ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ: ತ್ರಿಮೂರ್ತಿಗಳ ಆಯುಷ್ಯ ವಿವರ

ಅಕ್ಷರ ಗಾತ್ರ

ಈಗ ಪರಮಶಿವತತ್ವವನ್ನು ಬ್ರಹ್ಮನು ನಾರದನಿಗೆತ್ರಿಮೂರ್ತಿಗಳಕಾರ್ಯಭಾರಗಳನ್ನೂ ಆಯುಷ್ಯವನ್ನೂ ಮಹಾಶಿವ ವಿವರಿಸಿದ್ದನ್ನು ಹೀಗೆ ತಿಳಿಸುತ್ತಾನೆ:

‘ಎಲೈ ವಿಷ್ಣುವೇ, ನೀನು ಸರ್ವಲೋಕಗಳಲ್ಲಿಯೂ ಸದಾ ಕಾಲದಲ್ಲಿಯೂ, ಮಾನನೀಯನೂ ಪೂಜ್ಯನೂ ಆಗುವೆ. ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಲೋಕದಲ್ಲಿ ಯಾವಾಗ ದುಃಖವುಂಟಾಗುವುದೋ, ಆಗ ನೀನು ಆ ದುಃಖಗಳೆಲ್ಲವನ್ನೂ ಪರಿಹರಿಸಲು ಕಂಕಣ ಬದ್ದನಾಗು. ಇಂಥ ದುಸ್ಸಾಧ್ಯವಾದ ಕೆಲಸಗಳೆಲ್ಲದರಲ್ಲೂ ನಾನು ನಿನಗೆ ಸಹಾಯ ಮಾಡುವೆ. ಮಹಾದುಷ್ಟರಾದ ನಿನ್ನ ವೈರಿಗಳನ್ನೂ ಸದೆಬಡಿಯುವೆ.

‘ಓ ಹರಿ, ಜನರನ್ನು ದುಃಖದಿಂದ ಪಾರುಗಾಣಿಸಲು ಪ್ರಯತ್ನಶೀಲನಾಗು. ಬಹುವಿಧವಾದ ಅವತಾರಗಳನ್ನೆತ್ತಿ ಪ್ರಪಂಚದಲ್ಲಿ ಉತ್ತಮವಾದ ಕೀರ್ತಿಯನ್ನು ಗಳಿಸು. ಸಗುಣನಾದ ನಾನು ರುದ್ರನೆನಿಸಿ, ಇದೇ ಶರೀರದಿಂದಲೇ, ಲೋಕಹಿತಾರ್ಥವಾಗಿ ನಿನಗೆ ಅಸಾಧ್ಯವಾದ ಕೆಲಸಗಳನ್ನು ನಿಸ್ಸಂಶಯನಾಗಿ ಸರ್ವದಾ ನೆರವೇರಿಸುವೆನು. ನೀನು ರುದ್ರನಿಗೂ ಧ್ಯೇಯನಾಗಿರುವೆ. ಲಯಕರ್ತನಾದ ಆ ಹರನೂ ನಿನ್ನಿಂದ ಧ್ಯೇಯನಾದವನೇ. ನಿನಗೂ ಆ ರುದ್ರನಿಗೂ ಮಾಡುವ ಕೆಲಸದಲ್ಲಿ ಸ್ವಲ್ಪವೂ ಭೇದವಿಲ್ಲ; ನೀವಿಬ್ಬರೂ ಒಂದೇ.

‘ಎಲೈ ಮಹಾವಿಷ್ಣು, ಬ್ರಹ್ಮ, ನಿಮ್ಮಿಬ್ಬರಿಗೆ ಕೊಟ್ಟಿರುವ ವರಗಳಿಂದ, ನಿಮ್ಮಿಬ್ಬರ ಲೀಲೆಗಳಿಂದಲೂ ನೀವು ಒಂದೇ ಎನ್ನುವುದರಲ್ಲಿ ಸಂಶಯವಿಲ್ಲ. ಹರನಲ್ಲಿ ಭಕ್ತಿಯುಳ್ಳವನು, ಯಾರಾದರೂ ನಿನ್ನನ್ನು ನಿಂದಿಸಿದರೆ, ಅವನು ಗಳಿಸಿದ್ದ ಪುಣ್ಯವೆಲ್ಲವೂ ತಕ್ಷಣ ಬೂದಿಯಾಗಿ ಹೋಗುವುದು. ಓ ಪುರುಷಶ್ರೇಷ್ಠ ವಿಷ್ಣು, ನಿನ್ನಲ್ಲಿ ದ್ವೇಷವನ್ನು ಬೆಳಸಿದವನು ಎಂದೆಂದಿಗೂ ನರಕದಲ್ಲಿ ಬಿದ್ದು ಕೊಳೆಯುವನು. ಈ ಲೋಕದಲ್ಲಿ ಮನುಷ್ಯರಿಗೆ ಮುಕ್ತಿಯನ್ನೂ, ವಿಶೇಷವಾಗಿ ಭೋಗಭಾಗ್ಯಗಳನ್ನೂ ನೀಡುತ್ತಲಿರು. ಭಕ್ತರು ನಿನ್ನನ್ನು ಸದಾ ಸ್ತುತಿಸಲಿ. ಅವರಿಂದ ಪೂಜೆಯನ್ನು ಕೈಗೊಳ್ಳುವವನಾಗು. ಅಲ್ಲದೆ ದುಷ್ಟರನ್ನು ಶಿಕ್ಷಿಸುತ್ತಾ, ಶಿಷ್ಟರನ್ನು ರಕ್ಷಿಸುತ್ತಲೂ ಇರು.’

ಹೀಗೆಂದು ಹೇಳಿದ ಶಿವನು ಧಾತೃವಾದ ನನ್ನ ಮತ್ತು ಹರಿಯ ಕೈಗಳನ್ನು ಹಿಡಿದುಕೊಂಡು ‘ಯಾವಾಗಲೂ ಈತನಿಗೆ ಸಂಕಟ ಸಮಯಗಳಲ್ಲಿ ನೆರವನ್ನು ನೀಡುತ್ತಿರು’ ಎಂದು ವಿಷ್ಣುವಿಗೆ ಸೂಚಿಸಿದ. ‘ನೀನು ಎಲ್ಲರಿಗೂ ಸಾಕ್ಷಿಭೂತನಾಗಿ, ಭುಕ್ತಿಮುಕ್ತಿಗಳನ್ನು ಕೊಡುವವನಾಗಿ ಇರುವುದಲ್ಲದೆ, ಸದಾ ಸಕಲರ ಇಷ್ಟಾರ್ಥಗಳನ್ನೂ ನೆರವೇರಿಸುತ್ತಾ ಎಲ್ಲರಿಗೂ ಮಾನ್ಯನಾಗಿರು.

‘ಓ ಹರಿ, ನೀನು ನನ್ನ ಅಪ್ಪಣೆಯಂತೆ ಎಲ್ಲರಿಗೂ ಪ್ರಾಣಸ್ವರೂಪನಾಗಿರು. ನಿನಗೆ ತೊಂದರೆ ಒದಗಿದಾಗ, ನನ್ನ ಶರೀರಭೂತನಾದ ಆ ಹರನನ್ನು ಸ್ಮರಿಸು. ಆ ಹರನು ನಿನ್ನ ನೆರವಿಗೆ ಬರುತ್ತಾನೆ. ನಿನ್ನನ್ನು ಯಾರು ಅನನ್ಯ ಭಕ್ತಿಯಿಂದ ಆರಾಧಿಸುವರೋ, ಅವರು ನನ್ನನ್ನೇ ಆರಾಧಿಸಿದರೆಂದು ತಿಳಿ. ನಮ್ಮೀರ್ವರಿಗೂ ಭೇದವನ್ನೆಣಿಸುವವನು ಖಂಡಿತವಾಗಿ ನರಕದಲ್ಲಿ ಬೀಳುವನು’ ಎಂದ ಶಿವ, ನಂತರ ಬ್ರಹ್ಮ, ವಿಷ್ಣು, ಮಹೇಶ್ವರರೆಂಬತ್ರಿಮೂರ್ತಿಗಳಆಯುಷ್ಯ ಪ್ರಮಾಣವನ್ನು ತಿಳಿಸುತ್ತಾನೆ.

‘ನಾಲ್ಕು ಸಹಸ್ರ ಯುಗಗಳು ಬ್ರಹ್ಮನಿಗೆ ಒಂದು ಹಗಲೆನಿಸುವುದು. ಅಷ್ಟೇ ಕಾಲವು ಆತನ ಒಂದು ರಾತ್ರಿಗೂ ಹಿಡಿಸುವುದು. ಇದೇ ರೀತಿ ಮುಂದೆಯೂ ಕ್ರಮವಾಗಿ ಪ್ರಮಾಣವನ್ನರಿಯಬೇಕು. ಹೀಗೆ ರಾತ್ರಿ ಹಗಲು ಸೇರಿದ ಮೂವತ್ತು ದಿನಗಳು ಒಂದು ತಿಂಗಳೆಂತಲೂ, ಆ ಹನ್ನೆರಡು ತಿಂಗಳು ಒಂದು ವರ್ಷವೆಂತಲೂ ಎನಿಸಲ್ಪಡುವುದು. ಹೀಗೆ ನೂರು ಬ್ರಹ್ಮ ವರ್ಷಗಳವರೆಗೆ ಬ್ರಹ್ಮನಿಗೆ ಆಯುಷ್ಯ ಇರುತ್ತೆ.

‘ಬ್ರಹ್ಮನ ಒಂದು ವರ್ಷವು ವಿಷ್ಣುವಿಗೆ ಒಂದು ಹಗಲೆನಿಸುವುದು. ಬ್ರಹ್ಮನ ಮತ್ತೊಂದು ವರ್ಷವು ವಿಷ್ಣುವಿಗೆ ಒಂದು ರಾತ್ರಿಯೆನಿಸುವುದು. ಈ ರೀತಿ ಹಗಲುರಾತ್ರಿಗಳು ಸೇರಿದ ದಿವಸಗಳು ಮುನ್ನೂರ ಅರವತ್ತು ಆದರೆ ವರ್ಷವೆನಿಸುವುದು. ಆ ವೈಷ್ಣವವರ್ಷಗಳು ನೂರಾಗಲು ವಿಷ್ಣುವಿನ ಆಯುಷ್ಯದ ಪರಿಮಾಣವಾಗುವುದು. ವಿಷ್ಣುವಿನ ಒಂದು ವರ್ಷವು ರುದ್ರನಿಗೆ ಹಗಲೂ, ಅದೇ ವಿಷ್ಣುವಿನ ಒಂದು ವರ್ಷವು ರಾತ್ರಿ ಎನಿಸುವುದು. ಈ ರೀತಿ ಹಗಲು ರಾತ್ರಿಗಳು ಸೇರಿದ ಮುನ್ನೂರ ಅರವತ್ತು ದಿವಸಗಳು ರುದ್ರನಿಗೆ ಒಂದು ವರ್ಷವೆನಿಸುವುದು. ಹೀಗೆ ರುದ್ರ ವರ್ಷಗಳು ನೂರು ಕಳೆಯಲು ಆಯುಷ್ಯ ಪೂರ್ಣವಾಗುವುದು’ ಎಂದು ವಿವರಿಸುತ್ತಾನೆ ಪರಮೇಶ್ವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT