ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ: ಶಿವಲಿಂಗ ಸ್ಥಾಪನಾ ಕ್ರಮ

ಅಕ್ಷರ ಗಾತ್ರ

ಮಾನವನು ತನ್ನ ದೇಹಕ್ಕನುಗುಣವಾಗಿ ಹಲ್ಲುಜ್ಜುವ ಕಡ್ಡಿಯನ್ನು ಮಾಡಿಕೊಳ್ಳಬೇಕು. ಷಷ್ಠೀ, ಅಮಾವಾಸ್ಯೆ, ನವಮೀ, ವ್ರತದಿವಸ, ಅಸ್ತದಿನ, ಭಾನುವಾರ, ತಂದೆ–ತಾಯಿ ಮೊದಲಾದವರ ಶ್ರಾದ್ಧದಿನಗಳು – ಇಂಥ ದಿನಗಳಲ್ಲಿ ಹಲ್ಲು ಉಜ್ಜಬಾರದು. ಹಲ್ಲುಜ್ಜಿದ ನಂತರ ಜಲಾಶಯಗಳಲ್ಲಿ ವಿಧಿಪೂರ್ವಕವಾಗಿ ಸ್ನಾನಮಾಡಬೇಕು. ಮಂತ್ರಪೂರ್ವಕ ಸ್ನಾನಾನಂತರ ಆಚಮನವನ್ನು ಮಾಡಿ, ಒಗೆದ ಮಡಿ ಬಟ್ಟೆಯನ್ನುಟ್ಟುಕೊಳ್ಳಬೇಕು.

ಬಳಿಕ ನಿತ್ಯಕರ್ಮವನ್ನು ವಿಧಿಪೂರ್ವಕವಾಗಿ ನೆರವೇರಿಸಿ, ಪೂಜಾವಿಧಿಯನ್ನು ಆರಂಭಿಸಬೇಕು. ಏಕಾಗ್ರತೆಯಿಂದ ಪೂಜೆಗೆ ಬೇಕಾದ ಉಪಕರಣಗಳನ್ನೆಲ್ಲಾ ಸಜ್ಜುಗೊಳಿಸಿಕೊಳ್ಳಬೇಕು. ಮೊದಲು ನ್ಯಾಸಾದಿಗಳನ್ನು ಮಾಡಿಕೊಂಡು ಕ್ರಮವಾಗಿ ಶಿವನನ್ನು ಪೂಜಿಸಬೇಕು. ಮೊದಲು ಗಣಪತಿಯನ್ನು, ನಂತರ ದ್ವಾರಪಾಲಕರು, ಇಂದ್ರಾದಿ ದಿಕ್ಪಾಲಕರನ್ನೂ ಪೂಜಿಸಬೇಕು. ದೇವರ ಪೀಠವನ್ನು ಸಿದ್ಧಪಡಿಸಿಕೊಳ್ಳುವಾಗ ಅಷ್ಟದಳವನ್ನು ಮಾಡಿ, ಪೂಜಾದ್ರವ್ಯಗಳನ್ನು ಅಣಿಮಾಡಿಕೊಳ್ಳಬೇಕು. ಅಷ್ಟದಳದಲ್ಲಿ ಶಿವನನ್ನು ಸ್ಥಾಪಿಸಿ, ಮೂರಾವೃತ್ತಿ ಆಚಮನವನ್ನು ಮಾಡಿ, ಮತ್ತೆ ಕೈಗಳನ್ನು ತೊಳೆದುಕೊಂಡು, ಮೂರು ಸಲ ಪ್ರಾಣಾಯಾಮವನ್ನು ಮಾಡಬೇಕು. ನಂತರ, ಮೂರು ಕಣ್ಣುಗಳೂ ಐದು ಮುಖಗಳೂ ಹತ್ತು ತೋಳುಗಳೂ ಇರುವಂಥ, ಸ್ಫಟಿಕದಂತೆ ಶುಭ್ರವಾದ ದೇಹವನ್ನು ಧರಿಸಿರುವ, ವಿಧವಿಧವಾದ ಒಡವೆಗಳಿಂದ ಅಲಂಕೃತನಾದ, ಹುಲಿಯ ಚರ್ಮವನ್ನು ಹೊದ್ದ ಶಿವನ ಸ್ವರೂಪವನ್ನು ತನ್ನ ಮನದಲ್ಲಿ ಸಾಕ್ಷಾತ್ಕರಿಸಿಕೊಂಡು ಧ್ಯಾನ ಮಾಡಬೇಕು. ಶಿವನಂತೆಯೇ ತಾನೂ ಇರುವೆನೆಂದು ತಿಳಿದರೆ ಮನುಷ್ಯನು ತನ್ನ ಪಾಪಗಳೆಲ್ಲವನ್ನೂ ಕಳೆದುಕೊಳ್ಳುವನು.

ಶಿವನನ್ನು ಸ್ಮರಿಸಿ ಶರೀರ ಶುದ್ಧಿಯನ್ನು ಮಾಡಿಕೊಂಡು ಎಲ್ಲ ಕಡೆಯೂ ಪ್ರಣವದಿಂದಲೇ ಷಡಂಗನ್ಯಾಸವನ್ನು ಮಾಡಬೇಕು. ಹಾಗೆಯೇ ಹೃದಯಾದಿನ್ಯಾಸವನ್ನೂ ಮಾಡಿದ ಬಳಿಕ ಪೂಜೆಯನ್ನು ಪ್ರಾರಂಭ ಮಾಡಬೇಕು. ಪಾದ್ಯಕ್ಕೂ ಅರ್ಘ್ಯಕ್ಕೂ ಆಚಮನೀಯಕ್ಕೂ ತಲಾ ಮೂರು ಕುಂಭಗಳನ್ನಿಡಬೇಕು. ಆ ಒಂಬತ್ತು ಕುಂಭಗಳನ್ನೂ ದರ್ಬೆಗಳ ಮೇಲಿರಿಸಿ, ಅವುಗಳ ಮೇಲೆ ದರ್ಬೆಗಳನ್ನು ಮುಚ್ಚಬೇಕು. ಬಳಿಕ ನೀರಿನಿಂದ ಪ್ರೋಕ್ಷಿಸಿ ಎಲ್ಲ ಕುಂಭಗಳಲ್ಲೂ ತಂಪಾಗಿರುವ ಹಿತಕರವಾದ ನೀರನ್ನು ಹಾಕಬೇಕು. ಪಾದ್ಯದ ಬಟ್ಟಲಿನಲ್ಲಿ ಲಾವಂಚವನ್ನೂ ಶ್ರೀಗಂಧವನ್ನೂ ಹಾಕಬೇಕು. ಜಾಜೀಕಾಯಿ, ಕಂಕೋಲ, ಪಚ್ಚಕರ್ಪೂರ, ಆಲದ ಬೇರು, ಹೊಂಗೆಯ ಚಿಗುರುಗಳೆಲ್ಲವನ್ನೂ ಅರೆದು ಪುಡಿ ಮಾಡಬೇಕು. ಆ ಪುಡಿಯನ್ನು ಹದವರಿತು ಆಚಮನೀಯ ಪಾತ್ರೆಯಲ್ಲಿ ಬೆರಸಬೇಕು. ಉಳಿದ ಎಲ್ಲ ಪಾತ್ರೆಗಳಲ್ಲೂ ಇದನ್ನೇ ಶ್ರೀಗಂಧದೊಡನೆ ಬೆರೆಸಿ ಸೇರಿಸಬೇಕು. ದೇವದೇವನಾದ ಶಿವನ ಪಕ್ಕಗಳಲ್ಲಿ ನಂದೀಶ್ವರನನ್ನು ಪೂಜಿಸಬೇಕು. ಬಳಿಕ ಶಿವನನ್ನು ಗಂಧ, ಧೂಪ, ದೀಪ ಮೊದಲಾದವುಗಳಿಂದ ಅರ್ಚಿಸಬೇಕು.

ಬಳಿಕ ಲಿಂಗಶುದ್ಧಿಯನ್ನು ಮಾಡಿ ನರನು ಹರ್ಷಚಿತ್ತನಾಗಿ, ಓಂಕಾರವೇ ಮೊದಲಲ್ಲಿಯೂ, ‘ನಮಃ’ ಎಂಬ ಕಡೆಯಲ್ಲಿಯೂ ಉಳ್ಳ (‘ಓಂ ಶಿವಾಯ ನಮಃ’ ಇತ್ಯಾದಿ) ನಾನಾ ಮಂತ್ರಗಳಿಂದ ವಿಧ್ಯುಕ್ತವಾಗಿ ಪೂಜಿಸಬೇಕು. ಓಂಕಾರೋಚ್ಚಾರಣ ಪೂರ್ವಕವಾಗಿ ಸ್ವಸ್ತಿಕ, ಪದ್ಮ ಮೊದಲಾದವನ್ನು ಆಸನವನ್ನಾಗಿ ಕಲ್ಪಿಸಬೇಕು. ಆ ಪೀಠದ ಪೂರ್ವದಳದಲ್ಲಿ ಅಣಿಮಾಮಯವಾದ ಅಕ್ಷರವನ್ನೂ, ದಕ್ಷಿಣದಿಕ್ಕಿನ ದಳದಲ್ಲಿ ಲಘಿಮೆಯನ್ನೂ, ಪಶ್ಚಿಮದಳದಲ್ಲಿ ಮಹಿಮೆಯನ್ನೂ, ಉತ್ತರದಳದಲ್ಲಿ ಪ್ರಾಪ್ತಿಯನ್ನೂ, ಆಗ್ನೇಯಭಾಗದ ದಳದಲ್ಲಿ ಪ್ರಾಕಾಮ್ಯವನ್ನೂ, ನೈರುತ್ಯದಳದಲ್ಲಿ ಈಶಿತ್ವವನ್ನೂ, ವಾಯವ್ಯದಳದಲ್ಲಿ ವಶಿತ್ವವನ್ನೂ, ಈಶಾನ್ಯದಿಕ್ಕಿನಲ್ಲಿ ಸರ್ವಜ್ಞತ್ವವನ್ನೂ, ಕರ್ಣಿಕೆಯಲ್ಲಿ ಸೋಮಮಂಡಲವನ್ನೂ, ಅದರ ಕೆಳಗೆ ಸೂರ್ಯಮಂಡಲವನ್ನೂ, ಅದರ ಕೆಳಗೆ ಅಗ್ನಿಮಂಡಲವನ್ನೂ, ಅದರ ಕೆಳಗೆ ಧರ್ಮ ಜ್ಞಾನ ವೈರಾಗ್ಯ ಐಶ್ವರ್ಯಾದಿಗಳನ್ನೂ ಭಾವಿಸಬೇಕು.

ಶಿವನಿಗೆ ನಾಲ್ಕು ದಿಕ್ಕುಗಳಲ್ಲಿಯೂ, ಅವ್ಯಕ್ತ, ಮಹತ್ತು, ಅಹಂಕಾರ, ಬುದ್ಧಿಗಳನ್ನೂ; ಕರ್ಣಿಕೆಯ ಮೇಲಿರುವ ಸೋಮಮಂಡಲದ ಮೇಲೆ ಸತ್ವರಜಸ್ತಮೋಗುಣಗಳು ಇವೆ ಎಂದು ಭಾವಿಸಬೇಕು. ‘ಸದ್ಯೋಜಾತಂಪ್ರಪದ್ಯಾಮಿ’ ಎಂಬ ಮಂತ್ರದಿಂದ ಆ ಪರಶಿವನನ್ನು ಆವಾಹಿಸಬೇಕು. ‘ವಾಮದೇವಾಯ ನಮಃ’ ಎಂಬ ಮಂತ್ರದಿಂದ ಆಸನದ ಮೇಲೆ ಕುಳ್ಳಿರಿಸಬೇಕು. ‘ತತ್ಪುರುಷಾಯ ವಿದ್ಮಹೇ’ ಎಂಬ ರುದ್ರಗಾಯತ್ರಿಯಿಂದ ಶಿವನ ಸಾನ್ನಿಧ್ಯವನ್ನು ಬಯಸಬೇಕು. ‘ಅಘೋರರೇಭ್ಯಃ’ ಎಂಬ ಮಂತ್ರದಿಂದ ಧ್ಯಾನಿಸಬೇಕು. ‘ಈಶಾನಃ ಸರ್ವವಿದ್ಯಾನಾಂ’ ಎಂಬ ಮಂತ್ರದಿಂದ ಪೂಜಿಸಬೇಕು. ಪಾದ್ಯವನ್ನೂ ಆಚಮನೀಯವನ್ನೂ ಇತ್ತು, ಅರ್ಘ್ಯವನ್ನು ಅರ್ಪಿಸಿ, ವಿಧಿವತ್ತಾಗಿ ಶಿವನನ್ನು ಸ್ಥಾಪಿಸಬೇಕು – ಎಂದು ಬ್ರಹ್ಮ ನಾರದನಿಗೆ ತಿಳಿಸುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT