ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರಾಚಾರ್ಯ ಜಯಂತಿ ವಿಶೇಷ: ಶಂಕರರ ಲೋಕಕಾರುಣ್ಯ

Published 24 ಏಪ್ರಿಲ್ 2023, 20:15 IST
Last Updated 24 ಏಪ್ರಿಲ್ 2023, 20:15 IST
ಅಕ್ಷರ ಗಾತ್ರ

‘ಮೂರು ಲೋಕಗಳ ಒಡೆತನಕ್ಕಿಂತಲೂ ವಿದ್ಯೆಯೇ ಹೆಚ್ಚಿನದು’ (‘ತ್ರೈಲೋಕ್ಯ ರಾಜ್ಯಾಚ್ಚ ಗುರುತರಾ ವಿದ್ಯೇತಿ’) – ಎಂದು ಘೋಷಿಸಿದವರು, ಶಂಕರಾಚಾರ್ಯರು.

ಇಂದು ನಾವು ಕೂಡ ವಿದ್ಯೆಯ ಸಂಪಾದನೆಗೆ ಹೆಚ್ಚಿನ ಒತ್ತನ್ನೇನೋ ಕೊಡುತ್ತಿದ್ದೇವೆ, ದಿಟ. ಆದರೆ ನಾವು ಈಗ ಯಾವುದನ್ನು ‘ವಿದ್ಯೆ’ ಎಂದು ಪರಿಗಣಿಸುತ್ತಿದ್ದೇವೆ ಎಂಬುದು ವಿಚಾರಾರ್ಹ. ಆಚಾರ್ಯ ಶಂಕರರ ದೃಷ್ಟಿಯಲ್ಲಿ ವಿದ್ಯೆ ಎಂದರೆ ಆತ್ಮಜ್ಞಾನ. ನಮ್ಮತನದ ಅರಿವೇ ಆತ್ಮಜ್ಞಾನ. ಎಲ್ಲ ತಿಳಿವಳಿಕೆಗಳಿಗಿಂತಲೂ ಮಹತ್ತರವಾದದ್ದು ತನ್ನತನದ ಅರಿವು. ಇಂಥ ಅರಿವಿನ ನೆಲೆಯನ್ನೂ ಬೆಲೆಯನ್ನೂ ಲೋಕಕ್ಕೆ ಕಾಣಿಸಿದವರು ಶಂಕರರು. 

ಭಾರತೀಯ ಪ್ರಜ್ಞಾಪರಂಪರೆಯಲ್ಲಿ ಶಿಖರಪ್ರಾಯವಾಗಿ ಕಾಣಿಸಿಕೊಂಡವರು ಆಚಾರ್ಯ ಶಂಕರರು. ಭಾರತೀಯ ಚಿಂತನೆಯ ಮೂಲವೆನಿಸಿರುವ ವೇದಗಳ ಸಾರ ಏನು ಎಂಬುದನ್ನು ಅವರು ಪ್ರತಿಪಾದಿಸಿದರು. ವೇದಗಳ ಸಾರ ಉಪನಿಷತ್ತುಗಳು; ಆ ಉಪನಿಷತ್ತುಗಳ ಸಾರ ಆತ್ಮಜ್ಞಾನ; ಆತ್ಮಜ್ಞಾನವೇ ವೇದಾಂತದ ತಿರುಳು ಎಂಬುದನ್ನು ಅವರು ಎತ್ತಿಹಿಡಿದರು. 

ಲೋಕದಲ್ಲಿ ವಿದ್ಯೆ ಮತ್ತು ಅವಿದ್ಯೆಗಳ ನಡುವೆ ನಿರಂತರವಾಗಿ ಘರ್ಷಣೆ ನಡೆಯುತ್ತಲೇ ಇರುತ್ತದೆ. ವಿದ್ಯೆಯನ್ನು ನಾವು ಅವಿದ್ಯೆಯನ್ನಾಗಿಯೂ, ಅವಿದ್ಯೆಯನ್ನೇ ವಿದ್ಯೆಯನ್ನಾಗಿಯೂ ಭಾವಿಸಿಕೊಂಡು, ಇಲ್ಲದ ಸಂಕಷ್ಟಗಳ ಸೃಷ್ಟಿಕೊಂಡು ನರಳುತ್ತಿರುತ್ತವೆ. ಇಂಥ ಕಷ್ಟಪರಂಪರೆಗಳಿಂದ ನಮ್ಮನ್ನು ಬಿಡುಗಡೆಗೊಳಿಸಬಲ್ಲದ್ದೇ ದಿಟವಾದ ಜ್ಞಾನ; ವಿದ್ಯೆ. ಈ ಜ್ಞಾನವೇ ಆತ್ಮಜ್ಞಾನ, ಬ್ರಹ್ಮಜ್ಞಾನ ಎಂಬುದು ಆಚಾರ್ಯರ ಕಾಣ್ಕೆಯ ಸಾರ. ಒಮ್ಮೆ ಆತ್ಮಜ್ಞಾನ ಒದಗಿತೆಂದರೆ, ಲೋಕದ ಉಳಿದ ವಿವರಗಳೆಲ್ಲವೂ ಅನರ್ಥಕಾರಿಯೆಂದು ಗೊತ್ತಾಗುತ್ತದೆ. ನಾವು ಯಾವುದನ್ನು ‘ದಿಟ’ ಎಂದು ಭಾವಿಸಿಕೊಂಡಿದ್ದೆವೋ ಅವೆಲ್ಲವೂ ವಾಸ್ತವದಲ್ಲಿ ‘ಸಟೆ’ಯಾದಂಥವು ಎಂಬ ವಿವೇಕ ನಮ್ಮಲ್ಲಿ ಉಂಟಾಗುತ್ತದೆ. ಅನಿತ್ಯವೂ ದುಃಖಕಾರಿಯೂ ಅಶುದ್ಧವೂ ಆದ ಈ ವಿವರಗಳಿಂದ ನಮಗೆ ಬಿಡುಗಡೆ ದೊರೆಯುವುದು ಆತ್ಮಜ್ಞಾನದಿಂದಲೇ ಹೌದು. ಜೊತೆಗೆ ಅದರಿಂದ ನಮಗೆ ನಮ್ಮತನದ ಅರಿವೂ ಒದಗುತ್ತದೆ. ಇದೇ ಆನಂದ ಎನ್ನುತ್ತಾರೆ, ಅವರು.

ಆಚಾರ್ಯರ ಕಾಣ್ಕೆಯನ್ನು ‘ಅದ್ವೈತ’ದರ್ಶನ ಎಂದು ಕರೆಯಲಾಗುತ್ತದೆಯಷ್ಟೆ. ‘ಅ–ದ್ವೈತ’ ಎಂದರೆ ‘ಎರಡು ಇಲ್ಲದ್ದು’ – ‘ಒಂದಾಗಿರುವುದು’ – ಎಂದು ಸರಳವಾಗಿ ಹೇಳಬಹುದು. ಏನಿದರ ಸ್ವಾರಸ್ಯ? ಇದನ್ನು ಹಲವು ನೆಲೆಗಳಲ್ಲಿ ಅರ್ಥೈಸಲಾದೀತು. ಇಡಿಯ ಜಗತ್ತು ಚೈತನ್ಯಸ್ವರೂಪವಾಗಿದೆ. ಈ ವೈಶ್ವಿಕ ಸ್ತರದ ಚೈತನ್ಯವೂ ನಮ್ಮ ವೈಯಕ್ತಿಕ ಸ್ತರದ ಚೈತನ್ಯವೂ ಎರಡಲ್ಲ, ಒಂದೇ. ಇದನ್ನು ಇನ್ನೂ ಸರಳವಾಗಿ ಹೇಳಬಹುದಾದರೆ ‘ಜಗತ್ತು ಬೇರೆ ಅಲ್ಲ, ನಾನು ಬೇರೆ ಅಲ್ಲ’ ಎಂಬ ಅರಿವೇ ಅದ್ವೈತ. 

ಜಗತ್ತು ಇಂದು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳ ಮೂಲ ಎಲ್ಲಿದೆ ಎಂದು ಹುಡುಕಿದರೆ, ಮನುಷ್ಯರ ಭೇದಬುದ್ಧಿಯಲ್ಲಿಯೇ ಇದೆ ಎನ್ನುವುದು ಸ್ಪಷ್ಟವಾಗುತ್ತದೆ. ಜಾತಿ, ಭಾಷೆ, ಲಿಂಗ, ದೇಶ, ಅಧಿಕಾರ, ಅಂತಸ್ತು – ಹೀಗೆ ಹತ್ತುಹಲವು ವಿಧಗಳಲ್ಲಿ ಮನುಷ್ಯ ಮನುಷ್ಯರ ನಡುವೆ ಒಡಕು ಉಂಟಾಗುತ್ತಿರುತ್ತದೆ. ಈ ಒಡಕುತನವೇ ನಮ್ಮಲ್ಲಿ ದ್ವೇಷ, ಆಸೂಯೆ, ಮತ್ಸರದಂಥ ಹತ್ತಾರು ರೀತಿಯ ನೀಚತನಕ್ಕೆ ಕಾರಣವಾಗಿರುತ್ತದೆ. ಮನುಷ್ಯಕುಲವನ್ನು ಇಂಥ ಅಧಃಪತನದಿಂದ ಪಾರುಮಾಡಬಲ್ಲದ್ದು ಆಚಾರ್ಯ ಶಂಕರರ ದರ್ಶನ. ಜಗತ್ತಿನ ಎಲ್ಲರ, ಎಲ್ಲದರ ಮೂಲ ಒಂದೇ ಚೈತನ್ಯ – ಎಂಬ ದಿಟವಾದ ಅರಿವು ನಮ್ಮಲ್ಲಿ ಮೂಡಿದಾಗ ಈ ಭೇದಬುದ್ಧಿ ಇಲ್ಲವಾಗುತ್ತದೆ. (ಈ ಚೈತನ್ಯವನ್ನೇ ಆತ್ಮ, ಬ್ರಹ್ಮ ಎಂದೆಲ್ಲ ಒಕ್ಕಣಿಸಿರುವುದು) ಆಗ ಸಹಜ ‘ಸಮಾನತೆ’ ತಾನೇ ತಾನಾಗಿ ಸಿದ್ಧವಾಗುತ್ತದೆ. ಈ ‘ಸಮಾನತೆ’ಯ ನೆಲೆಯೇ ದಿಟವಾದ ಆನಂದವಲ್ಲವೆ?

ಆಚಾರ್ಯ ಶಂಕರರು ವಿದ್ಯೆ ಎಂದು ಆದರಿಸಿದ್ದು ಒಡಕುಗಳಿಲ್ಲದ ಅಖಂಡವಾದ ಅರಿವನ್ನು. ಅದನ್ನೇ ಅವರು ಮೋಕ್ಷ, ಬ್ರಹ್ಮಜ್ಞಾನ ಎಂದೆಲ್ಲ ಒಕ್ಕಣಿಸಿದ್ದು. ಜಗತ್ತಿಗೆ ಈಗ ಎಂಥ ವಿದ್ಯೆ ಬೇಕು ಎಂಬುದರ ಮನನವನ್ನು ನಾವಿಂದು ಮಾಡಬೇಕಿದೆಯೆನ್ನಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT