ಮಂಗಳವಾರ, ಡಿಸೆಂಬರ್ 1, 2020
18 °C

ಸಚ್ಚಿದಾನಂದ ಸತ್ಯಸಂದೇಶ| ಇದ್ದಾಗ ನಗು ಹೋದಾಗ ಅಳು

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಹುಟ್ಟಿದ ಪ್ರತಿಯೊಂದು ಜೀವಿಯೂ ತನ್ನೊಂದಿಗೆ ಮೃತ್ಯುವನ್ನೂ ತಂದಿರುತ್ತದೆ. ಇಂದು ನಾವು ಹುಟ್ಟಿದ್ದು ಎಷ್ಟು ನಿಜವೋ ನಾಳೆ ನಮ್ಮ ಆಯುಷ್ಯ ಕಳೆದು ಮೃತ್ಯುವಶವಾಗುವುದೂ ಅಷ್ಟೇ ನಿಜ. ಇಲ್ಲಿ ಯಾವುದು ಶಾಶ್ವತವಲ್ಲ. ದೇವರು ಬ್ರಹ್ಮಾಂಡಕ್ಕೆ ಇಂತಿಷ್ಟು ಆಯುಷ್ಯ ಎಂದು ಹೇಳಿರುವಾಗ ಹುಲುಮಾನವರು ಇದಕ್ಕೆ ಅತೀತರಲ್ಲ. ಶ್ರೀಕೃಷ್ಣನು ‘ಪರಿವರ್ತನೆ ಈ ಜಗದ ನಿಯಮ’ ಅನ್ನುತ್ತಾನೆ. ಶ್ರೀ ಶಂಕರಾಚಾರ್ಯರು ‘ಪುನರಪಿ ಜನನಂ ಪುನರಪಿ ಮರಣಂ’ ಅಂತ ಜೀವಚಕ್ರಗಳ ರಹಸ್ಯ ಹೇಳುತ್ತಾರೆ.

ಇಹದಲ್ಲೇ ಮಾನವರು ಪರಿಪೂರ್ಣತೆ ಸಾಧಿಸಬಹುದೆಂಬುದನ್ನು ಹೇಳಿಕೊಟ್ಟ ದೇವರು ಶ್ರೀಕೃಷ್ಣನಾದರೆ, ಸಾಮಾನ್ಯ ಮನುಷ್ಯನೂ ತನ್ನ ಸಾಧನೆಯಿಂದ ಪರಮಾತ್ಮನಾಗಬಹುದು ಅಂತ ಹೇಳಿಕೊಟ್ಟ ಸದ್ಗುರು ಶ್ರೀ ಶಂಕರಾಚಾರ್ಯರು. ಜೀವನದ ಕೌಶಲ ತಿಳಿಸಿಕೊಟ್ಟ, ಮನುಷ್ಯತನವನ್ನು ಸಾಕಾರಗೊಳಿಸಿಕೊಟ್ಟ ಭಗವಂತನೆಂದು ಶ್ರೀಕೃಷ್ಣನನ್ನು ಆರಾಧಿಸುತ್ತೇವೆ. ಧರ್ಮ-ಕರ್ಮ-ಆತ್ಮ ಸಾಕ್ಷಾತ್ಕಾರದ ಮೂಲಕ ಮನುಷ್ಯ ತನ್ನ ಒಂದು ಜೀವಿತಾವಧಿಯಲ್ಲೇ ಮೋಕ್ಷ ಸಾಧಿಸಬಹುದೆಂಬುದನ್ನು ತಿಳಿಸಿಕೊಟ್ಟ ಸದ್ಗುರು ಎಂದು ಶ್ರೀ ಶಂಕರಾಚಾರ್ಯರನ್ನು ಪ್ರಶಂಶಿಸುತ್ತೇವೆ. ಇಲ್ಲಿ ದೈವಧರ್ಮ ಮತ್ತು ಗುರುಧರ್ಮಗಳ ತತ್ವವಿಚಾರಗಳಲ್ಲಿ ಭಿನ್ನತೆಯಿಲ್ಲ. 

ದೇವರು ಮಾನವರಾಗಿ ಹುಟ್ಟಿ ಮನುಕುಲವನ್ನು ಉದ್ಧರಿಸಿದ ದೃಷ್ಟಾಂತ ಭಾರತೀಯ ಸಂಸ್ಕೃತಿಯಲ್ಲಿದೆ. ದೇವರು ಮನುಷ್ಯರಂತೆ ಜನಿಸಿ, ಮಾರ್ಗದರ್ಶಿಸುವ ಪರಿಕಲ್ಪನೆಯೇ ಸುಂದರವಾಗಿದೆ. ದೇವರಾಗಿ ಉಪದೇಶ ಮಾಡುವುದು ಸುಲಭ; ಆದರೆ ಮನುಷ್ಯರಾಗಿ ನಡೆಯುವುದು ಕಷ್ಟ ಅನ್ನುವವರ ಕೊಂಕಿಗೆ ಉತ್ತರವಾಗಿ ದೇವರೇ ಮನುಷ್ಯನಾಗಿ ಅವತಾರ ಎತ್ತಿದ್ದಾನೆ. ಜನಸಾಮಾನ್ಯರಂತೆ ಕಷ್ಟಗಳನ್ನ ಅನುಭವಿಸಿ, ಅದಕ್ಕೆ ಪರಿಹಾರವನ್ನೂ ತಿಳಿಸಿದ್ದಾನೆ. ಸತ್ಕರ್ಮಗಳಿಂದ ಪಾವನರಾಗುವ, ಶಿಷ್ಟರನ್ನು ರಕ್ಷಿಸಿ-ದುಷ್ಟರನ್ನು ಶಿಕ್ಷಿಸುವ ಕಲೆಯನ್ನೂ ಮಾನವರಿಗೆ ಕಲಿಸಿದ್ದಾನೆ.

ಜೀವಿಗಳು ಹುಟ್ಟೋದ್ಯಾಕೆ? ಸಾಯೋದ್ಯಾಕೆ? ಜೀವಸರಪಣಿಯಿಂದ ಮುಕ್ತಿ ಹೇಗೆ? ಅಂತ ಚಿಂತಿಸಿದ ಬುದ್ಧ-ಶಂಕರರಂಥ ಯತಿಗಳು, ತಾವು ಕಂಡ ಜೀವ-ಜೀವನಸಾರವನ್ನು ಜನರಿಗೆ ಹಂಚಿದ್ದಾರೆ. ಹುಟ್ಟಿದಾಗ ಸಂತಸವಾದಂತೆ, ಸತ್ತಾಗ ಸಂಭ್ರಮ ಕಾಣದಿರಲು ಸಾವಿನಾಚೆಗಿನ ಅರಿವಿನ ಕೊರತೆ ಕಾರಣವಾಗಿದೆ. ಹುಟ್ಟು ಪ್ರತ್ಯಕ್ಷವಾಗಿರುತ್ತೆ, ಸಾವು ಪರೋಕ್ಷವಾಗಿರುತ್ತೆ. ಮನುಷ್ಯ ಯಾವತ್ತೂ ಇರುವುದರತ್ತ ಯೋಚಿಸುವುದಕ್ಕಿಂತ, ಇರದಿರುವುದೆಡೆ ಚಿಂತಿಸುವುದೇ ಹೆಚ್ಚು. ಹೀಗಾಗಿ ಹುಟ್ಟು ಸಂತೋಷಕ್ಕೆ ಕಾರಣವಾದರೆ, ಸಾವು ಸಂತಾಪಕ್ಕೆ ಕಾರಣವಾಗುತ್ತೆ. ಸಾವಿನಾಚೆ ನಮಗೇನಿದೆ ಎಂಬುದು ಗೊತ್ತಿಲ್ಲದ ಕಾರಣಕ್ಕೆ ಅದು ಆತಂಕವಾಗಿ ಕಾಡುತ್ತೆ.

ಹುಟ್ಟು-ಸಾವು ದೇವರ ಕೈಯಲ್ಲಿದೆ ಅಂತ ಜನ, ಹುಟ್ಟನ್ನು ದೇವರ ಹೊಗಳಿಕೆಗೆ, ಸಾವನ್ನು ತೆಗಳಿಕೆಗೆ ಮೀಸಲಿಡುತ್ತಾರೆ. ಆದರೆ ಒಂದು ಸತ್ಯ ಮರೆತಿರುತ್ತಾರೆ. ಕೊಟ್ಟವನು ಅವನೇ, ಪಡೆಯುವವನು ಅವನೇ; ಕೊಟ್ಟವನಿಗೆ ಪಡೆಯುವ ಹಕ್ಕೂ ಇದೆ ಅನ್ನೋದು. ದೇವರು ನಮಗೆ ಕೊಟ್ಟಿದ್ದೇಕೆ? ಕಿತ್ತುಕೊಂಡಿದ್ದೇಕೆ? ಅಂತ ಗೊತ್ತಿಲ್ಲದೆ ದೇವರು ತಮಗೆ ಮೋಸ ಮಾಡಿದ ಅಂತ ಹಲವರು ಕೊರಗುತ್ತಾರೆ. ‘ಸಾಲವನ್ನು ಕೊಂಬಾಗ ಹಾಲೊಗರುಂಡಂತೆ, ಸಾಲಿಗನು ಬಂದು ಕೇಳುವಾಗ ಇಬ್ಬದಿಯ ಕೀಲು ಮುರಿದಂತೆ’ ದೇವರು ತಾನು ಕೊಟ್ಟ ಪ್ರಾಣದ ಸಾಲ ಪಡೆವಾಗ ದುಃಖವಾಗುತ್ತೆ.

ದೇವರು ಯಾವುದನ್ನು ಉಚಿತವಾಗಿ ಕೊಟ್ಟಿರುವುದಿಲ್ಲ, ಸಾಲದ ರೂಪದಲ್ಲಿ ಕೊಟ್ಟಿರುತ್ತಾನೆ. ನಾವು ಅದು ಶಾಶ್ವತವಾದ ಉಡುಗೊರೆ ಅಂತ ಭ್ರಮಿಸಿ ಸಂಭ್ರಮಿದರೆ, ಅದನ್ನು ಕಳೆದುಕೊಂಡಾಗ ಸಂಕಟವಾಗುತ್ತೆ. ಅದಕ್ಕಾಗಿ ದೇವರು ಕೊಟ್ಟ ಈ ಜೀವ ಮತ್ತು ಜೀವನ ನಮಗೆ ಶಾಶ್ವತವಲ್ಲ. ಅದನ್ನು ಕೊಟ್ಟವನಿಗೇ ಪ್ರಾಮಾಣಿಕವಾಗಿ ಹಿಂದಿರುಗಿಸಬೇಕು ಅಂದುಕೊಂಡಾಗ ನೆಮ್ಮದಿಯ ನಿರಾಳಭಾವ ಮೂಡುತ್ತೆ. ಅದೇ ಜಗದ್ರಕ್ಷಕನ ‘ಸಚ್ಚಿದಾನಂದ’ಭಾವ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು