ಸೋಮವಾರ, ಏಪ್ರಿಲ್ 6, 2020
19 °C
ಶಿವಾಲಯಗಳಲ್ಲಿ ವಿಶೇಷ ಅಭಿಷೇಕ, ಪೂಜಾ ಕೈಂಕರ್ಯ

ಶಿವರಾತ್ರಿ ಸಡಗರ; ಶಿವ ನಾಮಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ನಗರದಲ್ಲಿ ಶುಕ್ರವಾರ ಶ್ರದ್ಧೆ, ಭಕ್ತಿಯಿಂದ ಶಿವರಾತ್ರಿ ಆಚರಿಸಲಾಯಿತು. ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

ಬೋಳರಾಮೇಶ್ವರ, ಓಂಕಾರೇಶ್ವರ, ಕಾಮಧೇನು ಗಣಪತಿ, ಹಿರೇಮಗಳೂರಿನ ಮಲ್ಲಿಕಾರ್ಜುನಸ್ವಾಮಿ, ಪಾತಾಳೇಶ್ವರಸ್ವಾಮಿ ದೇಗುಲ ಸಹಿತ ವಿವಿಧ ದೇಗುಲಗಳಲ್ಲಿ ವಿಶೇಷ ಅಭಿಷೇಕ, ಬಿಲ್ವಾರ್ಚನೆ, ಅಲಂಕಾರ, ಶಿವಾರಾಧನೆ, ಭಜನೆ, ಶಿವನಾಮ ಸ್ಮರಣೆ ಜರುಗಿತು.

ಬೆಳಿಗ್ಗೆಯಿಂದಲೇ ಶಿವಾಲಯಗಳಲ್ಲಿ ಭಕ್ತರ ದಟ್ಟಣೆ ಇತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರಮೂರ್ತಿಗಳ ದರ್ಶನ ಪಡೆದರು. ಹೂ, ಹಣ್ಣುಕಾಯಿ, ಹಾಲು, ಬಿಲ್ವಪತ್ರೆ ಸಮರ್ಪಿಸಿ ಭಕ್ತಿ ಭಾವಮೆರೆದರು. ನಗರದಲ್ಲಿ ಹಬ್ಬದ ಸಡಗರ ಮೇಳೈಸಿತ್ತು. ಮನೆಗಳನ್ನು ತಳಿರು–ತೋರಣಗಳಿಂದ ಅಲಂಕರಿಸಲಾಗಿತ್ತು.

ಚಿತ್ರಪಟ ಮತ್ತು3ಡಿ ಶಿವಲಿಂಗ ಪ್ರದರ್ಶನ: ಪ್ರಜಾಪಿತ ಬ್ರಹ್ಮಕುಮಾರೀಸ್‌ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಬೋಳರಾಮೇಶ್ವರ ದೇಗುಲ ಆವರಣದಲ್ಲಿ ಆಧ್ಯಾತ್ಮಿಕ ಚಿತ್ರಪಟ ಮತ್ತು 3ಡಿ ಶಿವಲಿಂಗ, ಪಂಚಲಿಂಗ ಪ್ರದರ್ಶನ ಆಯೋಜಿಸಲಾಗಿತ್ತು. ಆತ್ಮ, ಪರಮಾತ್ಮನ ಬಗ್ಗೆ ಸಂಸ್ಥೆಯ ಸ್ವಯಂ ಸೇವಕರು ಜನರಿಗೆ ಮಾಹಿತಿ ನೀಡಿದರು.

‘ಬೋಳರಾಮೇಶ್ವರ ದೇಗುಲದಲ್ಲಿ ಶುಕ್ರವಾರ ಸಂಜೆ 5ರಿಂದ ಶನಿವಾರ ಬೆಳಿಗ್ಗೆ 6.30ರವರೆಗೆ ಜಾಗರಣೆ ನಡೆಯಲಿದೆ. ನಾಲ್ಕುಯಾಮಗಳ ಅಭಿಷೇಕ, ಪೂಜೆ ಜರುಗಲಿದೆ. ಜಾಗರಣೆಯಲ್ಲಿ ಭಜನೆ, ಹರಿಕಥೆಗಿಂತ ಪೂಜಾ ಕೈಂಕರ್ಯಗಳಿಗೆ ಹೆಚ್ಚು ಒತ್ತು ನೀಡಲಾಗಿದೆ’ಎಂದು ದೇಗುಲದ ಪ್ರಧಾನ ಅರ್ಚಕ ಕುಮಾರಸ್ವಾಮಿ‘ಪ್ರಜಾವಾಣಿ’ಗೆ ತಿಳಿಸಿದರು.

‘ಉಪವಾಸ ಮತ್ತು ಜಾಗರಣೆ ಶಿವರಾತ್ರಿಯ ವಿಶೇಷ. ಬೆಳಿಗ್ಗೆ ಮನೆ ಸ್ವಚ್ಛಗೊಳಿಸಿ ಮನೆಮಂದಿಯಲ್ಲ ಮಡಿಬಟ್ಟೆ ತೊಟ್ಟು ದೇವರ ಪೂಜೆ ಮಾಡುತ್ತೇವೆ. ಸಮೀಪದ ಶಿವ ದೇಗುಲಕ್ಕೆ ಹೋಗಿ ಬರುತ್ತೇವೆ. ಸಂಜೆ ಹೋಳಿಗೆ, ಪಾಯಸ ಸಹಿತ ವಿಶೇಷ ಖಾದ್ಯಗಳನ್ನು ಮಾಡುತ್ತೇವೆ’ಎಂದು ಕಲ್ಯಾಣನಗರದ ಶೀಲಮ್ಮ ಹೇಳಿದರು.

ಮುಂಜಾಗ್ರತೆಯಾಗಿ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಿಗಿಭದ್ರತೆ ಒದಗಿಸಲಾಗಿತ್ತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)