ಶನಿವಾರ, ಸೆಪ್ಟೆಂಬರ್ 26, 2020
22 °C

ಶ್ರೀಕೃಷ್ಣ ಸಂದೇಶ | ಕೃಷ್ಣಂ ವಂದೇ ಜಗದ್ಗುರುಮ್‌

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಶ್ರೀಕೃಷ್ಣನು ಹುಟ್ಟಿದ ದಿನವನ್ನು ‘ಶ್ರೀಕೃಷ್ಣಜನ್ಮಾಷ್ಟಮೀ’ಎಂದು ಪ್ರತಿ ವರ್ಷವೂ ಆಚರಿಸುತ್ತೇವೆ. ನಮ್ಮ ಸಂಸ್ಕೃತಿಯ ಮೇಲೆ ತುಂಬ ಪ್ರಭಾವ ಮೂಡಿಸಿರುವ ತತ್ತ್ವ ಶ್ರೀಕೃಷ್ಣತತ್ತ್ವ. ಅದರ ಒಂದು ಆಯಾಮದ ಕಿರು ಪರಿಚಯವನ್ನು ಇಲ್ಲಿ ಮಾಡಲಾಗಿದೆ.

ಶ್ರೀ ಕೃಷ್ಣನ ಜೀವನ–ಸಂದೇಶಗಳು ಸಾವಿರಾರು ವರ್ಷಗಳಿಂದ ನಮ್ಮ ಜೀವನವನ್ನು ಪ್ರಭಾವಿಸುತ್ತಬಂದಿವೆ. ಇಂದಿಗೂ ಇವು ಪ್ರಸ್ತುತವಾಗಿರುವುದು ಸುಳ್ಳಲ್ಲ. ಅವನ ಬಾಲ್ಯವನ್ನು ನಮ್ಮ ಮಕ್ಕಳ ಬಾಲ್ಯದಲ್ಲಿ ಕಾಣಲು ತವಕಿಸುತ್ತೇವೆ; ಅವನ ಪ್ರೀತಿ–ಪ್ರೇಮಗಳು ನಮ್ಮೆಲ್ಲರ ಜೀವನದಲ್ಲಿ ತುಂಬಿಬರಲೆಂದು ಬಯಸುತ್ತೇವೆ; ಅವನ ಕುಶಲತೆ ನಮ್ಮ ಬದುಕಿನ ಬೆಳಕಾಗಲಿ ಎಂದು ಆಶಿಸುತ್ತೇವೆ; ಅವನ ಪ್ರಬುದ್ಧತೆ ನಮ್ಮ ಸಂಕಷ್ಟದಲ್ಲಿ ದಾರಿಯಾಗಿ ತೋರಲಿ ಎಂದು ಅನ್ವೇಷಿಸುತ್ತೇವೆ; ಅವನ ಜೀವನಪ್ರೀತಿಯೊಂದಿಗೆ ನಾವೂ ಕುಣಿಯುತ್ತೇವೆ; ಅವನ ವೈರಾಗ್ಯಪ್ರವೃತ್ತಿಗೆ ಬೆರಗಾಗುತ್ತೇವೆ. ಎಷ್ಟೊಂದು ಗುಣಗಳ ಸಾಗರ ಅವನು ಎಂದು ಆರಾಧಿಸುತ್ತಲೇ, ಅವನು ಮನುಷ್ಯನೋ ದೇವರೋ ಎಂದು ಗೊಂದಲದಲ್ಲಿ ಮುಳುಗುತ್ತೇವೆ.

ಒಮ್ಮೆ ಅವನು ಧರ್ಮಾತ್ಮನಾಗಿ ಕಾಣುತ್ತಾನೆ; ಮತ್ತೊಮ್ಮೆ ಕಪಟಿಯಾಗಿ ತೋರುತ್ತಾನೆ. ಒಮ್ಮೆ ಯೋಗಿಯಾಗಿ ಕಂಡರೆ, ಮಗದೊಮ್ಮೆ ಭೋಗಿಯಾಗಿ ಪ್ರತ್ಯಕ್ಷನಾಗುತ್ತಾನೆ. ಒಮ್ಮೆ ಸ್ನೇಹಿತನಂತೆ ಜೊತೆಯಲ್ಲಿರುವಂತೆ ಭಾಸವಾಗುತ್ತಿರುತ್ತದೆ; ಮರುಕ್ಷಣವೇ ಅವನೊಬ್ಬ ಜಗದ್ಗುರುವಾಗಿ ದರ್ಶನ ಕೊಡುತ್ತಾನೆ. ಒಂದು ಕ್ಷಣ ನಮಗೆ ಅರ್ಥವಾಗುತ್ತಿದ್ದಾನೆ ಎಂದೆನಿಸುತ್ತದೆ, ತತ್‌ಕ್ಷಣವೇ ನಮ್ಮ ಭಾವ–ಬುದ್ಧಿಗಳಿಗೆ ಅವನು ಅತೀತ ಎಂಬ ಅನುಭವ ದಟ್ಟವಾಗುತ್ತದೆ. ಒಟ್ಟಿನಲ್ಲಿ ಅವನನ್ನು ಹೀಗೆ ಎಂದು ನಿರ್ಣಯಿಸಿ ಅವನೊಂದಿಗೆ ವ್ಯವಹರಿಸುವುದಕ್ಕೆ ಆಗುವುದಿಲ್ಲ ಎಂಬುದಂತೂ ಸ್ಪಷ್ಟ. ಹೀಗಾಗಿಯೇ ಡಿವಿಜಿ ಅವರು ‘ಶ್ರೀಕೃಷ್ಣ ಎಂಬುದು ಪ್ರಸಿದ್ಧ ರಹಸ್ಯ’ ಎಂದು ಉದ್ಗರಿಸಿರುವುದು.

ಪ್ರಾಯಶಃ, ಶ್ರೀಕೃಷ್ಣನಷ್ಟು ಚರ್ಚೆಗೆ, ವಿವಾದಕ್ಕೆ, ವಿಶ್ಲೇಷಣೆಗೆ, ವಿರೋಧಕ್ಕೆ, ಅಸಡ್ಡೆಗೆ, ಅಪಹಾಸ್ಯಕ್ಕೆ ಒಳಗಾಗಿರುವಷ್ಟು ನಮ್ಮಲ್ಲಿ ಮತ್ತೊಬ್ಬ ಅವತಾರಪುರುಷ ಇಲ್ಲವೆನಿಸುತ್ತದೆ. ಇದಕ್ಕೆ ಕಾರಣವೇ ಶ್ರೀಕೃಷ್ಣತತ್ತ್ವದಲ್ಲಿರುವ ಸಂಕೀರ್ಣತೆಯ ಅಪಾರತೆ; ಅದರಲ್ಲಿರುವ ಸಾಂಕೇತಿಕತೆಯ ಅನಂತತೆ. ಜಗತ್ತಿನಲ್ಲಿರುವ ಎಲ್ಲ ವಿವರಗಳೂ ಎಂಥ ಅಸಮಾನನಾದ ಪ್ರತಿಭಾಸಂಪನ್ನನಿಗೂ ಎಟುಕಲಾರವು; ಹೀಗೆಯೇ ಕೃಷ್ಣರಹಸ್ಯದ ಎಲ್ಲ ಗುಟ್ಟುಗಳೂ ಯಾರೋ ಒಬ್ಬ ಜ್ಞಾನಿಗೆ ತೆರೆದುಕೊಳ್ಳಲಾರದು. ಆದುದರಿಂದಲೇ ಇಷ್ಟೆಲ್ಲ ಗೊಂದಲಗಳು; ಅನರ್ಥಕಾರಿ ಅಪಾರ್ಥಪರಂಪರೆಗಳು. ‘ಪ್ರಸಿದ್ಧ ದಶಾವತಾರಗಳಲ್ಲಿ ಶ್ರೀಕೃಷ್ಣಾವತಾರದಂತೆ ಬುದ್ಧಿಪ್ರಯತ್ನಕ್ಕೆ ದುಸ್ಸಾಧ್ಯವಾಗಿರುವ ಅವತಾರ ಇನ್ನಾವುದೂ ಇಲ್ಲ’ – ಎಂಬ ಡಿವಿಜಿಯವರ ಮಾತು ಇಲ್ಲಿ ಮನನೀಯ.

ಹೀಗಿದ್ದರೂ ಕೃಷ್ಣ ನಮಗೆ ಬೇಕು; ನಮ್ಮ ಜೀವನಕ್ಕೆ ಬೇಕು; ಏಕೆಂದರೆ ಅವನು ನಮ್ಮ ಜೀವನಕ್ಕೆ ಬೆಳಕಾಗಿ ಒದಗುವವನು. ಇದು ಏಕೆಂಬುದನ್ನು ಡಿವಿಜಿ ಅವರ ಈ ಮಾತುಗಳು ಸೊಗಸಾಗಿ ನಿರೂಪಿಸುತ್ತವೆ:

‘ಕೃಷ್ಣನು ಸಾಮಾನ್ಯನೂ ಹೌದು; ಅದ್ಭುತನೂ ಹೌದು. ಮನುಷ್ಯನಾದವನು ಏನೇನನ್ನು ಬಯಸಬಹುದೋ, ಏನೇನನ್ನು ಉತ್ತಮವೆಂದು ಭಾವಿಸಬಹುದೋ, ಮನುಷ್ಯನಿಗೆ ಯಾವುದು ಶ್ರೇಯಸ್ಸೆಂದು ಅನ್ನಿಸುತ್ತದೆಯೋ ಆ ಎಲ್ಲ ಜಾತಿಯ ಭಾಗ್ಯಗಳ ಸಂಮೇಳನಮೂರ್ತಿಯೇ ಶ್ರೀಕೃಷ್ಣ... ಶ್ರೀಕೃಷ್ಣಾವತಾರವು ಮನಸ್ಸಿನ ದೃಷ್ಟಿಯಿಂದ ಸರ್ವಾಂಗ ಸಂಪೂರ್ಣವಾದ ಅವತಾರ.’

ನಮಗೆ ಏನೆಲ್ಲ ಬೇಕೋ ಅದನ್ನೆಲ್ಲವನ್ನೂ ಪೂರೈಸಬಲ್ಲವನು ಶ್ರೀಕೃಷ್ಣ ಎನ್ನುವುದು ಇದರಿಂದ ಸಿದ್ಧವಾಗುತ್ತದೆ. ಇಲ್ಲಿ ನಮಗೆ ಬೇಕಾಗಿರುವುದು ಎಂದರೆ ಭೌತಿಕವಾಗಿ ಒದಗುವಂಥ ವಸ್ತುಗಳು ಎಂದಲ್ಲ; ನಮ್ಮ ಮನಸ್ಸಿಗೆ ಬೇಕಾಗಿರುವಂಥ ವಿವರಗಳು ಎನ್ನುವುದು ಇಲ್ಲಿರುವ ಧ್ವನಿ. ಹೀಗೆ ನಮ್ಮ ಎಲ್ಲ ಸ್ಥಿತಿಗಳಲ್ಲೂ ಒದಗಬಲ್ಲಂಥ ಜಗದ್ಗುರುವೇ ಶ್ರೀಕೃಷ್ಣ.

ಶ್ರೀಕೃಷ್ಣನ ಉಪದೇಶವನ್ನು ಸಂಗ್ರಹವಾಗಿ ಒಂದೆಡೆ ನಾವು ನೋಡುವಂಥದ್ದು ಭಗವದ್ಗೀತೆಯಲ್ಲಿಯೇ. ಅವನು ಕೇವಲ ಉಪದೇಶವನ್ನಷ್ಟೆ ಮಾಡಿದವನಲ್ಲ; ಅವನ ಉಪದೇಶಗಳಿಗೆ ಅವನ ಜೀವನವೇ ಸೊಗಸಾದ ಉದಾಹರಣೆಯೂ ಆಗಿದೆ. ಹೀಗಾಗಿ ಅವನ ಉಪದೇಶಗಳಿಗೆ ಭಗವದ್ಗೀತೆಯನ್ನು ನೋಡುವಂತೆ, ಅವನ ಜೀವನಕ್ಕೆ – ಎಂದರೆ ಉಪದೇಶಗಳಿಗೆ ವ್ಯಾಖ್ಯಾನವನ್ನು – ಮಹಾಭಾರತ, ಭಾಗವತ, ಹರಿವಂಶಗಳಲ್ಲಿ ನೋಡಬಹುದು.

ಹಾಗಾದರೆ ಸದ್ಯದ ಪರಿಸ್ಥಿತಿಯಲ್ಲಿ ಕೃಷ್ಣ ಹೇಗೆ ನಮಗೆ ನೆರವಾಗುತ್ತಾನೆ?

ಶ್ರೀಕೃಷ್ಣನು ಭಗವದ್ಗೀತೆಯನ್ನು ಉಪದೇಶಿಸಿದ್ದೇ ಯುದ್ಧಭೂಮಿಯಲ್ಲಿ. ಸದ್ಯದಲ್ಲಿ ನಾವು ಕೂಡ ಯುದ್ಧಭೂಮಿಯಲ್ಲಿ ನಿಂತಂತೆ ಭಾಸವಾಗುತ್ತಿದೆ. ಇದು ಕೇವಲ ಹೊರಗಿನ ಶತ್ರುಗಳಿಂದಲೇ ನಡೆಯುವಂಥ ಯುದ್ಧವಾಗಬೇಕಿಲ್ಲ; ನಮ್ಮ ಒಳಗಿನ ಶತ್ರುಗಳಿಂದಲೂ ನಡೆಯುವ ಯುದ್ಧವೂ ಆಗಬಹುದು. ಈ ನೆಲೆಯಿಂದ ಯೋಚಿಸಿದಾಗ, ಯುದ್ಧ ಎನ್ನುವುದು ನಮ್ಮ ಜೀನವದುದ್ದಕ್ಕೂ ನಡೆಯುವಂಥ ಹಗರಣವೇ ಆಗಿರುತ್ತದೆ. ಹೀಗಾಗಿಯೇ ಡಿವಿಜಿಯವರು ಮೇಲಣ ಪದ್ಯದಲ್ಲಿ ಹೇಳಿರುವುದು: ‘ಜಗತ್ತು ಎಂಬುದೇ ಒಂದು ರಣರಂಗ. ಈ ಯುದ್ಧದಲ್ಲಿ ಶ್ರೀಕೃಷ್ಣನ ಸ್ಮರಣೆಯಿಂದಲೇ ಜಯ ಒದಗುತ್ತದೆ.’

ಇಲ್ಲಿ ಶ್ರೀಕೃಷ್ಣನ ಸ್ಮರಣೆ ಎಂದರೆ, ಅವನ ಜೀವನ–ದರ್ಶನಗಳ ಅನುಸಂಧಾನ. ಇದು ನಮ್ಮ ಸದ್ಯದ ಪರಿಸ್ಥಿತಿಗೆ ಹೇಗೆ ನೆರವಾಗುತ್ತದೆ?

ನಮ್ಮ ಜೀವನದಲ್ಲಿ ಎದುರಾಗುವ ಎಲ್ಲ ಕೆಲಸಗಳನ್ನೂ ಯೋಗದ ಮೂಲಕ ನಿರ್ವಹಿಸಬೇಕು ಎನ್ನುತ್ತಾನೆ, ಕೃಷ್ಣ. ಇಲ್ಲಿ ಯೋಗ  ಎಂದರೇನು? ನಾವು ನಮ್ಮ ಪಾಲಿನ ಕೆಲಸಗಳಲ್ಲಿ ತೊಡಗುವಾಗ ತೋರುವ ಜಾಣ್ಮೆಯೇ, ಕುಶಲತೆಯೇ ಯೋಗ ಎಂದಿದ್ದಾನೆ ಅವನು. ಈ ಕುಶಲತೆಯನ್ನು ಹೇಗೆ ತಿಳಿದುಕೊಳ್ಳುವುದು? ಅದು ನಮಗೆ ಭಗವದ್ಗೀತೆಯ ಅಧ್ಯಯನದಿಂದ ಗೊತ್ತಾಗುತ್ತದೆ. ಹೀಗಾಗಿಯೇ ಎಲ್ಲ ಕಾಲಕ್ಕೂ ಒದಗುವ ಜೀವನಕೈಪಿಡಿಯಾಗಿ ಭಗವದ್ಗೀತೆ ಒದಗಿಬರುತ್ತದೆ; ಶ್ರೀಕೃಷ್ಣ ನಮಗೆ ನಿತ್ಯಗುರುವಾಗಿ ಒದಗುತ್ತಾನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು