ಬುಧವಾರ, ಮೇ 25, 2022
30 °C

ಸಚ್ಚಿದಾನಂದ ಸತ್ಯಸಂದೇಶ: ಬಲಿಪಶುವನ್ನು ರಕ್ಷಿಸಿದ ಗುಹ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ತ್ವಷ್ಟ ಎಂಬ ದೇವಶಿಲ್ಪಿಯಿಂದ ಸುಂದರವಾದ ನಗರ ನಿರ್ಮಿಸಿಕೊಂಡು ಶಿವನ ಅನುಗ್ರಹದಿಂದ ಬ್ರಹ್ಮಾಂಡವನ್ನು ಆಳುತ್ತಿದ್ದ ಗುಹ ಅರ್ಥಾತ್ ಸುಬ್ರಹ್ಮಣ್ಯ, ಸಜ್ಜನರ ರಕ್ಷಣೆಯ ಸಂಪೂರ್ಣ ಭಾರ ಹೊತ್ತಿದ್ದ. ಯಾರದೇ ಸಮಸ್ಯೆಯನ್ನು ಕ್ಷಣಾರ್ಧದಲ್ಲಿ ಬಗೆಹರಿಸುವ ಕರುಣಾಮಯಿ ಆಗಿದ್ದ. ಹೀಗಿರುವಾಗ ಒಮ್ಮೆ ನಾರದನೆಂಬ ಬ್ರಾಹ್ಮಣ ಗುಹನ ಬಳಿ ಬಂದು ‘ಮಹಾಪ್ರಭು, ನಾನು ಮಾಡುತ್ತಿದ್ದ ಅಜಮೇಧಯಜ್ಞದ ಬಲಿಪಶುವಾದ ಆಡು ಓಡಿ ಹೋಗಿದೆ. ಅಜಮೇಧಯಜ್ಞ ಪೂರ್ಣಗೊಳಿಸದಿದ್ದರೆ ಪಾಪಕ್ಕೆ ಸಿಲುಕುತ್ತೇನೆ. ಹೇಗಾದರೂ ಬಲಿಪಶುವನ್ನು ಹುಡುಕಿಕೊಡು’ ಅಂತ ಕೋರಿದ. ಸರ್ವ ಜೀವಸಂಕುಲಗಳ ರಕ್ಷಕನಾದ ಸುಬ್ರಹ್ಮಣ್ಯ ಮೌನವಾಗಿ ಆ ಬ್ರಾಹ್ಮಣನ ಮೊರೆ ಕೇಳಿದ.ಸುಬ್ರಹ್ಮಣ್ಯ ತನ್ನ ಕೋರಿಕೆ ಬಗ್ಗೆ ಅನ್ಯಮನಸ್ಕನಾಗಿದ್ದಾನೆಂದು ನಾರದನೆಂಬ ಹೆಸರಿನ ಬ್ರಾಹ್ಮಣ ಪರಿಪರಿಯಾಗಿ ಬೇಡುತ್ತಾ, ಸುಬ್ರಹ್ಮಣ್ಯನ ಗುಣಗಾನ ಮಾಡಿದ.

ಪ್ರಸನ್ನನಾದ ಶಿವಪುತ್ರ ಸ್ಕಂದ ತನ್ನ ಗಣವಾದ ವೀರಬಾಹುವನ್ನು ಕರೆದು, ‘ಈ ಬ್ರಾಹ್ಮಣನೊಂದಿಗೆ ಹೋಗಿ, ಯಜ್ಞಸ್ಥಳದಿಂದ ಓಡಿ ಹೋಗಿರುವ ಇವರ ಆಡನ್ನು ಹುಡುಕಿ ಇಲ್ಲಿಗೆ ಕರೆತರಬೇಕು’ ಎಂದು ಆದೇಶಿಸಿದ. ತನ್ನ ಒಡೆಯ ಸುಬ್ರಹ್ಮಣ್ಯನು ಮಾಡಿದ ಆಜ್ಞೆಯನ್ನು ಶಿರಸಾ ವಹಿಸಿ ಪಾಲಿಸುವುದಾಗಿ ಹೇಳಿದ ವೀರಬಾಹು ಎಂಬ ಶಿವಗಣ ಬ್ರಾಹ್ಮಣ ನಾರದನೊಂದಿಗೆ ಹೋದ. ಆದರೆ ಇಡೀ ಬ್ರಹ್ಮಾಂಡವನ್ನೆಲ್ಲಾ ಹುಡುಕಿದರೂ ಯಜ್ಞಪಶುವಾದ ಆಡು ಸಿಕ್ಕಲಿಲ್ಲ. ಕೊನೆಗೆ ವಿಷ್ಣುವಿನ ವೈಕುಂಠಲೋಕದಲ್ಲಿ ಆಡೊಂದು ಸೇರಿಕೊಂಡು ಉಪಟಳ ಕೊಡುತ್ತಿದೆ ಎಂಬ ಮಾಹಿತಿ ಸಿಕ್ಕಿತು. ತಕ್ಷಣವೇ ವೀರಬಾಹು ವೈಕುಂಠಕ್ಕೆ ಹೋದ. ಅಲ್ಲಿ ಉಪದ್ರವ ಕೊಡುತ್ತಿದ್ದ ಆಡು ತಾನು ಹುಡುಕುತ್ತಿದ್ದ ಯಜ್ಞದ ಬಲಿಪಶು ಎಂಬುದನ್ನು ಖಾತರಿಪಡಿಸಿಕೊಂಡ. ನಂತರ ಆಡನ್ನು ಬೆನ್ನತ್ತಿ ಹಿಡಿದ. ವೀರಬಾಹು ಹಿಡಿತದಿಂದ ಬಿಡಿಸಿಕೊಳ್ಳಲು ಆಡು ಶತಪ್ರಯತ್ನ ಪಟ್ಟಿತು. ಆಡಿನ ಕೊಂಬನ್ನು ಬಲವಾಗಿ ಹಿಡಿದುಕೊಂಡೇ ಅದನ್ನು ಸುಬ್ರಹ್ಮಣ್ಯನ ಮುಂದೆ ಎಳೆದು ತಂದ.

ವೀರಬಾಹುವಿನ ಬಿಗಿ ಹಿಡಿತದಿಂದ ಪಾರಾಗಲು ಕೊಸರಾಡುತ್ತಲೇ ಬಂದ ಆಡು ಸುಬ್ರಹ್ಮಣ್ಯನ ಬಳಿ ಬಂದ ನಂತರವೂ ತಪ್ಪಿಸಿಕೊಳ್ಳಲು ಹರ ಸಾಹಸ ಪಡುತ್ತಿತ್ತು. ಪ್ರಾಣಭಯದಿಂದ ಓಡಿ ಹೋಗಲು ರೋಷಾವೇಶ ಪ್ರದರ್ಶಿಸುತ್ತಿದ್ದ ಆಡಿನ ಮೇಲೆ ಸುಬ್ರಹ್ಮಣ್ಯ ಕುಳಿತ. ತಕ್ಷಣವೇ ಆಡು ಸ್ಕಂದನನ್ನು ಕೂರಿಸಿಕೊಂಡು ಓಡತೊಡಗಿತು. ಇಡೀ ಬ್ರಹ್ಮಾಂಡವನ್ನೆಲ್ಲಾ ಸುತ್ತಿಕೊಂಡು ಮತ್ತೆ ಸುಬ್ರಹ್ಮಣ್ಯನಿದ್ದ ಸ್ಥಳಕ್ಕೇ ಬಂದು ನಿಂತಿತು. ಆಡಿನ ಮೇಲೆ ಕುಳಿತಿದ್ದ ಗುಹ ಕೆಳಗಿಳಿದು ತನ್ನ ಸಿಂಹಾಸನದಲ್ಲಿ ಕುಳಿತ. ಆದರೆ ಆಡು ಹಿಂದಿನಂತೆ ರೋಷಾವೇಶ ಪ್ರದರ್ಶಿಸದೆ ವಿನೀತ ಭಾವದಿಂದ ಸುಬ್ರಹ್ಮಣ್ಯ ಸ್ವಾಮಿಯತ್ತ ನೋಡುತ್ತಾ ನಿಂತಿತು. ಆಗ ಅಲ್ಲಿಗೆ ಬಂದ ನಾರದ ಎಂಬ ಹೆಸರಿನ ಬ್ರಾಹ್ಮಣ, ತನ್ನ ಅಜಮೇಧ ಯಜ್ಞಕ್ಕೆ ಬಲಿಕೊಡಲು ಆಡನ್ನು ಕರೆದೊಯ್ಯುವುದಾಗಿ ಹೇಳಿದ. ಈ ಸಂದರ್ಭದಲ್ಲಿ ಆಡು ಭಯದಿಂದ ದೈನ್ಯತಾಭಾವದಲ್ಲಿ ಸ್ವಾಮಿ ಸುಬ್ರಹ್ಮಣ್ಯನನ್ನು ನೋಡಿತು. ಆಡಿನ ಸ್ಥಿತಿಗೆ ಮರುಕಪಟ್ಟ ಶಿವಕುಮಾರ ಭಯಪಡದಿರುವಂತೆ ಹೇಳಿದ.

ನಂತರ ನಾರದನೆಂಬ ಆ ಬ್ರಾಹ್ಮಣನಿಗೆ ‘ಇದು ಯಜ್ಞಕ್ಕೆ ಬಲಿಕೊಡುವ ಅಜವಲ್ಲ. ಇದರ ಪ್ರಭಾವ ನಿನಗೆ ತಿಳಿಯದು. ನೀನು ಮನೆಗೆ ಹೋಗು, ನಾನು ನೀಡುವ ಪ್ರಸಾದದಿಂದ ನಿನ್ನ ಯಜ್ಞ ಪೂರ್ಣಗೊಳ್ಳುವುದು. ನಿನಗೆ ಯಾವ ಪಾಪಭೀತಿಯೂ ಕಾಡುವುದಿಲ್ಲ’ ಅಂತ ಹೇಳಿ ಸಮಾಧಾನಿಸಿದ. ಸುಬ್ರಹ್ಮಣ್ಯಸ್ವಾಮಿಯ ಮಾತಿನಿಂದ ಸಂತೃಪ್ತನಾದ ಆ ಬ್ರಾಹ್ಮಣ ಮತ್ತಷ್ಟು ಸ್ವಾಮಿಯ ಗುಣಗಾನ ಮಾಡಿ ನಮಸ್ಕರಿಸಿ ಹೊರಟು ಹೋದ. ತನ್ನ ಪ್ರಾಣ ರಕ್ಷಿಸಿದ ಸ್ವಾಮಿಗೆ ಆಡು ಕೃತಜ್ಞತಾಭಾವದಿಂದ ವಂದಿಸಿತು. .

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು