ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯಸಂದೇಶ | ಸರ್ವಧರ್ಮಗಳ ಪವಿತ್ರ ಭಾರತ

Last Updated 19 ಫೆಬ್ರುವರಿ 2021, 18:52 IST
ಅಕ್ಷರ ಗಾತ್ರ

ಭಾರತದ ನೆಲ ಸರ್ವಧರ್ಮಗಳ ಬೀಡು. ಈ ನೆಲ ಸರ್ವ ವಿಚಾರಗಳ ಸಮನ್ವಯ ಭೂಮಿ. ಇಲ್ಲಿ ಸಾವಿರಾರು ವರ್ಷಗಳಿಂದ ಹಲವು ಸಂಸ್ಕೃತಿಗಳು ಕೂಡಿಬಾಳಿ ಬೆಳೆದಿವೆ. ಹೀಗಾಗಿ ಇಲ್ಲಿ ವಿಶ್ವದಲ್ಲೆಲ್ಲೂ ಕಾಣಸಿಗದಷ್ಟು ಭಾಷಾ ವೈವಿಧ್ಯ, ಧರ್ಮ– ಸಂಸ್ಕೃತಿಗಳು ಮೇಳೈಸಿವೆ. ಹಲವು ಭಿನ್ನ ಧರ್ಮ-ಪಂಥಗಳು ಹಿಂದೂ ಧರ್ಮದಡಿ ಒಂದಾಗಿ, ಭಾರತೀಯ ಪರಂಪರೆಯಲ್ಲಿ ಭಾವೈಕ್ಯ ಸಾರಿವೆ. ಇಂಥ ಪವಿತ್ರ ಭೂಮಿಯಲ್ಲಿ ಭಾರತೀಯರು ಭೇದಭಾವದಿಂದ ವರ್ತಿಸಬಾರದು. ವಿಶ್ವಧರ್ಮಗಳ ಸಂಕ್ರಮಣ ಕಾಲದಲ್ಲಿ ಭಾರತೀಯರು ಮತ್ತಷ್ಟು ಪ್ರಬುದ್ಧತೆಯಿಂದ ವರ್ತಿಸಬೇಕು. ಧರ್ಮಗಳ ನಡುವಿನ ಸಂಘರ್ಷ ಕೊನೆಗೊಳ್ಳಬೇಕಾದರೆ ಧರ್ಮದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಬಾರದು. ಧರ್ಮದ ಕರ್ತೃತ್ವ ಶಕ್ತಿ ಮೇಲೆ ನಂಬಿಕೆ ಇಟ್ಟುಕೊಂಡೇ, ಧರ್ಮಗಳ ನಡುವೆ ಸೌಹಾರ್ದ ಬೆಸುಗೆ ಮೂಡಿಸಬೇಕು.

ಧರ್ಮಧರ್ಮಗಳ ನಡುವೆ ಸೌಹಾರ್ದ ಮೂಡಿಸುವ ಕಾರ್ಯ ಭಾರತೀಯರಿಗೆ ಹೊಸದೇನೂ ಅಲ್ಲ. ಭಾರತದ ನೆಲದಲ್ಲಿ ಸಾವಿರಾರು ವರ್ಷಗಳಿಂದ ಹಲವು ಧರ್ಮ-ಪಂಥಗಳ ಒಗ್ಗೂಡಿವೆ. ಒಳ್ಳೆಯ ಆಶಯದಿಂದ ಹುಟ್ಟಿದ ಧರ್ಮಗಳನ್ನು ಕೆಲ ಮತಾಂಧರ ಕುಕೃತ್ಯಕ್ಕಾಗಿ ದೂಷಿಸದೆ, ಧರ್ಮಗಳ ನಡುವೆ ಸೌಹಾರ್ದ ಸೇತುವೆ ಕಟ್ಟಿದ್ದರಿಂದಲೇ, ಹಲವು ಸಂಸ್ಕೃತಿ-ಧರ್ಮಗಳ ಸಾರದಿಂದ ಭಾರತ ವಿಶ್ವದಲ್ಲೆ ಹೆಚ್ಚು ಪ್ರಬುದ್ಧವಾಗಿ ಕಾಣಿಸುತ್ತದೆ. ಭಾರತೀಯರು ಹೃದಯಶ್ರೀಮಂತಿಕೆಯಿಂದ ಕಂಗೊಳಿಸುತ್ತಾರೆ.

ಮತಭೇದ ಮಾಡುವ ಮೂಲಕ ಜನರ ನಡುವೆ ಕಂದಕ ನಿರ್ಮಿಸುವ ದುರ್ಜನರು ಹಿಂದಿನ ಕಾಲದಲ್ಲೂ ಇದ್ದರು. ಅಂತಹ ಸಂದರ್ಭದಲ್ಲಿ ವಿವೇಕವಂತರು ಧರ್ಮದ ತಿರುಳನ್ನು ಮತಾಂಧರಿಗೆ ತಿಳಿಸಿ, ಸರ್ವರ ಮನದಲ್ಲೂ ಸದ್ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದ್ದರು. ಇಲ್ಲದಿದ್ದರೆ ಧರ್ಮ-ದ್ವೇಷಗಳ ಉರಿಯಲ್ಲಿ ಜನ ಬೆಂದು ಬಸವಳಿದು ಹೋಗುತ್ತಿದ್ದರು. ಕಾಲದಿಂದ ಕಾಲಕ್ಕೆ ಜಾಗೃತ ಸಜ್ಜನರು ಮಾನವ ಸೌಹಾರ್ದತೆಯ ಮಹತ್ವವನ್ನು ಎಲ್ಲೆಡೆ ಸಾರಿದ್ದರಿಂದ ಧರ್ಮದ್ವೇಷದ ಮಹಾಪಾಪ ಅಳಿದು, ತತ್ವ ವಿಚಾರಗಳ ದೀಪ್ತಿ ಎಲ್ಲರ ಮನದಲ್ಲಿ ಬೆಳಗಿತು. ಭಾರತೀಯರು ಎಲ್ಲ ಧರ್ಮಗಳ ಎಲ್ಲಾ ದೇವರನ್ನು ಪವಿತ್ರದೃಷ್ಟಿಯಲ್ಲಿ ನೋಡಿದ್ದರಿಂದ ಭಾರತದ ನೆಲದಲ್ಲಿ ಧರ್ಮ-ಸಂಸ್ಕೃತಿಗಳ ವೈಭವ ಮೆರೆಯಿತು.

ಧರ್ಮಗಳು ಹುಟ್ಟಿದಾಗ ಅವು ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸಿದ ದೊಡ್ಡ ಇತಿಹಾಸವೇ ಇದೆ. ಈಗ ಧರ್ಮ-ಧರ್ಮಗಳ ನಡುವೆ ಸೌಹಾರ್ದ ಸಂಬಂಧ ಬೆಸೆಯುವ ಕಾರ್ಯ ತಕ್ಷಣದಲ್ಲೇ ಆಗುತ್ತೆ ಎಂಬ ಆತುರ ಅಗತ್ಯವಿಲ್ಲ. ಇಂದು ಬೀಜ ಹಾಕಿದರೆ ನಾಳೆಗೇ ಫಲ ಸಿಗಬಹುದು ಎಂಬ ಅಪರಿಮಿತ ನಂಬಿಕೆಯನ್ನು ಇಟ್ಟುಕೊಳ್ಳಬೇಕಿಲ್ಲ. ಇಂದು ಮಾನವರ ಮನಸ್ಸಿನಲ್ಲಿ ಬಿತ್ತಿದ ಸೌಹಾರ್ದತೆ ಬೀಜ ಮೊಳೆತು ಹೆಮ್ಮರವಾಗಿ ಬಲಿತು, ಉತ್ತಮ ಫಲ ಸಿಗಬಹುದು ಎಂಬ ದೀರ್ಘಕಾಲೀನ ನಂಬಿಕೆಯನ್ನು ವಿವೇಕವಂತರು ಇಟ್ಟುಕೊಳ್ಳಬೇಕು. ಅಲ್ಲಿವರೆಗೆ ಸಂಯಮದಿಂದ ಮಾನವತೆ ತತ್ವಕ್ಕೆ ನೀರರೆದು ಪೋಷಿಸುವುದು ಸಜ್ಜನರ ಆದ್ಯ ಕರ್ತವ್ಯವಾಗಬೇಕು.

ಜಗತ್ತಿನ ಎಲ್ಲ ಧರ್ಮಗಳೂ ಮಾನವರಿಗೆ ಒಳ್ಳೆಯದನ್ನೇ ಬಯಸಿವೆ. ಧರ್ಮಗಳ ಆಶಯ, ವಿಶಾಲತೆ ಅರಿಯದ ಸಂಕುಚಿತ ಬುದ್ಧಿಯ ಜನ, ತಮ್ಮ ಜನಾಂಗಗಷ್ಟೆ ಅದನ್ನು ಸೀಮಿತಗೊಳಿಸಿದ್ದಾರೆ. ಇದರಿಂದ ಜನಸಾಮಾನ್ಯರಲ್ಲಿ ಧರ್ಮ ಮತ್ತು ದೇವರ ಬಗ್ಗೆ ಭೇದಭಾವ ಕಾಣಿಸಿಕೊಳ್ಳುತ್ತಿದೆ. ಮಾನವಕಲ್ಯಾಣಕ್ಕೆಂದು ಹುಟ್ಟಿದ ಧರ್ಮಗಳು ಅವನ ವಿಕಾಸಕ್ಕೆ ತಳಹದಿ ಆಗದೆ, ಅವನ ನಾಶಕ್ಕೆ ಕಂದಕವಾಗುತ್ತಿವೆ. ಇಂಥ ಸಂದರ್ಭದಲ್ಲಿ ಜನ ಸಂಕುಚಿತ ಮನೋಭಾವ ತೊಡೆದು, ಎಲ್ಲ ಧರ್ಮಗಳನ್ನು ಗೌರವಿಸುವ ಒಳ್ಳೆಯ ಮನಸ್ಸನ್ನು ಬೆಳೆಸಿಕೊಳ್ಳಬೇಕು. ಎಲ್ಲ ದೇವರನ್ನು ಆರಾಧಿಸುವ ಆರೋಗ್ಯಕರ ಮನಸ್ಸಿನ ಜನ ಜಗತ್ತಿನಲ್ಲಿ ಉದಯಿಸಿದಾಗ, ‘ಸಚ್ಚಿದಾನಂದ’ಮಯ ಬೆಳಗು ಎಲ್ಲೆಡೆ ಪ್ರಕಾಶಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT