ಭಾನುವಾರ, ಸೆಪ್ಟೆಂಬರ್ 26, 2021
21 °C
ಆಚಾರ–ವಿಚಾರ

ಪುರಾಣಗಳು ವಿವೇಕದ ಕಥೆಗಳು

ರಜನೀಶ Updated:

ಅಕ್ಷರ ಗಾತ್ರ : | |

Prajavani

ಭಾರತೀಯ ಆಲೋಚನಾಕ್ರಮವೇ ವಿಶಿಷ್ಟವಾದದ್ದು. ಇತಿಹಾಸವನ್ನು ದಾಖಲಿಸುವ ಕ್ರಮದಲ್ಲಿ ಪಾಶ್ಚಾತ್ಯರಿಂದ ನಾವು ಭಾರತೀಯರು ಭಿನ್ನರಾಗುತ್ತೇವೆ. ನಾವು ದಾಖಲಿಸಿರುವುದು/ದಾಖಲಿಸುವುದು ಎಂಥ ವಿವರಗಳನ್ನು? ಮತ್ತು ಹೇಗೆ? ಎಂಬ ಪ್ರಶ್ನೆಗಳಿಗೆ ಉತ್ತರ: ಪುರಾಣ. ಸಾರ್ವಕಾಲಿಕ, ಸಾರ್ವತ್ರಿಕವಾಗಬಲ್ಲ ಕಥೆಗಳು.

ಮನುಷ್ಯನ ಮನೋವ್ಯಾಪಾರ ಇಂದು-ನಿನ್ನೆಯದೇನಲ್ಲ. ಮನುಷ್ಯನ ಮನೋಮಥನ ಸಹಸ್ರಾರು ವರ್ಷಗಳಿಂದ ನಡೆಯುತ್ತಲೇ ಇದೆ ಎಂಬ ಅರಿವಿನೊಂದಿಗೆ, ಅಮೃತಾನ್ವೇಷಣೆಗಾಗಿ ದೇವಾಸುರರು ನಡೆಸಿದ ಸಮುದ್ರಮಥನವನ್ನು ತಾಳೆಮಾಡಿ ನೋಡಿದಾಗ ಪೌರಾಣಿಕ ಕಥನ ನಿತ್ಯಬದುಕಿಗೆ ಅನ್ವಯವಾಗಬಹುದು. ಸಮುದ್ರಮಥನಕಾಲದಲ್ಲಿ ಉತ್ಪತ್ತಿಯಾದ ಸಮೃದ್ಧಿವೈವಿಧ್ಯವು, ಭೇದವನ್ನು ಬದಿಗಿರಿಸಿ ಮಾಡುವ ಯಾವುದೇ ಕಾರ್ಯಕ್ಕೂ ಫಲವಿದೆ ಎಂಬುದನ್ನು ಸಾರುವ ಜೊತೆಜೊತೆಗೆ ಮುಂದೆ ಉದ್ಭವಿಸಬಹುದಾದ ವಿಷದೋಷವೆಲ್ಲವನ್ನೂ ಸ್ವೀಕರಿಸಿ ಧರಿಸುವ ಶಾಂತಚಿತ್ತವೂ ಇರಬೇಕೆಂಬುದನ್ನು ಸೂಚಿಸಬಲ್ಲದು.

ಭಾರತೀಯ ಜನಜೀವನದಲ್ಲಿ ಹಾಸುಹೊಕ್ಕಿರುವ ರೂಪಕಗಳು ಅಸಂಖ್ಯ. ಶೂರ್ಪಣಖಿಯ ಮೋಹಕತೆಗೆ ಒಳಗಾಗದೆ ಅಪಾಯವನ್ನು ಅನಾವರಣ ಮಾಡಿ ನಿವಾರಿಸುವ ರಾಮ ಮತ್ತು, ಚಿನ್ನದ ಜಿಂಕೆಯ ಕ್ಷಣಿಕ ಆಕರ್ಷಣೆಯಿಂದ ಅಪಹರಣಕ್ಕೊಳಗಾಗುವ ಸೀತೆ – ಇಬ್ಬರೂ ಮನುಷ್ಯಸಹಜ ವಿವೇಕಾವಿವೇಕಗಳನ್ನು ಒಮ್ಮೆಲೇ ಕಾಣಿಸುತ್ತಾರೆ. ಅಲ್ಲದೇ, ಎಲ್ಲ ಕಾಲದಲ್ಲೂ ಪರಸ್ಪರ ಪ್ರೀತ್ಯಾದರಗಳನ್ನು ಹರಿಸುವ ರಾಮಸೀತೆಯರು ಅನ್ಯೋನ್ಯತೆ ಮೆರೆದು ನಮ್ಮ ಕುಟುಂಬವ್ಯವಸ್ಥೆಯ ಮಾನದಂಡಗಳಾಗಿ ಪೂಜ್ಯರಾಗಿ, ಪ್ರತಿಮೆಗಳಾಗಿ ನಿಲ್ಲುತ್ತಾರೆ. ಕೃಷ್ಣಾವತಾರವಂತೂ ನಮ್ಮದೇ ಶೈಶವ ಬಾಲ್ಯಗಳ ಮೂರ್ತಿರೂಪವೇ ಸರಿ. ನಮ್ಮ ಮಕ್ಕಳ ತುಂಟಾಟಗಳು ಕೃಷ್ಣನಾಡಿದ ಚೇಷ್ಟೆಗಳೇ ಎಂದು, ಕಂಡು ಸವಿಯುವ ಮನಸ್ಸು ನಮ್ಮದಾಗಬೇಕು ಎಂಬುದು ಭಾಗವತದ ಒಂದು ಭಾವ!

ಯಮುನೆಯಲ್ಲಿ ದ್ವಾಪರಯುಗದಿಂದಲೂ ಕಾಳಿಂಗನ ರೂಪದಲ್ಲಿ ಇರುವ ಮಲಿನ ಹಲವು ನದಿಗಳಲ್ಲಿ ಎಂದಿಗೂ ಇರುವಂಥದ್ದೇ! ಕೃಷ್ಣಪ್ರಜ್ಞೆ ನಮ್ಮಲ್ಲಿ ಜಾಗೃತವಾಗುತ್ತಲೇ ಇರಬೇಕು, ಕಾಳಿಂಗಮರ್ದನ ನಿತ್ಯವೂ ನಡೆಯುತ್ತಲೇ ಇರಬೇಕಷ್ಟೇ!

ಎಂದೆಂದಿಗೂ ನಮ್ಮನ್ನು ಎಚ್ಚರಿಸಬಲ್ಲ ಕೆಲವು ಪೌರಾಣಿಕ ಚಿತ್ರಗಳನ್ನು ಮೆಲುಕುಹಾಕುವುದಾದರೆ, ತನ್ನ ಮಗನ ಯೌವನವನ್ನೇ ಕಸಿಯುವ ಯಯಾತಿಯು, ಮುಂದಿನದನ್ನೂ ಇಂದೇ ನುಂಗಿ ನೊಣೆಯುತ್ತಿರುವ ಮನುಷ್ಯನ ಅತಿಚಪಲತೆಯ ಕುರುಹಾಗಿ ಕಂಡುಬರುತ್ತಾನೆ. ತನ್ನ ತಂದೆಯ ವಿರೋಧದ ನಡುವೆಯೂ ತೋರುವ ವಿವೇಕಯುತ ದೈವಭಕ್ತಿಯ ಪ್ರತೀಕವಾಗಿ ಪ್ರಹ್ಲಾದ ಕಾಣಿಸಿಕೊಳ್ಳುತ್ತಾನೆ. ಈ ಸೃಷ್ಟಿಯಲ್ಲಿ ಸಣ್ಣ ಪ್ರಾಣಿಯೊಂದರ ಕಾರ್ಯವೂ ನಗಣ್ಯವಲ್ಲವೆಂಬುದಕ್ಕೆ ರಾಮಸೇತುಕಾರ್ಯದಲ್ಲಿ ದುಡಿದಂದಿನಿಂದ, ಅಳಿಲಿನ ಮೈಮೇಲೆ ಮೂಡಿರುವ ಮೂರುಗೆರೆಗಳ ರಾಮಪ್ರಶಸ್ತಿಯೇ ಸಾಕ್ಷಿಯಂತೆ!

ಒಟ್ಟಾರೆ ನೋಡುವಾಗ ‘ಸೃಷ್ಟಿಯಲ್ಲಿ ಯಾವುದೂ ವಿಫಲಮಲ್ಲ’ ಒಂದು ಮತ್ತೊಂದಕ್ಕೆ ಪೂರಕವಾಗಿಯೇ ಇರುತ್ತದೆಯಷ್ಟೆ; ಒಂದು ಹಿನ್ನೆಲೆಯಾದರೆ ಇನ್ನೊಂದು ಮುನ್ನೆಲೆ. ಒಂದು ಚಿತ್ರವಾದರೆ ಇನ್ನೊಂದು ಅದನ್ನು ಕಾಣುವಂತೆ ಮಾಡುವ ಭಿತ್ತಿಯಾಗಿರುತ್ತದೆ. ಒಂದು ಒಳಿತೆಂದು ಕಾಣುವುದಾದರೆ ಕೆಡುಕೆನ್ನಿಸಿಕೊಂಡದ್ದು ಅದಕ್ಕೆ ಹಿನ್ನೆಲೆಯೊದಗಿಸುತ್ತದೆ. ಇಂಥದೊಂದು ಅರಿವನ್ನು ನಮಗೆ ಒದಗಿಸಿ, ನಮ್ಮ ಬದುಕು ಸಹ್ಯವಾಗುವಂತೆ ಪುರಾಣದ ಪ್ರತೀಕಗಳು ಮಾಡುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು