ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯ ಸಂದೇಶ: ವೀರಭದ್ರ ತಾರಕ ಯುದ್ಧ

ಅಕ್ಷರ ಗಾತ್ರ

ತಾರಕಾಸುರನ ಮೇಲೆ ದೇವೇಂದ್ರನು ಶ್ರೇಷ್ಠವಾದ ತನ್ನ ಶಕ್ತ್ಯಾಯುಧ ದಿಂದ ಯುದ್ಧ ಮಾಡಿದರೂ, ತಾರಕಾಸುರನ ಹೊಡೆತಕ್ಕೆ ತನ್ನ ಆನೆಯಿಂದ ಕೆಳಗೆ ಬಿದ್ದು ಮೂರ್ಛಿತನಾದ. ಇತ್ತ ಲೋಕಪಾಲಕರೆಲ್ಲರೂ ಮಹಾಯುದ್ಧವಿಶಾರದರಾದ ದಾನವರೊಡನೆ ಯುದ್ಧಮಾಡಿ ಸೋತರು. ಇನ್ನೂ ಕೆಲ ದೇವತೆಗಳೂ ದೈತ್ಯರೊಡನೆ ಯುದ್ಧಮಾಡಲಾಗದೆ ರಣರಂಗದಿಂದ ಓಡಿದರು. ಇದರಿಂದ ಅಸುರರು ಜಯೋತ್ಸಾಹದಿಂದ ಸಿಂಹನಾದವನ್ನು ಮಾಡುತ್ತಾ ಕೋಲಾಹಲವನ್ನೆಬ್ಬಿಸಿದರು. ಇದನ್ನೆಲ್ಲಾ ನೋಡುತ್ತಿದ್ದ ವೀರಭದ್ರನು ಅತ್ಯಂತ ಕೋಪದಿಂದ ವೀರರಾದ ತನ್ನ ಸೈನಿಕರೊಂದಿಗೆ ಬಂದು ತಾರಕಾಸುರನನ್ನು ಎದುರಿಸಿದನು. ಶಿವನ ಕೋಪದಿಂದ ಹುಟ್ಟಿದ ಆ ವೀರಭದ್ರನು ದೇವತೆಗಳನ್ನು ಹಿಂದಿರಿಸಿಕೊಂಡು ತಾರಕನೊಡನೆ ಭಯಂಕರ ದ್ವಂದ್ವ ಯುದ್ಧ ಮಾಡಿದ. ಆಗ ಪ್ರಮಥಗಣಗಳು ಮತ್ತು ದೈತ್ಯರ ನಡುವೆ ಭೀಕರ ಯುದ್ಧವಾಯಿತು. ರಣವಿಶಾರದರಾದ ಉಭಯತರು ತ್ರಿಶೂಲ, ಋಷ್ಟ್ಯಾಯುಧ, ಪಾಶಾಯುಧ, ಖಡ್ಗಾಯುಧ, ಪರಶು, ಪಟ್ಟಿಶ ಮುಂತಾದ ಆಯುಧಗಳಿಂದ ಹೊಡೆದಾಡಿದರು.

ವೀರಭದ್ರನು ತ್ರಿಶೂಲಾಯುಧವನ್ನು ತಾರಕಾಸುರನ ಮೇಲೆ ಪ್ರಯೋಗಿಸಿದಾಗ ಆತ ನೆಲಕ್ಕೆ ಬಿದ್ದು ಮೂರ್ಛೆ ಹೋದ. ಸ್ವಲ್ಪಹೊತ್ತಾದ ನಂತರ ಚೇತರಿಸಿಕೊಂಡು ಮತ್ತೆ ವೀರಭದ್ರನೊಂದಿಗೆ ಕಾದಾಡುತ್ತಾ ಅತ್ಯಂತ ಶಕ್ತ್ಯಾಯುಧವನ್ನು ಪ್ರಯೋಗಿಸಿದ. ಮಹಾತೇಜಸ್ವಿಯಾದವೀರಭದ್ರಸಹ ಭಯಂಕರವೂ ಹರಿತವೂ ಆಗಿರುವ ತನ್ನ ತ್ರಿಶೂಲದಿಂದ ತಾರಕಾಸುರನಿಗೆ ಹೊಡೆದ. ಹೀಗೆವೀರಭದ್ರಮತ್ತು ತಾರಕಾಸುರ ಪರಸ್ಪರ ಮಾಡುತ್ತಿದ್ದ ದ್ವಂದ್ವ-ತುಮುಲಯುದ್ಧವು ನೋಡುವವರಿಗೆ ರೋಮಾಂಚನವನ್ನುಂಟುಮಾಡುತ್ತಿತ್ತು. ಇದರ ಮಧ್ಯೆ ಯುದ್ಧರಂಗದಲ್ಲಿ ಭೇರಿ, ಮೃದಂಗ, ಪಟಹ, (ತಮಟೆ) ಗೋಮುಖ ಮುಂತಾದ ವಾದ್ಯಗಳು ಭಯಂಕರವಾಗಿ ಮೊಳಗುತ್ತಿತ್ತು. ಬುಧ ಮತ್ತು ಅಂಗಾರಕರಂತೆ ಯುದ್ಧ ಮಾಡುತ್ತಿದ್ದವೀರಭದ್ರಮತ್ತು ತಾರಕಾಸುರನನ್ನು ನೋಡಿ, ನಾರದನು ಮಧ್ಯ ಪ್ರವೇಶಿಸಿ ವೀರಭದ್ರನನ್ನು ಸಮಾಧಾನಿಸಿದ. ತಾರಕನ ವಧೆಯು ಶಿವಪುತ್ರ ಕಾರ್ತಿಕೇಯನಿಂದ ಮಾತ್ರ ಸಾಧ್ಯ. ಆದುದರಿಂದ ನೀನು ಯುದ್ಧವನ್ನು ನಿಲ್ಲಿಸಿ ಹೊರಟುಹೋಗು ಎಂದು ಸಲಹೆ ನೀಡಿದ.

ನಾರದನ ಮಾತಿನಿಂದ ಕೆರಳಿದವೀರಭದ್ರ‘ನೋಡೀಗ ನನ್ನ ಪರಾಕ್ರಮ. ಈಗಲೇ ತಾರಕಾಸುರನನ್ನು ಕೊಲ್ಲುವೆ’ ಅಂತ ಶೂಲವನ್ನು ಹಿಡಿದು ಪ್ರಮಥ ಗಣಗಳೊಡನೆ ತಾರಕಾಸುರನ ಮೇಲೆ ಯುದ್ಧ ಮುಂದುವರೆಸಿದ. ವೀರಭದ್ರನ ಪರಾಕ್ರಮ ಮತ್ತು ಉತ್ತೇಜನದಿಂದ ದೇವತೆಗಳು ದಾನವರನ್ನು ಸೋಲಿಸಿ, ರಣರಂಗದಿಂದ ಹಿಮ್ಮೆಟ್ಟಿದರು.

ದಾನವಸೈನ್ಯ ಯುದ್ಧರಂಗದಿಂದ ಹಿಮ್ಮೆಟ್ಟುತ್ತಿರುವುದನ್ನು ನೋಡಿದ ತಾರಕಾಸುರನು ಉಗ್ರಕೋಪದಿಂದ ಸಿಂಹದ ಮೇಲೆ ಕುಳಿತು ಹತ್ತುಸಾವಿರ ಕೈಗಳಿಂದ ಅನೇಕ ದೇವತೆಗಳನ್ನು ಕೊಂದ. ತಾರಕನು ದೇವತೆಗಳನ್ನು ಕೊಲ್ಲುತ್ತಿರುವುದನ್ನು ನೋಡಿ ಗಣಾಧಿಪತಿಯಾದ ವೀರಭದ್ರನು ಅತ್ಯಂತ ಕೋಪದಿಂದ ತಾರಕಾಸುರನನ್ನು ಕೊಲ್ಲಬೇಕೆಂದು ಈಶ್ವರನನ್ನು ಧ್ಯಾನಿಸಿ, ತ್ರಿಶೂಲವನ್ನು ಕೈಯಲ್ಲಿ ಹಿಡಿದುಕೊಂಡ. ಆಗ ಅವನ ತೇಜಸ್ಸಿನಿಂದ ದಶದಿಕ್ಕು ಗಳೂ ನಡುಗಿದವು. ಇದನ್ನು ನೋಡಿದ ಕುಮಾರಸ್ವಾಮಿ ಉರಿಗೋಪದಿಂದ ಕುದಿಯುತ್ತಿದ್ದ ವೀರಭದ್ರನನ್ನೂ ಸಮಾಧಾನಿಸಿದ. ಅಲ್ಲಿಗೆ ಬಂದ ವೀರಬಾಹು ಮತ್ತಿತರ ಪ್ರಮಥಗಣಗಳ ಸೇನಾಪತಿಗಳು ಯುದ್ಧವನ್ನು ನಿಲ್ಲಿಸುವಂತೆ ವಿನಂತಿಸಿದರು. ವೀರಭದ್ರನು ಯುದ್ಧವನ್ನು ನಿಲ್ಲಿಸಿದ. ಇದರಿಂದ ಸೋಲಿನ ದವಡೆಯಿಂದ ಪಾರಾದ ಅಸುರರಾಜನಾದ ತಾರಕ ದೇವತೆಗಳ ಮೇಲೆ ಬಾಣಗಳ ಮಳೆಗರೆದ. ಅದರಿಂದ ಅನೇಕ ದೇವತೆಗಳು ಮೃತರಾದರು. ಇದನ್ನು ನೋಡಿ ವಿಷ್ಣು ಕೋಪಗೊಂಡು ಸುದರ್ಶನವೆಂಬ ಚಕ್ರವನ್ನೂ, ಶಾರ್ಙ್ಗ ಎಂಬ ಧನುಸ್ಸನ್ನೂ ಹಿಡಿದು ತಾರಕನೊಡನೆ ಯುದ್ಧಮಾಡಲು ಮುನ್ನು ಗ್ಗಿದ. ಆಗ ವಿಷ್ಣು-ತಾರಕರ ನಡುವೆ ಭಯಂಕರ ಯುದ್ಧವಾಯಿತು. ತಾರಕಾಸುರ ಶಕ್ತ್ಯಾಯುಧದಿಂದ ವಿಷ್ಣುವಿಗೆ ಹೊಡೆದು ಮೂರ್ಛೆ ಬೀಳುವಂತೆ ಮಾಡಿದ. ಸ್ವಲ್ಪ ಹೊತ್ತಿನಲ್ಲಿಯೇ ವಿಷ್ಣುವು ಚೇತರಿಸಿಕೊಂಡು ಚಕ್ರಾಯುಧವನ್ನು ಪ್ರಯೋಗಿಸಿದಾಗ ತಾರಕ ಗಾಯಗೊಂಡು ಕೆಳಗುರುಳಿದ. ಕೆಲ ನಿಮಿಷಗಳಲ್ಲೆ ಎದ್ದ ತಾರಕ ತನ್ನ ಶಕ್ತ್ಯಾಯುಧದಿಂದ ವಿಷ್ಣುಚಕ್ರವನ್ನು ಕತ್ತರಿಸಿದ. ನಂದಕವೆಂಬ ಆಯುಧದಿಂದ ತಾರಕನಿಗೆ ಹೊಡೆದ. ಇಬ್ಬರೂ ಬಲಿಷ್ಠರಾದುದರಿಂದ ಒಬ್ಬರೂ ಸೋಲಲಿಲ್ಲ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT