ಸೋಮವಾರ, ಮೇ 17, 2021
27 °C

ಸಂಸ್ಕೃತಿ ಸಂಭ್ರಮ | ಭುವನದ ಬೆಳಕು ಬಸವಣ್ಣ

ಮಂಜುನಾಥ ಕೊಳ್ಳೇಗಾಲ Updated:

ಅಕ್ಷರ ಗಾತ್ರ : | |

Prajavani

ಹನ್ನೆರಡನೆಯ ಶತಮಾನ ನಾಡಿನ ಆಧ್ಯಾತ್ಮಿಕ-ಸಾಮಾಜಿಕ ಬದುಕಿನಲ್ಲೊಂದು ಸಂಕ್ರಮಣಕಾಲ. ಜಡ್ಡುಗಟ್ಟಿದ್ದ ನಂಬಿಕೆಗಳು, ಆಚರಣೆಗಳು ತಲೆಕೆಳಕಾದ ಕಾಲ, ಶಿವಶರಣರೆಂಬ ಅನುಭಾವಿಗಳು ಶಿವಭಕ್ತಿಯನ್ನೂ, ಕಾಯಕದ ಮಹತ್ವವನ್ನೂ, ವ್ಯಕ್ತಿಗೌರವವನ್ನೂ ಎತ್ತಿಹಿಡಿದು ಸಾರಿದ ಕಾಲ; ಸಾಮಾಜಿಕಕ್ರಾಂತಿಯ ಕಾಲ - ಈ ಚಳುವಳಿಯ ಮುಂದಾಳು, ಬಸವಣ್ಣ. ಈ ಹಿರಿಬದುಕನ್ನು ಕಿರುಬರಹವೊಂದರಲ್ಲಿ ಹಿಡಿದಿಡುವುದು ’ಕರಿಯು ಕನ್ನಡಿಯೊಳಡಗಿದಂತೆ‘ಯೇ ಸರಿ.

ಬಸವಣ್ಣನವರ ಭಕ್ತಿಯ ಅನುಸಂಧಾನವನ್ನು ನಿರೂಪಿಸುವ ಸೊಗಸಾದ ಕತೆಯೊಂದು ಹರಿಹರನ ’ಬಸವರಾಜದೇವರ ರಗಳೆ‘ಯಲ್ಲಿ ಬರುತ್ತದೆ. ಬಿಜ್ಜಳನ ಸಭೆಯಲ್ಲೊಮ್ಮೆ ಮಾಲೆಗಾರನೊಬ್ಬ ಕೇದಗೆಹೂವೊಂದನ್ನು ತಂದು ದೊರೆಗರ್ಪಿಸುತ್ತಾನೆ. ಪರಿಮಳಿಸುತ್ತಿದ್ದ ಹೂವನ್ನು ಬಿಚ್ಚಿ ಅರಸನು ನುಣ್ಣೆಸಳೊಂದನ್ನು ಬಳಿಯಲ್ಲಿದ್ದ ಬಸವಣ್ಣನಿಗೆ ಕೊಡುತ್ತಾನೆ. ಎಲ್ಲವನ್ನೂ ಶಿವನಿಗರ್ಪಿಸುವ ರೂಢಿಯಿದ್ದ ಬಸವಣ್ಣ ಅದನ್ನು ಭಕ್ತಿಯಿಂದ ತನ್ನ ಕೊರಳಲ್ಲಿದ್ದ ಇಷ್ಟಲಿಂಗಕ್ಕರ್ಪಿಸುತ್ತಾನೆ. ಇದನ್ನು ಕಂಡು ಬಿಜ್ಜಳಗುರು ನಾರಾಯಣಪಂಡಿತನು, ಶಿವಾಗಮಗಳಲ್ಲಿ ಶಿವನಿಗೆ ಕೇದಗೆಹೂವು ನಿಷಿದ್ಧವೆಂದು ಆಕ್ಷೇಪಿಸಿದಾಗ ಬಸವಣ್ಣ ನಸುನಕ್ಕು ಹೇಳುತ್ತಾನೆ ’ಕರ್ಮದ ಕಡುಜಡನೆ, ಕೇಳು. ದೇವಂ ಭಕ್ತರ್ ಕೊಟ್ಟೊಡೆ ಕೈಕೊಳ್ವಂ‘. ಇದರ ಗುರುತಿಗಾಗಿ ಬಸವಣ್ಣ ಅಕ್ಕಪಕ್ಕದ ಸಹಸ್ರಮಾಹೇಶ್ವರರ ಇಷ್ಟಲಿಂಗಗಳನ್ನು ತೆಗೆಸಿ ತೋರಿದಾಗ, ಎಲ್ಲ ಲಿಂಗಗಳ ತಲೆಯಮೇಲೂ ಅಂಥದ್ದೇ ಎಸಳುಗಳಿರುತ್ತವೆ.

ಬೆರಗಾದ ಬಿಜ್ಜಳನು ತಪ್ಪೊಪ್ಪಿ ಅಂದಿನಿಂದ ಬಸವಣ್ಣನನ್ನು ಸಂಗಮೇಶ್ವರನೆಂದೇ ಭಾವಿಸುತ್ತಾನೆ. ಕೌತುಕವೆಂದರೆ ಬಸವಣ್ಣನ ಅವತಾರಕ್ಕೆ ನಿಮಿತ್ತವಾದದ್ದು ಇದೇ ಕೇದಗೆಯ ಎಸಳೇ ಎನ್ನುತ್ತದೆ ಪುರಾಣ! ಶಿವಪ್ರಸಾದರೂಪವಾದ ಕೇದಗೆಯನ್ನು ಹಂಚುವಾಗ ಕುಮಾರಸ್ವಾಮಿಗೆ ಕೊಡುವುದ ಮರೆತ ನಂದಿ, ಕೊಟ್ಟೆನೆಂದು ಸುಳ್ಳಾಡಿದ್ದಕ್ಕೆ ‘ಎಮಗೆ ಕುಡದಿರ್ದಡಂ ಸೈರಿಸುವೆವಾವಯ್ಯ, ವಿಮಳಶಿಶುವಿಂಗೆ ಹುಸಿನುಡಿಯೆ ಸೈರಿಸೆವಯ್ಯ‘ ಎಂದು ನೊಂದ ಶಿವನು, ಅದಕ್ಕಾಗಿ ಭೂಲೋಕದಲ್ಲಿ ಹುಟ್ಟಿ ಇಲ್ಲಿ ಗಣಗಳಿಗೆ ತಪ್ಪಿಸಿದ ಪ್ರಸಾದವನ್ನು ಅಲ್ಲಿ ಶರಣರಿಗೆ ಹಂಚುತ್ತಾ, ನನ್ನ ಭಕ್ತಿಯನ್ನು ಇಳೆಯಲ್ಲಿ ಪಸರಿಸುತ್ತಾ ’ಎನ್ನ ಪ್ರಸಾದಸಾಮರ್ಥ್ಯಮಂ ತೋಱುತಂ ಮನ್ನಣೆಯೊಳಿಲ್ಲಿಗೈತಪ್ಪುದು‘ ಎಂದು ವಿಧಿಸುತ್ತಾನೆ: ’ಅಂಜಬೇಡೆಲೆ ಮಗನೆ, ನಿನಗೆ ಹಿತನಾಗಿ ಸಖನಾಗಿ ಬಪ್ಪೆಂ‘ ಎಂದು ಸಂತೈಸಿ ಬೀಳ್ಕೊಡುತ್ತಾನೆ. ಬಸವಣ್ಣನವರ ಜಂಗಮಭಕ್ತಿ ಮತ್ತು ದಾಸೋಹಗಳ ಕಂಡರಿಕೆಯಾಗಿದೆ ಈ ಕತೆ.

ಬಸವಣ್ಣನವರು ಬಾಲ್ಯದಿಂದಲೇ ತನ್ನ ಸುತ್ತ ಹರಡಿದ್ದ ಕಂದಾಚಾರ, ಮೇಲುಕೀಳುಗಳನ್ನೂ ಆಚಾರ-ಸಂಪ್ರದಾಯಗಳ ಹೆಸರಲ್ಲಿ ಬೆಳೆದುನಿಂತಿದ್ದ ಅಮಾನವೀಯತೆಯನ್ನೂ ಹತ್ತಿರದಿಂದ, ಕಂಡು ನೊಂದು ಬೆಳೆದವರು. ಭಕ್ತಿಪರಿಶುದ್ಧವಾದ ಮಾನವೀಯತೆಗಾಗಿ, ಕಾಯಕವನ್ನು ಗೌರವಿಸುವ ಸಮಸಮಾಜಕ್ಕಾಗಿ ಹಪಹಪಿಸಿದರು. ಕಾಯಕವನ್ನು ಕೇವಲ ಹೊಟ್ಟೆಯ ಪಾಡಾಗಿ ನೋಡದೇ, ಅದನ್ನು ಮುಕ್ತಿಸಾಧನವೆಂದು ಸಾಧಿಸಿದವರು. ಕೃಷಿಕೃತ್ಯ ಕಾಯಕದಿಂದ ’ತನುಮನ ಬಳಲಿಸಿ ದಾಸೋಹವ ಮಾಡುವ ಪರಮಸದ್ಭಕ್ತನ... ತನು ಶುದ್ಧ, ಮನ ಶುದ್ಧ, ಆತನ ನಡೆ ಶುದ್ಧ, ನುಡಿಯೆಲ್ಲ ಪಾವನವು‘ ಎನ್ನುತ್ತಾರೆ ಬಸವಣ್ಣ.

ಕೇವಲ ‘ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ‘ ಎಂಬ ಬಾಯಿಮಾತಾಗಲಿಲ್ಲ ಅವರ ಸಮತೆಯ ಪರಿಕಲ್ಪನೆ - ಅಂತೆಯೆ ನಡೆದರು, ಜಾತಿಭೇದಗಳಿಲ್ಲದ ಸಮಸಮಾಜವನ್ನು ಕಟ್ಟಿ ನಡೆಸಿದರು. ನಾನೀನೆಂಬ ಹಮ್ಮುಬಿಮ್ಮುಗಳಿಂದ ಹೈರಾಣಾಗಿರುವ ಇವತ್ತಿನ ಜಗತ್ತಿಗೆ, ಹನ್ನೆರಡನೆಯ ಶತಮಾನದ ಈ ಬೆಳಕನ್ನು ಮತ್ತೆ ಉಜ್ಜಳಿಸಿಕೊಳ್ಳುವ ಅಗತ್ಯವಿದೆ. ’ಎನಗಿಂತ ಕಿರಿಯರಿಲ್ಲ‘ ಎಂಬ ಬಸವಣ್ಣನವರ ಶೀಲವಿಂದು ನಮಗೆ ದಕ್ಕಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.