಿಯೂ ಇರುತ್ತಿದ್ದ. ಒಮ್ಮೆ ಸ್ವಸ್ವರೂಪವನ್ನು ಧ್ಯಾನಿಸುತ್ತಿದ್ದ. ಇನ್ನೊಮ್ಮೆ ಯೋಗನಿರತನಾಗಿರುತ್ತಿದ್ದ. ಮತ್ತೊಮ್ಮೆ ಸ್ವೇಚ್ಛೆಯಾಗಿ ಗಣಗಳೆಲ್ಲರಿಗೆ ಇತಿಹಾಸಗಳನ್ನು ಹೇಳುತ್ತಿದ್ದ. ಮಹೇಶ್ವರನು ಒಂದೊಂದು ಸಲ ಕೈಲಾಸಪರ್ವತದ ವೈವಿಧ್ಯವೂ ಮನೋಹರವೂ ಆದ ನಾನಾ ಸ್ಥಳಗಳಲ್ಲಿ ತನ್ನ ಗಣಗಳೊಡನೆ ವಿಹಾರನಿರತನಾಗಿರುತ್ತಿದ್ದ. ಈ ರೀತಿ ಶಂಕರನು ಮಹಾಯೋಗಿಶ್ರೇಷ್ಠನಾಗಿದ್ದರೂ, ತನ್ನ ಕೈಲಾಸಪರ್ವತದಲ್ಲಿ ಸಾಮಾನ್ಯ ಜನರಂತೆ ನಾನಾ ರೀತಿಯಾದ ಲೀಲೆಗಳನ್ನು ತೋರ್ಪಡಿಸಿದ. ಪರಮೇಶ್ವರನು ಕೆಲವು ಕಾಲ ಅಪತ್ನೀಕನಾಗಿಯೇ ಇದ್ದು, ಆಮೇಲೆ ದಕ್ಷನಿಗೆ ಮಗಳಾಗಿ ಹುಟ್ಟಿದ ಸತಿಯನ್ನು ತನ್ನ ಪತ್ನಿಯನ್ನಾಗಿ ಪರಿಗ್ರಹಿಸಿದ. ದಕ್ಷಪುತ್ರಿಯಾದ ಸತೀದೇವಿಯೊಡಗೂಡಿ ಮಹೇಶ್ವರನು ಬಹುವಾಗಿ ವಿಹರಿಸಿದ.

ಓ ನಾರದ, ಆ ಪರಮಪುರುಷನು ಅಲ್ಲಿ ಸಾಮಾನ್ಯ ಜನರಂತೆ ಪ್ರಪಂಚ ವ್ಯವಹಾರಾಸಕ್ತನಾಗಿ ಸುಖವಾಗಿದ್ದ. ಈ ರೀತಿ ನಿನಗೆ ರುದ್ರನ ಆವಿರ್ಭಾವವನ್ನೂ, ಆತನು ಕೈಲಾಸಪರ್ವತಕ್ಕೆ ಬಂದ ಬಗೆಯನ್ನೂ, ಕುಬೇರನೊಡನೆ ಸಖ್ಯವನ್ನು ಬೆಳೆಸಿದುದನ್ನೂ ವಿವರಿಸಿದುದಾಯಿತು. ಇಹದಲ್ಲಿ, ಪರದಲ್ಲಿಯೂ ಶಾಶ್ವತವಾಗಿ ಸಕಲ ಇಷ್ಟಾರ್ಥಗಳನ್ನು ನೀಡುವಂಥ ಜ್ಞಾನದಾಯಕವಾದ ಅದರೊಳಗಿನ ಲೀಲೆಗಳನ್ನು ವರ್ಣಿಸಿರುವೆ. ಯಾರು ಸಮಾಧಾನಚಿತ್ತದಿಂದ ಈ ಕಥೆಯನ್ನು ಓದುವರೋ, ಅಥವಾ ಕೇಳುವರೋ, ಅವರು ಈ ಲೋಕದಲ್ಲಿ ಸಕಲ ಭೋಗಭಾಗ್ಯಗಳನ್ನೂ ಅನುಭವಿಸಿ ಪರಲೋಕದಲ್ಲಿ ಮೋಕ್ಷವನ್ನೂ ಪಡೆಯುವರು ಎಂದು ಬ್ರಹ್ಮ ಹೇಳುವುದರೊಂದಿಗೆ ವೇದವ್ಯಾಸರ ವಿರಚಿತ ಶ್ರೀ ಶಿವಮಹಾಪುರಾಣದಲ್ಲಿ ಎರಡನೆ ಸಂಹಿತೆಯಾದ ರುದ್ರಸಂಹಿತೆಯ ಮೊದಲನೆಯ ಖಂಡವಾದ ಸೃಷ್ಟಿಖಂಡದಲ್ಲಿ ಕೈಲಾಸೋಪಾಖ್ಯಾನದಲ್ಲಿ ಶಿವಕೈಲಾಸ ಆಗಮನ ಎಂಬ ಇಪ್ಪತ್ತನೆಯ ಅಧ್ಯಾಯ ಮುಗಿಯಿತು.

ಇಲ್ಲಿಗೆ ವೇದವ್ಯಾಸರು ರಚಿಸಿದ್ದನ್ನು ಶಿಷ್ಯ ಸೂತಮುನಿಯು ಪ್ರಯಾಗದ ಋಷಿಮುನಿಗಳಿಗೆ ಹೇಳುವ ಮೂಲಕ ಜಗತ್ತಿಗೆ ಪರಿಚಯವಾದ ಶ್ರೀ ಶಿವಮಹಾಪುರಾಣದ ಎರಡನೇ ಸಂಹಿತೆಯಾದ ರುದ್ರಸಂಹಿತೆಯ ಐದು ಖಂಡಗಳಲ್ಲಿ ಮೊದಲ ಖಂಡವಾದ ಸೃಷ್ಟಿಖಂಡವು ಸಂಪೂರ್ಣವಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು