ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಾನುಜಾಚಾರ್ಯ ಜಯಂತಿ ವಿಶೇಷ: ಭಕ್ತಿಮಾರ್ಗದ ಯತಿರಾಜ

Published 24 ಏಪ್ರಿಲ್ 2023, 20:21 IST
Last Updated 24 ಏಪ್ರಿಲ್ 2023, 20:21 IST
ಅಕ್ಷರ ಗಾತ್ರ

ಗಣೇಶ ಭಟ್ಟ ಕೊಪ್ಪಲತೋಟ

ಶ್ರೀರಾಮಾನುಜಾಚಾರ್ಯರು ಭಕ್ತಿಯನ್ನು ಪ್ರಮುಖವಾಗಿ ಸಾರಿದ ಮಹನೀಯರು. ಭಗವಂತನಲ್ಲಿ ಅನನ್ಯವಾದ ಶ್ರದ್ಧೆಯಿಂದ ಸಂಪೂರ್ಣವಾದ ಶರಣಾಗತಿಯನ್ನು ಹೊಂದಿ ಯಾವುದೇ ಕರ್ಮವನ್ನು ಭಗವಂತನ ಸೇವೆ-ಕೈಂಕರ್ಯ ಎಂದು ಭಾವಿಸಿಕೊಂಡು ಮಾಡಬೇಕು ಎಂದು ಅವರು ಹೇಳುತ್ತಾರೆ. ಹೀಗೆ ಆಚರಿಸುವ ಯಾವ ವ್ಯಕ್ತಿಗೇ ಆಗಲಿ ಭಗವಂತನ ಸಾಕ್ಷಾತ್ಕಾರ ಸಾಧ್ಯವಿದೆ ಎಂದು ವಿವರಿಸಿದ ಅವರ ಜೀವನದಲ್ಲಿ ಕೂಡ ಇಂತಹ ಒಂದು ಘಟನೆ ನಡೆದದ್ದನ್ನು ನಾವು ಕೇಳುತ್ತೇವೆ.

ಧನುರ್ದಾಸನೆಂಬ ಒಬ್ಬನು ಹೇಮಾಂಬ ಎಂಬ ಸ್ತ್ರೀಯಲ್ಲಿ ಅನುರಕ್ತನಾಗಿದ್ದ. ಲೌಕಿಕ ಜಗತ್ತಿನಲ್ಲಿ ಆಸಕ್ತರಾದ ಎಲ್ಲರ ಹಾಗೆಯೇ ಅವನಿಗೆ ಕೂಡ ತನ್ನ ಪ್ರಿಯೆಯಾದ ಹೇಮಾಂಬಳ ಸೌಂದರ್ಯವೊಂದೇ ಶ್ರೇಷ್ಠವಾದದ್ದೆಂದು ಭಾವನೆಯಿತ್ತು. ಶ್ರೀ ರಾಮಾನುಜರನ್ನು ಕಂಡಾಗ ಅವರು ‘ಈ ಸೌಂದರ್ಯ ಶಾಶ್ವತವಾದದ್ದಲ್ಲ’ ಎಂದು ಹೇಳಿದರು. ಅವನು ಅವರ ಮಾತಿನಿಂದ ಗೊಂದಲಗೊಂಡು ‘ಇವಳ ಕಣ್ಣುಗಳಿಗಿಂತ ಸುಂದರವಾದ ಕಣ್ಣುಗಳೇ ಇಲ್ಲ; ಸನ್ಯಾಸಿಗಳಾದ ನಿಮಗೆ ಸೌಂದರ್ಯಪ್ರಜ್ಞೆ ಎಲ್ಲಿಯದು?’ ಎಂದೆಲ್ಲ ಹೇಳಿದ. ಆಚಾರ್ಯರು ಅವನನ್ನು ಶ್ರೀರಂಗದ ರಂಗನಾಥಸ್ವಾಮಿಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ದೇವರನ್ನು ತೋರಿಸಿದರು. ಧನುರ್ದಾಸನು ಅವರಲ್ಲಿ ಸಂಪೂರ್ಣವಾದ ನಂಬಿಕೆಯನ್ನು ಇಟ್ಟುಕೊಂಡು ನೋಡಿದ ಕಾರಣ ಶ್ರೀರಂಗನಾಥಸ್ವಾಮಿಯು ಆ ಮೂರ್ತಿಯಲ್ಲಿಯೇ ತನ್ನ ತೇಜೋಮಯವಾದ ಕಣ್ಣುಗಳನ್ನು ತೆರೆದು ಅವರಿಗೆ ದರ್ಶನವನ್ನು ಕೊಟ್ಟನು ಎಂದು ಪ್ರತೀತಿ. ಹೀಗೆ ಆ ಭಗವಂತನ ಕಣ್ಣುಗಳ ಸೌಂದರ್ಯವನ್ನು ನೋಡಿದ ಬಳಿಕ ಧನುರ್ದಾಸ ಶ್ರೀರಾಮಾನುಜರ ಮಹತ್ತ್ವವನ್ನು ಒಪ್ಪಿಕೊಂಡು ಅವರ ಶಿಷ್ಯನಾದ. ಅವನು ಕೆಳಜಾತಿಯವನೆಂದು ಅವನಲ್ಲಿ ಅನಾದರವನ್ನು ತೋರಿಸುತ್ತಿದ್ದ ಆಚಾರ್ಯರ ಶಿಷ್ಯರಿಗೆ ಅವನ ಮೇಲ್ಮೆಯನ್ನು ತೋರಿಸಿ ಭಗವಂತನ ಭಕ್ತರಾದವರಿಗೆ ವಿದ್ಯಾಮದ, ಧನಮದ, ಕುಲಮದ – ಇವುಗಳೆಲ್ಲ ಇರಬಾರದೆಂದು ತಿಳಿಸಿದರಂತೆ.

ಇಂತಹದೇ ಇನ್ನೊಂದು ಬಹುಪ್ರಸಿದ್ಧವಾದ ಪ್ರಸಂಗವನ್ನೂ ಕೇಳುತ್ತೇವೆ. ತಿರುಕ್ಕೊಟ್ಟಿಯೂರ್‌ ನಂಬಿ ಅಥವಾ ಗೋಷ್ಠೀಪೂರ್ಣರು ಎಂಬುವವರ ಬಳಿ ಆಚಾರ್ಯರು ತಿರುಮಂತ್ರದ ಉಪದೇಶವನ್ನು ಪಡೆಯಲು ಹೋದರು. ಅವರು ಇವರ ತಾಳ್ಮೆಯನ್ನು ಪರೀಕ್ಷಿಸುವುದಕ್ಕೋಸ್ಕರ ಪ್ರತಿ ಬಾರಿಯೂ ‘ಕೆಲವು ದಿನಗಳನ್ನು ಬಿಟ್ಟು ಬಾ’ ಎಂದು ಹೇಳಿ ಕಳುಹಿಸುತ್ತಿದ್ದರಂತೆ. ಹೀಗೆ ಹದಿನೇಳು ಬಾರಿ ಆದ ಮೇಲೆ ಹದಿನೆಂಟನೇ ಸಲ ಅವರ ಬಳಿ ಬಂದಾಗ ದಿವ್ಯವಾದ ತಿರುಮಂತ್ರವನ್ನು ಅರ್ಥಸಹಿತವಾಗಿ ಉಪದೇಶಿಸಿದರಂತೆ. ಈ ಶರಣಾಗತಿಮಂತ್ರವನ್ನು ತಿಳಿದುಕೊಂಡು ಉಚ್ಚರಿಸಿದರೆ ಸದ್ಗತಿ ದೊರೆಯುತ್ತದೆಯೆಂದೂ, ಅದನ್ನು ಜನಸಾಮಾನ್ಯರಿಗೆ ಉಪದೇಶಿಸದೇ ರಹಸ್ಯವಾಗಿರಿಸಿಕೊಳ್ಳಬೇಕೆಂದೂ, ತನ್ನ ಮಾತನ್ನು ಮೀರಿದರೆ ನರಕಕ್ಕೆ ಹೋಗಬೇಕಾಗುತ್ತದೆಯೆಂದೂ ಎಚ್ಚರಿಸಿದರು. ಶ್ರೀರಾಮಾನುಜಾಚಾರ್ಯರು ಅಂದೇ ದೇವಸ್ಥಾನದ ಗೋಪುರವನ್ನು ಏರಿನಿಂತು ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ ಹೇಳಿ ಅರ್ಥಸಹಿತ ಉಪದೇಶಿಸಿದರಂತೆ. ಗೋಷ್ಠೀಪೂರ್ಣರು ಇದನ್ನು ಕೇಳಿ ಸಿಟ್ಟಾದಾಗ ಶ್ರೀರಾಮಾನುಜರು ‘ಇಷ್ಟೊಂದು ಜನರಿಗೆ ಸದ್ಗತಿಯುಂಟಾಗುತ್ತದೆಯೆಂದಾದರೆ ನಾನೊಬ್ಬ ನರಕವನ್ನು ಅನುಭವಿಸಲೂ ಸಿದ್ಧ’ ಎಂದು ಹೇಳಿದರಂತೆ. ಗುರುಗಳು ಅವರ ಹೃದಯ ವೈಶಾಲ್ಯವನ್ನು ಕಂಡು ಬೆರಗಾಗಿ ಮೆಚ್ಚಿಕೊಂಡು ಬಿಗಿದಪ್ಪಿ ಹರಸಿದರಂತೆ.

ಹೀಗೆ ಎಲ್ಲ ಜೀವಿಗಳಲ್ಲಿಯೂ ಸಮಾನತೆಯನ್ನು ಕಂಡು ಎಲ್ಲರ ಸದ್ಗತಿಯನ್ನೂ ಬಯಸಿದ್ದ ಯತಿರಾಜರಾದ ಶ್ರೀರಾಮಾನುಜಾಚಾರ್ಯರದ್ದು ನೂರಿಪ್ಪತ್ತು ವರ್ಷಗಳ ಪೂರ್ಣಾಯುಷ್ಯದ ಜೀವನ. ಹುಟ್ಟಿದ್ದು ತಮಿಳುನಾಡಿನ ಶ್ರೀಪೆರುಂಬುದೂರಿನಲ್ಲಿ. ತಮ್ಮ ಜೀವಿತದಲ್ಲಿ ಶ್ರೀರಂಗ, ಕಾಂಚೀಪುರ ಮೊದಲಾದ ಕ್ಷೇತ್ರಗಳಲ್ಲಿ ಅಲ್ಲದೇ ನಮ್ಮ ಕರ್ಣಾಟಕದ ಹೊಯ್ಸಳ ವಿಷ್ಣುವರ್ಧನನ ಬಳಿಗೂ ಬಂದಿದ್ದರು ಹಾಗೂ ಯದುಗಿರಿ ಎಂದು ಪ್ರಖ್ಯಾತವಾಗಿರುವ ಮೇಲುಕೋಟೆಯ ದೇವಾಲಯವನ್ನು ಸ್ಥಾಪಿಸಿ ಪೂಜಾವಿಧಾನಗಳನ್ನು ನಿಯಮಿಸಿ ದೆಹಲಿಯ ಸುಲ್ತಾನನ ವಶದಿಂದ ಅಲ್ಲಿರುವ ಶೆಲ್ವಪಿಳ್ಳೈ ಎಂಬ ಮೂರ್ತಿಯನ್ನು ತೆಗೆದುಕೊಂಡು ಬಂದು ಉತ್ಸವಮೂರ್ತಿಯಾಗಿ ಪ್ರತಿಷ್ಠಾಪಿಸಿದರೆಂದೂ ತಿಳಿದುಬರುತ್ತದೆ.

ಬ್ರಹ್ಮಸೂತ್ರಗಳಿಗೆ ಪ್ರಸಿದ್ಧವಾದ ಶ್ರೀಭಾಷ್ಯವೇ ಮೊದಲಾಗಿ ಪಾಂಡಿತ್ಯಪೂರ್ಣವಾದ ಅನೇಕ ಗ್ರಂಥಗಳನ್ನು ರಚಿಸಿದ್ದಲ್ಲದೇ ಸಾಮಾನ್ಯಜನರಿಗೂ ಸದ್ಗತಿ ಸುಲಭವಾಗಿ ದೊರೆಯುವ ಭಕ್ತಿ-ಶರಣಾಗತಿಯ ಮಾರ್ಗವನ್ನು ವಿಶೇಷವಾಗಿ ಪ್ರತಿಪಾದಿಸಿ ವಿಶಿಷ್ಟಾದ್ವೈತ ಪರಂಪರೆಯನ್ನು ಪ್ರಚುರಪಡಿಸಿದವರು ಶ್ರೀರಾಮಾನುಜಾಚಾರ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT