ಗುರುವಾರ , ಜೂಲೈ 2, 2020
28 °C

ಹಂಚಿ ಸಂಭ್ರಮಿಸುವ ಹಬ್ಬ ಈದ್‌ ಉಲ್‌ ಫಿತ್ರ್‌

ಬಿ.ಎಂ.ಹನೀಫ್ Updated:

ಅಕ್ಷರ ಗಾತ್ರ : | |

’ಈದ್‌ ಉಲ್‌ ಫಿತ್ರ್‌‘ ಎಂದರೆ ದಾನದ ಹಬ್ಬ. ಲೋಕದಾದ್ಯಂತ ಮುಸ್ಲಿಮರು ಆಚರಿಸುವ ಎರಡು ಹಬ್ಬಗಳೆಂದರೆ ಒಂದು ’ಈದ್‌ ಉಲ್‌ ಅಝ್ಹಾ‘ (ಬಕ್ರೀದ್‌) ಮತ್ತು ಇನ್ನೊಂದು ’ಈದ್ ಉಲ್‌ ಫಿತ್ರ್.‘ ರಂಜಾನ್‌ ತಿಂಗಳು ಪೂರ್ತಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪಂಚೇಂದ್ರಿಯಗಳ ಉಪವಾಸ ಆಚರಿಸುವ ಮುಸ್ಲಿಮರು ರಂಜಾನ್‌ ತಿಂಗಳು ಮುಗಿದ ತಕ್ಷಣ ಬರುವ ಶವ್ವಾಲ್‌ ತಿಂಗಳ ಮೊದಲ ಚಂದ್ರದರ್ಶನ ಕಂಡು ಮರುದಿನ ’ಈದ್‌ ಉಲ್‌ ಫಿತ್ರ್‌‘ ಹಬ್ಬವನ್ನು ಆಚರಿಸುತ್ತಾರೆ. ಮಸೀದಿಗಳಲ್ಲಿ ವಿಶೇಷ ಸಾಮೂಹಿಕ ನಮಾಜ್‌, ಹೊಸ ಬಟ್ಟೆ ಮತ್ತು ಬಿರಿಯಾನಿಯ ಘಮ ಈ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ. 

ರಂಜಾನ್‌ ತಿಂಗಳ ಉಪವಾಸದ ಹೊತ್ತಿನಲ್ಲೇ ಮುಸ್ಲಿಮರು ನಿರ್ವಹಿಸಬೇಕಾದ ಕೆಲವು ಹಕ್ಕುಬಾಧ್ಯತೆಗಳಿವೆ. ಅದರಲ್ಲಿ ಮುಖ್ಯವಾದದ್ದು ಕಡ್ಡಾಯ ದಾನ (ಝಕಾತ್) ನೀಡುವುದು. ಪ್ರತಿಯೊಬ್ಬ ಮುಸ್ಲಿಮನೂ ತನ್ನ ವಾರ್ಷಿಕ ಆದಾಯದಲ್ಲಿ ಶೇ 2.5ರಷ್ಟನ್ನು ಕುಟುಂಬದಲ್ಲಿರುವ, ಊರು, ಪರವೂರಿನಲ್ಲಿರುವ ಬಡವರಿಗೆ ದಾನ ಮಾಡಬೇಕು. ಜೊತೆಗೆ ತಮ್ಮ ಸುತ್ತಲಿರುವ ಬಡವರಿಗೆ ಆಹಾರ ಧಾನ್ಯಗಳ ರೂಪದಲ್ಲಿ ಸದಕಾ (ದಾನ)ವನ್ನೂ ನೀಡಬೇಕು. ಹಾಗೆಂದೇ ಇದು ಹಂಚಿ ತಿನ್ನುವ ಸಮಾನತೆಯ ಹಬ್ಬ. ಪ್ರೀತಿ, ಸಹೋದರತೆಯನ್ನು ಪಸರಿಸುವ ಹಬ್ಬ.

ಸಾಮೂಹಿಕ ನಮಾಝ್‌ಗೆ ಇಸ್ಲಾಂನಲ್ಲಿ ವಿಶೇಷ ಮಹತ್ವವಿದೆ. ಈ ಸಲ ಜಗತ್ತಿನಾದ್ಯಂತ ಹರಡಿದ ಕೋವಿಡ್‌ ಸಾಂಕ್ರಾಮಿಕವು  ಹಬ್ಬದ ಸಂಭ್ರಮವನ್ನು ಕುಗ್ಗಿಸಿದೆ. ಆದರೆ ಉಪವಾಸದ ತಿಂಗಳ ಮತ್ತು ಹಬ್ಬದ ಸ್ಫೂರ್ತಿ ಮಾತ್ರ ಎಳ್ಳಷ್ಟೂ ಕುಂದಿಲ್ಲ. ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಸಾವಿರಾರು ಮುಸ್ಲಿಮರು ಈ ಸಲ ಹೆಚ್ಚು ಹೆಚ್ಚು ದಾನ ಮಾಡಿದ್ದು ಕಂಡುಬಂತು. ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ವಹಿಸಬೇಕಾದ ಆರೋಗ್ಯ ಮುನ್ನೆಚ್ಚರಿಕೆಯ ಬಗ್ಗೆ ಪ್ರವಾದಿ ಮುಹಮ್ಮದರು 1400 ವರ್ಷಗಳ ಹಿಂದೆಯೇ ಸೂಚಿಸಿದ್ದಾರೆ. ’ಸಾಂಕ್ರಾಮಿಕ ರೋಗಗಳು ಇರುವೆಡೆಗೆ ನೀವು ಹೋಗಬೇಡಿ; ಸಾಂಕ್ರಾಮಿಕ ರೋಗಗಳ ಪ್ರದೇಶದಲ್ಲಿ ನೀವಿದ್ದರೆ ಮನೆಯಲ್ಲೇ ಇರಿ‘ ಎನ್ನುವ ಅವರ ವಚನ ಜನಜನಿತ. ಅದರಂತೆ ಈ ಸಲ ಮುಸ್ಲಿಮರು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಕೈಬಿಟ್ಟು ಮನೆಗಳಲ್ಲೇ ನಮಾಜ್‌ ನಿರ್ವಹಿಸಿದ್ದು ವಿಶೇಷ. ಹಬ್ಬವನ್ನು ಕೂಡಾ ಹೊಸಬಟ್ಟೆ, ಅನಗತ್ಯ ವೆಚ್ಚಗಳ ಹಂಗಿಲ್ಲದೆ ಸರಳವಾಗಿ ಆಚರಿಸಲು ಮುಸ್ಲಿಂ ಸಮುದಾಯ ನಿರ್ಧರಿಸಿರುವುದು ಶ್ಲಾಘನಾರ್ಹ.

ಸಾಮಾನ್ಯವಾಗಿ ರಂಜಾನ್ ತಿಂಗಳಲ್ಲಿ ಮೆಕ್ಕಾದ ಪವಿತ್ರ ಕಾಬಾ ಆರಾಧನಾಲಯಕ್ಕೆ ಭೇಟಿ ನೀಡಿ ಉಮ್ರಾ ನಿರ್ವಹಿಸಲೂ ಈ ಸಲ ವಿಶ್ವದಾದ್ಯಂತ ಮುಸ್ಲಿಮರಿಗೆ ಸಾಧ್ಯವಾಗಿಲ್ಲ. ಅಲ್ಲೂ ಕೊರೊನಾ ಭೀತಿ ಆವರಿಸಿದೆ. ಇನ್ನೀಗ ಆಗಸ್ಟ್‌ ತಿಂಗಳ ಮೊದಲ ತೇದಿಯಂದು ಬರಲಿರುವ ಬಕ್ರೀದ್‌ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ನಿರೀಕ್ಷೆಯಲ್ಲಿ ಮುಸ್ಲಿಮರಿದ್ದಾರೆ. ಅದು ಹಜ್‌ ಪ್ರವಾಸದ ಸಮಯ. ಆ ಹೊತ್ತಿಗೆ ಜಗತ್ತಿನಾದ್ಯಂತ ಕೊರೊನಾದ ಕರಿನೆರಳು ಇಲ್ಲವಾಗಿ ಹಬ್ಬದ ಸಂಭ್ರಮ ಉದ್ದೀಪಿಸಲಿ ಎಂದು ಹಾರೈಸೋಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು