ಶನಿವಾರ, ಜನವರಿ 25, 2020
27 °C

ಸಾಮರಸ್ಯದ ಸರಿಗಮ...

ರಮ್ಯಾ ಶ್ರೀಹರಿ Updated:

ಅಕ್ಷರ ಗಾತ್ರ : | |

Prajavani

ಮನುಷ್ಯರಾದ ನಾವೆಲ್ಲಾ ಯಾವುದೇ ಸಮಾಜಕ್ಕೆ ಸೇರಿದವರಾಗಿರಲಿ, ಮುಳ್ಳುಹಂದಿಗಳಂತೆ; ಕೊರೆಯುವ ಚಳಿಯಿಂದ ರಕ್ಷಣೆ ಪಡೆಯಲು ಬೆಚ್ಚಗಿನ ಆಸರೆಗಾಗಿ ಪರಸ್ಪರ ಹತ್ತಿರ ಬಂದರೂ, ಒಬ್ಬರ ಮುಳ್ಳುಗಳು ಇನ್ನೊಬ್ಬರಿಗೆ ಚುಚ್ಚದಿರಲು ಸಾಧ್ಯವಿಲ್ಲದಾದಾಗ ಘಾಸಿಗೊಂಡು ದೂರಾಗುತ್ತೇವೆ.

ಹೊಂದಾಣಿಕೆ, ಸಾಮರಸ್ಯದ ಕುರಿತಾದ ಈ ಅದ್ಭುತ ರೂಪಕ ತತ್ತ್ವಜ್ಞಾನಿ ಶೋಪೆನ್ಹೌರ್‌ನದು.

ಹತ್ತಿರ ಸರಿಯುವುದು, ದೂರವಾಗುವುದು ಎಲ್ಲ ಸಂಬಂಧಗಳಿಗೆ ಎರಡು ಕಾಲುಗಳಿದ್ದಂತೆ. ಒಂದು ಮುಂದೆ ಒಂದು ಹಿಂದೆ ಇಲ್ಲದಿದ್ದರೆ ನಡಿಗೆ ಅಸಾಧ್ಯ. ಅನ್ಯೋನ್ಯ ದಾಂಪತ್ಯ, ಸುಖೀಕುಟುಂಬ, ಸಾಮರಸ್ಯಸಹಿತ ಸಾಮಾಜಿಕ ಸಂಬಂಧ, ಆಳ್ವಿಕೆ ಮತ್ತು ಜನತೆಯ ನಡುವಿನ ರಾಜಕೀಯ ಸಾಮರಸ್ಯ – ಎಲ್ಲವೂ ಹೂವಿನ ಹಾಸಿನ ಮೇಲೆ ನಡೆದಷ್ಟು ಸರಾಗವಿರಬೇಕು ಎನ್ನುವುದು ನಮ್ಮ ಆಶಯವಷ್ಟೇ. ಸಾಮರಸ್ಯ ಎನ್ನುವುದು ಸಮುದ್ರವನ್ನು ಮಥಿಸಿ ಕೊನೆಗೆ ಅಮೃತವನ್ನು ಪಡೆದಂತೆ; ಅದು ಅನಾಯಾಸವಾಗಿ ಉಂಟಾಗಿಬಿಡುವುದಿಲ್ಲ.

ಹತ್ತಿರವಾಗುವುದು ಎಂದರೆ ಆನಂದದಾಯಕವಾಗಿದ್ದು, ದೂರವಾಗುವುದು ಎಂದರೆ ನೋವು ಬೇಸರ ತರುವಂಥದ್ದು ಎನ್ನುವುದು ಒಂದು ಜನಪ್ರಿಯ ಕಲ್ಪನೆಯಷ್ಟೇ. ಸಾಮೀಪ್ಯ ಕೂಡ ಆತಂಕ ಹುಟ್ಟಿಸುವಂತದ್ದು. ಏಕೆಂದರೆ ಆಗ ನಮ್ಮ ಮತ್ತು ನಮಗೆ ಹತ್ತಿರವಾಗುತ್ತಿರುವವರ ನಡುವಿನ ಗಡಿ /ಗೆರೆ ಬದಲಾಗಬಹುದು. ಒಮ್ಮೊಮ್ಮೆ ನಮ್ಮ ಏಳಿಗೆ, ಸುಖಕ್ಕಾಗಿ ನಾವೇ ನಮಗೆ ಹತ್ತಿರವಾದವರನ್ನು ನಿರಾಸೆಗೊಳಿಸಬಹುದು; ಅವರಿಂದ ನಾವೂ ನಿರಾಸೆಗೊಳಗಾಗಬಹುದು. ಸಮೀಪವಾಗುವುದು ಎಂದರೆ ಇಷ್ಟೆಲ್ಲ ಅಪಾಯಕ್ಕೆ ಆಹ್ವಾನವಿಡುವಂತಾಗುವುದಾದರೆ ದೂರಾಗುವುದೇ ಒಳಿತು ಎನಿಸದಿರದು.

ಆದರೆ ಒಂಟಿತನದ ಸ್ವಾತಂತ್ರ್ಯವೇ ಬಂಧನವಾಗುವ ವಿಪರ್ಯಾಸ ಯಾರಿಗೆ ತಿಳಿದಿಲ್ಲ?

ಮನುಷ್ಯಸಂಬಂಧದ ಎಲ್ಲ ಜಿಗುಟಿನಿಂದ ಪಾರಾಗಿ ಸರ್ವದಾ ಸರ್ವತ್ರ ಸ್ವತಂತ್ರ ಜೀವಿಯಾಗಬೇಕು ಎಂಬುದು ಎಲ್ಲರ ಮನದಾಳದ ಹಂಬಲವಿರಬಹುದೇ? ಸಮಾಜದ ಕಲ್ಪನೆ ಇರದೆ ವ್ಯಕ್ತಿಯ ಕಲ್ಪನೆಯೇ ಇಲ್ಲ. ಹಾಗಾಗಿಯೇ ಬಹಳಷ್ಟು ಅಂತರವಿಟ್ಟುಕೊಂಡೇ, ಪರಸ್ಪರ ಅವಲಂಬನೆ ಹೆಚ್ಚೇನು ಇರದ, ಆದರೆ ಸಮಾಜದ ಭಾಗವೇನೋ ಎಂಬ ಭ್ರಮೆ ಹುಟ್ಟಿಸುವ ಸಾಮಾಜಿಕ ಜಾಲತಾಣಗಳು ಎಲ್ಲರಿಗೂ ಪ್ರಿಯವಾಗಿರಬಹುದು. ಜಗಳ, ಭಿನ್ನಾಭಿಪ್ರಾಯ ಮೂಡಿದ ತಕ್ಷಣ ಇವರು / ಈ ಸಂಬಂಧ ಇಷ್ಟೇ ಎಂದು ತಕ್ಷಣಕ್ಕೆ ತೀರ್ಮಾನಿಸಿ ಮನಸ್ಸಿನ ಬಾಗಿಲುಗಳನ್ನು ಮುಚ್ಚಿಕೊಂಡು ಬಿಡುವವರು, ಹತ್ತಿರವಾಗುವುದೆಂದರೆ ಸದಾ ಅಂಟಿಕೊಂಡು ಇಬ್ಬರ ನಡುವಿನ ಗೆರೆಯನ್ನೇ ಅಳಿಸಿಬಿಡಬೇಕೆಂದುಕೊಳ್ಳುವವರು ಎಂದೂ ಸಾಮರಸ್ಯ ಸಾಧಿಸಲಾರರು. ಹೊಂದಾಣಿಕೆಯನ್ನು ಸಾಧಿಸುವುದು ಎಂದರೆ ನಂಬಿಕೆಯನ್ನು ಸಾಧಿಸುವುದು ಎಂದೇ ಅರ್ಥ; ನಂಬಿಕೆ ವಿಶ್ವಾಸಗಳಿಲ್ಲದ ಸಾಮರಸ್ಯ ತೋರಿಕೆಯ ನಾಟಕವಾದೀತು.

ಯಾವುದೇ ನಿರ್ದಿಷ್ಟ, ತೀವ್ರ ಅಭೀಪ್ಸೆ ಅಥವಾ ಗುರಿ ಹೊಂದಿರುವ ಗುಂಪಿನಲ್ಲಿ ಸಾಮರಸ್ಯ ಇರುತ್ತದೆ ಏಕೆ? ಸಾಮರಸ್ಯ ಇಲ್ಲದ ಕುಟುಂಬ, ಸಮಾಜ ನಿಷ್ಕ್ರಿಯವಾಗಿರುತ್ತದಲ್ಲ ಏಕೆ? ಹೊಂದಾಣಿಕೆಗೂ ಕ್ರಿಯಾತ್ಮಕತೆಗೂ ಅನ್ಯೋನ್ಯ ಸಂಬಂಧವಿದೆ. ಒಂದರ್ಥದಲ್ಲಿ ಎರಡೂ ಒಂದೇ ಎಂದರೂ ತಪ್ಪಲ್ಲ. ಸುಮ್ಮನೆ ಹತ್ತಾರು ವರ್ಷ ಜೊತೆಗಿದ್ದು, ತನ್ನತನ ಎಂದರೇನೆಂದು ಹುಡುಕಲು ಪ್ರಯತ್ನ ಮಾಡದೆ ಇರುವವರಿಗೆ ಸಾಧ್ಯವಾಗುವುದಿಲ್ಲ. ಎಲ್ಲರ ನಿಲುವನ್ನು ಅರ್ಥಮಾಡಿಕೊಳ್ಳುತ್ತ, ತನ್ನ ನಿಲುವನ್ನೂ ಗಟ್ಟಿಗೊಳಿಸಿಕೊಳ್ಳುತ್ತ, ಅಗತ್ಯ ಬಿದ್ದರೆ ಪ್ರತಿಭಟಿಸುತ್ತ, ಸಂವಾದದ, ಸಮನ್ವಯದ ಹಾದಿಯಲ್ಲಿ ಸಾಗುತ್ತ ಸುಲಭವಾಗಿ ಬಿಟ್ಟುಕೊಡದೆ, ಗಟ್ಟಿಯಾಗಿ ಹಿಡಿದುಕೊಳ್ಳದೆ ಸಾಗಿದವರಿಗಷ್ಟೇ ಸಾಮರಸ್ಯದ ಸೂತ್ರ ಕೈಗೆಟಕುವುದು. ಸಂಘರ್ಷಗಳನ್ನು ನಿಭಾಯಿಸಲಾರದವರು ಸಾಮರಸ್ಯಕ್ಕೆ ಆಸೆಪಡಬಾರದು. ಸಿಟ್ಟು, ಕೋಪ, ದ್ವೇಷ, ಅಸಹನೆ, ಭಯ, ತಿರಸ್ಕಾರ, ಅವಮಾನ, ಸಂಶಯ ಎಲ್ಲವನ್ನೂ ಒಟ್ಟಿಗೆ ಹಾದುಬಂದಾಗಲಷ್ಟೇ ಸಾಮರಸ್ಯದ ಕೊಂಡಿ ಗಟ್ಟಿಯಾಗುವುದು.

ಪ್ರತಿಕ್ರಿಯಿಸಿ (+)