ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿ ಮಾತೃತ್ವದ ಉದ್ದೀಪನ

Last Updated 4 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಜೀವನಕ್ಕೆ ಅವಶ್ಯವಾಗಿ ಬೇಕಾದ್ದು ಏನು ಎಂಬುದರ ಪಟ್ಟಿಯನ್ನು ನೀವೆಂದಾದರೂ ಮಾಡಿದ್ದೀರಾ? ಕುಟುಂಬ, ವಿದ್ಯೆ, ಉದ್ಯೋಗ, ಹವ್ಯಾಸ, ಯಶಸ್ಸು, ಖುಷಿ, ಸ್ನೇಹ, ಬುದ್ಧಿ, ಪ್ರೀತಿ – ಏನೇನಿದೆ ನಿಮ್ಮ ಪಟ್ಟಿಯಲ್ಲಿ? ಶುಭ ಹಾರೈಕೆ, ಆಶೀರ್ವಾದ, ಅನುಗ್ರಹ, ರಕ್ಷಣೆ, ಕೃಪೆ - ಇನ್ನೂ ಇಂತಹ ಹಲವಾರು ಆಮೂರ್ತ ಅವಶ್ಯಕತೆಗಳೂ ಇರಲೇಬೇಕಲ್ಲವೇ? ಅವುಗಳು ಯಾವ ಮೂಲದಿಂದ, ಹೇಗೆ ದೊರೆಯುತ್ತಿವೆ ಎಂಬ ಒಂದು ಸ್ಥೂಲ ಕಲ್ಪನೆಯೂ ಇರಬೇಕಲ್ಲವೇ? ಅನುಗ್ರಹ, ಆಶೀರ್ವಾದ, ಕೃಪೆ ಎಂದ ಕೂಡಲೇ ಇದು ದೇವರ ಬಗ್ಗೆ ನಂಬಿಕೆ, ಶ್ರದ್ಧೆ, ಪೂಜೆ, ಪ್ರಾರ್ಥನೆಗಳಲ್ಲಿ ವಿಶ್ವಾಸ ಇರುವವರಿಗೆ ಮಾತ್ರವೇ ಎಂದು ಅರ್ಥೈಸಬೇಕಾಗಿಲ್ಲ. ದೇವರ ಅವಶ್ಯಕತೆ ಇಲ್ಲದವರಿಗೂ ಅನುಗ್ರಹ, ಕೃಪೆಗಳ ಅವಶ್ಯಕತೆ ಇದೆ, ಅದರ ಅನುಭವವೂ ಖಂಡಿತ ಇದೆ. ಶಕ್ತಿ, ಪ್ರೀತಿ, ಬೆಳಕು ತುಂಬಿದ ಕರುಣೆಯ ಒರತೆಯೇ ಆದ ಯಾವುದರಿಂದಲೋ ಸದಾ ರಕ್ಷಿಸಲ್ಪಡುತ್ತಿದ್ದೇವೆ ಎಂಬ ಭದ್ರತೆಯ ಭಾವನೆ ಎಷ್ಟು ಅಪ್ಯಾಯಮಾನವಾದ್ದು, ಬದುಕಿಗೆಷ್ಟು ಮುಖ್ಯವಾದದ್ದು!

ಪ್ರೀತಿ ತುಂಬಿದ ಕಣ್ಣುಗಳು ಸದಾ ನನ್ನ ನೋಡುತ್ತಿವೆ, ದಯಾಮಯವಾದ ಹೃದಯದಲ್ಲಿ ನನಗೊಂದು ಸ್ಥಳವಿದೆ – ಎಂದು ನಂಬುವ ವ್ಯಕ್ತಿ ಆಕಾಶಕ್ಕೂ ಹಾರಬಲ್ಲಳು, ಅಸಾಧ್ಯವಾದ್ದನ್ನು ಸಾಧಿಸಿಯೇ ಬಿಡುವಳು. ತಂದೆ, ತಾಯಿ ಈ ಅರ್ಥದಲ್ಲಿ ನಿಜವಾಗಲೂ ದೇವರೇ. ತಂದೆ–ತಾಯಿಯ ಪ್ರೀತಿಯನ್ನು ಧಾರಾಳವಾಗಿ ಉಂಡವರಿಗೆ ದೇವರನ್ನು ಸೃಷ್ಟಿಸುವ, ಪೂಜಿಸುವ ಅವಶ್ಯಕತೆಯೇ ಬೀಳುವುದಿಲ್ಲವೇನೋ! ತಂದೆ, ತಾಯಿಯ ರಕ್ಷಣೆಯಲ್ಲಿ, ಆರೈಕೆಯಲ್ಲಿ ಅವರ ಸಂಪೂರ್ಣ ಬಲ, ಬೆಂಬಲಗಳಲ್ಲಿ ಬೆಳೆದ ಮಕ್ಕಳು ಎಷ್ಟು ನಿರ್ಭೀತಿಯಿಂದ, ಎಷ್ಟು ಶಾಂತಿ, ಪ್ರೀತಿಯಿಂದ ಇರುವುದನ್ನು ಎಲ್ಲರೂ ಗಮನಿಸಿರಬಹುದು. ಅಂತಹ ಮಕ್ಕಳಿಗೆ ಪ್ರಪಂಚವೆಲ್ಲ ತನ್ನ ಸ್ನೇಹವಲಯ ಎಂತಲೇ ಅನ್ನಿಸುವುದು. ಮೊದಲು ತಂದೆ, ತಾಯಿ ನಂತರ ಬಂಧುಗಳು, ಸ್ನೇಹಿತರು, ಗುರುಗಳು, ಸಮಾಜ, ಸಮುದಾಯ, ಸಂಗಾತಿ, ನೆರೆಹೊರೆ ಎಲ್ಲರ ಶುಭ ಹಾರೈಕೆ, ಸ್ನೇಹ, ರಕ್ಷಣೆ ನೀಡುವ ಬಲ ಮನುಷ್ಯನಿಗೆ ಊಟ, ನಿದ್ರೆ, ಉಸಿರಿನಷ್ಟೇ ಅವಶ್ಯಕ. ಪ್ರಪಂಚದ ತುಂಬೆಲ್ಲಾ ಗಾಳಿ, ಬೆಳಕಿನಂತೇ ಹರಡಿರುವ ಈ ಔದಾರ್ಯ, ಕರುಣೆ ಎಲ್ಲರಿಗೂ ಸಹಜವಾಗೇ ದೊರಕಬೇಕಾದ್ದು ಹಾಗೂ ಎಲ್ಲರೂ ಇದಕ್ಕೆ ಅರ್ಹರೂ ಕೂಡ. ಆದರೆ ಮಾನವ ಸಂಬಂಧಗಳ ಜಟಿಲತೆಯನ್ನು ಅದರ ಸಿಕ್ಕು ಸಿಕ್ಕಾದ ಚಕ್ರವ್ಯೂಹದ ರಚನೆಯನ್ನು ಬಲ್ಲವರೆಲ್ಲರಿಗೂ ತಿಳಿದಿದೆ – ಇದು ಮನುಷ್ಯನಿಂದ ಮನುಷ್ಯನಿಗೆ ದೊರಕುವುದು ಅಸಾಧ್ಯವಲ್ಲದಿದ್ದರೂ ಕಷ್ಟ ಎಂಬುದು. ಬಹುಶಃ ಇದಕ್ಕೆ ಪರ್ಯಾಯ ವ್ಯವಸ್ಥೆಯೇ ದೇವರ, ಅದರಲ್ಲೂ ದೇವಿಯ ಕಲ್ಪನೆ ಇರಬೇಕು. ರಕ್ಷಣೆಯೇ ಆಕೆಯ ಅವತಾರದ ಉದ್ದೇಶ. ತನ್ನ ಮಕ್ಕಳನ್ನು ಕಾಪಾಡುವ ಯಾವುದಾದರೂ ಆಯುಧ ಸದಾ ಆಕೆಯ ಕೈಯಲ್ಲಿ, ಕಣ್ಣಲ್ಲಿ ಒಮ್ಮೆ ಚಿಮ್ಮುವ ರಕ್ತದ ಆವೇಶ: ಮಗದೊಮ್ಮೆ ಉಕ್ಕುವ ಹಾಲಿನ ವಾತ್ಸಲ್ಯ, ಪ್ರಕೃತಿಯ ಯಾವ ಬಲವನ್ನಾದರೂ ಮಣಿಸಿ ರಕ್ಷಿಸುತ್ತೇನೆ ಎಂಬಂತೆ ಹುಲಿಯೇರಿ ಬರುವ ತಾಯಿ ಯಾರಿಗೆ ಬೇಡ? ನಮ್ಮೆಲರ ಮನಸ್ಸಿನಲ್ಲಿ ತಾಯಿಯ ಚಿತ್ರ ಇರುವುದೇ ಹೀಗಲ್ಲವೇ (ನಿಜದಲ್ಲಿ ತಾಯಿ ಹೀಗಿರಲಿ, ಬಿಡಲಿ; ಹೀಗಿರಬೇಕಿತ್ತು ಎಂಬ ಆಶಯವಂತೂ ಇದೆ)?

ತಾಯಿಯಲ್ಲದೆ ಬೇರೆ ಹೆಸರುಂಟೆ ಸ್ನೇಹಕ್ಕೆ, ನಂಬಿಕೆಗೆ, ಆಪ್ತತೆಗೆ? ‘ಬಂದ ಬಾಗಿಲು ಮಣ್ಣು: ಬಿಡುವ ಬಾಗಿಲು ಮಣ್ಣು, ನಡುವೆ ಕಾಪಾಡುವುದು ತಾಯ ಕಣ್ಣು’ ಎಂಬ ಕವಿವಾಣಿಯಂತೆ ತಾಯಕಣ್ಣು ಮಾತ್ರವೇ ನಮ್ಮನ್ನು ಕಾಪಾಡುವುದಲ್ಲ, ಕಾಪಾಡುವುದೆಲ್ಲವೂ ತಾಯ ಕಣ್ಣೇ, ಪೊರೆಯುವುದೆಲ್ಲವೂ ಮಾತೃತ್ವದ ಸೆಲೆಯೇ. ಅದು ಯಾವ ರೂಪದಲ್ಲಿ, ಯಾರ ವೇಷದಲ್ಲಿ ಬೇಕಾದರೂ ಇರಬಹುದು. ಅದು ಜೀವದ ಆರೈಕೆಗೆ ಅವಶ್ಯವಾದ ಹಸಿವು, ನಿದ್ರೆ, ನೀರಡಿಕೆಗಳಿರಬಹುದು, ಭಾವದ ವಿಕಾಸಕ್ಕೆ ಬೇಕಾದ ಪ್ರೀತಿ, ಸಂಬಂಧಗಳಿರಬಹುದು, ಬುದ್ಧಿ, ಶ್ರದ್ಧೆ, ಶಾಂತಿ, ಕ್ಷಮ, ದಯಾ, ತೃಪ್ತಿ, ಒಗ್ಗಟ್ಟು, ಒಮ್ಮತ, ಸಹಬಾಳ್ವೆ, ವೃತ್ತಿ, ಪ್ರವೃತ್ತಿ, ನೆನಪು, ಬಯಕೆ ಯಾವುದೇ ಇರಬಹುದು, ಒಟ್ಟಿನಲ್ಲಿ ಬದುಕಿನ ನಿರಂತರ ಹರಿವಿನಲ್ಲಿ ಒದಗುವ ಎಲ್ಲ ಭಾವ-ಬಂಧಗಳೂ ಪ್ರಪಂಚವನ್ನೂ, ನಮ್ಮನ್ನೂ ಒಂದಿಷ್ಟು ಪೊರೆಯುವುದಾದರೆ ಅವೆಲ್ಲವೂ ತಾಯಿಯೇ. ಈ ನವರಾತ್ರಿ ನಮ್ಮೆಲ್ಲರ ಹೃದಯದಲ್ಲಿ ಅಡಗಿದ ಈ ಮಾತೃತ್ವದ ಉದ್ದೀಪನೆಯೇ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT