ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಥಸಪ್ತಮಿ

Last Updated 29 ಜನವರಿ 2020, 19:45 IST
ಅಕ್ಷರ ಗಾತ್ರ

ಸೂರ್ಯ ನಮ್ಮ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರು. ಸೂರ್ಯದೇವನನ್ನು ಆರಾಧಿಸುವ ಪ್ರಮುಖ ಪರ್ವದಿನವೇ ರಥಸಪ್ತಮಿ.

ರಥಸಪ್ತಮಿಯನ್ನು ‘ಅಚಲಾಸಪ್ತಮಿ’ ಎಂದೂ ಕರೆಯುತ್ತಾರೆ. ಮಾಘಮಾಸದ ಶುಕ್ಲಪಕ್ಷದ ಸಪ್ತಮಿಯ ದಿನ ಈ ಪರ್ವವನ್ನು ಆಚರಿಸಲಾಗುತ್ತದೆ.

ಸೂರ್ಯನಿಲ್ಲದೆ ನಮ್ಮ ಬದುಕಿಲ್ಲ. ಸೃಷ್ಟಿಯಲ್ಲಿರುವ ಎಲ್ಲ ಜೀವಿಗಳ ಅಳಿವು–ಉಳಿವು ಸೂರ್ಯನನ್ನೇ ಆಶ್ರಯಿಸಿದೆ ಎಂದರೆ ಅದೇನೂ ತಪ್ಪಾಗದು. ಹೀಗಾಗಿ ಅವನು ನಮ್ಮ ಪಾಲಿಗೆ ದೇವರೇ ಆಗಿದ್ದಾನೆ. ಇದು ಭೌತಿಕ ಸೂರ್ಯನ ವಿಷಯವಾಯಿತು. ಸೂರ್ಯಾರಾಧನೆಗೆ ಇನ್ನೊಂದು ಆಯಾಮವೂ ಉಂಟು.

ಇಡಿಯ ಸೃಷ್ಟಿಯೇ ಪರಮಾತ್ಮನ ಅಧೀನ. ಈ ಪರಮಾತ್ಮನು ಪರಂಜ್ಯೋತಿಯೂ ಹೌದು. ಅವನ ಪ್ರತೀಕವೇ ಸೂರ್ಯ. ಹೀಗಾಗಿ ಭಗವಂತನ ಆರಾಧನೆಯಲ್ಲಿ ನಮ್ಮ ಋಷಿಗಳು ಸೂರ್ಯೋಪಾಸನೆಗೆ ತುಂಬ ಮಹತ್ವವನ್ನು ಕೊಟ್ಟರು ಎನಿಸುತ್ತದೆ. ಸೂರ್ಯನಾರಾಯಣ – ಎಂದೇ ಅವನನ್ನು ಪೂಜಿಸಲಾಗುತ್ತದೆ.

ಸೂರ್ಯನ ಸ್ವಭಾವ ಬೆಳಕು. ಬೆಳಕು ನಮ್ಮ ಜೀವನಕ್ಕೆ ಬೇಕಾದ ದಾರಿಯೇ ಹೌದು. ನಮ್ಮ ಬಹಿರಂಗಕ್ಕೆ ಮಾತ್ರವಲ್ಲದೆ, ಅಂತರಂಗಕ್ಕೂ ಬೆಳಕಿನ ಆವಶ್ಯಕತೆಯಿದೆ. ಹೊರಗಿನ ಬೆಳಕಿಗೆ ಸೂರ್ಯ ಕಾರಣವಾದರೆ, ಒಳಗಿನ ಬೆಳಕಿಗೆ ನಮ್ಮೊಳಗೆ ಚೈತನ್ಯಸ್ವರೂಪದಲ್ಲಿರುವ ಆತ್ಮವಸ್ತುವೇ ಕಾರಣ. ಹೀಗಾಗಿ ಸೂರ್ಯನು ಪರಬ್ರಹ್ಮಸ್ವರೂಪನೂ ಎನಿಸಿಕೊಳ್ಳುತ್ತಾನೆ. ಇಷ್ಟೆಲ್ಲ ವಿಶೇಷಗಳಿಂದಾಗಿ ನಮ್ಮ ಸಂಸ್ಕೃತಿಯಲ್ಲಿ ಸೂರ್ಯೋಪಾಸನೆಗೆ ತುಂಬ ಮಹತ್ವವಿದೆ.

ರಥಸಪ್ತಮಿಯಂದು ನಾವು ಮಾಡುವ ಸ್ನಾನಕ್ಕೆ ವಿಶೇಷ ಸ್ಥಾನವಿದೆ. ಎಕ್ಕದ ಎಲೆಗಳನ್ನು ತಲೆ, ತೋಳುಗಳ ಮೇಲೆ ಇಟ್ಟುಕೊಂಡು ಸ್ನಾನ ಮಾಡುವುದು ರೂಢಿ. ಹೀಗೆ ಏಳು ಎಕ್ಕದ ಎಲೆಗಳನ್ನು ಉಪಯೋಗಿಸಬೇಕು. ಏಳು ಎಂಬ ಸಂಖ್ಯೆಗೂ ಸೂರ್ಯತತ್ತ್ವಕ್ಕೂ ನಂಟಿದೆ. ಸೂರ್ಯನ ರಥನಿಗೆ ಇರುವುದು ಏಳು ಕುದುರೆಗಳು. ಈ ಸಪ್ತಾಶ್ವಗಳು ಸಪ್ತಪ್ರಾಣಗಳಿಗೆ ಸಂಕೇತ ಎನ್ನುವುದುಂಟು.

ಸ್ನಾನವಾದ ಬಳಿಕ ಪೂಜೆಗೆ ಸಿದ್ಧಮಾಡಿಕೊಂಡು ಸೂರ್ಯನನ್ನು ಅರ್ಚಿಸಬೇಕು. ಸೂರ್ಯನ ವಿಗ್ರಹ ಅಥವಾ ಚಿತ್ರವನ್ನು ಸ್ಥಾಪಿಸಿಕೊಂಡು ಪೂಜೆಯನ್ನು ನೆರವೇರಿಸಬೇಕು. ಎಕ್ಕದ ಎಲೆಗಳು, ಎಲಚಿಯ ಎಲೆಗಳು, ಗರಿಕೆ, ಅಕ್ಷತೆಗಳನ್ನು ಉಪಯೋಗಿಸಿಕೊಂಡು ಪೂಜಿಸಬೇಕು. ಅರುಣಮಂತ್ರ, ಸೂರ್ಯಗಾಯತ್ರಿ, ಮಹಾಸೌರಮಂತ್ರಗಳಿಂದ ಅವನನ್ನು ಸ್ತುತಿಸಬೇಕು. ಆದಿತ್ಯಹೃದಯವನ್ನೂ ಪಠಿಸಲಾಗುತ್ತದೆ.

ಸೂರ್ಯ ಆರೋಗ್ಯಕಾರಕ ಮತ್ತು ಜ್ಞಾನಕಾರಕ. ಹೀಗಾಗಿ ನಮ್ಮ ಆರೋಗ್ಯವೂ ಬುದ್ಧಿಯೂ ಜೀವನಕ್ಕೆ ಪೋಷಕವಾಗಲು ಸೂರ್ಯನ ಆರಾಧನೆ ಸಹಕಾರಿ ಎನ್ನುವುದು ನಮ್ಮ ಪರಂಪರೆಯಲ್ಲಿರುವ ನಂಬಿಕೆ. ನಮ್ಮ ದೇಹ–ಮನಸ್ಸುಗಳ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಸಾಧನೆ ಬೇಕು ಎನ್ನುವುದನ್ನು ರಥಸಪ್ತಮಿಯ ಆಚರಣೆ ಎತ್ತಿತೋರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT