ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್: ಮುಸ್ಲಿಮರಿಗೆ ಬದುಕಿನ ಪಾಠಗಳ ಹಬ್ಬ

Published 21 ಏಪ್ರಿಲ್ 2023, 21:38 IST
Last Updated 21 ಏಪ್ರಿಲ್ 2023, 21:38 IST
ಅಕ್ಷರ ಗಾತ್ರ

ದಸ್ತಗೀರಸಾಬ್ ದಿನ್ನಿ

ರಂಜಾನ್ ಹಬ್ಬವು ಮುಸ್ಲಿಮರಿಗೆ ಬದುಕಿನ ಅನೇಕ ಪಾಠಗಳನ್ನು ಕಲಿಸಿಕೊಡುತ್ತದೆ. ದೇಹವನ್ನು ಹಸಿವಿಗೆ ಒಳಪಡಿಸಿ ಗೆಲ್ಲುವುದು. ಇದರಿಂದ ಹಸಿವಿಗೆ ಒಳಗಾಗುವ ಬಡವರ ಸಂಕಟಗಳನ್ನು ಅರ್ಥ ಮಾಡಿಕೊಳ್ಳುವುದು. ಉಪವಾಸ ಕೈಗೊಳ್ಳುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು. ಇದರೊಂದಿಗೆ ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದು. ಕೆಟ್ಟ ವಿಚಾರಗಳನ್ನು ಕೆಟ್ಟ ಕೆಲಸಗಳನ್ನು ಮಾಡದಿರುವುದು. ನಮ್ಮ ಸುತ್ತಮುತ್ತಲೂ ವಾಸಿಸುತ್ತಿರುವ ಎಲ್ಲರನ್ನೂ ಸಹೋದರತ್ವದ ಭಾವನೆಯಿಂದ ಕಾಣುವುದು. ಮಾನವೀಯ ಮೌಲ್ಯಗಳನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡು ಸಾಗುವುದು ಇದರ ಪ್ರಧಾನ ತಿರುಳಾಗಿದೆ.

ಇಸ್ಲಾಂ ಮುಖ್ಯವಾಗಿ ಐದು ಪ್ರಮುಖ ಮೂಲತತ್ವಗಳನ್ನು ಪ್ರತಿಪಾದಿಸುತ್ತದೆ. ಅವುಗಳೆಂದರೆ, ನಿರಾಕಾರನಾದ ಏಕದೇವನಲ್ಲಿ ಹಾಗೂ ಅವನ ಪ್ರವಾದಿಯಲ್ಲಿ ವಿಶ್ವಾಸವಿಡುವುದು. ದಿನದ ಐದು ಹೊತ್ತು ತಪ್ಪದೇ ನಮಾಜ್ ಮಾಡುವುದು. ಪ್ರತಿಯೊಬ್ಬ ವ್ಯಕ್ತಿ ತಾನು ವರ್ಷವಿಡೀ ದುಡಿದು ಗಳಿಸಿದ ಸ್ವತ್ತು, ಸಂಪತ್ತಿನಲ್ಲಿ ಶೇ 2.5ರಷ್ಟು ಮೊತ್ತವನ್ನು ಬಡವರಿಗೆ, ಸಾಲದಲ್ಲಿ ಮುಳುಗಿದವರಿಗೆ, ಅಸಹಾಯಕರಿಗೆ ದಾನ (ಝಕಾತ್) ಮಾಡುವುದು. ಪ್ರತಿ ವರ್ಷ ರಂಜಾನ್ ತಿಂಗಳಲ್ಲಿ ಒಂದು ತಿಂಗಳು ಉಪವಾಸ (ರೋಜಾ) ಆಚರಿಸುವುದು ಮತ್ತು ಆರ್ಥಿಕವಾಗಿ ಅನುಕೂಲತೆಗಳಿದ್ದರೆ ಬದುಕಿನಲ್ಲಿ ಒಂದು ಸಲ ಹಜ್ ಯಾತ್ರೆಯನ್ನು ಕೈಗೊಳ್ಳುವುದು.

ರಂಜಾನ್ ಉಪವಾಸವು ಒಂದು ತಿಂಗಳ ಕಾಲ ನಡೆಯುತ್ತದೆ. ಸೂರ್ಯೋದಕ್ಕೆ ಮುನ್ನ ಸಹರಿ (ಊಟ) ಮುಗಿಸಿ ಸೂರ್ಯಾಸ್ತದ ನಂತರ ಇಫ್ತಾರ್ (ಸಂಜೆ ಊಟ) ಮಾಡುವುದು. ಹಗಲಿನಲ್ಲಿ ತೊಟ್ಟು ನೀರೂ ಕುಡಿಯದೆ ಕಠಿಣ ವ್ರತವನ್ನು ಅರಿತು ಪಾಲಿಸುವುದು ರಂಜಾನಿನ ಕಡ್ಡಾಯ ನಿಯಮವಾಗಿದೆ. ಬಡವರು ಶ್ರೀಮಂತರು ಎನ್ನುವ ಭೇದಭಾವ ಇಲ್ಲಿ ಸುಳಿಯುವುದಿಲ್ಲ. ಮನುಷ್ಯ ತನ್ನ ದೇಹವನ್ನು ಇಲ್ಲಿ ದಂಡಿಸಬೇಕಾಗುತ್ತದೆ. ಹಸಿವಿನ ತೀವ್ರ ಸ್ವರೂಪವನ್ನು ಅರ್ಥ ಮಾಡಿಕೊಳ್ಳಲು ರಂಜಾನ್ ನೆರವಾಗುತ್ತದೆ. ಜೊತೆಗೆ ನಿಗದಿತ ಸಮಯದಲ್ಲಿ ಪ್ರಾರ್ಥನೆ ಮಾಡುವುದರಿಂದ ನಮ್ಮಲ್ಲಿ ಸಮಯ ಪ್ರಜ್ಞೆ, ಕ್ರಿಯಾಶೀಲತೆ ಉಂಟಾಗುತ್ತದೆ. ಈ ತಿಂಗಳು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಎಂಬ ಅರಿಷಡ್ವರ್ಗಗಳನ್ನು ಹೇಗೆ ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎನ್ನುವುದನ್ನು ಕಲಿಸಿಕೊಡುತ್ತದೆ. ರಂಜಾನ್ ತಿಂಗಳಲ್ಲಿ ತರಾವಿ ನಮಾಜ್ (ಪ್ರಾರ್ಥನೆ), ರೋಜಾ (ಉಪವಾಸ) ಮತ್ತು ಝಕಾತ್‌ಗೆ (ದಾನ) ಪ್ರಮುಖ ಸ್ಥಾನವಿದೆ. ಎಲ್ಲ ಮಸೀದಿಗಳಲ್ಲಿ ಪ್ರತಿದಿನ ಐದು ಸಲ ಪ್ರಾರ್ಥನೆ ಸಲ್ಲಿಸುತ್ತಾರೆ. ಪುರುಷರು ಮಸೀದಿಯಲ್ಲಿ, ಮಹಿಳೆಯರು ಮತ್ತು ಮಕ್ಕಳು ಮನೆಯಲ್ಲೇ ಪ್ರಾರ್ಥನೆಯನ್ನು ಮಾಡುತ್ತಾರೆ.

ಮುಸ್ಲಿಂ ಸಮುದಾಯದವರಿಗೆ ರಂಜಾನ್ ತಿಂಗಳು ಒಂದು ರೀತಿಯಲ್ಲಿ ತರಬೇತಿಯ ತಿಂಗಳು. ಪ್ರತಿ ವರ್ಷ ಜನರಲ್ಲಿನ ಆಚಾರ–ವಿಚಾರಗಳಲ್ಲಿ ಪರಿವರ್ತನೆಯನ್ನು ತರಬೇಕೆಂದು ಪ್ರವಾದಿ ಮಹಮ್ಮದರು ಬಯಸಿದ್ದರು. ಸಮಯ ಪರಿಪಾಲನೆ, ಉಪವಾಸ ವ್ರತ ಆಚರಣೆ, ಮನಸ್ಸಿನ ನಿಗ್ರಹ, ಸಕಲ ಜೀವಾತ್ಮರನ್ನು ಪ್ರೀತಿಯಿಂದ ಕಾಣುವ ಮನೋಭಾವ, ದಾನ-ಧರ್ಮ ಮಾಡುವುದರ ಮೂಲಕ ಹಂಚಿಕೊಂಡು ತಿನ್ನುವ ಮನೋಭಾವನೆಯನ್ನು ರಂಜಾನ್ ಮೂಲಕ ಅವರು ಪ್ರತಿಪಾದಿಸಿದ್ದಾರೆ.

ರಂಜಾನ್ ತಿಂಗಳಿಗೆ ಅತಿ ಮಹತ್ವ ಬರಲು ಇನ್ನೊಂದು ಬಲವಾದ ಕಾರಣವೆಂದರೆ, ಇದು ಅಲ್ಲಾಹನ ಅಂತಿಮ ದೈವಿಕ ಗ್ರಂಥ ‘ಕುರಾನ್’ ಅವತೀರ್ಣಗೊಂಡ ತಿಂಗಳಾಗಿದೆ. ಈ ತಿಂಗಳು ಮುಸ್ಲಿಮರ ಪಾಲಿಗೆ ಒಂದು ಮಹಾಭಾಗ್ಯವೂ ದೇವಾನುಗ್ರಹವೂ ಆಗಿದೆ. ಚಂದ್ರನ ದರ್ಶನದಿಂದ ಆರಂಭವಾದ ರಂಜಾನ್ ಚಂದ್ರನ ದರ್ಶನವಾದ ಮರುದಿನ ಮುಕ್ತಾಯವಾಗುತ್ತದೆ. ಅಂದು ಸೃಷ್ಟಿಕರ್ತನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಪ್ರಾರ್ಥನೆಯ ನಂತರ ಪರಸ್ಪರ ಆಲಂಗಿಸಿಕೊಂಡು ಶುಭಾಶಯವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಈ ತಿಂಗಳಿನಲ್ಲಿ ಬಡವರಿಗೆ ಬಟ್ಟೆಗಳನ್ನು ಹಂಚುವ ಪದ್ಧತಿ ಇದೆ. 

ರಮ್ಜಾನ್ ಮುಬಾರಕ್
ರಮ್ಜಾನ್ ಮುಬಾರಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT