ಭಾನುವಾರ, ಜೂನ್ 7, 2020
22 °C

ಸಂಸ್ಕೃತಿ ಸಂಭ್ರಮ | ರಾಷ್ಟ್ರವಿಪತ್ತಿನಲ್ಲಿ ವ್ರತ ಪೂಜೆಗಳು

ವಿಶ್ವನಾಥ ಭಟ್ಟ ಗೋಳಿಕೈ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಇಂದು ವಿಶ್ವದಾದ್ಯಂತ ಭೀತಿಯನ್ನು ಹುಟ್ಟಿಸಿದೆ. ನಮ್ಮ ದೇಶದಲ್ಲೂ ಎಲ್ಲೆಡೆ ಪಸರಿಸುತ್ತಲೇ ಇದೆ. ಈ ವೈರಸ್‌ನ ಹರಡುವಿಕೆಯನ್ನು ತಡೆಯಲು ಸರ್ಕಾರ ಅನೇಕ ನಿರ್ದೇಶನಗಳನ್ನು ಕೊಟ್ಟಿದೆ. ಸರ್ಕಾರದ ಆದೇಶವನ್ನು ಪಾಲಿಸುವುದು ನಮ್ಮ ಕರ್ತವ್ಯ; ಈಗಿನ ಸಂದರ್ಭ ನಮ್ಮ ಅಳಿವು–ಉಳಿವಿನ ಪ್ರಶ್ನೆಯಾಗಿದೆ.

ಈಗ ನಾವೆಲ್ಲರೂ ಲಾಕ್‌ಡೌನ್‌ನಲ್ಲಿದ್ದೇವೆ. ಈ ಸಮಯದಲ್ಲಿ ನಮ್ಮ ನಿತ್ಯ–ನೈಮಿತ್ತಿಕ ಧಾರ್ಮಿಕ ಆಚರಣೆಗಳನ್ನು ಹೇಗೆ ನಿರ್ವಹಿಸುವುದು ಎಂಬ ಪ್ರಶ್ನೆ ಹಲವರಿಗೆ ಎದುರಾಗುವುದು ಸಹಜ. ನಮ್ಮ ಪರಂಪರೆಗೂ ಕುಟುಂಬಕ್ಕೂ ದೇಶಕ್ಕೂ ತೊಂದರೆಯಾಗದಂತೆ ನಮ್ಮ ಧಾರ್ಮಿಕ ಆಚರಣೆಗಳನ್ನು ನಡೆಸಬೇಕಾಗಿದೆ.

ದೇವಪೂಜೆ ನಿತ್ಯಕರ್ಮ. ಇದನ್ನು ಬಿಟ್ಟರೆ ದೋಷ. ಈಗ ದೇವಾಲಯಗಳನ್ನೂ ತೆರೆಯುವಂತಿಲ್ಲ; ಜನರು ಗುಂಪು ಸೇರುತ್ತಾರೆ. ಅರ್ಚಕರಿಗೂ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಆಗುವುದೂ ಇಲ್ಲ; ಹೋದರೆ ಎದುರಾಗುವ ಸಂದರ್ಭವೂ ಇದೆ. ಹೀಗಾಗಿ ಪೂಜೆಯಲ್ಲಿ ವಿಚ್ಛತ್ತಿ ಎಂದರೆ, ಭಂಗ ಉಂಟಾದರೆ ನಮಗೆ ಕೇಡು ಉಂಟಾಗುತ್ತದೆ ಎಂದು ಭಾವಿಸಬೇಕಾದ್ದಿಲ್ಲ. ಧರ್ಮಶಾಸ್ತ್ರಕಾರರಾದ ಬೋಧಾಯನಾಚಾರ್ಯರು ಹೀಗೆಂದಿದ್ದಾರೆ: ‘ಪೂರ್ವಪ್ರತಿಷ್ಠಾಪಿತಸ್ಯ ಅಬುದ್ಧಿಪೂರ್ವಕಂ ಏಕರಾತ್ರಂ ದ್ವಿರಾತ್ರಂ ಏಕಮಾಸಂ ದ್ವಿಮಾಸಂ ಅರ್ಚನಾದಿ ವಿಚ್ಛೇದೆ....’ (ನಿರ್ಣಯಸಿಂಧು). ಇದರ ತಾತ್ಪರ್ಯ: ‘ಬುದ್ಧಿಪೂರ್ವಕವಾಗಲ್ಲದೆ ರಾಷ್ಟ್ರದ ವಿಪತ್ತಿನ ವೇಳೆಯಲ್ಲಿ ಪ್ರತಿದಿನದ ದೇವಾಲಯಪೂಜೆಯಲ್ಲಿ ಭಂಗ ಉಂಟಾದಾಗ ಪ್ರತಿಮೆಯಲ್ಲಿ ದೇವತಾಸಾನ್ನಿಧ್ಯ ಇರುವುದಿಲ್ಲ.

ಹೀಗೆ ಎರಡು ತಿಂಗಳು ಭಂಗ ನಡೆದರೂ, ಪುನಃ ಪೂಜೆಯನ್ನು ಪ್ರಾರಂಭಿಸುವ ಮೊದಲು ಶಾಸ್ತ್ರದಲ್ಲಿ ಹೇಳಿದ ಪ್ರಾಯಶ್ಚಿತ್ತವನ್ನು ಕೈಗೊಂಡು ಪೂಜೆ ಮಾಡಿದರೆ ದೇವತಾ ಅನುಗ್ರಹ ಉಂಟಾಗುತ್ತದೆ; ಗ್ರಾಮದ, ರಾಷ್ಟ್ರದ ಅಭ್ಯುದಯವೂ ಉಂಟಾಗುತ್ತದೆ.’ ಶ್ರಾದ್ಧ, ಎಂದರೆ ಹಿರಿಯರ ದಿನವನ್ನು ಮೃತತಿಥಿಯಂದು ನಡೆಸಬೇಕಾದ್ದು ಕರ್ತವ್ಯ. ಆದರೆ ಈಗಿನ ಸಂದರ್ಭದಲ್ಲಿ ಶ್ರಾದ್ಧದ ಆಚರಣೆಯಿಂದ ಸಾಮಾಜಿಕ ಅಂತರಕ್ಕೂ ಭಂಗ ಬರಬಹುದು. ಇಂಥ ವಿಷಮ ಸಂದರ್ಭದಲ್ಲೂ ಶಾಸ್ತ್ರಕಾರರು ರಿಯಾಯಿತಿಗಳನ್ನು ತೋರಿದ್ದಾರೆ. ವ್ಯಾಘ್ರಪಾದ ಎಂಬ ಧರ್ಮಶಾಸ್ತ್ರಕಾರ ಹೀಗೆಂದಿದ್ದಾರೆ: ‘ಆರ್ತವೇ ದೇಶಕಾಲಾನಾಂ ವಿಪ್ಲವೇ ಸಮುಪಸ್ಥಿತೇ ಆಮಶ್ರಾದ್ಧಂ ದ್ವಿಜೈಃ ಕಾರ್ಯಂ...’ ಎಂದರೆ ದೇಶ ವಿಪತ್ತಿನಲ್ಲಿರುವ ಸಂದರ್ಭದಲ್ಲಿ ಆಮಶ್ರಾದ್ಧವನ್ನು ಮಾಡಬಹುದು.

ಆಮಶ್ರಾದ್ಧ ಎಂದರೆ ಪಾಕದ್ರವ್ಯವನ್ನು (ಅಕ್ಕಿ, ಬೇಳೆ, ತರಕಾರಿ ಮುಂತಾದವನ್ನು) ಯೋಗ್ಯರಿಗೆ ದಾನ ಮಾಡುವುದು. ಗೋವಿಗೆ ಗ್ರಾಸ, ಎಂದರೆ ಮೇವನ್ನೂ ನೀಡಬಹುದು. ಈ ಲಾಕ್‌ಡೌನ್‌ ಸಂದರ್ಭದಲ್ಲಿ ಯಾರೂ ಸಿಗಲಾರರು. ಹೀಗಾಗಿ ಸಂಕಲ್ಪಮಾಡಿ, ಅವನ್ನು ಒಂದೆಡೆ ತೆಗೆದಿಟ್ಟುಕೊಂಡು, ಬಳಿಕ ಯೋಗ್ಯ ಸಮಯ ಪ್ರಾಪ್ತವಾದಾಗ ದಾನ ಮಾಡಬಹುದು.

ಹೀಗೆಯೇ ವ್ರತಾಚರಣೆಗಳನ್ನು ಮಾಡಲಾಗದಿದ್ದರೂ ಆ ದಿನಗಳಲ್ಲಿ ಗಾಯತ್ರೀಜಪ, ಅಷ್ಟಾಕ್ಷರೀಜಪಗಳನ್ನು ಮಾಡಿ, ವಿಘ್ನನಿವಾರಣೆಯಾದ ಬಳಿಕ ವ್ರತವನ್ನು ಮಾಡಬಹುದು ಎಂದು ‘ಧರ್ಮಸಿಂಧು’ ಹೇಳುತ್ತದೆ.

ರಾಷ್ಟ್ರಕ್ಕೆ ವಿಪತ್ತು ಒದಗಿದಾಗ ಧಾರ್ಮಿಕ ವಿಧಿ–ವಿಧಾನಗಳಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸುವ ಔದಾರ್ಯವನ್ನು ತೋರಿದ್ದಾರೆ. ಆ ಮೂಲಕ ರಾಷ್ಟ್ರದ ಹಿತವನ್ನೂ ಕುಟುಂಬದ ಹಿತವನ್ನೂ ಕಾಪಾಡುವ ಪ್ರಬುದ್ಧತೆಯನ್ನು ತೋರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು