ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು

Published 31 ಡಿಸೆಂಬರ್ 2023, 2:42 IST
Last Updated 31 ಡಿಸೆಂಬರ್ 2023, 2:42 IST
ಅಕ್ಷರ ಗಾತ್ರ

ತತ್ವಪದಗಳನ್ನು ಮಹತ್ವದ ಸಾಹಿತ್ಯ ಪ್ರಕಾರ ಎಂದು ಕನ್ನಡ ಸಾಹಿತ್ಯ ಚರಿತ್ರೆಕಾರರು ಗುರುತಿಸಿಲ್ಲ ಎಂಬ ಆರೋಪವಿದೆ. ತತ್ವಪದಗಳ ಅಂತರಂಗದ ಸೂಕ್ಷ್ಮತೆ, ಅನುಭಾವದ ಚೈತನ್ಯ ಅರಿಯುವ ಗೋಜಿಗೆ ಚರಿತ್ರಕಾರರು ಹೋಗಲಿಲ್ಲ. ಅದು ‘ಬಹುಮುಖಿ ಕಾವ್ಯಧಾರೆ ಸಂಸ್ಕೃತಿ’ ಎಂಬುದನ್ನರಿಯದ ಕಾವ್ಯ ಮೀಮಾಂಸಕರು ಆ ಕಾಲಘಟ್ಟವನ್ನು ‘ಕತ್ತಲೆಯುಗ’ ಎಂದು ಬೀಸುಗುಟ್ಟಿದರು. 

ಅಚ್ಚರಿಯೆಂದರೆ ಈ ಕತ್ತಲೆಯುಗದಲ್ಲೇ ಜನಸಂಸ್ಕೃತಿಯ ಚಳವಳಿಯಂತೆ ಹುಟ್ಟಿ, ಬಾಳಿ - ಬದುಕಿದ್ದೇ ತತ್ವಪದ ಸಾಹಿತ್ಯ. ಪ್ರಾಯಶಃ ಅದೇ ಹಿನ್ನೆಲೆಯಿಂದ ಅಮಾವಾಸ್ಯೆಯ ಕತ್ತಲೆರಾತ್ರಿ ಮತ್ತು ಸತ್ತವರ ಸೂತಕದ ಮನೆಗಳ ಪದಗಳು, ಹೆಣದ ಸಾನಿಧ್ಯ ಏಕತಾರಿ ನಾದದಲಿ ಕೇಳಿ ಬರುವ ನೋವಿನೆಚ್ಚರದ ಆಹೋರಾತ್ರಿ ಭಜನೆ ಪದಗಳು ಹುಟ್ಟಿದವು. ಅವು ತತ್ವಜ್ಞಾನ ಪದಗಳು. ಅಂತೆಯೇ ಅವು ಏಕಕಾಲಕ್ಕೆ ಪಂಡಿತ ಪಾಮರರನ್ನು ಪಾರಮಾರ್ಥದ ಚಿಂತನಶೀಲ ಜಗಕ್ಕೆ ಕರೆದೊಯ್ಯುತ್ತವೆ. ಅವು ಎದೆ ತೋಯಿಸುವ ಪರಿಮಳದ ಲೋಕಜ್ಞಾನ ಜಿಜ್ಞಾಸೆಗಳು. ಬಹುತ್ವದ ಬದುಕಿನ ಅವರದು ಗುರುಮಾರ್ಗ ಪರಂಪರೆ.

ಕರ್ನಾಟಕದಲ್ಲಿ ಎಲ್ಲಾ ಜಾತಿ, ಧರ್ಮಗಳ ಅಜಮಾಸು ಐದುನೂರು ಮಂದಿ ವಿವಿಧ ಭಾಷೆಯ ತತ್ವಪದಕಾರರು ಆಗಿ ಹೋಗಿದ್ದಾರೆ. ಅವರಲ್ಲಿ ಕಡಕೋಳ ಮಡಿವಾಳಪ್ಪನಿಗೆ ವಿಶಿಷ್ಟ ಸ್ಥಾನಮಾನ. ಅನುಭಾವ ಪರಂಪರೆಗೆ ಸೇರಿದ ಮಡಿವಾಳಪ್ಪನನ್ನು ತತ್ವಪದಗಳ ಅಲ್ಲಮನೆಂದೇ ಭಾವಿಸಲಾಗುತ್ತದೆ.

ಆ ಕದಳಿಯ ಸುಲಿದು ಒಳ ಪೊಕ್ಕಲ್ಲದೆ ನಿಜವು ತಿಳಿಯದು/ಆ ನಿಜವು ತಿಳಿದಲ್ಲದೆ ಬಯಲು ಹೋಗದು/ಆ ಬಯಲು ಹೋದಲ್ಲದೆ ನಿರ್ಬಯಲು ತಾನಾಗದು

ಅಲ್ಲಮನ ಆ ಬಯಲು ಬಿತ್ತನೆ ಹೊಳಪಿಸುವ ಮಡಿವಾಳಪ್ಪನ ಇಂತಹ ವಚನಗಳಲ್ಲಿ ಅನುಭಾವಗಮ್ಯ ‘ನಿಜಬಯಲು’ ಬೆರಗಿನ ಗಹನ ಅನುಸಂಧಾನಗಳಿವೆ. ಆ ಕುರಿತು ಗಂಭೀರ ಅಧ್ಯಯನ, ತರ್ಕ, ಸಂಶೋಧನೆಗಳು ನಡೆಯಬೇಕು. ಹಾಗೆ ನೋಡಿದರೆ ಮಡಿವಾಳಪ್ಪನ ತತ್ವಪದಗಳ ರಾಚನಿಕ ಸ್ವರೂಪ ನೇರ ಮತ್ತು ಸರಳ. ಲೋಕ ಬದುಕಿನ ನಿತ್ಯ ಸಂಗತಿಗಳೇ ತಾತ್ವಿಕ ಭೂಮಿಕೆ ಮತ್ತು ಜವಾರಿತನದ ಉಪಮೆ, ರೂಪಕಗಳಾಗಿ ಪಾತ್ರಗೊಳ್ಳುತ್ತವೆ.   

ಅಲ್ಯಾಕ ಹುಡುಕುತಿ/ಇಲ್ಯಾದ ನೋಡ ಮುಕುತಿ

ಹೀಗೆ ಇಹದಲ್ಲೇ ನಿರ್ವಾಣ ಸಾಧ್ಯವೆಂಬ ನಿರ್ವ್ಯಾಜ ಪ್ರೀತಿಯ ಸರಳ ಮೋಕ್ಷಮಾರ್ಗದ ಆಚರಣೆ. ತನ್ಮೂಲಕ ಜಡ್ಡುಗಟ್ಟಿದ ಅಧ್ಯಾತ್ಮ ಮತ್ತು ಶುಷ್ಕ ವೇದಾಂತದ ನಿರಾಕರಣೆ. 

ಮಾಡಿ ಉಣ್ಣೋ ಬೇಕಾದಷ್ಟು/ಬೇಡಿ ಉಣ್ಣೋ ನೀಡಿದಷ್ಟು /ಮಾಡಿದವಗ ಮಡಿಗಡಬ/ಮಾಡದವಗ ಬರೀಲಡಬ

ಮಡಿವಾಳಪ್ಪನ ಈ ತತ್ವಪದ ಬಸವಣ್ಣನ ಕಾಯಕ ಮತ್ತು ದಾಸೋಹ ಸಂಕಲ್ಪಗಳ ಸಂವೇದನೆ. ಹಾಗೆಯೇ ಕಾರ್ಲ್‌ ಮಾರ್ಕ್ಸ್ ಪ್ರಣೀತ ಶ್ರಮಸಂಸ್ಕೃತಿಯ ದುಡಿಯುವ ಮತ್ತು ದುಡಿದುದಕ್ಕೆ ಹಕ್ಕಿನಿಂದ ಪಡೆದುಣ್ಣುವ ವಿಚಾರಧಾರೆ. ಇದನ್ನು ಕಾರ್ಲ್ ಮಾರ್ಕ್ಸ್ ಪೂರ್ವದಲ್ಲೇ ಮಡಿವಾಳಪ್ಪ ಪ್ರತಿಪಾದಿಸಿದ್ದಾರೆ‌. ಅಷ್ಟಕ್ಕೂ ಮಡಿವಾಳಪ್ಪ ಅತ್ಯುತ್ತಮ ರೈತನಾಗಿದ್ದ. ನೇಗಿಲುಯೋಗಿ ಮಡಿವಾಳಪ್ಪ ಮಾಡಿದ ಒಕ್ಕಲುತನದ ದ್ಯೋತಕವಾಗಿ ಖುದ್ದು ಅವರೇ ತೋಡಿದ ಬಾವಿ, ತೋಟ ಪಟ್ಟಿ ಇವತ್ತಿಗೂ ಕಡಕೋಳದಲ್ಲಿ ಜೀವಂತಿಕೆ ಉಳಿಸಿಕೊಂಡಿವೆ.

ಪುಣ್ಯದಿಚ್ಛೆಗಾಗಿ ಯಾತ್ರೆ ಮಾಡುವರೋ ನದಿಯೊಳು/ಕಣ್ಣು ಮೂಗು ಬಾಯಿ ಮುಕುಳಿ ತೊಳಕೊಂಬುವರೋ/ಕಲ್ಲು ಮಣ್ಣು ದೇವರೆಂದು ಪೂಜೆ
ಮಾಡುವರೋ/ಬಲ್ಲಿದರು ಬಂದರೆ ಕೊಲ್ಲು ಎಂಬುವರೋ

ಇಂತಹ ನೂರಾರು ತತ್ವಪದಗಳನ್ನು ಗಟ್ಟಿ ನೆಲೆಗಟ್ಟಿನಲ್ಲಿ ಕಟ್ಟಿ ಹಾಡಿದವರು ಹದಿನೇಳನೇ ಶತಮಾನದ ಕಡಕೋಳ ಮಡಿವಾಳಪ್ಪ. ಇದು ಅವರ ಬಂಡಾಯಭಾವದ ದನಿಗೆ ಸಾಕ್ಷಿ.

ಆಗಲೇ ತತಮ್ಮ ಗುರುವನ್ನು ಸಹಿತ ಸಾಂಕೇತಿಕವಾಗಿ ಅವರು ಹೀಗೆ ಪ್ರಶ್ನಿಸಿದ್ದರು:

ಕೊಂಬು ಹೊಲೆಯಂದು ಏಕಾಂತ/ಬಿರುದು ನಿಮ್ಮದು ಶ್ರೀ ಮಹಾಂತ
ಕೊಂಬು, ಕಹಳೆಗಳನ್ನು ಊದುವವನು ಹೊಲೆಯ. ಆದರೆ ನಿಮಗೇಕೆ ಬಿರುದು ಬಾವಲಿ? ಎನ್ನುವುದು ಇದರರ್ಥ.

ರಾಜಪ್ರಭುತ್ವ ಮತ್ತು ವೈದಿಕ ಧರ್ಮಪ್ರಭುತ್ವಗಳನ್ನು ಅಷ್ಟೇ ಕರಾರುವಾಕ್ಕಾಗಿ ಪ್ರತಿಭಟಿಸುವ ತತ್ವಪದವೊಂದು ಹೀಗಿದೆ:

ಭೂಪತಿಗಳ ಮೆಚ್ಚಿ ಅರಸುಖ ತನಗಾಯ್ತು/ತಾ ಪೂರ್ಣ ಸುಖವಿಲ್ಲದೇ ಹೋಯಿತ್ಹೋಯ್ತು/ಆ ಪರಬ್ರಹ್ಮ ಒಲಿದರೇನಾಯ್ತು/ಈ ಪರಿಭವವೆಲ್ಲ ಹರಿದ್ಹೋಯ್ತು

ಏಕಕಾಲಕ್ಕೆ ಅಧಿಕಾರ ಮತ್ತು ಧರ್ಮ ಪ್ರಭುತ್ವದ ಒಳಹೇತುಗಳನ್ನು ಪ್ರತಿರೋಧಿಸುವ ಮಡಿವಾಳಪ್ಪನ ಕಾವ್ಯ ವರ್ತಮಾನದ ಅನೇಕ ತಲ್ಲಣಗಳನ್ನು ಉಪಮಿಸುವ ಪ್ರತಿಭಟನ ಕಾವ್ಯ‌ವೂ ಹೌದು. ಜಾತಿ, ಮತ, ಧರ್ಮಗಳ ವಿರುದ್ಧ ಸೆಟೆದು ನಿಂತು ಅವುಗಳ ಢಾಂಬಿಕತೆಯನ್ನು ಮಡಿವಾಳಪ್ಪ ಬಯಲು ಮಾಡಿದರು. ಜಾತಿ ನಿರಸನದ ಬೀಜಮಂತ್ರ ಬಿತ್ತಿದರು. ಇದೆಲ್ಲವೂ ಅವರ ಅಂತರಂಗ ಸತಾಯಿಸಿದಾಗ ಸಾಧ್ಯವಾದುದು. ಅಂತೆಯೇ ಮಡಿವಾಳಪ್ಪ ನಮ್ಮೆಲ್ಲರ ಬದುಕಿನ ಪ್ರತಿನಿಧಿ. ಕಲ್ಯಾಣ ಮಾದರಿಯ ಅನುಭವ ಮಂಟಪ ಕಡಕೋಳದಲ್ಲೂ ನಡೆಸಿದ್ದುಂಟು. ಅಲ್ಲಿ ಅಲ್ಲಮನಿದ್ದರೆ, ಇಲ್ಲಿ ಮಡಿವಾಳಪ್ಪ. ಬ್ರಾಹ್ಮಣರ ಖೈನೂರು ಕೃಷ್ಣಪ್ಪ, ಮುಸಲ್ಮಾನರ ಚೆನ್ನೂರ ಜಲಾಲಸಾಬ, ಕಬ್ಬಲಿಗರ ಕಡ್ಲೇವಾಡ ಸಿದ್ದಪ್ಪ, ಹೂಗಾರ ಕುಲದ ರೇವಪ್ಪ, ಲಿಂಗಾಯಿತರ ಭಾಗಮ್ಮ ಎಲ್ಲಾ ಜಾತಿಯ ಈ ತತ್ವಪದಕಾರರು ಅಂದಿನ ವಚನಕಾರರ ಸರಿಸಮಾನರಾಗಿ ಹೋರಾಟ ಬದುಕಿದ್ದಾರೆ.

ಶಿಶುನಾಳ ಶರೀಫರಿಗಿಂತ ಅರ್ಧ ಶತಮಾನ ಮೊದಲೇ ಬದುಕಿದ‌ ಮಡಿವಾಳಪ್ಪನ ಹುಟ್ಟೇ ಬಹುದೊಡ್ಡ ಬಂಡಾಯ. ಮಡಿವಾಳಪ್ಪ ಗಾಣಿಗರ ಗಂಗಮ್ಮ ಎಂಬ ವಿಧವೆಯ ಮಗ. ಮಠದ ವಿರೂಪಾಕ್ಷಯ್ಯ ಜೈವಿಕ ತಂದೆ. ಕ್ರಿ.ಶ. ಸುಮಾರು 1770 - 1860 ಮಡಿವಾಳಪ್ಪನ ಜೀವಿತಾವಧಿ. ಕಲಬುರಗಿ ಜಿಲ್ಲೆಯ ಬಿದನೂರು, ಮಡಿವಾಳಪ್ಪನ ಹುಟ್ಟೂರು. ಕಲಬುರಗಿ ಜಿಲ್ಲೆಯ ಇಂದಿನ ಯಡ್ರಾಮಿ ತಾಲ್ಲೂಕಿನ ಕಡಕೋಳ, ಮಡಿವಾಳಪ್ಪನ ಕಾಯಕ ಭೂಮಿ. ತತ್ವಪದಗಳ ಮರೆತ ಹೆಜ್ಜೆಗುರುತುಗಳನ್ನು ಜಂಗಮಗೊಳಿಸಲು ಸರ್ಕಾರವು ಮನಸ್ಸು ಮಾಡಬೇಕಿದೆ.

ಜನವರಿ 3ರಿಂದ ಜಾತ್ರೆ

ಕಡಕೋಳ ಮಡಿವಾಳಪ್ಪನ ಜಾತ್ರೆ ಜನವರಿ 3 ಹಾಗೂ 4ರಂದು ನಡೆಯಲಿದೆ. ಇದು ಸಾಧು ಸಂತರ ತತ್ವಪದಗಳ ಸತ್ಸಂಗ. ವಾರವೊಪ್ಪತ್ತು ಗವಿ ಭೀಮಾಶಂಕರ ಪೌಳಿಯ ತುಂಬಾ ಮಹಾರಾಷ್ಟ್ರ, ಆಂಧ್ರ, ತೆಲಂಗಾಣದ ಜಟಾಧಾರಿ ಸಾಧುಗಳ ಸಂದೋಹ. ಗವಿಯ ಮುಂದಿನ ನಿಗಿ ನಿಗಿ ಕೆಂಡದ ಧುನಿಯ ಸುತ್ತಲೂ ಸಿದ್ಧರ ಸಿದ್ಧಪತ್ರಿ ಮತ್ತು ಜ್ಯೋತಿಯ ಘಮಲು. ದಮಡಿ, ಚಳ್ಳಮ, ಏಕತಾರಿಗಳ ನಾದ, ಸಂವಾದ. ತರಹೇವಾರಿ ಜೈಕಾರಗಳ ಸಮಾರೋಹ. ಇತ್ತ ಮಠದ ಆವರಣದಲ್ಲಿ ದಲಿತ, ಮುಸ್ಲಿಮರಾದಿಯಾಗಿ ಎಲ್ಲಾ ಜಾತಿಯವರು ಸೇರಿ ತಯಾರಿಸುವ ಕಜ್ಜ ಭಜ್ಜಿಯ ಮಹಾಪ್ರಸಾದ. ಬೇವಿನ ಸೊಪ್ಪು ಸೇರಿದಂತೆ ಸಕಲೆಂಟು ಬಗೆಯ ಸೊಪ್ಪು, ಕಾಯಿಪಲ್ಯ ಮತ್ತು ಸಿರಿಧಾನ್ಯಗಳನ್ನು ಸೇರಿಸಿ ಮಣಗಟ್ಟಲೇ ಕುದಿಯುವ ಕಡಾಯಿಗಳಲ್ಲಿ ತಯಾರಿಸುವ ಅನನ್ಯ ರುಚಿಕಟ್ಟಿನ ಪೌಷ್ಟಿಕಾಂಶದ ವ್ಯಂಜನವೇ ಭಜ್ಜಿ. ಖಾಂಡದ ಸಂಜೆ, ಸಜ್ಜೆ ಮತ್ತು ಜೋಳದ ರೊಟ್ಟಿಗಳೊಂದಿಗೆ ಭಜ್ಜಿಯ ಸಾಂಗತ್ಯ. ಸಹಸ್ರಾರು ಜನ ಸೇರುವ ಅಪರೂಪದ ಸಮೂಹಪಂಕ್ತಿ ಭೋಜನ. ಇದೆಲ್ಲವೂ ಊರ ಮುಂದಲ ಹಿರೇಹಳ್ಳದ ನೀರನೆರಳ ಸಲಿಲಧಾರೆ.

ಯಡ್ರಾಮಿ ತಾಲ್ಲೂಕಿನ ಕಡಕೋಳದ ಮಡಿವಾಳೇಶ್ವರ ಜಾತ್ರೆಯ ಸಂಗ್ರಹ ಚಿತ್ರ
ಯಡ್ರಾಮಿ ತಾಲ್ಲೂಕಿನ ಕಡಕೋಳದ ಮಡಿವಾಳೇಶ್ವರ ಜಾತ್ರೆಯ ಸಂಗ್ರಹ ಚಿತ್ರ
ಜನವರಿ 3ರಿಂದ ಜಾತ್ರೆ
ಕಡಕೋಳ ಮಡಿವಾಳಪ್ಪನ ಜಾತ್ರೆ ಜನವರಿ 3 ಹಾಗೂ 4ರಂದು ನಡೆಯಲಿದೆ. ಇದು ಸಾಧು ಸಂತರ ತತ್ವಪದಗಳ ಸತ್ಸಂಗ. ವಾರವೊಪ್ಪತ್ತು ಗವಿ ಭೀಮಾಶಂಕರ ಪೌಳಿಯ ತುಂಬಾ ಮಹಾರಾಷ್ಟ್ರ ಆಂಧ್ರ ತೆಲಂಗಾಣದ ಜಟಾಧಾರಿ ಸಾಧುಗಳ ಸಂದೋಹ. ಗವಿಯ ಮುಂದಿನ ನಿಗಿ ನಿಗಿ ಕೆಂಡದಧುನಿಯ ಸುತ್ತಲೂ ಸಿದ್ಧರ ಸಿದ್ಧಪತ್ರಿ ಮತ್ತು ಜ್ಯೋತಿಯ ಘಮಲು. ದಮಡಿ ಚಳ್ಳಮ ಏಕತಾರಿಗಳ ನಾದ ಸಂವಾದ. ತರಹೇವಾರಿ ಜೈಕಾರಗಳ ಸಮಾರೋಹ. ಇತ್ತ ಮಠದ ಆವರಣದಲ್ಲಿ ದಲಿತ ಮುಸ್ಲಿಮರಾದಿಯಾಗಿ ಎಲ್ಲಾ ಜಾತಿಯವರು ಸೇರಿ ತಯಾರಿಸುವ ಕಜ್ಜ ಭಜ್ಜಿಯ ಮಹಾಪ್ರಸಾದ. ಬೇವಿನ ಸೊಪ್ಪು ಸೇರಿದಂತೆ ಸಕಲೆಂಟು ಬಗೆಯ ಸೊಪ್ಪು ಕಾಯಿಪಲ್ಯ ಮತ್ತು ಸಿರಿಧಾನ್ಯಗಳನ್ನು ಸೇರಿಸಿ ಮಣಗಟ್ಟಲೇ ಕುದಿಯುವ ಕಡಾಯಿಗಳಲ್ಲಿ ತಯಾರಿಸುವ ಅನನ್ಯ ರುಚಿಕಟ್ಟಿನ ಪೌಷ್ಟಿಕಾಂಶದ ವ್ಯಂಜನವೇ ಭಜ್ಜಿ. ಖಾಂಡದ ಸಂಜೆ ಸಜ್ಜೆ ಮತ್ತು ಜೋಳದ ರೊಟ್ಟಿಗಳೊಂದಿಗೆ ಭಜ್ಜಿಯ ಸಾಂಗತ್ಯ. ಸಹಸ್ರಾರು ಜನ ಸೇರುವ ಅಪರೂಪದ ಸಮೂಹಪಂಕ್ತಿ ಭೋಜನ. ಇದೆಲ್ಲವೂ ಊರ ಮುಂದಲ ಹಿರೇಹಳ್ಳದ ನೀರನೆರಳ ಸಲಿಲಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT