ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ವನವಮಿ: ಭಕ್ತಿಯ ಮೇಲ್ಮೆಯನ್ನು ಸಾರಿದ ಶ್ರೀ ಮಧ್ವಾಚಾರ್ಯರು

ಮಧ್ವನವಮಿ
Last Updated 29 ಜನವರಿ 2023, 19:31 IST
ಅಕ್ಷರ ಗಾತ್ರ

ಹದಿಮೂರನೆಯ ಶತಮಾನದಲ್ಲಿದ್ದ ಶ್ರೀಮನ್ಮಧ್ವಾಚಾರ್ಯರು ಈ ಜಗತ್ತು ಕಂಡ ಅದ್ಭುತ ದಾರ್ಶನಿಕರು. ತ್ರಿಮತಾಚಾರ್ಯರಲ್ಲಿ ಒಬ್ಬರೆಂದು ಪ್ರಸಿದ್ಧರಾದ ಅವರು ಕನ್ನಡಿಗರೆಂಬುದು ಹೆಮ್ಮೆಯ ವಿಷಯ. ‘ಮಧ್ವ’ ಎಂಬ ಆಗಮೋಕ್ತನಾಮದಿಂದ ಆಚಾರ್ಯರು ಪ್ರಖ್ಯಾತರಾಗಿದ್ದರೂ ಅವರ ಆಶ್ರಮನಾಮ ‘ಪೂರ್ಣಪ್ರಜ್ಞ’, ಪೀಠಾರೋಹಣ ಕಾಲದಲ್ಲಿ ಗುರುಗಳಾದ ಅಚ್ಯುತಪ್ರೇಕ್ಷರಿಂದ ಪಡೆದ ಹೆಸರು ‘ಆನಂದತೀರ್ಥ’. ಇವಲ್ಲದೇ ಪೂರ್ಣಬೋಧ, ಅಲವಬೋಧ, ಪೂರ್ಣಪ್ರಮತಿ, ದಶಪ್ರಮತಿ, ಸರ್ವಜ್ಞಾಚಾರ್ಯ ಮುಂತಾದ ಹೆಸರುಗಳಿಂದಲೂ ಅವರನ್ನು ಕರೆಯುವುದುಂಟು.

ವೈದಿಕ ವಾಙ್ಮಯದಲ್ಲಿ ಅಪೂರ್ವ ಪಾಂಡಿತ್ಯವನ್ನು ಹೊಂದಿದ್ದ ಮಧ್ವಾಚಾರ್ಯರು, ಬ್ರಹ್ಮಸೂತ್ರಗಳಿಗೆ ಅಲ್ಲಿಯ ತನಕ ಹೊರಬಂದಿದ್ದ ಭಾಷ್ಯಗಳಿಗಿಂತಲೂ ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ಭಾಷ್ಯವನ್ನು ರಚಿಸಿದರು. ಹತ್ತೂ ಉಪನಿಷತ್ತುಗಳಿಗೆ ವ್ಯಾಖ್ಯಾನ ಬರೆದರು. ತಮ್ಮ ನಿಲುವನ್ನು ಪ್ರತಿಪಾದಿಸಲು ಅನೇಕ ಗ್ರಂಥಗಳನ್ನು ರಚಿಸಿದರು. ಅವರು ರಚಿಸಿದ ಮೂವತ್ತೇಳು ಗ್ರಂಥಗಳಿಗೆ ಸರ್ವಮೂಲಗ್ರಂಥಗಳೆಂಬ ಹೆಸರಿದೆ. ಮಧ್ವಾಚಾರ್ಯರು ಭಾರತದಾದ್ಯಂತ ಎರಡು ಬಾರಿ ಸಂಚಾರ ಕೈಗೊಂಡರು. ಅನೇಕ ವಿದ್ವದ್ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ನಿಲುವನ್ನು ಪ್ರತಿಪಾದಿಸಿದರು. ತಮ್ಮ ನಾಲ್ವರು ಮುಖ್ಯಶಿಷ್ಯರಾದ ಪದ್ಮನಾಭತೀರ್ಥ, ನರಹರಿತೀರ್ಥ, ಮಾಧವತೀರ್ಥ ಮತ್ತು ಅಕ್ಷ್ಯೋಭ್ಯತೀರ್ಥರನ್ನು ತಾವು ಸಂಸ್ಥಾಪಿಸಿದ್ದ ದ್ವೈತಸಿದ್ಧಾಂತದ ಪ್ರಚಾರಕ್ಕೆ ನಿಯೋಜಿಸಿದರು. ಈ ನಾಲ್ಕು ಶಿಷ್ಯರಿಂದ ಮುಂದುವರೆದ ಮಠಗಳು ಕೆಲವು ಕವಲೊಡೆದು ಈ ಹೊತ್ತಿಗೂ ಮುಂದುವರೆದಿವೆ.

ಒಮ್ಮೆ ಉಡುಪಿಸಮೀಪದ ಮಲ್ಪೆಯ ಕಡಲತೀರದಲ್ಲಿ ದ್ವಾರಕೆಯಿಂದ ಬರುತ್ತಿದ್ದ ಹಡಗೊಂದರಲ್ಲಿ ದೈವದತ್ತವಾಗಿ ಲಭ್ಯವಾದ ಗೋಪೀಚಂದನದಿಂದಾವೃತ್ತವಾದ ಬಾಲಕೃಷ್ಣನ ಪುಟ್ಟ ವಿಗ್ರಹವನ್ನು ಉಡುಪಿಯ ಸರೋವರದ ದಂಡೆಯ ಮೇಲೆ ಆಚಾರ್ಯರು ಪ್ರತಿಷ್ಠಾಪಿಸಿದರು. ಕಡಗೋಲು ಮತ್ತು ಹಗ್ಗವನ್ನು ಹಿಡಿದ ಸಾಲಿಗ್ರಾಮ ಶಿಲೆಯ ಬಾಲಕೃಷ್ಣನ ಆ ಸುಂದರ ವಿಗ್ರಹದ ಪೂಜೆಗಾಗಿ ಎಂಟು ಮಂದಿ ಶಿಷ್ಯರನ್ನು ನೇಮಿಸಿದರು. ಆ ಎಂಟು ಶಿಷ್ಯರ ಮಠಗಳೇ ಇಂದು ಪಲಿಮಾರು ಮಠ, ಅದಮಾರು ಮಠ, ಕೃಷ್ಣಾಪುರ ಮಠ, ಪುತ್ತಿಗೆ ಮಠ, ಶಿರೂರು ಮಠ, ಸೋದೆ ಮಠ, ಕಾಣಿಯೂರು ಮಠ ಮತ್ತು ಪೇಜಾವರ ಮಠಗಳೆಂದು ಪ್ರಸಿದ್ಧವಾಗಿವೆ. ಆಚಾರ್ಯರು ಏರ್ಪಡಿಸಿದ್ದ ಎರಡು ತಿಂಗಳ ಕೃಷ್ಣಪೂಜಾ ಪರ್ಯಾಯವನ್ನು ಎರಡು ವರ್ಷಗಳಿಗೆ ವಿಸ್ತರಿಸಿದ ಕೀರ್ತಿ ಮುಂದೆ ಸೋದಾ ಮಠದಲ್ಲಿ ಬಂದ ವಾದಿರಾಜರಿಗೆ ಸಲ್ಲುತ್ತದೆ.

ಆಚಾರ್ಯರು ತಮ್ಮ ಬದುಕು, ಬೋಧೆ ಮತ್ತು ಕೃತಿಗಳ ಮೂಲಕ ಪ್ರತಿಪಾದಿಸಿದ ಸಿದ್ಧಾಂತದ ಹೆಸರು ಮಧ್ವಸಿದ್ಧಾಂತ. ಅದು ಜಗತ್ತಿನಲ್ಲಿ ದ್ವೈತಮತವೆಂದು ಪ್ರಸಿದ್ಧವಾಗಿದೆ. ‘ತತ್ತ್ವವಾದ‘ ಎಂದೂ ಕರೆಯುತ್ತಾರೆ. ಮಧ್ವಸಿದ್ಧಾಂತದ ಸಾರವನ್ನು ಹೀಗೆ ಸಂಗ್ರಹಿಸಬಹುದು: ‘ಹರಿಯೇ ಸವೋತ್ತಮನು. ಕಣ್ಣಿಗೆ ಕಾಣುವ ಈ ಜಗತ್ತು ಸತ್ಯವಾದದ್ದು, ಪಂಚಭೇದಗಳು ಸತ್ಯವಾದದ್ದು. ಪರಬ್ರಹ್ಮಸ್ವರೂಪನಾದ ಶ್ರೀಹರಿಯಿಂದ ಭಿನ್ನರಾದ ಎಲ್ಲಾ ಜೀವರಾಶಿಗಳೂ ಪರಸ್ಪರ ತಾರತಮ್ಯವುಳ್ಳವರು; ಸ್ವರೂಪಭೂತವಾದ ಸುಖಾನುಭವವೇ ಮುಕ್ತಿ. ಇದಕ್ಕೆ ನಿಷ್ಕಲ್ಮಶವಾದ, ಮಹಾತ್ಮ್ಯಜ್ಞಾನಪೂರ್ವಕವಾದ ಭಕ್ತಿಯೇ ಮುಖ್ಯಸಾಧನ. ಪ್ರತ್ಯಕ್ಷ, ಅನುಮಾನ ಮತ್ತು ಆಗಮಗಳೆಂಬ ಮೂರು ಸಾಧಕ ಪ್ರಮಾಣಗಳಿವೆ. ಸಕಲಾಗಮಗಳಿಂದ ಶ್ರೀಹರಿಯೊಬ್ಬನೇ ಪ್ರತಿಪಾದ್ಯನು’.

ಮಧ್ವಾಚಾರ್ಯರ ವಿಚಾರಧಾರೆ, ಅದರಲ್ಲೂ ಮುಖ್ಯವಾಗಿ ಅವರು ರಚಿಸಿದ ಭಕ್ತಿಪ್ರಧಾನ ದ್ವಾದಶಸ್ತೊತ್ರವೇ ಮೊದಲಾದ ಸ್ತೋತ್ರಸಾಹಿತ್ಯ ಮುಂದೆ ಹರಿದಾಸಪಂಥಕ್ಕೆ ಸುಭದ್ರ ತಾತ್ವಿಕ ಸೋಪಾನವನ್ನೊದಗಿಸಿತು. ನರಹರಿತೀರ್ಥರು, ಶ್ರೀಪಾದರಾಜರು, ವ್ಯಾಸರಾಜರು, ವಾದಿರಾಜರು, ರಾಘವೇಂದ್ರರು ಮುಂತಾದ ಯತಿಗಳು; ಪುರಂದರದಾಸರು, ಕನಕದಾಸರು, ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರು ಮುಂತಾದ ಹರಿದಾಸರು ಸಹಸ್ರಾರು ಕನ್ನಡ ಕೀರ್ತನೆಗಳನ್ನು ರಚಿಸಲು ಅಗತ್ಯ ಸ್ಫೂರ್ತಿಯನ್ನು ನೀಡಿದವು. ಸುಮಾರು ಎಂಬತ್ತು ವರ್ಷಗಳ ಕಾಲ ಜೀವಿಸಿದ್ದ ಮಧ್ವಾಚಾರ್ಯರು ಮಾಘಶುದ್ಧ ನವಮಿಯ ದಿವಸ ಉಡುಪಿಯ ಅನಂತೇಶ್ವರನ ಸನ್ನಿಧಿಯಲ್ಲಿ ತಮ್ಮ ಅವತಾರವನ್ನು ಪೂರ್ಣಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT