ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥ ವಿವರಣೆ ಮತ್ತು ವಚನ ಗಾಯನ ಸರಣಿ–11

Last Updated 27 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಗಂಡಭೇರುಂಡನೆಂಬ ಪಕ್ಷಿಗೆ ತಲೆ ಎರಡು,
ದೇಹವೊಂದು.
ಒಂದು ತಲೆಯಲ್ಲಿ ಹಾಲನೆರೆದು, ಒಂದು ತಲೆಯಲ್ಲಿ ವಿಷವನೆರೆದಡೆ,
ಆ ಪಕ್ಷಿಗೆ ಮರಣವಲ್ಲದೆ ಜಯವಪ್ಪುದೆ ಅಯ್ಯಾ?
ಲಿಂಗವ ಪೂಜಿಸಿ ಜಂಗಮವ ಮರೆದಡೆ
ಕುಂಭಿನೀನರಕ ತಪ್ಪದು ಕಾಣಾ,
ಕೂಡಲಚೆನ್ನಸಂಗಮದೇವಯ್ಯಾ.

- ಚೆನ್ನಬಸವಣ್ಣ

ಸಮಾಜವಾದ ಎಂಬ ಶಬ್ದವನ್ನು ಬಳಸದಿದ್ದರೂ, ಆ ಸಿದ್ಧಾಂತಕ್ಕೆ ಉದಾಹರಣೆಯಾಗಬಲ್ಲ ಸಮಸಮಾಜದ ನಿರ್ಮಾಣಕ್ಕೆ ಮೊದಲು ಮಾಡಿದರು ಹನ್ನೆರಡನೆಯ ಶತಮಾನದ ಶರಣರು. ಅದು ಚಾರಿತ್ರಿಕ ವಾಸ್ತವ. ಸರ್ವರ ಹಿತವನ್ನು ಸಮಾನ ನೆಲೆಯಲ್ಲಿ ಸಾಧಿಸಹೊರಟ ಅವರ ಇಂಥ ಸಮಾನತೆಯ ಪರಿಕಲ್ಪನೆ ಅನನ್ಯ ಮತ್ತು ಅಪೂರ್ವವಾದದ್ದು. ವ್ಯಕ್ತಿಹಿತದಲ್ಲಿಯೇ ಸಮಾಜದ ಹಿತವಿದೆ ಎಂಬ ಪ್ರಾಯೋಗಿಕ ಸಿದ್ಧಾಂತವನ್ನು ಅನುಸರಿಸುವುದರ ಜೊತೆಗೆ, ಏಕಕಾಲದಲ್ಲಿ ವ್ಯಕ್ತಿ ಮತ್ತು ಸಮುದಾಯ ಎರಡರ ಹಿತವನ್ನೂ ಸಾಧಿಸುವ ಅವರ ಒಟ್ಟು ಉದ್ದೇಶವು ‘ಸಕಲಜೀವಾತ್ಮರ ಲೇಸನ್ನೇ ಬಯಸು’ವುದಾಗಿತ್ತು. ಇದನ್ನೇ ಇಪ್ಪತ್ತನೆಯ ಶತಮಾನದಲ್ಲಿ ಗಾಂಧೀಜೀ ಸರ್ವೋದಯ ಎಂದು ಕರೆದದ್ದು. ಸರ್ವರ ಸಮಾನ ಹಿತದ ಶರಣರ ಇಂಥ ಕ್ರಿಯಾತ್ಮಕ ತತ್ವವನ್ನೇ ಚೆನ್ನಬಸವಣ್ಣನ ಪ್ರಸ್ತುತ ವಚನ ವಾಸ್ತವ ನೆಲೆಯಲ್ಲಿ ಕಟ್ಟಿಕೊಡುತ್ತದೆ.

ಅರ್ಥಪೂರ್ಣ ರೂಪಕವೊಂದರ ಮೂಲಕ ಚೆನ್ನಬಸವಣ್ಣ ಈ ವಚನವನ್ನು ಆರಂಭಿಸುತ್ತಾನೆ. ಎರಡು ತಲೆಗಳು ಮತ್ತು ಒಂದು ಶರೀರ ಹೊಂದಿರುವ ಗಂಡಭೇರುಂಡ ಪಕ್ಷಿಯೊಂದು ಇದೆ ಎಂಬ ನಂಬಿಕೆ ನಮ್ಮಲ್ಲಿದೆ. ಈ ಪಕ್ಷಿಯ ಒಂದು ಬಾಯಲ್ಲಿ ಹಾಲನ್ನು ಮತ್ತು ಇನ್ನೊಂದು ಬಾಯಲ್ಲಿ ವಿಷವನ್ನು ಹಾಕಿದರೆ ಅದರಿಂದಾಗುವ ಪರಿಣಾಮ ಏನು? ಉತ್ತರ ಸುಲಭ, ಒಂದೇ ಶರೀರ ಹೊಂದಿದ ಆ ಪಕ್ಷಿ ಖಂಡಿತವಾಗಿ ಸಾಯುತ್ತದೆ; ಅದು ಬದುಕಲಾರದು.

ಈ ರೂಪಕವನ್ನೇ ನಮ್ಮ ಸಮಾಜದ ಸಂರಚನೆಗೂ ಸಮೀಕರಿಸುವ ಚೆನ್ನಬಸವಣ್ಣನು, ಅಲ್ಲಿ ಲಿಂಗ ಮತ್ತು ಜಂಗಮ ಎಂಬ ಎರಡು ವ್ಯಕ್ತಿಪರಿಕಲ್ಪನೆಗಳಿರುವುದನ್ನು ಸೂಚಿಸುತ್ತಾನೆ. ಲಿಂಗವು ವ್ಯಕ್ತಿನೆಲೆಯನ್ನು ಮತ್ತು ಜಂಗಮವು ಜನಸಮೂಹವನ್ನು ಪ್ರತಿನಿಧಿಸುತ್ತವೆ. ವ್ಯಕ್ತಿನೆಲೆ- ಗಂಭೇರುಂಡದಂತೆ-ಒಂದು ಮುಖವಾದರೆ, ಜಂಗಮನೆಲೆ ಅದರ ಮತ್ತೊಂದು ಮುಖ. ಹೀಗೆ ಈ ಮುಖಗಳು ಬೇರೆ-ಬೇರೆಯಾದರೂ ಅವುಗಳ ಅಸ್ತಿತ್ವಕ್ಕೆ ಆಧಾರವಾಗಿರುವ ಸಮಾಜವೆಂಬ ಶರೀರ ಮಾತ್ರ ಒಂದೆ.

ಗಂಡಭೇರುಂಡದ ಒಂದು ಬಾಯಿಗೆ ವಿಷ ಹಾಕುವಂತೆ, ಇಲ್ಲಿ ಸಮಾಜದ ಒಂದು ಮುಖವಾದ ವ್ಯಕ್ತಿಯ ಬಾಯಿಗೆ ವಿಷ ಹಾಕಿದರೂ, ಮತ್ತೊಂದು ಮುಖವಾದ ಜಂಗಮಕ್ಕೆ ವಿಷ ಹಾಕಿದರೂ ಆಗುವ ಪರಿಣಾಮ ಒಂದೆ. ಅದಕ್ಕಾಗಿ ಕೇವಲ ವ್ಯಕ್ತಿಯನ್ನು ಗೌರವಿಸಿ, ಜಂಗಮವನ್ನು ಕಡೆಗಣಿಸಬಾರದು, ಅಥವಾ ಜಂಗಮವನ್ನು ಬೆಳೆಸಿ ವ್ಯಕ್ತಿಯನ್ನು ಕಡೆಗಣಿಸಬಾರದು ಎಂಬುದು ಚೆನ್ನಬಸವಣ್ಣನ ಆಶಯ. ಎರಡಕ್ಕೂ ಸಮಾನ ಅವಕಾಶಗಳು ದೊರೆಯಬೇಕು, ಮತ್ತು ಅವು ಜೊತೆಯಾಗಿಯೇ ಬೆಳವಣಿಗೆ ಹೊಂದಬೇಕು ಎಂಬ ಅಪೇಕ್ಷೆ ಆತನದು. ಇದನ್ನು ತಪ್ಪಿಸಿ, ಒಂದನ್ನು ಗೌರವಿಸಿ, ಮತ್ತೊಂದನ್ನು ಉಪೇಕ್ಷಿಸಿದರೆ ಅಂಥವರಿಗೆ ಕುಂಭಿನೀನರಕ ತಪ್ಪದು ಎನ್ನುತ್ತಾನೆ ಅವನು. ಅದು ಸಮಾಜವನ್ನು ನರಕ ಮಾಡುವ ಕ್ರಿಯೆ ಕೂಡ.

ಸಮಸಮಾಜ ನಿರ್ಮಾಣದ ಶರಣರ ಕ್ರಿಯಾಸಿದ್ಧಾಂತಕ್ಕೆ ಪ್ರಾಯೋಗಿಕ ಪಠ್ಯದಂತಿದೆ ಚೆನ್ನಬಸವಣ್ಣನ ಪ್ರಸ್ತುತ ವಚನ. ಇದನ್ನವರು ಬರೀ ಹೇಳಲಿಲ್ಲ; ಕ್ರಿಯೆಯಾಗಿ ಆಚರಿಸಿದರು. ಆ ಕ್ರಿಯಾತ್ಮಕ ನಡೆಯೇ ಇಂದಿನ ಪ್ರಜಾಪ್ರಭುತ್ವಕ್ಕೂ ಮಾರ್ಗದರ್ಶಿ.

ಸರಣಿಯ ಹಿಂದಿನ ಲೇಖನಗಳನ್ನು ಓದಲು / ಪಾಡ್‌ಕಾಸ್ಟ್ ಕೇಳಲುಈ ಲಿಂಕ್ ಕ್ಲಿಕ್ ಮಾಡಿ:https://www.prajavani.net/tags/vachana-vani

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT