ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ: ತಪಸ್ಸಿಗೆ ಹೊರಟ ಸಂಧ್ಯಾದೇವಿ

ಭಾಗ 129
ಅಕ್ಷರ ಗಾತ್ರ

ಸತೀಖಂಡದ ಐದನೇ ಅಧ್ಯಾಯದಲ್ಲಿ ಬ್ರಹ್ಮನು ಹೇಳಿದ ರತಿಮನ್ಮಥರ ವಿವಾಹವನ್ನು ಕೇಳಿದ ನಾರದ ಪುನಃ ಪ್ರಶ್ನೆ ಮಾಡಿದ ವಿವರವನ್ನು ಸೂತಮುನಿಯು ತಿಳಿಸುತ್ತಾನೆ.

‘ಓ ವಿಧಿಯೇ, ರತಿಯನ್ನು ಮದುವೆಯಾಗಿ ಮನ್ಮಥ ತನ್ನ ಸ್ಥಾನಕ್ಕೆ ತೆರಳಿದ. ನಿನ್ನ ಪುತ್ರ ದಕ್ಷಬ್ರಹ್ಮ ಮತ್ತು ಮಾನಸಪುತ್ರರೆಲ್ಲರೂ ಸಹ ತಮ್ಮ ತಮ್ಮ ಸ್ಥಾನಕ್ಕೆ ತೆರಳಿದರು. ಆದರೆ ಬ್ರಹ್ಮಪುತ್ರಿ ಮತ್ತು ಪಿತೃಗಳಿಗೆ ಮಾತೆಯಾದ ಸಂಧ್ಯಾದೇವಿ ಎಲ್ಲಿಗೆ ಹೋದಳು? ಮುಂದೇನು ಮಾಡಿದಳು? ಯಾವ ಪುರುಷನನ್ನು ಮದುವೆಯಾದಳು? ಓ ವಿಧಿಯೇ! ಈ ಸಂಧ್ಯೆಯ ಚರಿತ್ರೆಯನ್ನೆಲ್ಲಾ ಹೇಳು’ ಎಂದ ನಾರದ.

‘ಎಲೈ ವತ್ಸ! ಸಂಧ್ಯಾದೇವಿಯ ಚರಿತ್ರೆಯೆಲ್ಲವನ್ನೂ ಹೇಳುವೆನು. ಇದನ್ನು ಕೇಳಿದರೆ ಸ್ತ್ರೀಯರೆಲ್ಲರೂ ಸದಾ ಪತಿವ್ರತೆಯರಾಗುವರು. ನನ್ನ ಮನಸ್ಸಿನಿಂದ ಜನಿಸಿದ ಪುತ್ರಿಯಾದ ಸಂಧ್ಯೆ ತಪಸ್ಸನ್ನಾಚರಿಸಿ, ತನ್ನ ಶರೀರವನ್ನು ಬಿಟ್ಟು ಮುಂದೆ ಅರುಂಧತಿಯಾಗಿ ಜನಿಸಿದಳು. ಮುನಿಶ್ರೇಷ್ಠನಾದ ಮೇಧಾತಿಥಿ ಮಗಳಾಗಿ ಜನಿಸಿದ ಅರುಂಧತಿಯು ಮಹಾತ್ಮನೂ ಮಹಾತಪಸ್ವಿಯೂ ಆದಂತಹ ವಸಿಷ್ಠಮುನಿಯನ್ನು ವರಿಸಿದಳು. ಮುಂದೆ ಅವಳು ಪತಿವ್ರತೆಯರಲ್ಲಿ ಉತ್ತಮಳೂ, ಪೂಜಿಸಲು ಮತ್ತು ನಮಸ್ಕರಿಸಲು ಯೋಗ್ಯಳೂ ಶಾಂತಳೂ ಆದ ಮಹಾಪತಿವ್ರತೆಯಾದಳು’ ಎಂದ ಬ್ರಹ್ಮ.

ಇಷ್ಟಕ್ಕೆ ಸಮಾಧಾನವಾಗದ ನಾರದಮುನಿ ‘ಸಂಧ್ಯೆ ತಪಸ್ಸನ್ನು ಹೇಗೆ ಆಚರಿಸಿದಳು? ಎಲ್ಲಿ? ಏತಕ್ಕಾಗಿ ಆಚರಿಸಿದಳು? ಅವಳು ಹೇಗೆ ಅರುಂಧತಿಯಾಗಿ ಜನಿಸಿದಳು? ವಸಿಷ್ಠಮುನಿಯನ್ನು ಪತಿಯನ್ನಾಗಿ ಹೇಗೆ ವರಿಸಿದಳು? ಈ ಅರುಂಧತಿಯ ಕಥೆಯನ್ನು ಕೇಳಬೇಕೆಂಬ ಕುತೂಹಲವು ನನಗೆ ಅಧಿಕವಾಗುತ್ತಿದೆ. ಅದನ್ನು ನನಗೆ ವಿಸ್ತಾರವಾಗಿ ಹೇಳು’ ಎಂದು ಒತ್ತಾಯಿಸಿದ. ಆಗ ಬ್ರಹ್ಮ ಅರುಂಧತಿ ಕಥೆಯನ್ನ ಹೇಳಲು ಆರಂಭಿಸಿದ.

ಹಿಂದೆ ನಾನು, ನನ್ನ ಮಾನಸಪುತ್ರಿಯಾದ ಸಂಧ್ಯೆಯನ್ನು ನೋಡಿ ಕಾಮಸುಖವನ್ನು ಹೊಂದುವ ಮನಸ್ಸುಳ್ಳವನಾಗಿದ್ದೆ. ಶಿವನ ಭಯದಿಂದ ಅವಳನ್ನು ಬಿಟ್ಟುಬಿಟ್ಟೆ. ಮನ್ಮಥಬಾಣಗಳಿಂದ ನನ್ನಂತೆ ಸಂಧ್ಯೆಯ ಮನಸ್ಸೂ ಚಂಚಲವಾಗಿ ಕಾಮವಿಕಾರವಾಗಿತ್ತು. ಋಷಿಗಳ ಎದುರಿನಲ್ಲಿ ಮರ್ಯಾದೆಯಿಲ್ಲದೆ ಕಾಮವಿಕಾರವನ್ನು ಪ್ರಕಟಿಸಿದ ತನ್ನ ನಡವಳಿಕೆ ಬಗ್ಗೆ ಪಶ್ಚಾತ್ತಾಪಪಟ್ಟು ತುಂಬಾ ದುಃಖಿಸಿದಳು. ನಾನು ಮನ್ಮಥನನ್ನು ಶಪಿಸಿ ಅಂತರ್ಧಾನನಾದೆ. ಅಲ್ಲೇ ಇದ್ದ ನನ್ನ ಪುತ್ರಿ ಸಂಧ್ಯೆ ತುಂಬಾ ಚಿಂತಿಸುತ್ತಾ ಧ್ಯಾನಪರವಶಳಾದಳು. ಸ್ವಲ್ಪ ಹೊತ್ತು ಧ್ಯಾನಿಸುತ್ತಾ ಹಿಂದೆ ನಡೆದುದನ್ನು ಯಥಾಯೋಗ್ಯವಾಗಿ ವಿಮರ್ಶಿಸಿದಳು.

‘ಆಗಷ್ಟೇ ಜನಿಸಿದ ಯುವತಿಯಾದ ನನ್ನನ್ನು ನೋಡಿ ತಂದೆ ಬ್ರಹ್ಮನಿಗೆ ಕಾಮವಿಕಾರವಾಯಿತು. ನನ್ನ ತಂದೆ ಮಾತ್ರವಲ್ಲದೆ, ನನ್ನ ಸೋದರ ಸಮಾನರಾದ ಮರೀಚಿ ಮುಂತಾದ ಜಿತೇಂದ್ರಿಯರಾದ ಮುನಿಗಳಿಗೂ ಕಾಮವಿಕಾರ ಉಂಟಾಯಿತು. ದುರಾತ್ಮನಾದ ಮನ್ಮಥ ನನ್ನ ಮನಸ್ಸನ್ನೂ ಹಾಳುಮಾಡಿದ. ಆದ್ದರಿಂದಲೇ ನನ್ನ ಮನಸ್ಸು ಮುನಿಗಳನ್ನು ನೋಡಿ ತುಂಬಾ ಚಂಚಲವಾಯಿತು. ಮನ್ಮಥ ಮಾಡಿದ ಪಾಪಕ್ಕೆ ಯೋಗ್ಯವಾದ ಫಲವನ್ನು ಪಡೆದ. ಬ್ರಹ್ಮ ಕೋಪಗೊಂಡು ಮನ್ಮಥನನ್ನು ಶಪಿಸಿ, ತಕ್ಕ ಶಾಸ್ತಿ ಮಾಡಿದ. ಈಗ ನಾನೂ ನನ್ನ ಪಾಪಕ್ಕೆ ಪ್ರಾಯಶ್ಚಿತ್ತವನ್ನು ಪಡೆಯಲೇಬೇಕು. ನನ್ನನ್ನು ನೋಡಿ ತಂದೆ ಮತ್ತು ಸಹೋದರರೇ ಕಾಮೇಚ್ಛೆಯುಳ್ಳವರಾದರೆಂದರೆ, ನನಗಿಂತ ಪಾಪಿಷ್ಠೆ ಇನ್ನಾರೂ ಇಲ್ಲ. ಅಲ್ಲದೆ, ನನಗೂ ನನ್ನ ತಂದೆ ಮತ್ತು ಸಹೋದರರಲ್ಲಿ ಸಹಜವಲ್ಲದ ಕಾಮವಿಕಾರ ಉಂಟಾಯಿತು. ಈ ನನ್ನ ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ನಾನೇ ಮಾಡಿಕೊಳ್ಳುವೆ. ನನ್ನ ಶರೀರವನ್ನು ಅಗ್ನಿಯಲ್ಲಿ ವೇದೋಕ್ತ ವಿಧಿಯಿಂದ ಹೋಮ ಮಾಡುವೆ. ಇನ್ನು ಮುಂದೆ ಭೂಮಿಯಲ್ಲಿ ಹುಟ್ಟಿದೊಡನೆಯೇ ಪ್ರಾಣಿಗಳು ಕಾಮವಿಕಾರಕ್ಕೊಳಗಾಗಬಾರದೆಂಬ ನಿಯಮವನ್ನು ಸ್ಥಾಪಿಸುವೆ. ಇದಕ್ಕಾಗಿ ನಾನು ಭಯಂಕರವಾದ ತಪಸ್ಸನ್ನಾಚರಿಸುವೆ. ನಂತರ ಪ್ರಾಣ ಬಿಡುವೆ. ಯಾವ ನನ್ನ ಶರೀರದಲ್ಲಿ ತಂದೆ ಬ್ರಹ್ಮನಿಗೂ ಸಹೋದರರಾದ ಮಾನಸಪುತ್ರರಿಗೂ ಸಹ ಕಾಮಾಭಿಲಾಷೆಯುಂಟಾಯಿತೋ ಅದು ಕಲುಷಿತವಾದುದು. ಪುಣ್ಯಕ್ಕೆ ಸಾಧನವಾಗಲಾರದ ಶರೀರದಿಂದ ಪುಣ್ಯ ಸಂಪಾದಿಸಲಾಗದು’ ಎಂದು ಆಲೋಚಿಸಿದ ಆ ಸಂಧ್ಯೆಯು ತಪಸ್ಸು ಮಾಡಲು ಚಂದ್ರಭಾಗಾನದಿ ಹುಟ್ಟುವ ಚಂದ್ರಭಾಗಪರ್ವತಕ್ಕೆ ತೆರಳಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT